ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೊಲೀಸರ ವಾಸ್ತವ್ಯಕ್ಕೆ ಅಗತ್ಯ ವ್ಯವಸ್ಥೆ’

Last Updated 13 ನವೆಂಬರ್ 2017, 5:38 IST
ಅಕ್ಷರ ಗಾತ್ರ

ಬೆಳಗಾವಿ: ಚಳಿಗಾಲದ ಅಧಿವೇಶನದ ಭದ್ರತೆಗಾಗಿ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಪೊಲೀಸ್‌ ಸಿಬ್ಬಂದಿಗೆ ಇಲ್ಲಿನ ಆಟೊನಗರದಲ್ಲಿರುವ ಶಾಶ್ವತ ವಸ್ತುಪ್ರದರ್ಶನ ಕೇಂದ್ರದಲ್ಲಿ ವಾಸ್ತವ್ಯಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಜಿ. ಕೃಷ್ಣಭಟ್‌ ತಿಳಿಸಿದರು.

'ಈ ಕೇಂದ್ರದಲ್ಲಿ ಹೋದ ವರ್ಷ 3,500 ಸಿಬ್ಬಂದಿಯ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದಾಗಿ ಎಲ್ಲರಿಗೂ ಸೌಲಭ್ಯ ನೀಡುವಲ್ಲಿ ತೊಂದರೆಯಾಗಿತ್ತು. ಹೀಗಾಗಿ, ಈ ಬಾರಿ 2,000 ಮಂದಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾಹಿತಿ ನೀಡಿದರು.

‘ಅಡುಗೆಯವರು, ಸ್ವಚ್ಛತೆಯವರು, ಪೌರಕಾರ್ಮಿಕರು, ವೈದ್ಯಕೀಯ ಸಿಬ್ಬಂದಿ, ಬಸ್‌ ಚಾಲಕರು ಸೇರಿ ಒಟ್ಟು 2,500 ಮಂದಿಗೆ ಬೇಕಾಗವಷ್ಟು ಉಪಾಹಾರ  ಹಾಗೂ ಊಟವನ್ನು ಇಲ್ಲಿ ತಯಾರಿಸಲಾಗುವುದು. ಮೆನುವನ್ನೂ ಪ್ರಕಟಿಸಲಾಗುವುದು.

8 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ವಾಸ್ತವ್ಯಕ್ಕೆ ಜಿಲ್ಲಾವಾರು ಪ್ರತ್ಯೇಕ ಸಭಾಂಗಣದ ವ್ಯವಸ್ಥೆ ಮಾಡಲಾಗಿದೆ. ಹೊಸ ಚಾಪೆಗಳನ್ನು ಒದಗಿಸಲಾಗಿದೆ. ಕರ್ತವ್ಯ ಮುಗಿಸಿ ವಾಪಸಾಗುವವರ ಮನರಂಜನೆಗಾಗಿ ಈ ಕೇಂದ್ರದಲ್ಲಿ ವೇದಿಕೆ ಸಿದ್ಧಪಡಿಸಲಾಗಿದೆ. ಸ್ನಾನದ ಸ್ಥಳದ ಸುತ್ತಲೂ ಪರದೆಗಳನ್ನು ಕಟ್ಟಲಾಗಿದೆ’ ಎಂದು ಹೇಳಿದರು.

ತೊಂದರೆಯಾಗದಂತೆ ನೋಡಿಕೊಳ್ಳಲು:‘ಕುಡಿಯಲು ಶುದ್ಧೀಕರಿಸಿದ ನೀರು ಹಾಗೂ ಸ್ನಾನಕ್ಕೆ ಪ್ರತಿನಿತ್ಯವೂ ಬಿಸಿ ನೀರು ಒದಗಿಸಲಾಗುವುದು. 80 ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯ ಬಳಸಲು ಹೋಗುವವರಿಗಾಗಿ ನೂರಕ್ಕೂ ಹೆಚ್ಚು ಪಾದರಕ್ಷೆಗಳನ್ನು ಇಡಲಾಗಿದೆ’ ಎಂದರು.

‘ಉಪಹಾರ ಹಾಗೂ ರಾತ್ರಿ ಊಟವನ್ನು ವಾಸ್ತವ್ಯದ ಸ್ಥಳದಲ್ಲಿಯೇ ಕೊಡಲಾಗುವುದು. ಮಧ್ಯಾಹ್ನದ ಊಟವನ್ನು ಅವರವರು ಕಾರ್ಯನಿರ್ವಹಿಸುತ್ತಿರುವ ಸ್ಥಳಕ್ಕೇ ಪಾಕೆಟ್‌ಗಳಲ್ಲಿ ತಲುಪಿಸಲಾಗುವುದು. 100ರಿಂದ 150 ಮಂದಿ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದರೆ ಅಂತಹ ಕಡೆಗಳಲ್ಲಿ ಊಟವನ್ನು ಬಡಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಒಟ್ಟು 20 ಕಡೆಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಡುಗೆ ಗುತ್ತಿಗೆಯನ್ನು ಆರು ಮಂದಿಗೆ ನೀಡಲಾಗಿದೆ. ಸಿಬ್ಬಂದಿಗೆ ಏನೂ ತೊಂದರೆಯಾಗದಂತೆ ನೋಡಿಕೊಳ್ಳುವುದಕ್ಕಾಗಿ ಬೇಕಾದ ಎಲ್ಲ ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

‘ಅಡುಗೆಗೆ ಗುಣಮಟ್ಟದ ಅಕ್ಕಿ ಸೇರಿದಂತೆ ಆಹಾರ ಪದಾರ್ಥಗಳು ಹಾಗೂ ತಾಜಾ ತರಕಾರಿಗಳನ್ನು ಬಳಸಲಾಗುತ್ತಿದೆ. ಸಿಬ್ಬಂದಿಯನ್ನು ಕರ್ತವ್ಯದ ಸ್ಥಳಕ್ಕೆ ತಲುಪಿಸಲು ಹಾಗೂ ಕರೆದೊಯ್ಯಲು 40 ಬಸ್‌ಗಳನ್ನು ಪಡೆಯಲಾಗಿದೆ. ತುರ್ತು ಸಂದರ್ಭಗಳಿಗಾಗಿ, ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒಟ್ಟಾರೆ ಮೇಲ್ವಿಚಾರಣೆಗೆ ಅಧಿಕಾರಿಯನ್ನು ನಿಯೋಜಿಸಲಾಗಿದೆ’ ಎಂದು ತಿಳಿಸಿದರು. ಡಿಸಿಪಿಗಳಾದ ಸೀಮಾ ಲಾಟ್ಕರ್‌, ಅಮರನಾಥರೆಡ್ಡಿ, ಎಸಿಪಿ ಶಂಕರ ಮಾರಿಹಾಳ ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT