ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 9 ಕೋಟಿ ಕಾಮಗಾರಿಗೆ ಅನುದಾನ ಬಿಡುಗಡೆ

Last Updated 13 ನವೆಂಬರ್ 2017, 9:00 IST
ಅಕ್ಷರ ಗಾತ್ರ

ಬನವಾಸಿ: ಹೋಬಳಿ ವ್ಯಾಪ್ತಿಯ ₹ 9 ಕೋಟಿ ಅಂದಾಜು ವೆಚ್ಚದ ಮೂರು ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಕಾನೂನು, ಸಣ್ಣ ನೀರಾವರಿ ಸಚಿವ ಟಿ.ಬಿ. ಜಯಚಂದ್ರ ಹೇಳಿದರು. ಶಿರಸಿ ತಾಲ್ಲೂಕಿನ ಬನವಾಸಿ ಹಾಗೂ ತಿಗಣಿ ನಡುವೆ ಸಂಪರ್ಕಕ್ಕೆ ಅನುಕೂಲವಾಗುವಂತೆ ವರದಾ ನದಿಗೆ ಅಡ್ಡಲಾಗಿ ₹ 3.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸೇತುವೆ ಸಹಿತ ಬಾಂದಾರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಭಾಶಿ– ಭದ್ರಾಪುರ ನಡುವೆ ಸೇತುವೆ ಸಹಿತ ಬಾಂದಾರ, ಬನವಾಸಿಯ ಏತ ನೀರಾವರಿ ಯೋಜನೆಯ ಪುನರುಜ್ಜೀವ, ಗುಡ್ನಾಪುರ ಕೆರೆ ಅಭಿವೃದ್ಧಿ ಯೋಜನೆ ಸೇರಿ ಒಟ್ಟು ₹ 9 ಕೋಟಿ ವೆಚ್ಚದ ಪ್ರಸ್ತಾವವನ್ನು ಸ್ಥಳೀಯರು ಸಲ್ಲಿಸಿದ್ದಾರೆ. ಸರ್ಕಾರ ಅಗತ್ಯ ಕೆಲಸಗಳಿಗೆ ಸದಾ ಹಣ ಬಿಡುಗಡೆ ಮಾಡುತ್ತದೆ’ ಎಂದರು.

‘ಜನರಲ್ಲಿ ಮತ ಕೇಳಿ ಆರಿಸಿಬಂದಿರುವ ಜನಪ್ರತಿನಿಧಿಗಳು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರದಲ್ಲಿ ಚುನಾವಣಾ ಪೂರ್ವಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಸ್ಥಳೀಯ ಸಮಸ್ಯೆ ಬಗೆಹರಿಸುವಲ್ಲಿ ಜನಪ್ರತಿನಿಧಿಗಳ ಪಾತ್ರ ಮುಖ್ಯವಾಗಿದೆ’ ಎಂದರು.

ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ‘ಎರಡು ದಶಕಗಳ ನಂತರ ಬನವಾಸಿ ಭಾಗದಲ್ಲಿ ಜನಪರ ಕೆಲಸ ಮಾಡಲು ಸಾಧ್ಯವಾಗಿದೆ. ರೈತರ ವಿಷಯದಲ್ಲಿ ರಾಜಕೀಯ ಮಾಡಬಾರದು. ಬನವಾಸಿ– ತಿಗಣಿ ನಡುವೆ ನಿರ್ಮಿಸಿರುವ ಬಾಂದಾರದಿಂದ ತಿಗಣಿ ಭಾಗದ ಜನರಿಗೆ ಬನವಾಸಿ ತಲುಪಲು 5 ಕಿ.ಮೀ ಸಂಚಾರ ಕಡಿಮೆಯಾಗುತ್ತದೆ’ ಎಂದು ಹೇಳಿದರು.

ಪೂರ್ಣಕುಂಭ, ಡೊಳ್ಳುಕುಣಿತದ ಮೂಲಕ ಸಚಿವರನ್ನು ಸ್ಥಳೀಯರು ಸ್ವಾಗತಿಸಿದರು. ಟಿ.ಬಿ.ಜಯಚಂದ್ರ ಹಾಗೂ ಶಿವರಾಮ ಹೆಬ್ಬಾರ ವರದಾ ನದಿಗೆ ಬಾಗಿನ ಅರ್ಪಿಸಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಸವರಾಜ ದೊಡ್ಮನಿ, ರೂಪಾ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದ್ಯಾಮಣ್ಣ ದೊಡ್ಮನಿ, ಪ್ರಗತಿಪರ ಕೃಷಿಕ ಅಬ್ದುಲ್ ರವೂಫ್ ಸಾಬ್ ಇದ್ದರು. ಶಿವಾಜಿ ಬನವಾಸಿ ಸ್ವಾಗತಿಸಿದರು. ಸಿ.ಎಫ್. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜು ಶೆಟ್ಟಿ ನಿರೂಪಿಸಿದರು.

ವಕೀಲರ ಭವನಕ್ಕೆ ನೆರವು: ಭರವಸೆ
ಶಿರಸಿ: ನಗರದಲ್ಲಿ ಸುಸಜ್ಜಿತ ವಕೀಲರ ಭವನ ನಿರ್ಮಾಣಕ್ಕೆ ₹ 1 ಕೋಟಿ ಅನುದಾನ ಮಂಜೂರು ಮಾಡಲಾಗುವುದು ಮತ್ತು ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಅಗತ್ಯವಿರುವ ಪೀಠೋಪಕರಣಕ್ಕೆ ಹಣ ಬಿಡುಗಡೆಗೊಳಿಸಲಾಗುವುದು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು. ಭಾನುವಾರ ಇಲ್ಲಿ ಭೇಟಿ ನೀಡಿದ್ದ ಸಚಿವರಿಗೆ ವಕೀಲರ ಸಂಘದ ಸದಸ್ಯರು ಮನವಿ ಸಲ್ಲಿಸಿದರು.

ಶಿರಸಿಯ ವಕೀಲರ ಸಂಘ ಜಿಲ್ಲೆಯಲ್ಲಿ ಅತೀ ಹೆಚ್ಚು ಸದಸ್ಯರನ್ನು ಹೊಂದಿದೆ. ನ್ಯಾಯಾಲಯದ ಸಂಕೀರ್ಣದಲ್ಲಿ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ, ಹಿರಿಯ ಸಿವಿಲ್ ಜಡ್ಜ್‌ ನ್ಯಾಯಾಲಯ, ಪ್ರಧಾನ ಸಿವಿಲ್ ನ್ಯಾಯಾಲಯ ಹಾಗೂ 2 ಹೆಚ್ಚುವರಿ ಸಿವಿಲ್ ನ್ಯಾಯಾಲಯ ಹೀಗೆ ಒಟ್ಟು ಐದು ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ.

ಇಲ್ಲಿ ವಕೀಲರ ಭವನ ಅಗತ್ಯವಿದೆ. 2ನೇ ಹೆಚ್ಚುವರಿ ನ್ಯಾಯಾಲಯದಿಂದ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಕಟ್ಟಡದ ಸಂಪರ್ಕಕ್ಕೆ ಸಂಪರ್ಕ ಸೇತುವೆ, ನಾಲ್ಕು ಅಂತಸ್ತಿನ ಮಹಡಿಯ ಸಿವಿಲ್ ನ್ಯಾಯಾಲಯದ ಕಟ್ಟಡ ಇರುವುದರಿಂದ ಲಿಫ್ಟ್ ವ್ಯವಸ್ಥೆ ಇನ್ನಿತರ ಮೂಲಭೂತ ಅಗತ್ಯಗಳನ್ನು ಮಂಜೂರುಗೊಳಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ನಿಯೋಗದಲ್ಲಿ ವಕೀಲರ ಸಂಘದ ಅಧ್ಯಕ್ಷ ಕಾರ್ಯದರ್ಶಿ ಆರ್.ಆರ್. ಹೆಗಡೆ, ವಕೀಲರಾದ ಸಂತೋಷ ಹೆಗಡೆ, ಆರ್.ವಿ.ಶೆಟ್ಟಿ, ಮಂಜುನಾಥ ಬೋರಕರ ಇದ್ದರು. ನ್ಯಾಯಾಧೀಶರಾದ ಶಾಂತವೀರ ಶಿವಪ್ಪ, ಸುಜಾತಾ ಪಾಟೀಲ್, ನರೇಂದ್ರ ಬಿ.ಆರ್. ಶಂಕರ ರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT