ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವು ಉಳಿದಿದೆ ಬದುಕು ಚಿಗುರಿದೆ...

Last Updated 13 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನನ್ನ ಮಗ ಅನಾಥನಲ್ಲ...’

‘ಶ್ರೀಮಠದ ಅನಾಥಾಲಯಕ್ಕೆ ಮಗುವನ್ನು ಸೇರಿಸಿ, ಉಚಿತವಾಗಿ ಶಿಕ್ಷಣ ನೀಡುತ್ತೇವೆ’ ಎಂದು ಸ್ವಾಮೀಜಿ ಹೇಳಿದ ಮಾತು ಸೌಮ್ಯಾ ಅವರಿಗೆ ಸಹಿಸಲು ಸಾಧ್ಯವಾಗಲಿಲ್ಲ. ಆಗ ಮಗನ ಮೇಲಿನ ಕಳಕಳಿಯಿಂದ ಹೊರಟ ಮಾತದು. ಪತಿ ಶಿವಲಿಂಗೇಗೌಡ (36) ಸಾಲಕ್ಕೆ ಹೆದರಿ ವಿಷ ಕುಡಿದು ಜೀವ ಬಿಡುವ ಹೊತ್ತಿಗೆ ಮಗ ಕುಶಾಲ್‌ನನ್ನು ಪ್ರತಿಷ್ಠಿತ ಶಾಲೆಗೆ ದಾಖಲಿಸಿ ಮೊದಲ ಕಂತಿನ ₹ 7 ಸಾವಿರ ಶುಲ್ಕ ಪಾವತಿಸಿದ್ದರು. ಉಳಿದ ₹ 7 ಸಾವಿರ ಕಂತು ಕಟ್ಟುವ ಜವಾಬ್ದಾರಿ ಸೌಮ್ಯಾ ಮೇಲಿತ್ತು. ಅನುಕಂಪಕ್ಕಾದರೂ ಮಿಕ್ಕ ಶುಲ್ಕ ಬಿಡುವಂತೆ ಸ್ವಾಮೀಜಿಯ ಮುಂದೆ ಸೌಮ್ಯಾ ಸೆರಗೊಡ್ಡಿ ಬೇಡಿ ಕೊಂಡರು. ಕುಟುಂಬ ಸದಸ್ಯರೂ ಪರಿಪರಿಯಾಗಿ ಪ್ರಾರ್ಥಿಸಿದರು.

‘ನಿಮ್ಮೊಬ್ಬರಿಗೆ ಬಿಟ್ಟರೆ ಸತ್ತ ಕುಟುಂಬದವರೆಲ್ಲರೂ ಸಾಲಾಗಿ ಬರುತ್ತಾರೆ. ಎಲ್ಲರಿಗೂ ಬಿಡಲು ಆಗುವುದೇ? ನಿಮ್ಮಂಥವರಿಗೆ ತಾನೆ ನಮ್ಮ ಅನಾಥಾಲಯ ಇರುವುದು?’ ಎಂಬ ಮಾತು ಕೇಳಿಬಂದಾಗ ಸೌಮ್ಯಾ ಅವರ ಸಹನೆಯ ಕಟ್ಟೆಯೊಡೆದಿತ್ತು. ಪತಿಯ ಸಾವಿನಿಂದಾಗಿ ಅರ್ಧ ಸತ್ತು ಹೋಗಿದ್ದ ಅವರು ಮಗನಿಗಾಗಿ ಚೈತನ್ಯ ತಂದುಕೊಂಡರು.

‘ನನ್ನ ಮಗ ಅನಾಥನಲ್ಲ. ಹುಟ್ಟಿಸಿದವನು ಸಾಲಕ್ಕೆ ಹೆದರಿ ಸತ್ತರೆ ಮಕ್ಕಳು ಅನಾಥರಾಗುವುದಿಲ್ಲ. ಹೆತ್ತ ತಾಯಿ ತನ್ನ ಮಕ್ಕಳನ್ನು ಅನಾಥರಾಗಲು ಬಿಡುವುದಿಲ್ಲ. ಭಿಕ್ಷೆ ಬೇಡಿ ನಿಮ್ಮ ಫೀಜು ಕಟ್ಟುವೆ. ನನ್ನ ಮಗನನ್ನು ಅನಾಥಾಲಯಕ್ಕೆ ಸೇರಿಸುವುದಿಲ್ಲ’ ಎಂದು ಶಪಥ ಮಾಡಿದರು.

ಮಂಡ್ಯ ತಾಲ್ಲೂಕು ಹೊನ್ನಾನಾಯಕನಹಳ್ಳಿ ಗ್ರಾಮದ ಸೌಮ್ಯಾ ತಮ್ಮ ಮಗನನ್ನು ಅನಾಥಾಲಯಕ್ಕೆ ಸೇರಿಸಲಿಲ್ಲ. ಮಾನವೀಯತೆ ಆಧಾರದ ಮೇಲೆ ಅವರಿಗೆ ನಿರ್ಮಿತಿ ಕೇಂದ್ರದಲ್ಲಿ ಕೆಲಸ ಸಿಕ್ಕಿತು. ಅದೇ ಪ್ರತಿಷ್ಠಿತ ಶಾಲೆಯಲ್ಲಿ 3ನೇ ತರಗತಿ ಕಲಿಯುತ್ತಿದ್ದ ಮಗ ಕುಶಾಲ್‌ ಗೌಡನ ಬಾಕಿ ಇದ್ದ ಶಾಲಾ ಫೀ ಕಟ್ಟಿದರು. ಮಗಳು ಸಿಂಚನಾ ಗೌಡಳನ್ನೂ ಅದೇ ಶಾಲೆಗೆ ಸೇರಿಸಿದರು.

ಶಿವಲಿಂಗೇಗೌಡ ಅವರು ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ₹3 ಲಕ್ಷ ಬೆಳೆ ಸಾಲ ಮಾಡಿದ್ದರು. ನೀರಿಲ್ಲದೆ ಕೊಳವೆ ಬಾವಿ ಕೈಕೊಟ್ಟಿತ್ತು. ಸೊಂಟದೆತ್ತರಕ್ಕೆ ಬೆಳೆದಿದ್ದ ಕಬ್ಬು ಒಣಗಿ ಹೋಗಿತ್ತು. ಸಾಲ ಮರುಪಾವತಿಸುವಂತೆ ಎಸ್‌ಬಿಐ ನೋಟಿಸ್‌ ಮೇಲೆ ನೋಟಿಸ್‌ ಕೊಟ್ಟಿತ್ತು. ಬ್ಯಾಂಕ್‌ ಅಧಿಕಾರಿಗಳು ಎಚ್ಚರಿಕೆ ಕೊಟ್ಟು ಹೋಗಿದ್ದರು. ಮರ್ಯಾದೆ ಹೋಯಿತು ಎಂದು ಖಿನ್ನರಾಗಿದ್ದ ಶಿವಲಿಂಗೇಗೌಡ ಅವರು ಮಾರನೆಯ ದಿನವೇ ಹೊಲದಲ್ಲಿ ವಿಷ ಕುಡಿದು ಪ್ರಾಣ ಬಿಟ್ಟಿದ್ದರು.

‘ಬ್ಯಾಂಕ್‌ ಅಧಿಕಾರಿಗಳು ನಮಗೆ ಒಂದಷ್ಟು ಸಮಯ ಕೊಟ್ಟಿದ್ದರೆ ನನ್ನ ಗಂಡನ ಪ್ರಾಣ ಉಳಿಯುತ್ತಿತ್ತು’ ಎನ್ನುವ ಸೌಮ್ಯಾ ಅವರಿಗೆ ಬದುಕು ಒಂದು ದೊಡ್ಡ ಸವಾಲು. ಪತಿ ಸತ್ತ ಹೊಲದತ್ತ ಅವರು ತಿರುಗಿಯೂ ನೋಡಿಲ್ಲ. ಸರ್ಕಾರ ಕೊಟ್ಟ ಪರಿಹಾರದ ಹಣವನ್ನು ಮಕ್ಕಳ ಜೀವನ ಕಟ್ಟಲು ಬ್ಯಾಂಕ್‌ನಲ್ಲಿಟ್ಟಿದ್ದಾರೆ. ₹6 ಸಾವಿರ ಸಂಬಳದ ತಾತ್ಕಾಲಿಕ ಕೆಲಸ ಹಿಡಿದು ಮಕ್ಕಳ ತುತ್ತಿಗಾಗಿ ಹಗಲಿರುಳು ದುಡಿಯುತ್ತಿದ್ದಾರೆ.

*

ಶೋಭಾ ‘ಸಾಗರ’...
ಪಾಂಡವಪುರ ತಾಲ್ಲೂಕು ಚಿನಕುರಳಿಯ ಎಸ್‌ಟಿಜಿ ಶಾಲಾ ವಾರ್ಷಿಕೋತ್ಸವದಲ್ಲಿ 6ನೇ ತರಗತಿ ಹುಡುಗ ಸಾಗರ್‌ ಹುರುಳಿ ಉರಿದಂತೆ ಮಾತನಾಡುತ್ತಿದ್ದ.

ಕಾರ್ಯಕ್ರಮ ನಿರೂಪಣೆ ಮಾಡುವ ಜವಾಬ್ದಾರಿ ಹೊತ್ತಿದ್ದ ಆ ಬಾಲಕ ನಡುನಡುವೆ ಹಾಸ್ಯಪಾತ್ರ ಮಾಡಿ ಜನರನ್ನು ನಕ್ಕುನಲಿಸುತ್ತಿದ್ದ. ರಾಜ್‌ಕುಮಾರ್‌, ವಿಷ್ಣುವರ್ಧನ್‌, ರವಿಚಂದ್ರನ್‌, ಜಗ್ಗೇಶ್‌ ಅವರಂತೆ ಧ್ವನಿ ಬದಲಿಸಿ ಜನರಿಗೆ ಮನರಂಜನೆ ಕೊಡುತ್ತಿದ್ದ. ಆ ಹುಡುಗನ ಪ್ರತಿ ಮಾತಿಗೂ ಜನ ಗೊಳ್‌ ಎಂದು ನಗುತ್ತಿದ್ದರು. ಆದರೆ ಪ್ರೇಕ್ಷಕರ ನಡುವೆ ಕುಳಿತಿದ್ದ ಶೋಭಾ ಮಾತ್ರ ಗಳಗಳನೆ ಕಣ್ಣೀರು ಸುರಿಸುತ್ತಿದ್ದರು. ಮಗನ ಪ್ರತಿಭೆಯನ್ನು ಕಣ್ತುಂಬಿಕೊಳ್ಳಲು ಸಾಗರನ ಅಪ್ಪ ಲೋಕೇಶ್‌ (33) ಬದುಕಿಲ್ಲವಲ್ಲ ಎಂಬುದೇ ಶೋಭಾ ಅವರ ಕಣ್ಣೀರಿಗೆ ಕಾರಣವಾಗಿತ್ತು.

ಸಣಬದಕೊಪ್ಪಲು ಗ್ರಾಮದ ಲೋಕೇಶ ಕೈಸಾಲ ತೀರಿಸಲಾಗದೆ ಮನೆಯಲ್ಲೇ ವಿಷ ಕುಡಿದಿದ್ದರು. ಅವರ ಪತ್ನಿ ಹಾಗೂ ಮಕ್ಕಳಿಗೆ ಸಾಂತ್ವನ ಹೇಳಲು ಕಾಂಗ್ರೆಸ್‌ ಪಕ್ಷದ ನಾಯಕರಾದ ರಾಹುಲ್‌ ಗಾಂಧಿ, ದಿಗ್ವಿಜಯ ಸಿಂಗ್‌ ಮನೆಗೆ ಬಂದಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಮಂತ್ರಿಮಂಡಲದ ಹಲವು ಸದಸ್ಯರು, ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಸಂಸದ ಸಿ.ಎಸ್‌.ಪುಟ್ಟರಾಜು, ಮಾಜಿ ಸಂಸದೆ ರಮ್ಯಾ ಮಕ್ಕಳನ್ನು ಅಪ್ಪಿ ಮುದ್ದಾಡಿದ್ದರು.

ದುರಂತ ಎಂದರೆ ನಾಯಕರೆಲ್ಲರೂ ಮನೆಗೆ ಬಂದು ಸಾಂತ್ವನ ಹೇಳಿದರೂ ಸರ್ಕಾರದಿಂದ ಒಂದು ರೂಪಾಯಿ ಪರಿಹಾರ ಕೊಡಿಸಲು ಸಾಧ್ಯವಾಗಲಿಲ್ಲ. ಸರ್ಕಾರ, ಲೋಕೇಶ್‌ ಸಾವಿನ ಪರಿಹಾರ ಅರ್ಜಿಯನ್ನು ತಿರಸ್ಕಾರ ಮಾಡಿತು. ಅವರು ಕೈಸಾಲ ಮಾಡಿಕೊಂಡಿದ್ದಾರೆ, ಜಮೀನು ಸತ್ತ ರೈತನ ಹೆಸರಿನಲ್ಲಿ ಇಲ್ಲ ಎಂಬ ಕಾರಣ ಕೊಟ್ಟು ಪರಿಹಾರ ಕೊಡಲಿಲ್ಲ. ನಾಲ್ಕು ತಲೆಮಾರುಗಳಿಂದ ಅವರ ಜಮೀನು ಅವರವರ ಹೆಸರಿಗೆ ಖಾತೆಯಾಗದ ಕಾರಣ ಲೋಕೇಶ್‌ ಸಾವಿಗೆ ಪರಿಹಾರ ಸಿಗಲಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ನೀಡುವ ವಿಧವಾ ವೇತನವೂ (₹2,000) ಸಿಗಲಿಲ್ಲ.

ಈಗ ಶೋಭಾ ಅವರಿಗೆ ಕೂಲಿಯೇ ಆಧಾರ. ಇಬ್ಬರು ಮಕ್ಕಳ ಜೊತೆ ಜಿಲ್ಲಾಧಿಕಾರಿ ಕಚೇರಿಗೆ ಬಂದು ಪರಿಹಾರ ಕೊಡಿಸಿ ಎಂದು ಇಂದಿಗೂ ಮನವಿ ಸಲ್ಲಿಸುತ್ತಲೇ ಇದ್ದಾರೆ. ಆದರೆ ಸರ್ಕಾರ ಈ ಕುಟುಂಬದ ಕಡೆ ತಿರುಗಿಯೂ ನೋಡಿಲ್ಲ. ಕೂಲಿ ಮಾಡಿ ಇಬ್ಬರು ಮಕ್ಕಳ ಜೀವನ ಕಟ್ಟುತ್ತಿರುವ 30 ವರ್ಷ ವಯಸ್ಸಿನ ಶೋಭಾ ಅವರ ಮುಖದಲ್ಲಿ ಕಣ್ಣೀರು ಕೋಡಿಬಿದ್ದಿದೆ. 4 ಕಿ.ಮೀ. ದೂರದಲ್ಲಿರುವ 20 ಗುಂಟೆ ಎಕರೆ ಜಮೀನಿನತ್ತ ಇವರೂ ತಿರುಗಿ ನೋಡಿಲ್ಲ. ಅವರ ಜಮೀನಿನ ಸುತ್ತಲೂ ರೈತರು ಕಬ್ಬು, ರಾಗಿ ಬೆಳೆದಿದ್ದಾರೆ. ಅದರ ಮಧ್ಯೆ ಪಾಳು ಬಿದ್ದಿರುವ ಆ ಭೂಮಿ ಆತ್ಮಹತ್ಯೆ ಮಾಡಿಕೊಂಡ ರೈತನ ಕತೆ ಹೇಳುತ್ತಿದೆ.

‘ಮಕ್ಕಳು ಚೆನ್ನಾಗಿ ಓದುತ್ತಾರೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ನಾನು ಕೂಲಿ ಮಾಡಿದರೆ ಮಾತ್ರ ಮಕ್ಕಳ ಹೊಟ್ಟೆ ತುಂಬುತ್ತದೆ, ಇಲ್ಲದಿದ್ದರೆ ಇಲ್ಲ. ಕೂಲಿಯಿಂದ ಮಕ್ಕಳನ್ನು ಓದಿಸಲು ಸಾಧ್ಯವೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ’ ಎಂದು ಶೋಭಾ ಅಸಹಾಯಕತೆಯಿಂದ ಪ್ರಶ್ನಿಸಿದರು.

*

ಅರ್ಧಕ್ಕೆ ನಿಂತಿದೆ ಆ ಮನೆ
ಪಾಂಡವಪುರ ತಾಲ್ಲೂಕು ಗಾಣದಹೊಸೂರು ಗ್ರಾಮದ ರೈತ ನಿಂಗೇಗೌಡ ಗ್ರಾಮದಲ್ಲಿ ‘ಯಮ’ ಎಂದೇ ಪ್ರಸಿದ್ಧಿ ಪಡೆದಿದ್ದರು. ಅಂಗವಿಕಲರಾಗಿದ್ದ ಅವರು ಎಮ್ಮೆಯ ಮೇಲೆ ಕುಳಿತು ಹೊಲಕ್ಕೆ ತೆರಳಿ ಕೃಷಿ ಮಾಡುತ್ತಿದ್ದರು. ಗ್ರಾಮದ ಪ್ರೀತಿಪಾತ್ರರಾಗಿದ್ದ ಅವರಿಗೆ ‘ಗುಡ್ಡೆ ಬಾಡು’ ಎಂದರೆ ಪಂಚಪ್ರಾಣ. ಹಬ್ಬದಲ್ಲಿ ಮರಿ ಕಡಿದು ಗುಡ್ಡೆ ಬಾಡು ಮಾಡಿ ಪಾಲು ಹಾಕುತ್ತಿದ್ದರು. ಅಂಗವೈಕಲ್ಯದ ನಡುವೆಯೂ ಎರಡು ಎಕರೆ ಜಮೀನಿನಲ್ಲಿ ₹ 3 ಲಕ್ಷ ಸಾಲ ಮಾಡಿ ಕಬ್ಬು ಬೆಳೆದಿದ್ದರು. ಇದ್ದಕ್ಕಿದ್ದಂತೆ ಟನ್‌ ಕಬ್ಬಿನ ದರ ₹ 600ಕ್ಕೆ ಕುಸಿಯಿತು. ಜಮೀನು ತಮ್ಮ ಹೆಸರಿಗೆ ಖಾತೆ ಆಗಿಲ್ಲದ ಕಾರಣ ಸಕ್ಕರೆ ಕಾರ್ಖಾನೆಗೂ ಕಬ್ಬು ಸಾಗಿಸಲು ಆಗಲಿಲ್ಲ.

ದರ ಕುಸಿತದಿಂದ ನಿಂಗೇಗೌಡ ಜಂಘಾಬಲವೇ ಕುಸಿಯಿತು. ಬೆಳೆದು ನಿಂತಿದ್ದ ಕಬ್ಬಿಗೆ ಬೆಂಕಿ ಹಚ್ಚಿ ಕಿಚ್ಚಿಗೆ ಹಾರಿ ಸುಟ್ಟು ಕರಕಲಾದರು. ಇದು ರಾಷ್ಟ್ರದಾದ್ಯಂತ ಸುದ್ದಿಯಾಯಿತು. ರಾಷ್ಟ್ರೀಯ ಮಾಧ್ಯಮಗಳು ಕರ್ನಾಟಕದ ರೈತರ ನೋವನ್ನು ಇಡೀ ದೇಶಕ್ಕೆ ತೋರಿಸಿದವು. ರಾಹುಲ್‌ ಗಾಂಧಿ ಸೇರಿ ದೊಡ್ಡ ನಾಯಕರೆಲ್ಲರೂ ಮನೆಗೆ ಬಂದು ಸಾಂತ್ವನ ಹೇಳಿದರು. ಆದರೆ ಜಮೀನು, ಸತ್ತ ರೈತನ ಹೆಸರಿಗೆ ಖಾತೆ ಆಗಿಲ್ಲದ ಕಾರಣ ಪರಿಹಾರವೂ ಬರಲಿಲ್ಲ. ಪತ್ನಿ ಬೋರಮ್ಮ ₹ 2 ಸಾವಿರ ವಿಧವಾ ವೇತನಕ್ಕಷ್ಟೇ ಅರ್ಹತೆ ಪಡೆದರು.

ನಿಂಗೇಗೌಡರ ಮಗ ಈರೇಗೌಡ ಅವರೂ ಅಂಗವಿಕಲರು. ಮನೆಗೆ ಬಂದ ನಾಯಕರು ಕೊಟ್ಟ ಒಂದಷ್ಟು ಪುಡಿಗಾಸಿನಿಂದ ಮನೆ ಕಟ್ಟುವ ಕೆಲಸಕ್ಕೆ ಕೈ ಹಾಕಿದರು. ಚಿತ್ರನಟ ದರ್ಶನ, ರಮ್ಯಾ ಮತ್ತಿತರರು ವೈಯಕ್ತಿಕವಾಗಿ ಸಹಾಯ ಮಾಡಿದರು. ಶಾಸಕ ಅಂಬರೀಷ್‌ ಮನೆ ಕಟ್ಟಿಸಿಕೊಡುವುದಾಗಿ ಕೊಟ್ಟಿದ್ದ ಭರವಸೆ ಭರವಸೆಯಾಗಿಯೇ ಉಳಿಯಿತು. ಈಗ ಮನೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಖಾಲಿ ಇರುವ ಗೋಡೆಯಲ್ಲಿ ನಿಂಗೇಗೌಡರ ಭಾವಚಿತ್ರ ನೇತಾಡುತ್ತಿದೆ. ಪತ್ನಿ ಬೋರಮ್ಮ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಮಗ ಈರೇಗೌಡ ಮನೆ ಕಾಮಗಾರಿ ಮುಗಿಸುವುದು ಹೇಗೆ ಎಂಬ ಚಿಂತೆಯಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT