ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆ ಸಿಗದೆ ಪರದಾಡಿದ ರೋಗಿಗಳು

Last Updated 14 ನವೆಂಬರ್ 2017, 4:48 IST
ಅಕ್ಷರ ಗಾತ್ರ

ಜಮಖಂಡಿ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ–2017ರ ಜಾರಿಗೆ ವಿರೋಧಿಸಿ ನಗರದ ಖಾಸಗಿ ವೈದ್ಯರು ಸೋಮವಾರ ಆಸ್ಪತ್ರೆಗಳನ್ನು ಬಂದ್‌ ಮಾಡಿ ಹಮ್ಮಿಕೊಂಡಿರುವ ಬೆಳಗಾವಿ ಚಲೋ ಮುಷ್ಕರದಿಂದಾಗಿ ರೋಗಿಗಳು ಪರದಾಡುವಂತಾಯಿತು.

ಭಾರತೀಯ ವೈದ್ಯಕೀಯ ಸಂಘ ಹೊರಡಿಸಿದ ಸಾರ್ವಜನಿಕ ನೋಟಿಸ್‌ ಅನ್ನು ನಗರದ ಎಲ್ಲ ಖಾಸಗಿ ಆಸ್ಪತ್ರೆಗಳ ಬಾಗಿಲಿಗೆ ಅಂಟಿಸಿ ಆಸ್ಪತ್ರೆಗಳನ್ನು ಬಂದ್ ಮಾಡಲಾಗಿತ್ತು. ಮುಷ್ಕರದ ಬಗ್ಗೆ ಮಾಹಿತಿ ಇಲ್ಲದ ಸಾರ್ವಜನಿಕರು ಎಂದಿನಂತೆ ಆಸ್ಪತ್ರೆಗೆ ಬಂದಾಗ ಬಾಗಿಲು ಮುಚ್ಚಿದ್ದನ್ನು ಕಂಡು ಕಂಗಾಲಾದರು.

ಧನ್ವಂತರಿ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್‌, ಶ್ರೀಕೃಷ್ಣಾ ಹೆರಿಗೆ ಆಸ್ಪತ್ರೆ, ಶ್ರೀನಿವಾಸ ಚಿಕ್ಕಮಕ್ಕಳ ಮತ್ತು ಹೆರಿಗೆ ಆಸ್ಪತ್ರೆ, ಗುರುಕೃಪಾ ನರ್ಸಿಂಗ್‌ ಹೋಮ, ಗುರುಮಠ ಚಿಕ್ಕಮಕ್ಕಳ ಆಸ್ಪತ್ರೆ, ಸನದಿ ಎಲುಬು–ಕೀಲು ಆಸ್ಪತ್ರೆ, ದಡ್ಡಿ ಆಸ್ಪತ್ರೆ, ಸಿಟಿ ಹಾಸ್ಪಿಟಲ್‌ ಸೇರಿದಂತೆ ನಗರದ ಪ್ರಮುಖ ಆಸ್ಪತ್ರೆಗಳು ಸ್ಥಗಿತಗೊಂಡಿದ್ದವು.

ಡೆಂಗಿ ಜ್ವರದಿಂದ ಬಳಲುತ್ತಿರುವ ಮಹಿಷವಾಡಗಿ ಗ್ರಾಮದ ಒಂದೂವರೆ ವರ್ಷದ ಸ್ವಸ್ತಿಕ ಕೊಳವಿ ಎಂಬ ಮಗುವನ್ನು ಇಲ್ಲಿನ ಧನ್ವಂತರಿ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‌ಗೆ ಚಿಕಿತ್ಸೆಗಾಗಿ ದಾಖಲಿಸಿರುವ ತಾಲ್ಲೂಕಿನ ನಾಗನೂರ ಗ್ರಾಮದ ಸರಸ್ವತಿ ಹನಮಗೌಡರ ಎಂಬುವವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಸರ್ಕಾರಿ ದವಾಖಾನ್ಯಾಗ ಯಾರೂ ನಮ್ಮನ್ನ ದಾದ ಮಾಡಾಂಗಿಲ್ರಿ. ಎರಡ ರೂಪಾಯಿ ತೊಗೊಂಡ ಚೀಟಿ ಮಾಡಸ್ತಾರಿ, ನಾಕ ಗುಳಿಗೆ ಕೊಟ್ಟ ಕಳಸ್ತಾರಿ. ಅಲ್ಲಿ ಹೋಗಿ ಏನ್‌ ಮಾಡುನ್ರಿ’ ಎಂದರು.

ವಾಂತಿಬೇಧಿಯಿಂದ ಬಳಲುತ್ತಿರುವ 9 ತಿಂಗಳು ಮಗುವನ್ನು ಧನ್ವಂತರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುವ ಬಿಸನಾಳ ಗ್ರಾಮದ ರಾಯಪ್ಪ ಹನಮರ ಬೆಳಿಗ್ಗೆಯಿಂದ ಯಾರೂ ವೈದ್ಯರು ಬಂದು ನೋಡಿಲ್ಲ ಎಂದರು.

ಪಕ್ಕೆಲುಬಿನ ನೋವಿನಿಂದ ಬಳಲುತ್ತಿದ್ದ ಸಿದ್ದಾಪುರ ಗ್ರಾಮದ ಶ್ರೀಶೈಲ ಹಸರಡ್ಡಿ ಚಿಕಿತ್ಸೆಗಾಗಿ ಮೋಟರ್‌ ಬೈಕ್‌ ಮೇಲೆ ತಮ್ಮ ಮಗನೊಂದಿಗೆ ಬಂದಾಗ ಖಾಸಗಿ ವೈದ್ಯರ ಮುಷ್ಕರದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸರ್ಕಾರಿ ಆಸ್ಪತ್ರೆಯತ್ತ ಧಾವಿಸಿದರು.

ಬನಹಟ್ಟಿಯ ಚಿಕ್ಕಪ್ಪ ಮೋಪಗಾರ ಅವರಿಗೆ ಯಾವೊಬ್ಬ ಖಾಸಗಿ ವೈದ್ಯರ ಸೇವೆ ದೊರೆಯದ್ದರಿಂದ ಬಂದ ದಾರಿಯಲ್ಲಿ ಮರಳಿದರು. ರಕ್ತ, ಮಲಮೂತ್ರ ತಪಾಸಣೆಗೆ ಬಂದಿದ್ದ ರೋಗಿಗಳಿಗೂ ನಿರಾಸೆ ಕಾಡಿತು. ಗಿರಾಕಿಗಳಿಲ್ಲದೆ ಬಿಕೋ ಎನ್ನುತ್ತಿದ್ದ ಔಷಧ ಅಂಗಡಿಗಳಲ್ಲಿ ಮಾಲೀಕರು ಪತ್ರಿಕೆಗಳನ್ನು ಓದುತ್ತ ಕುಳಿತಿದ್ದರು.

ರೋಗಿಗಳು ತಮ್ಮ ಸರತಿಗಾಗಿ ಕಾಯುತ್ತ ಕುಳಿತುಕೊಳ್ಳುವ ಆಸನದ ದುರಸ್ತಿ ಕಾರ್ಯವನ್ನು ಸ್ಮೈಲ್‌ ಕೇರ್‌ ಹಲ್ಲಿನ ದವಾಖಾನೆಯಲ್ಲಿ ಕೈಗೊಳ್ಳುವ ಮೂಲಕ ಆಸ್ಪತ್ರೆ ಬಂದ್‌ ಮಾಡಿದ ಸಂದರ್ಭವನ್ನು ಸರಿಯಾಗಿ ಬಳಸಿಕೊಳ್ಳಲಾಗಿತ್ತು.

ವೈದ್ಯರಿಗೆ ಹಿಡಿಶಾಪ ಹಾಕಿದ ರೋಗಿಗಳು
ಬಾಗಲಕೋಟೆ: ಖಾಸಗಿ ವೈದ್ಯರು ಕೆ.ಪಿ.ಎಂ.ಇ ಮಸೂದೆ ಜಾರಿಗೆ ವಿರೋಧಿಸಿ ಖಾಸಗಿ ವೈದ್ಯರು ಸೋಮವಾರ ಬೆಳಗಾವಿ ಚಲೋ ಕಾರ್ಯಕ್ರಮ ಕೈಗೊಂಡಿದ್ದರಿಂದ ಜಿಲ್ಲೆಯಾದ್ಯಂತ ವೈದ್ಯಕೀಯ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು. ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ದಿನವಿಡೀ ಅಲೆದಾಡಿದ ರೋಗಿಗಳು ಹಾಗೂ ಸಂಬಂಧಿಕರು ಸರಿಯಾದ ಸ್ಪಂದನೆ ಸಿಗದೇ ಪರದಾಡಿದರು. ಇದರಿಂದ ಕಂಗೆಟ್ಟು ವೈದ್ಯರಿಗೆ ಹಿಡಿಶಾಪ ಹಾಕಿದರು.

ಇಲ್ಲಿನ ನವನಗರ, ಹಳೇ ಬಾಗಲಕೋಟೆಯಲ್ಲಿರುವ ಬಹುತೇಕ ಖಾಸಗಿ ಆಸ್ಪತ್ರೆಗಳು ಬೆಳಿಗ್ಗೆಯಿಂದಲೇ ಬಂದ್‌ ಆಗಿದ್ದವು. ಚಿಕಿತ್ಸೆಗಾಗಿ ಬಂದಿದ್ದ ರೋಗಿಗಳು ಆಸ್ಪತ್ರೆ ಮುಂದೆ ತೂಗು ಹಾಕಿದ್ದ ಬೆಳಗಾವಿ ಚಲೋ ಎಂಬ ನಾಮಫಲಕ ನೋಡಿ ಬೇಸರಿಸಿಕೊಂಡರು. ಅಗತ್ಯ ವೈದ್ಯಕೀಯ ವ್ಯವಸ್ಥೆಗೆ ತೊಂದರೆ ಎದುರಾಯಿತು.

ಭಾರತೀಯ ವೈದ್ಯಕೀಯ ಸಂಸ್ಥೆ ಹೊರಡಿಸಿದ ಸಾರ್ವಜನಿಕ ನೋಟಿಸ್‌ ಅನ್ನು ನಗರದ ಎಲ್ಲ ಖಾಸಗಿ ಆಸ್ಪತ್ರೆಗಳ ಬಾಗಿಲಿಗೆ ಅಂಟಿಸಿ ಆಸ್ಪತ್ರೆಗಳನ್ನು ಬಂದ್ ಮಾಡಲಾಗಿತ್ತು. ಮುಷ್ಕರದ ಬಗ್ಗೆ ಮಾಹಿತಿ ಇಲ್ಲದ ಸಾರ್ವಜನಿಕರು ಎಂದಿನಂತೆ ಆಸ್ಪತ್ರೆಗೆ ಬಂದಾಗ ಬಾಗಿಲು ಮುಚ್ಚಿರುವುದನ್ನು ಕಂಡು ರೋಶಿ ಹೋದರು. ನವನಗರದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಿನಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರೋಗಿಗಳು ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT