ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಕಾರ್ತಿಕ ಸೋಮವಾರದ ಸಡಗರ

Last Updated 14 ನವೆಂಬರ್ 2017, 5:51 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಕಡೇ ಕಾರ್ತಿಕ ಸೋಮವಾರದ ಶ್ರದ್ಧಾಭಕ್ತಿಯ ಸಡಗರ ಕಂಡುಬಂತು. ಬೆಳಿಗ್ಗೆಯಿಂದಲೇ ಜನರು ದೇಗುಲಗಳತ್ತ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ತಾಲ್ಲೂಕಿನ ನಂದಿಬೆಟ್ಟದಲ್ಲಿರುವ ಯೋಗ ನಂದೀಶ್ವರ, ನಂದಿ ಗ್ರಾಮದಲ್ಲಿರುವ ಭೋಗ ನಂದೀಶ್ವರ ದೇವಸ್ಥಾನಗಳ ಜತೆಗೆ ನಗರದ ಎಂ.ಜಿ.ರಸ್ತೆಯಲ್ಲಿರುವ ಮರಳು ಸಿದ್ದೇಶ್ವರ, ಕಂದವಾರ ಬಾಗಿಲು ರಸ್ತೆಯ ವೆಂಕಟರಮಣ ಸ್ವಾಮಿ, ಕೋಟೆ ಚನ್ನಕೇಶವ ಸ್ವಾಮಿ, ನಂದೀಶ್ವರ, ವರಸಿದ್ಧಿ ವಿನಾಯಕ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.

ಧರ್ಮಛತ್ರ ರಸ್ತೆಯ ವಿದ್ಯಾಗಣಪತಿ, ಗಂಗಮ್ಮನಗುಡಿ ರಸ್ತೆಯ ಜಾಲಾರಿ ಗಂಗಮ್ಮ, ಕೋದಂಡರಾಮ ಸ್ವಾಮಿ, ವಾಪಸಂದ್ರದಲ್ಲಿರುವ ನಿಡುಮಾಮಿಡಿ ಮಠ, ಎಚ್‌.ಎಸ್‌.ಗಾರ್ಡನ್‌ನಲ್ಲಿರುವ ಸುಬ್ರಮಣ್ಯೇಶ್ವರ, ಶನೇಶ್ವರ ಮತ್ತು ಶಿರಡಿ ಸಾಯಿ ಬಾಬಾ ಮುಂತಾದ ದೇವಸ್ಥಾನಗಳಲ್ಲಿ ಕಾರ್ತಿಕ ಸೋಮವಾರದ ಸಂಭ್ರಮ ಮನೆ ಮಾಡಿತ್ತು.

ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಅಭಿಷೇಕ, ಪೂಜೆ, ಮಹಾ ಮಂಗಳಾರತಿ ನಡೆದವು. ವಿಶೇಷ ಅಲಂಕಾರ ಮಾಡಲಾಗಿತ್ತು. ಅನೇಕ ಕಡೆಗಳಲ್ಲಿ ಪ್ರಸಾದ, ಭಕ್ತಿ ಸಂಗೀತದ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದಲ್ಲಿರುವ ಬಹುತೇಕ ದೇವಸ್ಥಾನಗಳು ರಾತ್ರಿ ವೇಳೆ ವಿದ್ಯುತ್‌ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದ್ದವು.

ಮಹಿಳೆಯರು ದೇಗುಲ ಆವರಣದಲ್ಲಿ ಎಲೆಯ ಮೇಲೆ ಪೂಜಾ ಸಾಮಗ್ರಿಗಳೊಂದಿಗೆ ಅಕ್ಕಿ, ಬೆಲ್ಲ, ಬಾಳೆಹಣ್ಣುಗಳನ್ನು ಇಟ್ಟು ದೇವರಿಗೆ ನೈವೇದ್ಯ ಮಾಡಿ ಹೊಸದಾಗಿ ಖರೀದಿಸಿ ತಂದ ಮಣ್ಣಿನ ಹಣತೆಗಳಲ್ಲಿ ದೀಪ ಹೊತ್ತಿಸಿ ದೇವರಿಗೆ ನಮಿಸುತ್ತಿದ್ದರು. ಸಂಜೆಯಾಗುತ್ತಿದ್ದಂತೆ ಕುಟುಂಬ ಸಮೇತರಾಗಿ ದೇಗುಲಗಳತ್ತ ಮುಖ ಮಾಡಿದ ಜನರು ದೇವಸ್ಥಾನಗಳಲ್ಲಿ ತಮ್ಮ ಶಕ್ತ್ಯಾನುಸಾರ ದೀಪಗಳನ್ನು ಹೊತ್ತಿಸಿ, ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದರು.

ಭೋಗ ನಂದೀಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ದಟ್ಟಣೆ ಕಂಡುಬಂತು. ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಭೋಗನಂದೀಶ್ವರ, ಅರುಣಾಚಲೇಶ್ವರ, ಉಮಾಮಹೇಶ್ವರ ಮತ್ತು ಗಿರಿಜಾ ಮಾತೆಗೆ ಕಾರ್ತಿಕ ಸೋಮವಾರದ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ಭೋಗ ನಂದೀಶ್ವರ ದೇವಸ್ಥಾನ ದೇಗುಲದ ಆವರಣದಲ್ಲಿ ಭಕ್ತರು ಹೊತ್ತಿಸಿದ ಹಣತೆಗಳ ಸಮೂಹ ಇಡೀ ದೇಗುಲಕ್ಕೆ ಹೊಸ ಮೆರಗು ನೀಡಿತ್ತು.

ವಾರ್ಷಿಕೋತ್ಸವ
ಶಿಡ್ಲಘಟ್ಟ: ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಸುಗಟೂರು ಗ್ರಾಮದಲ್ಲಿ ಕಲ್ಲೇಶ್ವರ ಮತ್ತು ಸಿದ್ಧರಾಮೇಶ್ವರ ಸ್ವಾಮಿ ದೇವರುಗಳ ನಿತ್ಯ ಪೂಜಾ ಆರನೇ ವರ್ಷದ ವಾರ್ಷಿಕೋತ್ಸವವನ್ನು ಸೋಮವಾರ ಆಚರಿಸಲಾಯಿತು. ಗುರುಗಳಾದ ಎಸ್‌.ಎನ್‌.ನಂಜುಂಡಾರಾಧ್ಯರು ಆಶೀರ್ವಚನವನ್ನು ನೀಡಿ, ‘ಕಾರ್ತಿಕ ಮಾಸ ಶ್ರೇಷ್ಠ ಮಾಸವಾಗಿದೆ. ಕಾರ್ತಿಕ ಮಾಸದ ಸೋಮವಾರಗಳನ್ನು ಅತ್ಯಂತ ಪವಿತ್ರ, ಮಂಗಳಕರ ದಿನವೆಂಬ ನಂಬಿಕೆ ಇದ್ದು ಶಿವನನ್ನು ಶ್ರದ್ಧಾಭಕ್ತಿಯಿಂದ ಪೂಜಿಸಲಾಗುತ್ತದೆ’ ಎಂದರು.

ಟ್ರಸ್ಟ್‌ ವತಿಯಿಂದ ಅನ್ನಸಂತರ್ಪಣೆ ನಡೆಸಲಾಯಿತು. ದೇವಾಲಯವನ್ನು ಮತ್ತು ದೇವರನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಅಲಂಕರಿಸಿದ್ದ ಎತ್ತುಗಳನ್ನು ಭಕ್ತರು ಕರೆತಂದಿದ್ದುದು ಆಕರ್ಷಕವಾಗಿತ್ತು. ಸುತ್ತ ಮುತ್ತಲಿನ ಗ್ರಾಮ ಹಾಗೂ ತಾಲ್ಲೂಕುಗಳಿಂದ ಭಕ್ತರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT