ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೂಕದ ಮೋಸ ತಡೆಗೆ ಆಗ್ರಹ

Last Updated 14 ನವೆಂಬರ್ 2017, 9:15 IST
ಅಕ್ಷರ ಗಾತ್ರ

ಪಾವಗಡ: ರೈತರ ಉತ್ಪನ್ನಗಳನ್ನು ಖರೀದಿಸುವಾಗ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ತೂಕ ಮತ್ತು ಅಳತೆಯಲ್ಲಿ ಮೋಸ ಮಾಡಲಾಗುತ್ತಿದೆ. ಈ ಮೋಸ ತಡೆಯಬೇಕು ಎಂದು ರೈತ ಸಂಘ ಮತ್ತು ಹಸಿರು ಸೇನೆ ಒತ್ತಾಯಿಸಿದೆ.

ಮಾರುಕಟ್ಟೆಗೆ ತಂದ ಶೇಂಗಾ, ತೊಗರಿ, ಹಲಸಂದೆ, ಮುಸುಕಿನ ಜೋಳ ಮತ್ತಿತರ ಧಾನ್ಯಗಳ ತೂಕದಲ್ಲಿ ವ್ಯವಸ್ಥಿತವಾಗಿ ರೈತರನ್ನು ವಂಚಿಸಲಾಗುತ್ತಿದೆ. ಇದಲ್ಲದೆ ವರ್ತಕರು, ಮಧ್ಯವರ್ತಿಗಳು ಮನಬಂದಂತೆ ಕಮೀಷನ್ ವಸೂಲಿ ಮಾಡುತ್ತಿದ್ದಾರೆ. ತೂಕ ಹಾಕುವ ಕಾರ್ಮಿಕರು ರೈತರಿಂದ ಧಾನ್ಯ ನೀಡುವಂತೆ ಪೀಡಿಸುತ್ತಾರೆ ಎಂದು ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ ಆರೋಪಿಸಿದರು.

ಪ್ರತಿ ಸೋಮವಾರ ಇಲ್ಲಿ ನಡೆಯುವ ಸಂತೆಯಲ್ಲಿ ತೂಕದ ಕಲ್ಲುಗಳ ಬದಲಾಗಿ ಇತರೆ ಕಲ್ಲುಗಳನ್ನು ಉಪಯೋಗಿಸುವರು. ಇದರಿಂದ ಪ್ರತಿ ಕ್ವಿಂಟಲ್‌ಗೆ ಕನಿಷ್ಠ 10 ಕೆ.ಜಿ. ತೂಕ ಕಡಿಮೆಯಾಗುತ್ತಿದೆ. ರೈತರಿಗೆ ಇದರಿಂದ ನಷ್ಟವಾಗುತ್ತಿದೆ. ಎಲೆ‌ಕ್ಟ್ರಾನಿಕ್‌ ತೂಕದ ಯಂತ್ರ ಬಳಸುವಂತೆ ಸೂಚನೆ ನೀಡಿದ್ದರೂ ಪಾಲನೆ ಆಗಿಲ್ಲ. ಈ ಕುರಿತು ತೂಕ ಮತ್ತು ಅಳತೆ ನಿಯಂತ್ರಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ ಎಂದು ರೈತ ಮುಖಂಡ ಕರಿಯಣ್ಣ ದೂರಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭೆ ನಡೆಸಿ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಅನ್ಯಾಯವನ್ನು ತಪ್ಪಿಸಬೇಕು ಎಂದು ರೈತರು ಮುಖಂಡರು ಎ.ಪಿ.ಎಂ.ಸಿ ಲೆಕ್ಕಾಧಿಕಾರಿ ನಾಗರಾಜು ಅವರಿಗೆ ಮನವಿ ಸಲ್ಲಿಸಿದರು. ರೈತ ಮುಖಂಡರಾದ ನಾಗಪ್ಪ, ಸಣ್ಣ ರಾಮಪ್ಪ, ರಂಗಣ್ಣ, ಕಂಪಲಪ್ಪ, ಯಲ್ಲಪ್ಪ, ಸುಬ್ಬಣ್ಣ ತಿಮ್ಮಪ್ಪ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT