ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಚ್ಚಿದ ಖಾಸಗಿ ಆಸ್ಪತ್ರೆ, ಕ್ಲಿನಿಕ್‌: ಸರ್ಕಾರಿ ಆಸ್ಪತ್ರೆಯತ್ತ ರೋಗಿಗಳು

Last Updated 14 ನವೆಂಬರ್ 2017, 9:19 IST
ಅಕ್ಷರ ಗಾತ್ರ

ತುಮಕೂರು: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ತಿದ್ದುಪಡಿ ಮಸೂದೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆ ‘ಬೆಳಗಾವಿ ಚಲೋ’ಗೆ ಕರೆ ನೀಡಿದ್ದ ಪ್ರಯುಕ್ತ ಸೋಮವಾರ ನಗರದಲ್ಲಿ ಖಾಸಗಿ ಆಸ್ಪತ್ರೆಗಳು ಕೆಲಸ ನಿರ್ವಹಿಸಲಿಲ್ಲ.

ಬಹುತೇಕ ಆಸ್ಪತ್ರೆಗಳು ಬೆಳಿಗ್ಗೆಯಿಂದಲೇ ಬಾಗಿಲು ಮುಚ್ಚಿದ್ದವು. ಕೆಲವು ಆಸ್ಪತ್ರೆಗಳ ಬಾಗಿಲು ಅರ್ಧ ತೆರೆದಿತ್ತು. ಗರ್ಭಿಣಿಯರು, ಬಾಣಂತಿಯರು ಮತ್ತು ತುರ್ತು ವೈದ್ಯಕೀಯ ಸೇವೆ ಅಗತ್ಯ ಇದ್ದ ರೋಗಿಗಳಿಗೆ ಮಾನವೀಯ ಆಧಾರದ ಮೇಲೆ ವೈದ್ಯರು ಚಿಕಿತ್ಸೆ ನೀಡಿದರು.

‘ಬೆಳಗಾವಿ ಚಲೋ’ದಲ್ಲಿ ಭಾಗವಹಿಸುತ್ತಿರುವುದರಿಂದ ವೈದ್ಯರು ಸೇವೆಗೆ ಲಭ್ಯ ಇರುವುದಿಲ್ಲ. ಈ ಮಾರಕ ಮಸೂದೆಯನ್ನು ಸರ್ಕಾರ ಕೈ ಬಿಡದಿದ್ದರೆ ನ.14ರ ನಂತರ ಅನಿರ್ದಿಷ್ಟಾವಧಿಯಾಗಿ ವೃತ್ತಿಯನ್ನು ತ್ಯಾಗ ಮಾಡಬೇಕಾಗುತ್ತದೆ ಎಂದು ತಿಳಿಸಲು ವಿಷಾದಿಸುತ್ತೇವೆ’ ಎನ್ನುವ ಪೋಸ್ಟರ್‌ಗಳನ್ನು ಆಸ್ಪತ್ರೆ ಮುಂಭಾಗದಲ್ಲಿ ಹಾಕಿದ್ದರು.

ಬೆಳಿಗ್ಗೆ ಆಸ್ಪತ್ರೆಗೆ ಬಂದ ರೋಗಿಗಳು ಪೋಸ್ಟರ್ ನೋಡಿ ಮನೆಗಳಿಗೆ ವಾಪಸ್ ಹೋಗುತ್ತಿದ್ದರು. ಭದ್ರತಾ ಸಿಬ್ಬಂದಿ ಗೇಟಿನಲ್ಲಿಯೇ ರೋಗಿಗಳನ್ನು ತಡೆದು ಕಳುಹಿಸುತ್ತಿದ್ದರು.
‘ಜ್ವರದಿಂದ ಆಸ್ಪತ್ರೆಗೆ ಬಂದಿದ್ದೆವು. ಇಲ್ಲಿ ಚಿಕಿತ್ಸೆ ನೀಡುವುದಿಲ್ಲ‌ ಎನ್ನುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಗೆ ಹೋಗುತ್ತೇವೆ’ ಎಂದು ಹಿರೇಹಳ್ಳಿಯ ಶಿವಕುಮಾರ್ ತಿಳಿಸಿದರು.

ಮೆಡಿಕಲ್ ಸ್ಟೋರ್‌ಗಳ ವ್ಯಾಪಾರ ಕಡಿಮೆ: ಎಂದಿನಂತೆ ಮೆಡಿಕಲ್ ಸ್ಟೋರ್‌ಗಳು ಬಾಗಿಲು ತೆರೆದಿದ್ದವು. ಆಸ್ಪತ್ರೆಗಳಿಗೆ ಹೊಂದಿಕೊಂಡಿರುವ ಸ್ಟೋರ್‌ಗಳಲ್ಲಿ ವ್ಯಾಪಾರ ಕಡಿಮೆ ಇತ್ತು. ‘ನಾವು ಖಾಸಗಿ ಆಸ್ಪತ್ರೆಯನ್ನು ಅವಲಂಬಿಸಿದ್ದೇವೆ. ಅಲ್ಲಿಗೆ ರೋಗಿಗಳು ಬಂದರೆ ನಮಗೆ ವ್ಯಾಪಾರವಾಗುತ್ತದೆ. ಬೆಳಿಗ್ಗೆಯಿಂದ ನಾಲ್ಕೈದು ಜನರು ಮಾತ್ರ ವ್ಯಾಪಾರಕ್ಕೆ ಬಂದಿದ್ದಾರೆ’ ಎಂದರು ಎಸ್‌.ಎಸ್.ಪುರಂನ ಮೆಡಿಕಲ್ ಸ್ಟೋರ್‌ವೊಂದರ ಮಾಲೀಕರು.

‘ಜ್ವರ, ಮೈ, ಕೈ ನೋವು ಹೀಗೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಮಾತ್ರೆ ಕೇಳಿಕೊಂಡು ಬರುತ್ತಿದ್ದಾರೆ. ವ್ಯಾಪಾರ ಎಂದಿನಂತೆ ಇದೆ’ ಎಂದು ಎಸ್‌ಐಟಿ ಬಡಾವಣೆಯ ಬಸವೇಶ್ವರ ಮೆಡಿಕಲ್ಸ್ ಮಾಲೀಕ ನಿತಿನ್ ಹೇಳಿದರು.

ವೈದ್ಯರು ಭಾನುವಾರ ರಾತ್ರಿಯೇ ಬೆಳಗಾವಿಯತ್ತ ಪ್ರಯಾಣ ಬೆಳೆಸಿದ್ದರು. ಜಿಲ್ಲೆಯಿಂದ 500ರಿಂದ 600 ಜನರು ಬೆಳಗಾವಿ ಚಲೋದಲ್ಲಿ ಪಾಲ್ಗೊಂಡಿದ್ದಾರೆ’ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಪಿ.ಸುರೇಶ್ ಪ್ರಭು ತಿಳಿಸಿದರು.

ತುಂಬಿ ತುಳುಕಿದ ಜಿಲ್ಲಾ ಆಸ್ಪತ್ರೆ: ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳ ಬಳಿ ಬಂದು ಚಿಕಿತ್ಸೆ ಇಲ್ಲ ಎನ್ನುವುದನ್ನು ತಿಳಿದ ಬಹುತೇಕ ಜನರು ಜಿಲ್ಲಾ ಆಸ್ಪತ್ರೆಯತ್ತ ದೌಡಾಯಿಸುತ್ತಿದ್ದರು. ಆಸ್ಪತ್ರೆ ಆವರಣದಲ್ಲಿ ಜನ ಜುಂಗುಳಿ ತುಂಬಿತ್ತು. ಜನೌಷಧ ಮಳಿಗೆಯಲ್ಲಿ ಔಷಧಗಳ ಖರೀದಿಗೆ ಜನರು ಸಾಲುಗಟ್ಟಿದ್ದರು. ಬೆಳಿಗ್ಗೆ 11.30ರ ವೇಳೆಗೆ 1500ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT