ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಮನ ಸೆಳೆದ ಪುಸ್ತಕ ಮೇಳ

Last Updated 14 ನವೆಂಬರ್ 2017, 9:23 IST
ಅಕ್ಷರ ಗಾತ್ರ

ಹಿರಿಯಡಕ: ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಿತವಾದ ಶಿಕ್ಷಣದಿಂದ ಅವರ ಸೃಜನಶೀಲತೆ, ಓದಿನ ಹಸಿವು ಕಳೆದು ಹೋಗಿದೆ. ಮಕ್ಕಳಲ್ಲಿನ ಓದಿನ ಕೊರತೆಯಿಂದ ವಿಶ್ಲೇಷಣೆ, ಅನ್ವೇಷಣೆ ಇತ್ಯಾದಿ ಗುಣಗಳು ಮಾಯವಾಗಿದೆ. ಹಾಗಾಗಿ, ಮಕ್ಕಳಿಗೆ ಪುಸ್ತಕದೊಂದಿಗೆ ಸಖ್ಯ ಬೆಳೆಸಲು, ಅವರ ವಿದ್ಯಾಭ್ಯಾಸದ ಪಠ್ಯವನ್ನು ಮೀರಿ ವಿಸ್ತ್ರತವಾದ ಓದಿಗೆ ಅನುಕೂಲವಾಗುವಂತಹ ಉದ್ದೇಶದಿಂದ ಪೆರ್ಡೂರಿನಲ್ಲಿ ಆಯೋಜಿಸಿದ 3 ದಿನಗಳ ಪುಸ್ತಕ ಮೇಳ ಗಮನ ಸೆಳೆಯಿತು.

ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಇದರ ವಜ್ರಮಹೋತ್ಸವದ ಸಂಭ್ರಮದ ಅಂಗವಾಗಿ ಪೆರ್ಡೂರು ಪ್ರೌಢಶಾಲೆಯ ಸಹಯೋಗದೊಂದಿಗೆ ಆಯೋಜಿಸಲಾದ ಪುಸ್ತಕ ಮೇಳಕ್ಕೆ ಸುತ್ತಮುತ್ತಲಿನ ಹಿರಿಯಡಕ, ಹೆಬ್ರಿ, ಶಿವಪುರ, ಬೈಲೂರು ಭಾಗದ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು, ಸಾಹಿತ್ಯಾಸಕ್ತರು ಭೇಟಿ ನೀಡಿದರು. ಮಾತ್ರವಲ್ಲ, ತಮಗೆ ಬೇಕಾದ ಪುಸ್ತಕಗಳನ್ನು ಖರೀದಿಸಿದರು.

ಪೆರ್ಡೂರಿನಂತಹ ಗ್ರಾಮೀಣ ಭಾಗದಲ್ಲಿ ಕಳೆದ ವರ್ಷ ಶಾಲೆಯ ಶಿಕ್ಷಕ ಜಿ.ಪಿ ಪ್ರಭಾಕರ ತುಮುರಿ ಅವರು ಮಕ್ಕಳ ನಾಟಕೋತ್ಸವವನ್ನು ಆಯೋಜಿಸಿ ಸಾರ್ವಜನಿಕರಿಗೆ ರಂಗಭೂಮಿಯನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದರೆ, ಈ ಬಾರಿ ಪುಸ್ತಕ ಮೇಳವನ್ನು ಆಯೋಜಿಸಿ ಸೈ ಎನಿಸಿಕೊಂಡಿದ್ದಾರೆ. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಪ್ರಭಾಕರ ತುಮುರಿ ಅವರು ಲಾಭದ ದೃಷ್ಟಿಯನ್ನು ಇಟ್ಟುಕೊಳ್ಳದೆ ಮಕ್ಕಳ ಮಸ್ತಕವನ್ನು ಅರ್ಥಪೂರ್ಣವಾದ ಪುಸ್ತಕಗಳ ಓದಿನಿಂದ ತುಂಬಬೇಕು ಎಂಬ ಬಹು ಅರ್ಥಪೂರ್ಣ ಕನಸಿನೊಂದಿಗೆ ಈ ಪುಸ್ತಕಮೇಳವನ್ನು ಆಯೋಜಿಸಿದ್ದರು.

ಸೃಜನಶೀಲ ಸಾಹಿತ್ಯ, ವಿವಿಧ ಪ್ರಬಂಧಗಳು, ಭಾರತೀಯ ಜಾನಪದ ಕಥೆಗಳು, ಚಿತ್ರ ಕಲೆಗೆ ಸಂಬಂದಿಸಿದ ಪುಸ್ತಕಗಳು, ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯ ಪುಸ್ತಕಗಳು, ಮಕ್ಕಳ ರಾಮಾಯಣ, ಮಹಾಭಾರತ, ಕು.ಗೋ ಅವರ ಹಾಸ್ಯ ಪುಸ್ತಕಗಳು, ನಿಘಂಟುಗಳು, ಶಬ್ದಕೋಶಗಳು, ಭಜನೆ, ಆಚರಣೆ, ಧರ್ಮ, ಕಂಪ್ಯೂಟರ್ ಕಲಿಕೆ, ಸುಲಭ ವಿಜ್ಞಾನ,ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತಹ ಪುಸ್ತಕಗಳು, ಇನ್ನೂ ಅನೇಕ ಭಾರತೀಯ ಕಲೆ, ಸಾಹಿತ್ಯ, ಸಂಸ್ಕೃತಿ ವಿಷಯಗಳಿಗೆ ಸಂಬಂಧಿಸಿದ ಸುಮಾರು ₹ 4.5 ಲಕ್ಷ ಮೌಲ್ಯದ ಪುಸ್ತಕಗಳನ್ನು ತರಿಸಲಾಗಿತ್ತು.

₹ 5 ರೂ ಮೊದಲ್ಗೊಂಡು ₹ 150 ರೂ ವರೆಗೆ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಪುಸ್ತಕವನ್ನು ಮಾರಾಟ ಮಾಡಲಾಗುತ್ತಿತ್ತು. ಮೇಳಕ್ಕೆ ಬಂದವರಿಗೆ ಸ್ವತಃ ವಿದ್ಯಾರ್ಥಿಗಳೇ ವಿವಿಧ ವಿಭಾಗಗಳಿಗೆ ಸಂಬಂಧಿಸಿದ ಪುಸ್ತಕಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡುತ್ತಿದ್ದುದು ಗಮನ ಸೆಳೆಯಿತು.

3 ದಿನಗಳಲ್ಲಿ ಸುಮಾರು ₹ 60 ಸಾವಿರಕ್ಕೂ ಅಧಿಕ ಮೌಲ್ಯದ ಪುಸ್ತಕಗಳು ಮಾರಾಟಗೊಂಡಿದ್ದು, ಗ್ರಾಮೀಣ ಪ್ರದೇಶವಾದ ಪೆರ್ಡೂರಿನ ಮಟ್ಟಿಗೆ ದಾಖಲೆಯೇ ಸರಿ.
ವಿದ್ಯೆ ಎಂಬ ಸಂಪತ್ತು ಎಲ್ಲಕ್ಕಿಂತಲೂ ದೊಡ್ಡದು. ಆದರೆ, ಇಂದು ಸಂಪತ್ತಿನ ಗಳಿಕೆಗಾಗಿ ವಿದ್ಯೆಯನ್ನು ಕಲಿಯುವಂತಹ ಪರಿಸ್ಥಿತಿ ಇದೆ. ಮಕ್ಕಳಿಗೆ ಕಲಿಕೆಯೊಂದಿಗೆ ಹೊಸ ಜ್ಞಾನವನ್ನು ಬೆಳೆಸುವ ಸಲುವಾಗಿ, ವಿದ್ಯಾರ್ಥಿಗಳಿಗೆ ಪುಸ್ತಕವನ್ನು ಓದಲು ಪ್ರೇರಣೆ ನೀಡುವ ಸಲುವಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಅವರ ಮೂಲಕವೇ ಈ ಪುಸ್ತಕ ಮೇಳವನ್ನು ಆಯೋಜಿದ್ದೇನೆ ಎನ್ನುತ್ತಾರೆ ಜಿ.ಪಿ ಪ್ರಭಾಕರ ತುಮುರಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT