ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಲು ಸಲಹೆ

Last Updated 15 ನವೆಂಬರ್ 2017, 7:02 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಬೇಕು. ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಜಿಲ್ಲಾ ಸರ್ಜನ್ ಡಾ.ದೊಡ್ಡಮಲ್ಲಪ್ಪ ಸಲಹೆ ನೀಡಿದರು.

ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಮಕ್ಕಳೇ ದೇಶದ ಆಧಾರ ಸ್ತಂಭಗಳು. ಅವರು ಸತ್ಪ್ರಜೆಗಳಾಗಿ ರೂಪುಗೊಂಡರೆ ದೇಶದ ಭವಿಷ್ಯ ಚೆನ್ನಾಗಿರುತ್ತದೆ ಎಂದರು.

ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು. ಜೊತೆಗೆ ನಮ್ಮ ಸಂಸ್ಕೃತಿ, ಸದ್ಗುಣಗಳನ್ನು ರೂಢಿಸಿಕೊಂಡು ಉತ್ತಮ ನಾಗರಿಕರಾಗಬೇಕು. ವಿದ್ಯೆಯ ಜೊತೆಗೆ ವಿನಯ, ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ದೈಹಿಕ ಶಿಕ್ಷಣ ಶಿಕ್ಷಕ ಎಸ್.ಈ.ಲೋಕೇಶ್ವರಾಚಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವಿದ್ಯಾರ್ಥಿ ಲೋಹಿತ್ ಅಧ್ಯಕ್ಷತೆ ವಹಿಸಿದ್ದರು, ಮುಖ್ಯಶಿಕ್ಷಕಿ ಗೀತಾ, ಶಿಕ್ಷಕರಾದ ನಾಗವೇಣಿ, ಸಾವಿತ್ರಿ, ಜಯಂತಿ, ವಿದ್ಯಾರ್ಥಿನಿಯರಾದ ತಾನಿಯ, ಎಂ.ಬಿ.ರಮ್ಯಾ, ಎಚ್.ಜಿ.ವರ್ಷಿತಾ ಇದ್ದರು.

ಶಿಕ್ಷಣದ ಜತೆಗ ಮೌಲ್ಯ ಕಲಿಸಿ
ಶೃಂಗೇರಿ: ಸಾಹಿತಿ ಹಾಡುಗಾರನ ಕಂಠದಲ್ಲಿ ಬದುಕುತ್ತಾನೆ. ಹಾಡುಗಾರ ಕೇಳುಗನ ಕಿವಿಯಲ್ಲಿ ಬದುಕುತ್ತಾನೆ ಎಂಬ ಮಾತಿನಂತೆ ಪ್ರತಿಭೆಗೆ ಆತ್ಮವಿಶ್ವಾಸ, ಬದುಕುವುದಕ್ಕೆ ಕಲೆ, ಸಂಗೀತಕ್ಕೆ ಸಾಹಿತ್ಯ ಮುಖ್ಯ ಎಂದು ರಂಗಕಲಾವಿದ ರಮೇಶ್ ಬೇಗಾರ್ ತಿಳಿಸಿದರು.

ಮಕ್ಕಳ ದಿನಾಚರಣೆ ಪ್ರಯುಕ್ತ ಶೃಂಗೇರಿ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಮಂಗಳವಾರ ಆಯೋಜಿಸಿದ್ದ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ನೃತ್ಯ, ನಾಟಕ ಮತ್ತು ಸಂಗೀತ ತರಬೇತಿ ಶಾಲೆ ಪ್ರಾರಂಭೋತ್ಸವ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸಾಂಸ್ಕೃತಿಕ ಮೌಲ್ಯಗಳಿಗೆ ಸಂಗೀತ ಹಾಗೂ ಸಾಹಿತ್ಯ ಮುಖ್ಯ. ನಾಟಕ, ಸಂಗೀತ, ನೃತ್ಯ ಮೂರು ಕಲೆಗಳಿಗೆ ಒಂದಕ್ಕೊಂದು ಅವಿನಾಭಾವ ಸಂಬಂಧವಿದ್ದು, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕಲೆಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ನೃತ್ಯ ಕಲಾವಿದ ಭಾರ್ಗವ್ ಅವರು ಮಾತನಾಡಿ, ಕಲೆಯು ಸಂಸ್ಕಾರವನ್ನು ಕಲಿಸಲಿದ್ದು, ಭಾವನೆಗಳನ್ನು ಪ್ರತಿಬಿಂಬಿಸುತ್ತದೆ. ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮಾತ್ರ ದೃಢವಿಶ್ವಾಸ ಬೆಳೆಯಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆಯ ಸಿ.ಇ.ಒ ಕೆ.ಸಿ.ನಾಗೇಶ್ ಮಾತನಾಡಿದರು. ಸಮಾರಂಭದಲ್ಲಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಕಿರಣ್, ಶಿಕ್ಷಕಿ, ಲೀಲಾವತಿ, ಜಯಶ್ರೀ ಗಣೇಶ್, ಶೇಷಪ್ಪ ಹಾಜರಿದ್ದರು.

ಮಕ್ಕಳಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ
ತರೀಕೆರೆ: ಮಕ್ಕಳು ತಂತ್ರಜ್ಞಾನವನ್ನು ಸೀಮಿತ ಮಿತಿಯೊಳಗೆ ಬಳಸುವಂತಾಗಬೇಕು. ಪೋಷಕರು ಹೆಚ್ಚು ಜವಾಬ್ದಾರಿ ಹಾಗೂ ಪ್ರೀತಿಯಿಂದ ಮಕ್ಕಳನ್ನು ಬೆಳೆಸಬೇಕು ಎಂದು ಹೆಚ್ಚುವರಿ ಸಿವಿಲ್ ನ್ಯಾಯಧೀಶರಾದ ರಘುರಾಂ ತಿಳಿಸಿದರು.

ಪಟ್ಟಣದ ಸರ್ಕಾರಿ ತುದಿಪೇಟೆ ಪ್ರಾಥಮಿಕ ಶಾಲೆಯಲ್ಲಿ ಕಾನೂನು ನೆರವು ಸಮಿತಿ ಹಾಗೂ ವಕೀಲರ ಸಂಘದಿಂದ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಸಮಾಜದಲ್ಲಿ ಯಾವುದೇ ವ್ಯಕ್ತಿಗಳಿಂದ ತೊಂದರೆಯಾದರೆ ಪೋಷಕರು ಕಾನೂನಿನ ಮೊರೆ ಹೋಗಲು ಅವಕಾಶವಿದೆ. ಮಕ್ಕಳು ಮುಂದಿನ ಭವಿಷ್ಯವಾಗಿರುವುದರಿಂದ ಅವರನ್ನು ಗೌರವದಿಂದ ಬದುಕಲು ಉಪಯುಕ್ತ ವಾತವರಣವನ್ನು ನಿರ್ಮಿಸಬೇಕು ಎಂದರು.

ಸಿವಿಲ್ ನ್ಯಾಯಧೀಶೆ ಪವಿತ್ರ ಮಾತನಾಡಿ, ಮಕ್ಕಳಿಗೆ ತಮ್ಮ ಹಕ್ಕುಗಳನ್ನು ತಿಳಿಸಿಕೊಡಬೇಕು. 14 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಶಿಕ್ಷಣ ಕಡ್ಡಾಯಗೊಳಿಸಿದ್ದು, ಮಕ್ಕಳಿಗೆ ಸಂಬಂಧಿಸಿದ ದೂರುಗಳನ್ನು ಸಂಬಂಧಪಟ್ಟ ಇಲಾಖೆ ಅಥವಾ ಬಾಲ ನ್ಯಾಯ ಮಂಡಳಿಗೆ ನೀಡಬಹುದು ಎಂದರು.

ಸರ್ಕಾರಿ ವಕೀಲ ಸುರೇಶ್‌ಚಂದ್ರ ಮಾತನಾಡಿ, ‘ಮಕ್ಕಳಿಗೆ ಶೈಕ್ಷಣಿಕ, ಆರೋಗ್ಯ ಹಾಗೂ ಮನೋರಂಜನೆಯ ಹಕ್ಕುಗಳನ್ನು ನೀಡಿದ್ದು, ಹಕ್ಕುಚ್ಯುತಿಯಾದರೆ ದೂರು ದಾಖಲಿಸಬಹುದು ಎಂದರು. ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್, ಮಲ್ಲೇಗೌಡ, ಜಗದೀಶ್ ಇದ್ದರು.

ಪ್ಲೇ ಹೋಂನಲ್ಲಿ ಮಕ್ಕಳ ದಿನಾಚರಣೆ
ತರೀಕೆರೆ: ಪಟ್ಟಣದ ಚೋಟಾ ಚಾಂಪ್ಸ್ ಪ್ಲೇ ಹೋಂನಲ್ಲಿ ಮಂಗಳವಾರ ಮಕ್ಕಳ ದಿನಾಚರಣೆ ನಡೆಯಿತು. ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಗೋವರ್ದನ್‌ ಮಾತನಾಡಿ, ಪೋಷಕರು ಮಕ್ಕಳನ್ನು ಪ್ರೀತಿಯಿಂದ ಕಾಣಬೇಕು. ಒತ್ತಡವಿಲ್ಲದ ಬದುಕು ಮಕ್ಕಳದ್ದಾಗಲಿ ಎಂದರು.

ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ತೀರ್ಪುಗಾರರಾಗಿ ಮಂಜುಳಾ, ಭಾಗ್ಯಜ್ಯೋತಿ ಭಾಗವಹಿಸಿದ್ದರು. ಪತ್ರಕರ್ತ ಅನಂತನಾಡಿಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಗೋವಿಂದ ಹಾಗೂ ಶಾಂತ ಇದ್ದರು.

ವಿವೇಕಾನಂದ ಶಾಲೆ: ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಮಂಗಳವಾರ ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳು ವಿವಿಧ ವೇಷ ಭೂಷಣದೊಂದಿಗೆ ಸಂಭ್ರಮಿಸಿದರು. ವಿವಿಧ ವೇಷಭೂಷಣ ಧರಿಸಿದ ಮಕ್ಕಳು ನೆರೆದಿದ್ದ ಪೋಷಕರನ್ನು ರಂಜಿಸಿದರು. ಶಾಲೆಯ ಕಾರ್ಯದರ್ಶಿ ಟಿ.ಜಿ. ಶಶಾಂಕ್, ಪ್ರಭಾರಿ ಮುಖ್ಯ ಶಿಕ್ಷಕ ಗೌಸ್ ಮೋಹಿದ್ದೀನ್ ಇದ್ದರು.

ದೇಶಿಯ ಉಡುಗೆ ಮಕ್ಕಳು
ಶೃಂಗೇರಿ: ಸಂಸ್ಕೃತಿಯನ್ನು ಬೆಳೆಸಿ ಉಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಅತಿ ಮುಖ್ಯ ಎಂದು ಶೃಂಗೇರಿ ಜ್ಞಾನ ಭಾರತೀ ವಿದ್ಯಾ ಕೇಂದ್ರದ ಮುಖ್ಯ ಶಿಕ್ಷಕ ಶಂಕರನಾರಯಣ ತಿಳಿಸಿದರು.

ಶೃಂಗೇರಿ ತಾಲ್ಲೂಕಿನ ಜ್ಞಾನ ಭಾರತೀ ವಿದ್ಯಾಕೇಂದ್ರದಲ್ಲಿ ಮಕ್ಕಳ ದಿನಾಚರಣೆಯಲ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳು ದೇಶಿಯ ಉಡುಗೆಗಳನ್ನು ತೊಟ್ಟು ಮತ್ತು ದೇಶಿಯ ಆಟಗಳನ್ನು ಆಡುವುದರ ಮೂಲಕ ಮಕ್ಕಳ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಿದರು.

* * 

ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಸಂಸ್ಕಾರ, ಪರಂಪರೆಯ ಮೌಲ್ಯಗಳನ್ನು ಪೋಷಕರು ಹಾಗೂ ಶಿಕ್ಷಕರು ತಿಳಿಹೇಳಬೇಕು. ಆಗ ಮಾತ್ರ ಅವರೊಳಗಿನ ಆತ್ಮವಿಶ್ವಾಸ ವೃದ್ಧಿಸುತ್ತದೆ.
ಗುಣನಾಥ ಸ್ವಾಮೀಜಿ
ಆದಿಚುಂಚನಗಿರಿ ಶಾಖಾಮಠ, ಶೃಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT