ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಂಡರ ವಲಸೆ, ಉಡುಪಿ ಬಿಜೆಪಿ ತಳಮಳ!

Last Updated 16 ನವೆಂಬರ್ 2017, 10:04 IST
ಅಕ್ಷರ ಗಾತ್ರ

ಉಡುಪಿ: ಆಸೆಪಟ್ಟು ಅತಿಯಾಗಿ ತಿನ್ನುವ ವ್ಯಕ್ತಿ ಅರಗಿಸಿಕೊಳ್ಳಲು ಒದ್ದಾಡುವಂತಹದ್ದೇ ಸ್ಥಿತಿಯಲ್ಲಿದೆ ಉಡುಪಿ ಜಿಲ್ಲಾ ಬಿಜೆಪಿ. ಅನ್ಯ ಪಕ್ಷದವರನ್ನು, ಗೆಲ್ಲುವ ಶಕ್ತಿ ಇರುವ ಪಕ್ಷೇತರರನ್ನು ಸೆಳೆದು ಸಂಘಟನೆಯನ್ನು ಬಲಪಡಿಸುವುದು ಸಹಜ ರಾಜಕೀಯ. ಆದರೆ, ಬಂದವರೆಲ್ಲ ಬರಲಿ ಎಂದು ಬಾಗಿಲು ತೆರೆದ ತಂತ್ರವೇ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೇಳಲು ಕಾರಣವಾಗಿದೆ.

ಕುಂದಾಪುರದಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಪಕ್ಷ ನಿಷ್ಠರೆಲ್ಲ ಸೇರಿ, ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬಿಜೆಪಿ ಸೇರ್ಪಡೆಯನ್ನು ರಾಜ್ಯ ಘಟಕದ ಅಧ್ಯಕ್ಷರ ಸಮ್ಮುಖದಲ್ಲೇ ವಿರೋಧಿಸುವ ಮೂಲಕ ಬಲವಾದ ಸಂದೇಶವನ್ನು ರವಾನಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾಲಾಡಿ ಬಿಜೆಪಿ ತ್ಯಜಿಸಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ ಬಿಜೆಪಿಗೆ ಅಭ್ಯರ್ಥಿ ಇಲ್ಲದಂತಹ ವಾತಾವರಣ ನಿರ್ಮಾಣವಾಗಿತ್ತು. ಆ ವೇಳೆ ಸೋಲು– ಗೆಲುವಿನ ಬಗ್ಗೆ ಚಿಂತಿಸದೆ ಕಿಶೋರ್ ಕುಮಾರ್ ಅವರು ಹಾಲಾಡಿ ವಿರುದ್ಧ ಸ್ಪರ್ಧಿಸಿ ಹೀನಾಯವಾಗಿ ಸೋತು, ಮೂರನೇ ಸ್ಥಾನ ಪಡೆದಿದ್ದರು.

ಕುಂದಾಪುರದಲ್ಲಿ ಇರುವುದು ಹಾಲಾಡಿ ಬಿಜೆಪಿಯೇ ಹೊರತು, ಬಿಜೆಪಿಯಲ್ಲ ಎಂಬ ಸತ್ಯ ಆಗ ಬಹಿರಂಗವಾಗಿತ್ತು. ಹಾಲಾಡಿ ಅವರು ತಾವು ಬೆಳೆಯುತ್ತಿದ್ದಾರೆ, ಆದರೆ ಪಕ್ಷವನ್ನು ಬೆಳೆಸುತ್ತಿಲ್ಲ ಎಂಬ ಆರೋಪವೂ ಸಾಬೀತಾಗಿತ್ತು. ಕೆಟ್ಟ ಸೋಲಿಗೆ ಕಾರಣವಾಗಿದ್ದ ವ್ಯಕ್ತಿಯನ್ನೇ ಕೆಂಪು ಹಾಸಿನ ಮೂಲಕ ಈಗ ಪಕ್ಷಕ್ಕೆ ಅಹ್ವಾನಿಸುತ್ತಿರುವುದು ಸಹಜವಾಗಿಯೇ ಕಿಶೋರ್ ಕುಮಾರ್ ಮತ್ತು ಪಕ್ಷಕ್ಕೆ ಬದ್ಧರಾಗಿರುವ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

ಕುಂದಾಪುರದಲ್ಲಿ ಪಕ್ಷಕ್ಕೆ ಶಕ್ತಿ ಇಲ್ಲ ಎಂಬ ಸತ್ಯವನ್ನು ಅರಿತಿರುವ ಬಿಜೆಪಿ ಮುಖಂಡರು, ಹಾಲಾಡಿ ಬಂದರೆ ಒಂದು ಸೀಟನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿದೆ. ಅದೇ ಕಾರಣಕ್ಕೆ ದುಂಬಾಲು ಬಿದ್ದಿದೆ.

ಬೈಂದೂರಲ್ಲೂ ವಿಚಿತ್ರ ಸನ್ನಿವೇಶ: ಹಿರಿಯ ರಾಜಕಾರಣಿ ಕೆ. ಜಯಪ್ರಕಾಶ್ ಹೆಗ್ಡೆ ಅವರು ಬಿಜೆಪಿ ಸೇರ್ಪಡೆಯಾಗಿರುವುದು ಸಹ ಪಕ್ಷದ ಕೆಲ ಮುಖಂಡರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಜಿಲ್ಲೆಯ ಸಾಂಪ್ರದಾಯಿಕ ರಾಜಕೀಯ ಎದುರಾಳಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಬೈಂದೂರು ಕ್ಷೇತ್ರದಲ್ಲಿ ಸ್ಪರ್ಧಿಸುವ ಆಕಾಂಕ್ಷೆಯನ್ನೂ ಹೆಗ್ಡೆ ಹೊಂದಿದ್ದಾರೆ. ಒಂದು ವೇಳೆ ಅವರಿಗೆ ಬಿಜೆಪಿ ಟಿಕೆಟ್ ನೀಡಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೆ, ಅವರನ್ನು ಮಣಿಸಲು ‘ಸೋಲಿಲ್ಲದ ಸರದಾರ’ ಖ್ಯಾತಿಯ ಎಂಎಲ್‌ಎ ಹಾಗೂ ಕಾಂಗ್ರೆಸ್‌ ಎಂಎಲ್‌ಸಿ ಟೊಂಕಕಟ್ಟುವರು ಎಂಬ ಮಾತು ಕಾಂಗ್ರೆಸ್ ಹಾಗೂ ಬಿಜೆಪಿ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿದೆ. ಏಕೆಂದರೆ ಆ ಇಬ್ಬರಿಗೂ ಜಯಪ್ರಕಾಶ್ ಹೆಗ್ಡೆ ರಾಜಕೀಯ ಪ್ರತಿಸ್ಪರ್ಧಿಯಾಗಿದ್ದಾರೆ.

ಬಿಜೆಪಿ ಮುಖಂಡ ಬಿ.ಎಂ. ಸುಕುಮಾರ ಶೆಟ್ಟಿ ಅವರು ಈ ಬಾರಿ ಟಿಕೆಟ್ ಸಿಗಲಿದೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ. ಕಳೆದ ಬಾರಿ ಇದೇ ಕ್ಷೇತ್ರದಲ್ಲಿ ಕೆ. ಗೋಪಾಲ ಪೂಜಾರಿ ವಿರುದ್ಧ ಅವರು ಸೋತಿದ್ದರು. ಮುಂದಿನ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಗುರಿಯೊಂದಿಗೆ ಅವರು ಸಂಘಟನೆಯಲ್ಲಿ ತೊಡಗಿದ್ದಾರೆ. ಭಾರಿ ಹಣವನ್ನೂ ಖರ್ಚು ಮಾಡಿದ್ದಾರೆ ಎಂಬ ಮಾತಿದೆ. ಹೆಗ್ಡೆ ಅವರಿಗೆ ಟಿಕೆಟ್ ನೀಡಿದರೆ ಅವರೂ ‘ರೆಬೆಲ್’ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಒಟ್ಟಾರೆ ತಿಳಿ ನೀರಿನಂತೆ ಹರಿಯುತ್ತಿದ್ದ ಜಿಲ್ಲಾ ಬಿಜೆಪಿ ಎಂಬ ತೊರೆ, ಅನ್ಯ ಪಕ್ಷದ ನಾಯಕರ ಒತ್ತಡಕ್ಕೆ ಸಿಲುಕಿ ಅಬ್ಬರಿಸುತ್ತಿದೆ. ಅಂತಿಮವಾಗಿ ಪ್ರವಾಹವಾದರೂ ಆಶ್ಚರ್ಯಪಡಬೇಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT