ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಜ್ಲಾನ್ ಕಂಪೆನಿ ಬಂದ್‌ ಕಾರ್ಮಿಕರು ಬೀದಿಪಾಲು

Last Updated 15 ನವೆಂಬರ್ 2017, 10:39 IST
ಅಕ್ಷರ ಗಾತ್ರ

ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿದ್ದ ‘ಸುಜ್ಲಾನ್’ ಪವನ ವಿದ್ಯುತ್ ಬಿಡಿಭಾಗ ತಯಾರಿಕಾ ಕಂಪನಿಯನ್ನು ಕಾರ್ಮಿಕರಿಗೆ ಯಾವುದೇ ಮುನ್ಸೂಚನೆ ನೀಡದೆ ಮಂಗಳವಾರ ಮುಚ್ಚಲಾಗಿದೆ. ಇದರಿಂದ ಕಂಪನಿಯ 600ಕ್ಕೂ ಅಧಿಕ ಕಾರ್ಮಿಕರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.

ಕಂಪನಿಯ ಗೇಟಿನಲ್ಲಿ ಮಂಗಳವಾರ ನೋಟಿಸ್ ಹಚ್ಚಲಾಗಿದ್ದು, ಅದರಲ್ಲಿ ಕಂಪನಿಯನ್ನು ಮುಚ್ಚಿರುವ ಬಗ್ಗೆ ಉಲ್ಲೇಖಿಸಲಾಗಿದೆ. ‘ಕೈಗಾರಿಕಾ ವಿವಾದ ಕಾಯ್ದೆ ಸೆಕ್ಷನ್‌ 22ರ ಪ್ರಕಾರ ಕಂಪನಿ ಮುಚ್ಚಲು ತೀರ್ಮಾನಿಸಲಾಗಿದೆ. ಅದಕ್ಕೆ ನೌಕರರ ದುರ್ವತನೆ ಮತ್ತು ವಿಧ್ವಂಸಕ ಕೃತ್ಯಗಳೇ ಕಾರಣ. ಕಂಪನಿಗೆ ₹ 1 ಕೋಟಿಯಷ್ಟು ನಷ್ಟ ಉಂಟಾಗಿದೆ’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಸೋಮವಾರ ರಾತ್ರಿ ಪಾಳಿ ನೌಕರರನ್ನು ಇದ್ದಕ್ಕಿದ್ದಂತೆಯೇ ಆವರಣದಿಂದ ಹೊರ ಕಳುಹಿಸಲಾಗಿದೆ. ಈ ಬಗ್ಗೆ ಕಾರ್ಮಿಕರು ಪ್ರಶ್ನಿಸಿದ್ದಕ್ಕೆ, ‘ವಿದ್ಯುತ್ ಉಳಿತಾಯದ ದೃಷ್ಟಿಯಿಂದ ರಾತ್ರಿ ಪಾಳಿಯನ್ನು ರದ್ದು ಮಾಡಲಾಗಿದೆ’ ಎಂದು ಕಂಪನಿ ಅಧಿಕಾರಿಗಳು ತಿಳಿಸಿದ್ದರು. ಆದರೆ, ಬೆಳಿಗ್ಗೆ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕರಿಗೆ ಗೇಟ್‌ನಲ್ಲಿ ಹಚ್ಚಿರುವ ನೋಟಿಸ್‌ನಿಂದ ದಿಗಿಲು ಉಂಟಾಯಿತು. ಬಳಿಕ ಕಾರ್ಮಿಕರು ಕಂಪನಿಯ ಗೇಟ್ ಮುಂದೆ ಜಮಾಯಿಸಿ, ಪ್ರತಿಭಟನೆ ನಡೆಸಿದರು.

ಬಳಿಕ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಮಿಕ ಇಲಾಖಾ ಅಧಿಕಾರಿಗಳು, ಸ್ಥಳೀಯ ನಾಯಕರು, ಕಂಪನಿ ಅಧಿಕಾರಿಗಳು ಹಾಗೂ ಕಾರ್ಮಿಕ ಸಂಘದ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಸಭೆ ನಡೆಸಿದರು. ಕಾರ್ಮಿಕರಿಗೆ ಯಾವುದೇ ಸೂಚನೆ ನೀಡದೆ ಕಂಪನಿ ಮುಚ್ಚಿರುವ ಬಗ್ಗೆ ಕಂಪನಿ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು. ‘ಮತ್ತೆ ಕಂಪನಿ ತೆರೆದು ಕಾರ್ಮಿಕರಿಗೆ ಕೆಲಸ ಕೊಡಿ, ಇಲ್ಲದಿದ್ದಲ್ಲಿ ಈಗಾಗಲೇ ನೀಡಿರುವ ಜಾಗವನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಹಿಂಜರಿಯುವುದಿಲ್ಲ’ ಎಂದು ಎಚ್ಚರಿಸಿದರು.

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 700 ಕಾರ್ಮಿಕರನ್ನು ಆರು ತಿಂಗಳ ಹಿಂದೆ ವಜಾಗೊಳಿಸಲಾಗಿತ್ತು. ಬಳಿಕ ನಡೆದ ಪ್ರತಿಭಟನೆಗೆ ಮಣಿದು 200 ಮಂದಿಯನ್ನು ಮತ್ತೆ ಸೇರಿಸಲಾಯಿತು. 15 ದಿನಗಳ ಹಿಂದೆ 130 ಕಾರ್ಮಿಕರನ್ನು ಮತ್ತೆ ವಜಾ ಮಾಡಲಾಗಿತ್ತು.

12 ವರ್ಷಗಳಿಂದ ಕಾರ್ಯಾಚರಣೆ
12 ವರ್ಷಗಳಿಂದ ಪಡುಬಿದ್ರಿಯಲ್ಲಿ ಸುಜ್ಲಾನ್ ಕಂಪೆನಿಯು ಪವನ ವಿದ್ಯುತ್ ಯೋಜನೆಯ ರೆಕ್ಕೆಗಳು ಹಾಗೂ ಬಿಡಿಭಾಗಗಳನ್ನು ತಯಾರಿ ಮಾಡುತ್ತಿದೆ. ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಚಿತ್ರದುರ್ಗ, ಹಾಸನದಲ್ಲಿರುವ ಪವನ ವಿದ್ಯುತ್ ಸ್ಥಾವರಕ್ಕೆ ಇಲ್ಲಿ ತಯಾರಿಸಿದ ಬ್ಲೇಡ್‌ಗಳನ್ನು ಮಾರಾಟ ಮಾಡಲಾಗುತ್ತಿತ್ತು.

* * 

ಎಸ್‌ಇಜೆಡ್ ಯೋಜನೆಯಲ್ಲಿ ಕಂಪೆನಿಗೆ 600 ಎಕರೆ ಜಾಗ ನೀಡಲಾಗಿದೆ. ಯಾವುದೇ ಕಾರಣಕ್ಕೂ ಅದನ್ನು ಮಾರಲು ಅವಕಾಶ ಇಲ್ಲ.
ಪ್ರಿಯಾಂಕ ಮೇರಿ ಫ್ರಾನ್ಸಿಸ್
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT