ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಸಮೀಕ್ಷೆ: ಶೇ 76ರಷ್ಟು ಪೂರ್ಣ

Last Updated 15 ನವೆಂಬರ್ 2017, 10:43 IST
ಅಕ್ಷರ ಗಾತ್ರ

ವಿಜಯಪುರ: ರೈತರ ಜಮೀನುಗಳಲ್ಲಿ ಯಾವ ಬೆಳೆ ಬೆಳೆಯಲಾಗಿದೆ ಎಂಬುದನ್ನು ಖಚಿತವಾಗಿ ತಿಳಿದುಕೊಳ್ಳುವ ಜತೆಗೆ, ಅತಿವೃಷ್ಟಿ–ಅನಾವೃಷ್ಟಿಗೊಳಗಾಗುವ ರೈತ ಸಮೂಹಕ್ಕೆ ನಿಖರವಾಗಿ ಪರಿಹಾರ ವಿತರಿಸಲು, ರಾಜ್ಯ ಸರ್ಕಾರ ಜಿಲ್ಲಾಡಳಿತದ ಮೂಲಕ ಮೊಬೈಲ್‌ ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ ನಡೆಸಿದೆ.

ದೇಶದಲ್ಲಿ ಇದೇ ಮೊದಲ ಬಾರಿಗೆ ವಿನೂತನವಾಗಿ ಬೆಳೆಯ ಸರ್ವೆ ನಡೆಸಲಾಗುತ್ತಿದ್ದು, ಅಕ್ಟೋಬರ್ ಮಧ್ಯಭಾಗದಿಂದ ಜಿಲ್ಲೆಯ 652 ಹಳ್ಳಿಗಳಲ್ಲಿ ಬೆಳೆ ಸಮೀಕ್ಷೆ ಜಿಲ್ಲಾಡಳಿತದ ಅಧಿಕಾರಿಗಳ ತಂಡದಿಂದ ನಡೆದಿದೆ.

ಜಿಲ್ಲಾಡಳಿತ, ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು ಸೇರಿದಂತೆ ಗ್ರಾಮ ಪಂಚಾಯ್ತಿ ಸಿಬ್ಬಂದಿಯ ತಂಡ ಬೆಳೆ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದು, 666 ಸಿಬ್ಬಂದಿ ಜಿಲ್ಲೆಯ ಎಲ್ಲೆಡೆ ಬೆಳೆ ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಮಂಜುನಾಥ ತಿಳಿಸಿದರು.

ಕಾರ್ಯ ವೈಖರಿ: ‘ಪ್ರತಿ ಗ್ರಾಮದಲ್ಲಿನ ಸರ್ಕಾರಿ, ಕೃಷಿಯೇತರ, ಭೂಸ್ವಾಧೀನಗೊಂಡ ಜಮೀನು ಹೊರತುಪಡಿಸಿ, ಉಳಿದ ಕೃಷಿ ಜಮೀನಿನ ಸರ್ವೆಯನ್ನು ಅಧಿಕಾರಿಗಳ ತಂಡ ನಡೆಸುತ್ತಿದೆ. ಪ್ರತಿಯೊಬ್ಬರಿಗೂ ಸರ್ವೆಗೆ ಅನುಕೂಲವಾಗುವಂತೆ ಅತ್ಯಾಧುನಿಕ ಮೊಬೈಲ್‌ ಒದಗಿಸಲಾಗಿದೆ.

ಈ ಮೊಬೈಲ್‌ನಲ್ಲಿ ಬೆಳೆ ಸಮೀಕ್ಷೆ ತಂತ್ರಾಂಶವುಳ್ಳ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ಸರ್ವೆ ನಡೆಸಬೇಕಿದೆ. ಪ್ರತಿ ಹಳ್ಳಿಗೂ ನಿಯೋಜಿತಗೊಂಡ ಸಿಬ್ಬಂದಿ ಗ್ರಾಮದ ನಕಾಶೆ ಪಡೆದು, ಅದರಲ್ಲಿನ ಸರ್ವೆ ನಂಬರ್‌, ಇಸ್ಸಾ ನಂಬರ್‌ಗಳಿಗೆ ತೆರಳಿ, ಆಯಾ ಸರ್ವೆ ನಂಬರ್‌ಗಳಿಂದಲೇ ಜಿಪಿಎಸ್‌ ಬಳಸಿ ಬೆಳೆಯ ಮಾಹಿತಿಯನ್ನು ಆ್ಯಪ್‌ಗೆ ಅಪ್‌ಲೋಡ್‌ ಮಾಡಬೇಕು’ ಎಂದರು.

‘ಹೊಲದಲ್ಲಿರುವ ಬೆಳೆಯ ಫೋಟೊ ತೆಗದು ಆ್ಯಪ್‌ಗೆ ಅಪ್‌ಲೋಡ್‌ ಮಾಡುತ್ತಿದ್ದಂತೆ, ಸರ್ವೆ ನಂಬರ್‌, ಇಸ್ಸಾ ನಂಬರ್, ರೈತನ ಹೆಸರು ಪ್ರಕಟಗೊಳ್ಳುತ್ತದೆ. ಈ ಸಮಯ ರೈತನ ಆಧಾರ್ ನಂಬರ್, ಮೊಬೈಲ್‌ ನಂಬರ್‌ ಲಿಂಕ್‌ ಮಾಡಿದರೆ ನಿಖರ ಮಾಹಿತಿ ಸಂಗ್ರಹವಾಗುತ್ತದೆ. ಇದರ ಆಧಾರದಲ್ಲೇ ಅತಿವೃಷ್ಟಿ–ಅನಾವೃಷ್ಟಿ ಪರಿಹಾರ ವಿತರಿಸಲಾಗುವುದು’ ಎಂದು ಮಂಜುನಾಥ ಮಾಹಿತಿ ನೀಡಿದರು.

‘ಜಿಲ್ಲೆಯ ವ್ಯಾಪ್ತಿಯಲ್ಲಿ ಈಗಾಗಲೇ ಶೇ 76ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಉಳಿದ ಬೆಳೆಯ ಸಮೀಕ್ಷೆಯನ್ನು ಬಿರುಸಿನಿಂದ ನಡೆಸಲಾಗುತ್ತಿದೆ. ಮೂರ್ನಾಲ್ಕು ದಿನದೊಳಗೆ ಪೂರ್ಣ ಗೊಳಿಸಲಾಗುವುದು. ಬಳಿಕ ಇಡೀ ಜಿಲ್ಲೆಯ ಕೃಷಿ, ತೋಟಗಾರಿಕೆಯ ಸಮಗ್ರ ಚಿತ್ರಣ ದೊರೆಯಲಿದೆ. ಎಷ್ಟು ಹೆಕ್ಟೇರ್‌ ನಲ್ಲಿ ಯಾವ ಬೆಳೆಯಿದೆ.

ಬೆಳವಣಿಗೆಯ ಪ್ರಮಾಣ ಎಷ್ಟಿದೆ ಎಂಬುದು ಸೇರಿದಂತೆ ಇನ್ನಿತರ ಪೂರಕ ಮಾಹಿತಿ ನಿಖರವಾಗಿ ದೊರೆಯಲಿದೆ. ಈ ಹಿಂದಿನ ಸಮೀಕ್ಷೆಗಳಲ್ಲಿ 100ಕ್ಕೆ ಶೇ 60–70ರಷ್ಟು ಸಮೀಪವಿರುತ್ತಿದ್ದರೆ, ಈಗಿನ ಸಮೀಕ್ಷೆಯಿಂದ 100ಕ್ಕೆ 100ರಷ್ಟು ನಿಖರ ಮಾಹಿತಿ ಲಭ್ಯವಾಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT