ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಜನಾತ್ಮಕ ಅಭಿವ್ಯಕ್ತಿ ನಿಯಂತ್ರಣ ಸಲ್ಲದು

Last Updated 15 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಗೋವಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾಗಿದ್ದ ಎರಡು ಸಿನಿಮಾಗಳನ್ನು ಕೈಬಿಟ್ಟಿರುವುದು ಸಹಜವಾಗಿಯೇ ವಿವಾದವಾಗಿದೆ. 13 ಸದಸ್ಯರ ತೀರ್ಪುಗಾರರ ಮಂಡಳಿ ಆಯ್ಕೆ ಮಾಡಿದ್ದ 21 ಸಿನಿಮಾಗಳ ಪೈಕಿ ಎರಡು ಸಿನಿಮಾಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಕೈಬಿಟ್ಟಿದೆ. ಈ ಬೆಳವಣಿಗೆಯಿಂದಾಗಿ ಪನೋರಮಾ ವಿಭಾಗದ ಚಿತ್ರಗಳ ಆಯ್ಕೆ ಸಮಿತಿ ಮುಖ್ಯಸ್ಥ ಹಾಗೂ ಪ್ರಸಿದ್ಧ ಚಿತ್ರ ನಿರ್ದೇಶಕ ಸುಜಯ್ ಘೋಷ್ ರಾಜೀನಾಮೆ ನೀಡಿದ್ದಾರೆ. ಈ ಸಮಿತಿಯ ಇನ್ನೂ ಇಬ್ಬರು ಸದಸ್ಯರು ರಾಜೀನಾಮೆ ನೀಡುವ ಮೂಲಕ ಪ್ರತಿಭಟನೆ ದಾಖಲಿಸಿದ್ದಾರೆ.

‘ನಾನೇನು ಭಾರತ ಸರ್ಕಾರಕ್ಕಾಗಿ ಸಿನಿಮಾ ಮಾಡುತ್ತಿಲ್ಲ. ಸಿನಿಮಾ ಕುರಿತು ವೀಕ್ಷಕರು ತಾವೇ ನಿರ್ಧರಿಸುತ್ತಾರೆ’ ಎಂದು ‘ಎಸ್ ದುರ್ಗಾ’ (‘ಸೆಕ್ಸಿ ದುರ್ಗಾ’ದ ಸಂಕ್ಷಿಪ್ತ ರೂಪ) ಮಲಯಾಳಂ ಚಿತ್ರದ ನಿರ್ದೇಶಕ ಸನಲ್‌ ಕುಮಾರ್‌ ಶಶಿಧರನ್‌ ಹೇಳಿರುವ ಮಾತುಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಒಪ್ಪದಿರಬಹುದು. ಆದರೆ ಈ ಸಿನಿಮಾ ಹಾಗೂ ಮರಾಠಿಯ ‘ನ್ಯೂಡ್’ ಸಿನಿಮಾಗೆ ತೀರ್ಪುಗಾರರು ಅನುಮೋದನೆ ನೀಡಿದ್ದಾರೆ ಎಂಬುದನ್ನು ಸರ್ಕಾರ ನಿರ್ಲಕ್ಷಿಸಬಾರದಿತ್ತು. ತೀರ್ಪುಗಾರರ ಮಂಡಳಿಯ ಅಭಿಪ್ರಾಯವನ್ನು ಬದಿಗೊತ್ತಿ ಈ ಸಿನಿಮಾಗಳನ್ನು ಕೈಬಿಟ್ಟಿರುವುದು ಪ್ರಜಾತಾಂತ್ರಿಕ ಕ್ರಮವಲ್ಲ. ಸಿನಿಮಾ ಕೈಬಿಡುವ ಮುಂಚೆ ಈ ವಿಚಾರವನ್ನು ಕುರಿತು ತೀರ್ಪುಗಾರರ ಮಂಡಳಿಯ ಸದಸ್ಯರ ಜೊತೆಗೂ ಸರ್ಕಾರ ಚರ್ಚಿಸಿಲ್ಲ. ಅದರಲ್ಲೂ ‘ನ್ಯೂಡ್’, ಉದ್ಘಾಟನಾ ಸಿನಿಮಾ ಆಗಿರಬೇಕೆಂಬುದು ತೀರ್ಪುಗಾರ ಮಂಡಳಿಯ ಸರ್ವಾನುಮತದ ಆಯ್ಕೆಯಾಗಿತ್ತು. ಚಿತ್ರಕಲಾವಿದರಿಗೆ ಚಿತ್ರ ಬಿಡಿಸುವುದಕ್ಕಾಗಿ ಬೆತ್ತಲೆ ರೂಪದರ್ಶಿಯಾಗಿ ಕೆಲಸ ಮಾಡುವ ಮಹಿಳೆಯ ಕುರಿತಾದ ಚಿತ್ರ ‘ನ್ಯೂಡ್’. ‘ಎಸ್ ದುರ್ಗಾ’  ಹಾಗೂ ‘ನ್ಯೂಡ್ ’ ಚಿತ್ರಗಳು ಸಮಕಾಲೀನ ಕಥಾವಸ್ತುಗಳನ್ನು ಹೊಂದಿದ ಚಿತ್ರಗಳಾಗಿವೆ. ಈ ಎರಡೂ ಸಿನಿಮಾಗಳು ವಿಭಿನ್ನ ನೆಲೆಗಳಲ್ಲಿ ಭಾರತದ ಸಶಕ್ತ ಮಹಿಳೆಯರ ಕುರಿತಾದ ಚಿತ್ರಣ ನೀಡುತ್ತವೆ ಎಂಬಂಥ ವಾದಗಳು ಮಂಡಿತವಾಗಿವೆ. ‘ಎಸ್ ದುರ್ಗಾ’ ಚಿತ್ರದಲ್ಲಿ ದುರ್ಗಾ ಎಂದರೆ ದೇವತೆಯಲ್ಲ. ದಕ್ಷಿಣದ ವ್ಯಕ್ತಿಯ ಜೊತೆ ಪಯಣಿಸುವ ಉತ್ತರ ಭಾರತದ ಯುವ ಮಹಿಳೆಯ ಚಿತ್ರಣ ಇಲ್ಲಿದೆ. ಕೇರಳದಲ್ಲಿ ನಡೆಯುವ ಲೈಂಗಿಕ ಹಿಂಸಾಚಾರ ಹಾಗೂ ಪಿತೃಪ್ರಧಾನ ಮೌಲ್ಯಗಳನ್ನು ಈ ಚಿತ್ರ ಅನ್ವೇಷಿಸುತ್ತದೆ. ಹೀಗಿದ್ದೂ ಈ ಸಿನಿಮಾಗಳನ್ನು ‘ಪನೋರಮಾ’ ವಿಭಾಗದಿಂದ ಹೊರಗಿಟ್ಟಿರುವ ಸರ್ಕಾರದ ನಡೆಯ ಹಿಂದಿರುವ ತರ್ಕ ಅರ್ಥವಾಗದ್ದು. ಅದು ನೀಡಿರುವ ವಿವರಣೆಯೂ ಒಪ್ಪುವಂತಹದ್ದಲ್ಲ. ಯಾವುದೋ ನೈತಿಕ ಮಾನದಂಡಗಳಿಗೆ ಅನುಸಾರವಾಗಿ ಸಿನಿಮಾಗಳನ್ನು ವ್ಯಾಖ್ಯಾನಿಸುವ ವಿಧಾನ ಸರಿಯಲ್ಲ. ಇಂತಹ ನಿರ್ಧಾರಗಳನ್ನು ಕೈಗೊಳ್ಳುವುದಾದಲ್ಲಿ ಚಿತ್ರೋತ್ಸವಗಳಲ್ಲಿ ತೀರ್ಪುಗಾರರ ಮಂಡಳಿಯಾದರೂ ಏಕಿರಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಭಾರತ ಹಾಗೂ ವಿದೇಶಗಳ ವೀಕ್ಷಕರಿಗೆ ಅತ್ಯುತ್ತಮ ಭಾರತೀಯ ಸಿನಿಮಾ ನೋಡುವ ಅವಕಾಶ ಇರಬೇಕು. ಆದರೆ ಸಿನಿಮಾಗಳ ಬಗ್ಗೆ ಪರಿಣತಿ ಇಲ್ಲದಿದ್ದರೂ ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಂಡು ಸಿನಿಮಾ ಪ್ರದರ್ಶನ ತಡೆಯುವಂತಹ ಬೆಳವಣಿಗೆ ಆತಂಕಕಾರಿ. ವಿಶ್ವದ ಕಣ್ಣಿಗೆ ಈಗಲೂ ಭಾರತ ಎಂದರೆ ಬಾಲಿವುಡ್. ಆದರೆ ಚಿತ್ರೋತ್ಸವದಲ್ಲಿ ‘ಪನೋರಮಾ’ ವಿಭಾಗದಲ್ಲಿ ಪ್ರದರ್ಶಿತವಾಗುವ ಚಿತ್ರಗಳು ಭಾರತದ ಹಲವು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಪ್ರಾದೇಶಿಕ ಸಿನಿಮಾಗಳ ಸಂವೇದನೆಯನ್ನು ಕಟ್ಟಿಕೊಡುತ್ತವೆ ಎಂಬುದನ್ನು ಮರೆಯಲಾಗದು. ಕಠಿಣ ನೀತಿ ಸಂಹಿತೆ ಹೊಂದಿರುವ ರಾಷ್ಟ್ರಗಳೂ, ದಿಟ್ಟ ಕಥಾವಸ್ತುಗಳಿರುವ ಸಿನಿಮಾಗಳಿಗೆ ಅವಕಾಶ ನೀಡಿವೆ ಎಂಬುದನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಸಲಿಂಗ ಕಾಮ ಹಾಗೂ ಲೈಂಗಿಕ ಅಲ್ಪಸಂಖ್ಯಾತರನ್ನು ಕುರಿತಂತಹ ಅನೇಕಇರಾನ್ ಚಿತ್ರಗಳು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ದೊಡ್ಡ ಹೆಸರು ಮಾಡಿವೆ.
ನಾವು ಏನನ್ನು ನೋಡಬೇಕು ಅಥವಾ ನೋಡಬಾರದು ಎಂಬುದನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಏಕೆ ನಿರ್ಧರಿಸಬೇಕು ಎಂಬುದು ಪ್ರಶ್ನೆ. ಸರ್ಕಾರದ ಅಧಿಕಾರಶಾಹಿ ಮಾತ್ರವಲ್ಲ, ಹಿತಾಸಕ್ತ ಗುಂಪುಗಳೂ ಅನೇಕ ಬಾರಿ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ರಾಜಸ್ಥಾನದಲ್ಲಿ ‘ಪದ್ಮಾವತಿ’ ಚಿತ್ರ ಸಮಸ್ಯೆಗೆ ಸಿಲುಕಿಕೊಂಡಿರುವುದು ಇದಕ್ಕೆ ಉದಾಹರಣೆ. ಸಿನಿಮಾಗಳನ್ನು ಅವುಗಳ ಗುಣಮಟ್ಟದಿಂದ ಅಳೆಯುವುದು ಅಗತ್ಯ. ಹುಸಿ ನೈತಿಕತೆಯನ್ನು ಆರೋಪಿಸಿ ಸೃಜನಾತ್ಮ ಕ ಅಭಿವ್ಯಕ್ತಿಗಳನ್ನು ಹತ್ತಿಕ್ಕುವುದು ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT