ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ: ಜೀವಾವಧಿ ಶಿಕ್ಷೆ

Last Updated 16 ನವೆಂಬರ್ 2017, 10:38 IST
ಅಕ್ಷರ ಗಾತ್ರ

ಕೋಲಾರ: ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಚಂದ್ರು (40) ಎಂಬಾತನಿಗೆ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ₹ 10 ಸಾವಿರ ದಂಡ ವಿಧಿಸಿದೆ.

ಬೆಂಗಳೂರಿನ ಚನ್ನಸಂದ್ರ ನಿವಾಸಿಯಾದ ಚಂದ್ರು ಮಹಿಳೆಯೊಬ್ಬರ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ವಿವಾಹಿತೆಯಾಗಿದ್ದ ಆ ಮಹಿಳೆಯು ಕೆಲ ವರ್ಷಗಳ ಹಿಂದೆ ಪತಿಯಿಂದ ದೂರವಾಗಿ ಮಗಳನ್ನು ಕರೆದುಕೊಂಡು ಚಂದ್ರು ಜತೆ ನಗರಕ್ಕೆ ಬಂದು ನೆಲೆಸಿದ್ದಳು.

ಮಹಿಳೆಯು ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಚಂದ್ರು ಆಕೆಯ ಮಗಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬಂದು ಹಲವು ಬಾರಿ ಅತ್ಯಾಚಾರ ಎಸಗಿದ್ದ. ಅಲ್ಲದೇ, ಅತ್ಯಾಚಾರದ ಸಂಗತಿಯನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ.

ಸಂತ್ರಸ್ತ ಬಾಲಕಿಯನ್ನು ಅನಾರೋಗ್ಯದ ಕಾರಣಕ್ಕೆ 2015ರ ಡಿ.17ರಂದು ಕೋಲಾರದ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದಾಗ ಆಕೆ ಮೇಲೆ ಅತ್ಯಾಚಾರ ನಡೆದಿರುವುದು ಗೊತ್ತಾಗಿತ್ತು. ಆ ವೇಳೆಗಾಗಲೇ ಆಕೆ ಗರ್ಭವತಿಯಾಗಿದ್ದಳು. 2016ರ ಜ.11ರಂದು ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.

ಪೊಲೀಸರು ಬಾಲಕಿಯ ವಿಚಾರಣೆ ನಡೆಸಿದಾಗ ಸಾಕು ತಂದೆ ಚಂದ್ರು ಅತ್ಯಾಚಾರ ಎಸಗಿದ್ದಾಗಿ ಆಕೆ ಹೇಳಿಕೆ ನೀಡಿದ್ದಳು. ಪೊಲೀಸರು ಆ ಹೇಳಿಕೆ ಆಧರಿಸಿ ಚಂದ್ರುನನ್ನು ಬಂಧಿಸಿದ್ದರು. ನಂತರ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ.ಎಸ್.ರೇಖಾ ಅವರು ಚಂದ್ರುಗೆ ಶಿಕ್ಷೆ ವಿಧಿಸಿ ಬುಧವಾರ ಆದೇಶ ಹೊರಡಿಸಿದರು.

*
ಮರಳು ಸಾಗಣೆ: ಲಾರಿಗಳ ಜಪ್ತಿ
ಜಿಲ್ಲೆಯ ವಿವಿಧೆಡೆ ಬುಧವಾರ ಕಾರ್ಯಾಚರಣೆ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಪರವಾನಗಿ ಇಲ್ಲದೆ ಅಕ್ರಮವಾಗಿ ಗ್ರಾನೈಟ್‌ ಹಾಗೂ ಮರಳು ಸಾಗಿಸುತ್ತಿದ್ದ ಆರೋಪದ ಮೇಲೆ ಏಳು ಲಾರಿಗಳನ್ನು ಜಪ್ತಿ ಮಾಡಿದ್ದಾರೆ.

‘ಜಿಲ್ಲೆಯ ತಲಗುಂದ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಭಾಗದಿಂದ ಗ್ರಾನೈಟ್‌ ಮತ್ತು ಫಿಲ್ಟರ್‌ ಮರಳನ್ನು ಮಾಲೂರು ಕೈಗಾರಿಕಾ ಪ್ರದೇಶ, ಬೆಂಗಳೂರು ಕಡೆಗೆ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಕೋಲಾರ ತಾಲ್ಲೂಕಿನ ರಾಮಸಂದ್ರ ಗೇಟ್‌ ಬಳಿ ಲಾರಿಗಳನ್ನು ಜಪ್ತಿ ಮಾಡಲಾಯಿತು’ ಎಂದು ಇಲಾಖೆಯ ಹಿರಿಯ ಭೂವಿಜ್ಞಾನಿ ನಂಜುಂಡಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಲೂರು ಮತ್ತು ವೇಮಗಲ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಲಾರಿ ಚಾಲಕರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ.

*
ಬಾಲಕರ ರಕ್ಷಣೆ
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹಾಗೂ ಪೊಲೀಸರು ನಗರದಲ್ಲಿ ಬುಧವಾರ ಜಂಟಿ ಕಾರ್ಯಾಚರಣೆ ನಡೆಸಿ ಪಾನಿಪೂರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಬಾಲಕರನ್ನು ರಕ್ಷಿಸಿದ್ದಾರೆ.

ಬಾಲಕರು ದೊಡ್ಡಪೇಟೆ ಹಾಗೂ ಟೇಕಲ್ ರಸ್ತೆಯ ಪಾನಿಪೂರಿ ಅಂಗಡಿಗಳಲ್ಲಿ ಹಲವು ತಿಂಗಳುಗಳಿಂದ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾನೂನುಬಾಹಿರವಾಗಿ ಬಾಲಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಆರೋಪದ ಮೇಲೆ ಅಂಗಡಿಗಳ ಮಾಲೀಕರು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT