ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಲೆಗಳ ಪಕ್ಕದಲ್ಲಿ ಅನಧಿಕೃತ ಮದ್ಯ ಮಾರಾಟ’

Last Updated 16 ನವೆಂಬರ್ 2017, 10:53 IST
ಅಕ್ಷರ ಗಾತ್ರ

ಹೊನ್ನಾವರ: ‘ಶಾಲೆಗಳ ಸಮೀಪ ಸೇರಿ ದಂತೆ ಎಲ್ಲೆಂದರಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಅಬಕಾರಿ ಇಲಾಖೆ ಪ್ರತಿ ತಿಂಗಳ ಮಾಮೂಲಿ ತೆಗೆದುಕೊಂಡು ಮೌನ ವಹಿಸಿದೆ’ ಎಂದು ಬುಧವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿ ಸಿದರು. ಸಭೆಗೂ ಹಾಜರಾಗದೆ ತಪ್ಪಿಸಿ ಕೊಳ್ಳುತ್ತಿರುವ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

‘ಸಿಬ್ಬಂದಿ ಕೊರತೆಯಿಂದ ಎಲ್ಲ ಕಡೆ ದಾಳಿ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದ ಅಬಕಾರಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸದಸ್ಯರು, ‘ಇಲಾಖೆ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿಲ್ಲ’ ಎಂದು ಆರೋಪಿಸಿದರು.

‘ವಿಪತ್ತು ನಿರ್ವಹಣೆ ಅನುದಾನದಡಿ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ದುರಸ್ತಿಗೆ ಹಣ ನೀಡುತ್ತಿಲ್ಲ. ಕೆಳಗಿನೂರು ಸೊಸೈಟಿ ಹೊರತುಪಡಿಸಿ ಉಳಿದ ಸೊಸೈಟಿಗಳಿಗೆ ಗೊಬ್ಬರ ಪೂರೈಕೆಯಾಗುತ್ತಿಲ್ಲ. ಕ್ರಿಮಿನಾಶಕ ಮಾರಾಟಕ್ಕೆ 6 ತಿಂಗಳಾದರೂ ಪರವಾನಗಿ ನವೀಕರಣ ಮಾಡುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ 206ರ ಪಕ್ಕದಲ್ಲಿ ತಗ್ಗು ಉಂಟಾಗಿ ಅಪಘಾತಕ್ಕೆಡೆ ಮಾಡಿಕೊಟ್ಟಿದೆ. ಹಳ್ಳಿಗಳಿಗೆ ಡಕೋಟ ಬಸ್ ಬಿಡಲಾಗುತ್ತಿದ್ದು, ಆಗಾಗ ಅವು ಕೆಟ್ಟು ನಿಲ್ಲುತ್ತಿವೆ.’ ಎಂದು ಸದಸ್ಯರು ಸಮಸ್ಯೆಗಳನ್ನು ಬಿಚ್ಚಿಟ್ಟರು.

‘ನಗರಬಸ್ತಿಕೇರಿ ಆಸ್ಪತ್ರೆಗೆ ವೈದ್ಯರ ಹುದ್ದೆ ಮಂಜೂರಾಗಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಆಯ್ದ ಶಿಕ್ಷಕರಿಗೆ ಶೈಕ್ಷಣಿಕ ಪ್ರವಾಸ ಏರ್ಪಡಿಸಲಾಗಿದೆ. ತಾಲ್ಲೂಕಿನ ಒಂದು ಕಡೆ ಜಾತ್ರೆಯ ಸಂದರ್ಭದಲ್ಲಿ ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗುವುದು. ಕೃಷಿ ಇಲಾಖೆಯಲ್ಲಿ ಪವರ್ ಟಿಲ್ಲರ್, ಸ್ಪಿಂಕ್ಲರ್, ಡಿಸೈಲ್ ಮೆಷಿನ್, ಗೊಬ್ಬರ, ಸುಣ್ಣ ಹಾಗೂ ತೋಟಗಾರಿಕಾ ಇಲಾಖೆಯಲ್ಲಿ ಜೇನು ಪೆಟ್ಟಿಗೆಯು ರಿಯಾಯಿತಿ ದರ ದಲ್ಲಿ ಲಭ್ಯವಿದೆ. ಜಾನುವಾರುಗಳಿಗೆ ಕಾಲು–ಬಾಯಿ ರೋಗ ತಡೆಗಟ್ಟಲು ಲಸಿಕೆ ನೀಡಲಾಗುತ್ತಿದೆ’ ಎಂದು ಅಧಿಕಾರಿಗಳು ವಿವರಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಉಲ್ಲಾಸ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಖಾಜಿ ಮೊಹಮ್ಮದ್ ಇರ್ಷಾದ್ ಉಪಸ್ಥಿತರಿದ್ದರು. ಸದಸ್ಯರಾದ ಗಣಪಯ್ಯ ಗೌಡ, ಆರ್‌.ಪಿ.ನಾಯ್ಕ, ಅಣ್ಣಯ್ಯ ನಾಯ್ಕ, ತುಕಾರಾಮ ನಾಯ್ಕ, ಲೋಕೇಶ ನಾಯ್ಕ, ಲಕ್ಷ್ಮಿ ಗೊಂಡ ಚರ್ಚೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT