ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಮಳೆ: ಕಾಳು ಕಟ್ಟದ ಬೆಳೆ

Last Updated 17 ನವೆಂಬರ್ 2017, 6:59 IST
ಅಕ್ಷರ ಗಾತ್ರ

ಹಾಗಲವಾಡಿ: ಸಕಾಲಕ್ಕೆ ಬಾರದ ಮಳೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಕೈಗೆ ಬಂದ ಬೆಳೆ ಹಾಳಾಗುವ ಆತಂಕ ರೈತರನ್ನು ಕಾಡುತ್ತಿದೆ. ಮುಂಗಾರಿನ ಆರಂಭದಲ್ಲಿ ಉತ್ತಮ ಮಳೆ ನಂಬಿ ರೈತರು ರಾಗಿ, ಹುರುಳಿ ಬಿತ್ತನೆ ಮಾಡಿದರು. ನಂತರ ಮಳೆ ಕ್ಷೀಣಿಸಿದರೂ ನಂತರ ನಿರೀಕ್ಷೆಗೂ ಮೀರಿ ಸುರಿಯಿತು. ರಾಗಿ ಬೆಳೆ ಹುಲುಸಾಗಿ ಬೆಳೆದು, ತೆನೆ ತುಂಬಿಕೊಂಡು ನಿಂತಿದೆ. ಆದರೆ ತೆನೆ ಬಲಿಯುವ ಹೊತ್ತಲ್ಲಿ ಅಗತ್ಯವಿರುವ ಮಳೆ ಬೀಳದೆ ಇಳುವರಿ ಕಡಿಮೆಯಾಗುವ ಆತಂಕ ಹೆಚ್ಚಾಗಿದೆ.

ಉತ್ತಮ ಮಳೆ ರೈತರಿಗೆ ಸಂತಸ ತಂದಿದ್ದರೂ ನಂತರ ಮೋಡ ಕವಿದ ವಾತಾವರಣದಲ್ಲಿ ರೋಗ ಮತ್ತು ಹುಳುಗಳ ಬಾಧೆ ಕಂಗೆಡಿಸಿತು. ನೆಲ ಹಸಿಯಾಗುವಷ್ಟು ಮಳೆಯಾದರೂ ರಾಗಿ ಕೈಸೇರುವ ವಿಶ್ವಾಸ ರೈತರದ್ದು. ಅದಕ್ಕಾಗಿ ಪ್ರತಿದಿನವೂ ಮುಗಿಲಿನತ್ತ ಮುಖ ಮಾಡಿ ಕಾಯುತ್ತಿದ್ದಾರೆ. ಆದರೆ ವರುಣ ಕೃಪೆ ತೋರದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಪರಿತಪಿಸುತ್ತಿದ್ದಾರೆ.

ಐದಾರು ವರ್ಷದಿಂದ ಅನುಭವಿಸಿದ ಬರದ ಛಾಯೆಯಿಂದ ಮುಕ್ತಿ ಪಡೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ವರ್ಷದ ಮಟ್ಟಿಗೆ ತೊಂದರೆ ತಪ್ಪೀತು ಎಂಬ ವಿಶ್ವಾಸವೂ ಇಲ್ಲದಂತಾಗಿದೆ ಎಂದು ವರ್ತೆಕಟ್ಟೆಯ ರೈತ ಮಲ್ಲಿಕಾರ್ಜುನ ಹೇಳಿದರು.

ಹಾಗಲವಾಡಿ ಹೋಬಳಿ ವ್ಯಾಪ್ತಿಯಲ್ಲಿ ರಾಗಿ ಪ್ರಮುಖ ಬೆಳೆ. ಸುಮಾರು 2750 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಇದರಲ್ಲಿ 10 ಹೆಕ್ಟೇರ್‌ನಲ್ಲಿ ಮಾತ್ರ ನೀರಾವರಿ ಸೌಲಭ್ಯ ಇದೆ. ಮಳೆಯಾಶ್ರಿತ ಬೆಳೆಯಲ್ಲಿ ಶೇ 40ರಷ್ಟು ಪ್ರದೇಶದ ರಾಗಿಗೆ ಮಳೆ ಅಗತ್ಯವಿಲ್ಲ. ಉಳಿದ ಪ್ರದೇಶದಲ್ಲಿ ಬಿತ್ತನೆಯಾದ ರಾಗಿಗೆ ಮಳೆಯ ಅಗತ್ಯವಿದೆ. ಸದ್ಯ ವರುಣ ಕೃಪೆ ತೋರದಿದ್ದರೆ ಕಷ್ಟ ತಪ್ಪಿದಲ್ಲ ಎಂಬುದು ರೈತರ ಅಳಲು. ರಾಗಿಗೆ ಬಂದಿರುವ ಸ್ಥಿತಿಯೇ ಹುರುಳಿ ಬೆಳೆಗೂ ಇದೆ. ತೇವಾಂಶ ಇಲ್ಲದೆ ಬೆಳೆ ಒಣಗುತ್ತಿದೆ.

ಮಳೆಯಾಶ್ರಿತ ಪ್ರದೇಶದಲ್ಲಿ ಈಗಾಗಲೆ ಬೆಳೆ ಉಳಿಸಿಕೊಳ್ಳಲು ಸಾಕಷ್ಟು ಪರದಾಡಿದ್ದೇವೆ. ಮಳೆರಾಯನ ಚೆಲ್ಲಾಟ, ರೋಗಬಾಧೆ, ಕೀಟಗಳ ಹಾವಳಿ, ರಸಗೊಬ್ಬರ ಕೊಂಡುಕೊಳ್ಳಲು ಸಾಕಷ್ಟು ಸಮಸ್ಯೆಯಾಗಿತ್ತು. ಈಗ ಮತ್ತೊಂದು ರೀತಿಯ ಸಮಸ್ಯೆ ಎದುರಾಗಿದೆ ಎಂದೂ ರೈತರು ಹೇಳುವರು.

* * 

ಮುಂಗಾರಿನಲ್ಲಿ ಮಳೆಯ ಕೊರತೆಯಾಗಿತ್ತು, ನಂತರ ಕಾಂಡ ಕೊರೆತ, ವಿಚಿತ್ರ ಹುಳುಗಳ ಕಾಟದಿಂದ ಬೆಳೆ ಹಾಳಾಯಿತು. ಹುಳು ನಾಶಕ್ಕೆ ಸಾವಿರಾರು ರೂಪಾಯಿ ಖರ್ಚಾಯಿತು. ಈಗ ಮಳೆ ಕೈಕೊಟ್ಟು ಸಂಕಷ್ಟ ಎದುರಾಗಿದೆ
ಮಲ್ಲಿಕಾರ್ಜನಯ್ಯ
ರೈತ, ವರ್ತೆಕಟ್ಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT