ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆಗಾಗಿ ಆಂಧ್ರ ಆಸ್ಪತ್ರೆಯತ್ತ ರೋಗಿಗಳು

Last Updated 17 ನವೆಂಬರ್ 2017, 6:39 IST
ಅಕ್ಷರ ಗಾತ್ರ

ಪಾವಗಡ: ಖಾಸಗಿ ವೈದ್ಯರ ಮುಷ್ಕರದ ಕಾರಣ ತಾಲ್ಲೂಕಿನ ಜನರು ಆರೋಗ್ಯ ಚಿಕಿತ್ಸೆಗಾಗಿ ನೆರೆಯ ಆಂಧ್ರ ಪ್ರದೇಶದ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ. ಮೂರು ದಿನಗಳಿಂದ ಖಾಸಗಿ ವೈದ್ಯರು ಆಸ್ಪತ್ರೆ ಮುಚ್ಚಿ ಬಂದ್ ನಡೆಸುತ್ತಿರುವುದರಿಂದ ತಾಲ್ಲೂಕಿನ ಬಹುತೇಕ ರೋಗಿಗಳು ಮಡಕಶಿರಾ, ಹಿಂದೂಪುರ, ಕಲ್ಯಾಣದುರ್ಗ, ಅನಂತಪುರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಡ ಜನರು ದೂರದ ಊರುಗಳಿಗೆ ಹೋಗಲಾಗದೆ ವ್ಯಥೆ ಪಡುತ್ತಿದ್ದಾರೆ. ಪಟ್ಟಣದ ಖಾಸಗಿ ಆಸ್ಪತ್ರೆಗಳ ಜೊತೆಗೆ ಔಷಧಿ ಅಂಗಡಿ, ಪ್ರಯೋಗಾಲಯಗಳನ್ನೂ ಮುಚ್ಚಲಾಗಿತ್ತು.

ನೂರಾರು ಮಂದಿ ರೋಗಿಗಳು ಸರ್ಕಾರಿ ಆಸ್ಪತ್ರೆ ಮುಂದೆ ತಪಾಸಣೆಗಾಗಿ ಕಾದು ಕುಳಿತಿದ್ದರು. ರೋಗಿಗ ಳನ್ನು ನಿಯಂತ್ರಿಸಲು ವೈದ್ಯರು ಮತ್ತು ಸಿಬ್ಬಂದಿ ಪರದಾಡಿದರು. ಒಂದು ಹಾಸಿಗೆಯಲ್ಲಿ ಇಬ್ಬರು ರೋಗಿಗಳನ್ನು ಮಲಗಿಸಿ ಚಿಕಿತ್ಸೆ ನೀಡುತ್ತಿರುವುದಕ್ಕೆ ಕೆಲವರು ಆಕ್ಷೇಪಿಸಿದರು. ಆದರೆ ಹಾಸಿಗೆ ಕೊರತೆಯಿಂದ ಇದು ಅನಿವಾರ್ಯ ಎಂದು ವೈದ್ಯರು ಸಮರ್ಥಿಸಿಕೊಂಡರು. ಆಸ್ಪತ್ರೆಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ಅಭಾವವೂ ಜನರನ್ನು ಕಾಡಿತು ಶೌಚಾಲಯಗಳಲ್ಲಿ ನೀರಿಲ್ಲದೆ ಮಹಿಳೆಯರು, ಮಕ್ಕಳು ತೊಂದರೆ ಅನುಭವಿಸಿದರು.

ಆಸ್ಪತ್ರೆಯಲ್ಲಿ ಕಾಯ್ದ ಜನ
ಕೊರಟಗೆರೆ: ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ ನಾಲ್ಕನೆ ದಿನವಾದ ಗುರುವಾರವೂ ಮುಂದುವರಿದಿದ್ದು, ರೋಗಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ದಿನವಿಡೀ ಕಾಯ್ದು ಚಿಕಿತ್ಸೆ ಪಡೆದರು. ಮುಷ್ಕರ ಮುಂದುವರಿದಿರುವ ಮಾಹಿತಿ ತಿಳಿಯದ ಗ್ರಾಮೀಣ ಭಾಗದ ಜನರು ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದರು. ಬಾಗಿಲು ಮುಚ್ಚಿದ್ದನ್ನು ಕಂಡು ಸಾರ್ವಜನಿಕ ಆಸ್ಪತ್ರೆಗೆ ತೆರಳಿದರು. ಬೆಳಿಗ್ಗೆಯಿಂದಲೇ ಆಸ್ಪತ್ರೆ ರೋಗಿಗಳಿಂದ ತುಂಬಿತ್ತು. ಕಾಯಿಲೆಯಿಂದ ಬಳಲುತ್ತಿದ್ದ ಮಕ್ಕಳು ರೋದಿಸುತ್ತಿದ್ದರೂ ತುರ್ತು ಸಿಗದೆ ಪಾಲಕರು ಸಂತೈಸಲು ಪರದಾಡುತ್ತಿದ್ದರು. 

ವೃದ್ಧರು, ಗರ್ಭಿಣಿಯರೂ ತೊಂದರೆ ಅನುಭವಿಸಿದರು. ತೀವ್ರ ರೀತಿಯ ತೊಂದರೆಯಿಂದ ಬಳಲುತ್ತಿದ್ದ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಎಲ್ಲ ವೈದ್ಯರು ರಜೆ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತುರ್ತು ಆರೋಗ್ಯ ಸೇವೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ವೈದ್ಯಾಧಿಕಾರಿ ಡಾ. ಪ್ರಕಾಶ್ ತಿಳಿಸಿದರು.

ಆಸ್ಪತ್ರೆಗೆ ಬಾರದ ವೈದ್ಯರು
ಹುಳಿಯಾರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ವಿರೋಧಿಸಿ ಮುಷ್ಕರಕ್ಕೆ ಬೆಂಬಲ ನೀಡಿ ಪಟ್ಟಣದ ಖಾಸಗಿ ವೈದ್ಯರು ಸೇವೆಯಿಂದ ಹೊರಗುಳಿದರು. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಸಂಖ್ಯೆ ಸ್ವಲ್ಪ ಹೆಚ್ಚಾಗಿದ್ದರೂ ಎಲ್ಲರೂ ಚಿಕಿತ್ಸೆ ಪಡೆದರು. ಮುಷ್ಕರದ ಬಿಸಿ ಸಾಕಷ್ಟು ತಟ್ಟಿದರೂ ಸರ್ಕಾರಿ ವೈದ್ಯರು ನಿರಂತರ ಸೇವೆ ಸಲ್ಲಿಸಿ ಸ್ವಲ್ಪ ಮಟ್ಟಿಗೆ ತಣಿಸಿದರು.

ಆಸ್ಪತ್ರೆಗೆ ಬೀಗ
ಮಧುಗಿರಿ: ವೈದ್ಯರು ಸ್ವಯಂ ಪ್ರೇರಣೆಯಿಂದ ಆಸ್ಪತ್ರೆಗಳಿಗೆ ಬೀಗ ಹಾಕಿದ್ದರಿಂದ ರೋಗಿಗಳು ಚಿಕಿತ್ಸೆಗಾಗಿ ಪರದಾಡಿದರು. ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದರಿಂದ ಜನರು ಸಾರ್ವಜನಿಕ ಆಸ್ಪತ್ರೆಯತ್ತ ಮುಖ ಮಾಡಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ವೈದ್ಯರು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸಿ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ವೈದ್ಯಾಧಿಕಾರಿ ಡಾ. ಗಂಗಾಧರ್ ತಿಳಿಸಿದರು. ವೈದ್ಯರು ಮಾನವೀಯತೆ ಮರೆತು ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ ಯಾದವ ಯುವ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಈರಣ್ಣ ಹೇಳಿದರು.

* * 

ಎರಡು ವರ್ಷದ ಮಗು ಕಾಯಿನ್ ನುಂಗಿ ಜೀವನ್ಮರಣದ ಮಧ್ಯೆ ಹೋರಾಡುತ್ತಿತ್ತು. ಆಂಧ್ರದ ಮಡಕಶಿರಾ ಗೆ ಹೋಗಿ ಮಗುವಿನ ಜೀವ ಉಳಿಸಿಕೊಳ್ಳಬೇಕಾಯಿತು. ಬಡವರ ಸ್ಥಿತಿ ಹೇಳತೀರದು.
ಗೋವರ್ಧನ್, ಪಾವಗಡ.

ಒಂದೇ ಹಾಸಿಗೆ ಮೇಲೆ ಇಬ್ಬರು ರೋಗಿಗಳನ್ನು ಮಲಗಿಸಲಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ. ವೈದ್ಯಾಧಿಕಾರಿಗಳು ರೋಗಿಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು
ಧರ್ಮಪಾಲ್ ಯಾದವ್ ಕಡಮಲಕುಂಟೆ.

ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡಿರುವುದರಿಂದ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕು. ಹೆಚ್ಚುವರಿಯಾಗಿ ಬೆಡ್, ಔಷಧಿಗಳನ್ನು ಪೂರೈಸುವತ್ತ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು
ಎಂ.ರವಿಕುಮಾರ್ ಪಾವಗಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT