ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶನದ ಜಾಡಿನಲ್ಲಿ ಭರಪೂರ ರಂಜನೆ

Last Updated 17 ನವೆಂಬರ್ 2017, 11:58 IST
ಅಕ್ಷರ ಗಾತ್ರ

ಚಿತ್ರ: ನನ್‌ ಮಗಳೇ ಹಿರೋಯಿನ್
ನಿರ್ಮಾಪಕರು: ಎನ್‌.ಜಿ. ಮೋಹನ್‌ಕುಮಾರ, ಪಟೇಲ್ ಆರ್. ಅನ್ನದಾನಪ್ಪ
ನಿರ್ದೇಶನ: ಬಾಹುಬಲಿ
ತಾರಾಗಣ: ಸಂಚಾರಿ ವಿಜಯ್, ಅಮೃತಾ ರಾವ್, ದೀಪಿಕಾ, ಬಿ.ಸಿ. ಪಾಟೀಲ್, ತಬಲಾ ನಾಣಿ, ಬುಲೆಟ್‌ ಪ್ರಕಾಶ್‌, ಪವನ್‌ಕುಮಾರ್, ಗಡ್ಡಪ್ಪ, ವಿಜಯ್‌ ಚಂಡೂರ್

ಅದು ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭ. ಆಸೆಯ ಕಂಗಳಿಂದ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ವಿಜಯ್‌ ವೇದಿಕೆ ಏರುತ್ತಾನೆ. ಕನ್ನಡದಲ್ಲಿಯೇ ಅವನಿಂದ ಭಾಷಣ. ಸಭಿಕರಿಂದ ಚಪ್ಪಾಳೆಯ ಸುರಿಮಳೆ. ಪ್ರಶಸ್ತಿ ಸಿಗಲು ಕಾರಣರಾದ ಅಮ್ಮ, ಸ್ನೇಹಿತರ ಸ್ಮರಣೆ. ಕೊನೆಗೆ, ತಂಗಿಯನ್ನು ನೆನೆಯುವಾಗ ಅವಳ ಗಟ್ಟಿಧ್ವನಿ ಕಿವಿಗಪ್ಪಳಿಸುತ್ತದೆ. ಮೈಕ್‌ ಮುಂದೆ ನಿಂತ ಅವನಿಗೂ ಗಲಿಬಿಲಿ. ಇದು ನಿರ್ದೇಶಕನಾಗಬೇಕೆಂಬ ಕನಸು ಕಂಡವನು ಕಾಣುವ ಹಗಲುಗನಸು ಎಂಬುದು ಪ್ರೇಕ್ಷಕರಿಗೆ ಥಟ್ಟನೆ ಅರ್ಥವಾಗುತ್ತದೆ. ‘ನನ್‌ ಮಗಳೇ ಹಿರೋಯಿನ್’ ಸಿನಿಮಾ ಆರಂಭವಾಗುವುದೇ ಹೀಗೆ.

ನಿರ್ದೇಶಕನಾಗಲು ಹೊರಟವನ ಅಪರಾವತಾರ ಮತ್ತು ಬಣ್ಣದ ಜಗತ್ತಿನ ಒಳನೋಟಗಳಿಗೆ ಕನ್ನಡಿ ಹಿಡಿದಿದ್ದಾರೆ ನಿರ್ದೇಶಕ ಬಾಹುಬಲಿ. ಚಿತ್ರದ ಮೊದಲಾರ್ಧವು ನಿರ್ಮಾಪಕರ ಹುಡುಕಾಟ ಮತ್ತು ಕುಟುಂಬದ ಭಾವುಕ ಕ್ಷಣಗಳಲ್ಲಿಯೇ ಮುಗಿದುಹೋಗುತ್ತದೆ. ಮೊದಲಾರ್ಧ ತುಸು ಸುತ್ತಿಬಳಸಿದಂತೆ ಕಾಣಿಸಿದರೂ ದ್ವಿತೀಯಾರ್ಧವು ಅದನ್ನು ಮರೆಸುತ್ತದೆ.

ಗಟ್ಟಿಯಾದ ಚಿತ್ರಕಥೆ ಮತ್ತು ಪರಿಣಾಮಕಾರಿಯಾದ ಅದರ ನಿರೂಪಣೆಯಿಂದ ಚಿತ್ರ ನೋಡುಗರನ್ನು ಹಿಡಿದಿಡುತ್ತದೆ. ದ್ವಂದ್ವಾರ್ಥದ ಸಂಭಾಷಣೆಗಳಿಗೆ ಅವಕಾಶ ನೀಡದೆ ನವೀರಾದ ಹಾಸ್ಯದ ಮೂಲಕ ನಗುವಿನ ಬುಗ್ಗೆ ಉಕ್ಕಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ಸಿನಿಮಾದ ಒಳಗೊಂದು ಸಿನಿಮಾ ನಡೆಯುವುದು ಈ ಚಿತ್ರದ ವಿಶೇಷ. ಆ ಚಿತ್ರದ ನಿರ್ದೇಶಕ ವಿಜಯ್. ಹಾಸಿಗೆ ಹಿಡಿದಿರುವ ತಾಯಿ. ಮದುವೆಯ ಹೊಸ್ತಿಲಿಗೆ ಬಂದು ನಿಂತಿರುವ ತಂಗಿ. ಆತ ನಿರ್ದೇಶಿಸಿದ್ದ ಮೊದಲ ಚಿತ್ರ ಸೋತಿರುತ್ತದೆ. ಎರಡನೆಯದ್ದು ಸಟ್ಟೇರಿರುವುದಿಲ್ಲ. ಆದರೂ, ಚಿತ್ರರಂಗದಲ್ಲಿ ಭದ್ರನೆಲೆಯೂರುವ ಆಸೆ. ಅವನ ಕನಸಿಗೆ ಸ್ನೇಹಿತರಿಂದ ಬೆಂಬಲ. ಆದರೆ, ಅವರು ಮಾಡುವ ಎಡವಟ್ಟುಗಳಿಗೆ ಕೊನೆ ಎಂಬುದಿಲ್ಲ. 

ವಿಜಯ್‌ ನಿರ್ದೇಶಿಸಲು ಹೊರಟ ಚಿತ್ರಕ್ಕೆ ಬಂಡವಾಳ ಹೂಡುವುದು ಅಣ್ಣಾ ರೈ. ತನ್ನ ಪುತ್ರಿ ಅಪೂರ್ವಾ ಚಿತ್ರದ ನಾಯಕಿಯಾಗಬೇಕು ಎನ್ನುವುದು ಅವನ ಷರತ್ತು. ಆಕೆಯದ್ದು ಮಗುವಿನಂತಹ ಧ್ವನಿ. ಆದರೆ, ತನ್ನ ಪ್ರೇಯಸಿ ನಾಯಕಿಯಾಗಬೇಕು ಎಂಬುದು ವಿಜಯ್‌ನ ಆಸೆ. ಮತ್ತೊಂದೆಡೆ ಚಿತ್ರ ನಿರ್ಮಾಣಕ್ಕೆ ಅಣ್ಣಾ ರೈ ತಮ್ಮನಿಂದ ಅಡ್ಡಗಾಲು. ತಾಲೀಮಿನ ವೇಳೆ ಸಹಾಯಕ ನಿರ್ದೇಶಕನ ಮೇಲೆ ಅಪೂರ್ವಾಳಿಗೆ ಪ್ರೀತಿ ಚಿಗುರೊಡೆಯುತ್ತದೆ. ಅವನೊಂದಿಗೆ ಅವಳು ಪಲಾಯನ ಮಾಡುತ್ತಾಳೆ. ಇದಕ್ಕೆ ಅಣ್ಣಾ ರೈ ಬಲಗೈ ಭಂಟ ಸಹಾಯ ಮಾಡುತ್ತಾನೆ. ಸತ್ಯ ಬಯಲಾದಾಗ ರೈ ಕೆಂಡಾಮಂಡಲ. ವಿಜಯ್‌ಗೆ ಚಿತ್ರದ ಮುಹೂರ್ತ ನಿಂತುಹೋಗುತ್ತದೆ ಎಂಬ ಆತಂಕ. ಕೊನೆಗೆ, ಅಣ್ಣಾ ರೈ ತಮ್ಮ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡುತ್ತಾನೆ.  

ಬಣ್ಣದ ಲೋಕದಲ್ಲಿ ಮಿಂದೇಳಲು ಹೊರಟ ನಿರ್ದೇಶಕನ ಪಾತ್ರದಲ್ಲಿ ಸಂಚಾರಿ ವಿಜಯ್‌ ಸಮರ್ಥವಾಗಿ ಅಭಿನಯಿಸಿದ್ದಾರೆ. ಗಂಭೀರ ‍ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ಅವರು ಕಾಮಿಡಿ ಪಾತ್ರಕ್ಕೂ ತಾವು ಸೈ ಎಂಬುದನ್ನು ನಿರೂಪಿಸಿದ್ದಾರೆ. ನಾಯಕಿಯರಾದ ಅಮೃತಾ ರಾವ್ ಮತ್ತು ದೀಪಿಕಾ ಅವರದ್ದು ಅಚ್ಚುಕಟ್ಟಾದ ಅಭಿನಯ.

ಬಿ.ಸಿ. ಪಾಟೀಲ್, ತಬಲಾ ನಾಣಿ, ಬುಲೆಟ್‌ ಪ್ರಕಾಶ್‌, ‍ಪವನ್‌ಕುಮಾರ್, ಗಡ್ಡಪ್ಪ, ವಿಜಯ್‌ ಚಂಡೂರ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಗುಂಡ್ಲುಪೇಟೆ ಸುರೇಶ್‌ ಅವರ ಛಾಯಾಗ್ರಹಣ ಕೆಲವು ದೃಶ್ಯಗಳಿಗಷ್ಟೇ ಸಹನೀಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT