ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಮಾರಾಟ ಹೆಚ್ಚಿಸಲು ಅಬಕಾರಿ ಇಲಾಖೆಗೆ ಶಿಫಾರಸು

ಆರ್ಥಿಕ ಹೊರೆ ನಿಭಾಯಿಸಲು ವಿತ್ತೀಯ ನಿರ್ವಹಣೆಯ ಪರಿಶೀಲನಾ ಸಮಿತಿ ಸಲಹೆ
Last Updated 17 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಳಗಾವಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸೇರಿದಂತೆ ಇತ್ತೀಚಿನ ಸುಧಾರಣೆಗಳಿಂದ ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿದ್ದರೂ ಮುಂದಿನ ದಿನಗಳಲ್ಲಿ ಸಂಪನ್ಮೂಲ ಸಂಗ್ರಹಣೆ ನಿರೀಕ್ಷಿತ ಪ್ರಗತಿ ಸಾಧಿಸಬಹುದು ಎಂಬ ಆಶಾಭಾವವನ್ನು ರಾಜ್ಯ ಸರ್ಕಾರ ಹೊಂದಿದೆ.

ತಕ್ಷಣದ ಬೆಳವಣಿಗೆಗಳನ್ನು ತ್ವರಿತಗೊಳಿಸಲು ಜಿಎಸ್‌ಟಿಗೆ ಸಂಬಂಧಪಟ್ಟ ಆರಂಭಿಕ ತೊಂದರೆಗಳನ್ನು ಪರಿಹರಿಸಬೇಕಾಗಿದೆ. ಹೂಡಿಕೆ ಚಟುವಟಿಕೆ ಉತ್ತೇಜಿಸಲು ಇರುವ ಅಡ್ಡಿಗಳನ್ನು ನಿವಾರಿಸಬೇಕಾಗಿದೆ ಎಂದು ರಾಜ್ಯ ಹಣಕಾಸಿನ (2017–18) ಮಧ್ಯವಾರ್ಷಿಕ ಪರಿಶೀಲನಾ ವರದಿ ತಿಳಿಸಿದೆ.

ವಿಧಾನಸಭೆಯಲ್ಲಿ ಶುಕ್ರವಾರ ಕಾನೂನು ಸಚಿವ ಟಿ.ಬಿ. ಜಯಚಂದ್ರ ವರದಿ ಮಂಡಿಸಿದರು.

ಆರು ತಿಂಗಳ ಅವಧಿಯಲ್ಲಿ ರಾಜ್ಯದ ರಾಜಸ್ವ ತೆರಿಗೆ ಸಂಗ್ರಹದಲ್ಲಿ ಆರೋಗ್ಯಕರ ಬೆಳವಣಿಗೆ ಕಂಡು ಬಂದಿದೆ. ಅಬಕಾರಿ ತೆರಿಗೆ, ವಾಣಿಜ್ಯ ತೆರಿಗೆ, ಮೋಟಾರು ವಾಹನ ತೆರಿಗೆ ಮತ್ತು ಮುದ್ರಾಂಕ ಮತ್ತು ನೋಂದಣಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿದೆ.

ರಾಜ್ಯ ಸಂಗ್ರಹಿಸಿದ ತೆರಿಗೆ (ಎಸ್‌ಜಿಎಸ್‌ಟಿ) ₹ 4,100 ಕೋಟಿ ಸೇರಿ ಜಿಎಸ್‌ಟಿ ಜಾರಿಗೆ ಬಂದ ಬಳಿಕ ಜುಲೈನಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ ₹ 6,190 ಕೋಟಿ ಸಂಗ್ರಹವಾಗಿದೆ. ಪರಿಹಾರ ಕಾಯ್ದೆ ಅನ್ವಯ ಈ ಅವಧಿಗೆ 2015–16ರ ಸಂಗ್ರಹಣೆಯ ಮೇಲೆ ಶೇ 14ರಷ್ಟು ವಾರ್ಷಿಕ ಬೆಳವಣಿಗೆಯೊಂದಿಗೆ ಪರಿಹಾರ ನೀಡಬೇಕಾಗಿದ್ದು, ಈ ಮೊತ್ತ ₹ 6,640 ಕೋಟಿ ಆಗುತ್ತದೆ. ಆ ಅಂತರವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾಗಿದೆ.

ನೆರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸ್ವದೇಶಿ ಮದ್ಯ ಮಾರಾಟ ಕಡಿಮೆ ಆಗಿರುವುದನ್ನು ಗಮನಿಸಿರುವ ವಿತ್ತೀಯ ನಿರ್ವಹಣೆಯ ಪರಿಶೀಲನಾ ಸಮಿತಿ, ಅದನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳುವಂತೆ ಅಬಕಾರಿ ಇಲಾಖೆಗೆ ಸೂಚಿಸಿದೆ.

ಸಾಲಮನ್ನಾ ಯೋಜನೆಯಿಂದ ಉಂಟಾಗುವ ಆರ್ಥಿಕ ಹೊರೆ ಹಾಗೂ ಮುಂದಿನ ವರ್ಷದಲ್ಲಿ 6ನೇ ವೇತನ ಆಯೋಗ ಜಾರಿಯಿಂದ ಆಗಬಹುದಾದ ಹೊರೆ ನಿಭಾಯಿಸಲು ಕ್ರಮಕೈಗೊಳ್ಳುವ ಅಗತ್ಯವಿದೆ ಎಂದೂ ಸಮಿತಿ‌ ಹೇಳಿದೆ.

ಸರ್ಕಾರ ತ್ವರಿತವಾಗಿ ಸಂಪನ್ಮೂಲ ಕ್ರೋಡೀಕರಣ ಹೆಚ್ಚಿಸಬೇಕು. ಗಣಿ ಹರಾಜಿನಂತಹ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕು. ಮೋಟಾರು ವಾಹನಗಳ ನೋಂದಣಿಯಲ್ಲೂ ಕುಸಿತ ಕಂಡಿದ್ದು, ಅದನ್ನೂ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಎಲ್ಲ ರೀತಿಯ ಸ್ವೀಕೃತಿಗಳನ್ನು ಹೆಚ್ಚಿಸಬೇಕು. ಅದರಲ್ಲೂ ಕೇಂದ್ರ ಸರ್ಕಾರದ ಸ್ವೀಕೃತಿಗಳನ್ನು ಪಡೆಯುವಲ್ಲಿ ನಿಗಾ ವಹಿಸಬೇಕು. ಬ್ಯಾಂಕ್‌ಗಳಲ್ಲಿ ಇರಿಸಿರುವ ನಿಶ್ಚಿತ ಠೇವಣಿ ನಿಷ್ಕೃಿಯಗೊಳ್ಳುತ್ತಿರುವುದನ್ನು ತಪ್ಪಿಸಬೇಕು ಎಂದು ಸಮಿತಿ ಹೇಳಿದೆ.

ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಸಮಗ್ರವಾಗಿ ವಿಶ್ಲೇಷಿಸಿರುವ ಸಮಿತಿ, ಈ ವರ್ಷದ ಬಜೆಟ್ ಗಾತ್ರ ಕಳೆದ ಸಾಲಿಗಿಂತಲೂ ಶೇ 14.16ರಷ್ಟು ಹೆಚ್ಚಳವಾಗಿದೆ. ಇದಕ್ಕೆ ಸರಿಸಮಾನವಾಗಿ ರಾಜಸ್ವ ಸಂಗ್ರಹಣೆ ಹೆಚ್ಚಿಸಬೇಕಿದೆ. ಬಜೆಟ್‍ನಲ್ಲಿ ತಿಳಿಸದೆ ಏಕಾಏಕಿ ಸಾಲ ಮನ್ನಾ ಘೋಷಣೆ ಮಾಡಿದ್ದರಿಂದ ಆರ್ಥಿಕ ಹೊರೆ ಹೆಚ್ಚಾಗಿದೆ ಎಂದು ಅಭಿಪ‍್ರಾಯಪಟ್ಟಿದೆ.

ಆರು ತಿಂಗಳಿನಿಂದ ತೆರಿಗೆ ಸಂಗ್ರಹ ಪ್ರಮಾಣ ಕಳೆದ ವರ್ಷಕ್ಕಿಂತಲೂ ಹೆಚ್ಚಾಗಿದೆ. ಆದರೆ, ಹೊಣೆಗಾರಿಕೆಗಳಿಗೆ ಅಂದಾಜು ಮಾಡಿದಾಗ ತೆರಿಗೆ ಸಂಗ್ರಹ ಸುಧಾರಣೆ ಆಗಬೇಕಿತ್ತು. ಜಿಎಸ್‍ಟಿ ಜಾರಿ ನಂತರ ಆಗಿರುವ ಕೊರತೆಯ ಬಗ್ಗೆ ಹೆಚ್ಚು ಅಧ್ಯಯನ ನಡೆಯಬೇಕು ಎಂದು ಸಲಹೆ ನೀಡಿದೆ.

ಅಂಕಿ ಅಂಶ

₹ 2,08,557 ಕೋಟಿ -2016-17ರಲ್ಲಿ ರಾಜ್ಯ ಸರ್ಕಾರದ ಸಾಲ

₹2,42,420 ಕೋಟಿ -2017-18ರ ನಿರೀಕ್ಷಿತ ಸಾಲದ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT