ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕಾಟ; ಬ್ಯಾಟ್ಸ್‌ಮನ್‌ಗಳ ಪರದಾಟ

ಎರಡನೇ ದಿನ ಕೇವಲ 21 ಓವರ್‌ಗಳ ಆಟ; ದಿಟ್ಟತನ ಮೆರೆದ ಚೇತೇಶ್ವರ ಪೂಜಾರ
Last Updated 17 ನವೆಂಬರ್ 2017, 20:00 IST
ಅಕ್ಷರ ಗಾತ್ರ

ಕೋಲ್ಕತ್ತ: ಮತ್ತೆ ಮಳೆಯ ಕಾಟ; ಜೊತೆಗೆ ಭಾರತದ ಬ್ಯಾಟ್ಸ್‌ಮನ್‌ಗಳ ಪರದಾಟ. ಶ್ರೀಲಂಕಾದ ವೇಗಿಗಳ ವಿರುದ್ಧ ಚೇತೇಶ್ವರ ಪೂಜಾರ ಅವರ ದಿಟ್ಟ ಆಟ. ಇಲ್ಲಿನ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದ ಎರಡನೇ ದಿನವೂ ಮಳೆ ಕಾಡಿತು.

ಹೀಗಾಗಿ 21 ಓವರ್‌ಗಳ ಆಟ ಮಾತ್ರ ನಡೆಯಿತು. ಆಟ ನಿಂತಾಗ ಭಾರತ ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಕಳೆದುಕೊಂಡು 74 ರನ್‌ ಗಳಿಸಿದೆ.

ಮೊದಲ ದಿನವಾದ ಗುರುವಾರ ಮಳೆಯಿಂದಾಗಿ ಆಟ ತಡವಾಗಿ ಆರಂಭಗೊಂಡಿತ್ತು. ಆದರೆ 12.5 ಓವರ್‌ಗಳ ಆಟ ಮಾತ್ರ ನಡೆದಿತ್ತು. ಆಗ ಭಾರತದ ಮೊತ್ತ ಮೂರು ವಿಕೆಟ್‌ಗಳಿಗೆ 17 ರನ್ ಆಗಿತ್ತು. ಸುರಂಗ ಲಕ್ಮಲ್‌ ದಾಳಿಗೆ ಬೆಚ್ಚಿದ ಭಾರತದ ಬ್ಯಾಟ್ಸ್‌ಮನ್‌ಗಳು ಬೇಗನೇ ಪೆವಿಲಿಯನ್ ಸೇರಿದ್ದರು. ಶುಕ್ರವಾರವೂ ಶ್ರೀಲಂಕಾದ ವೇಗಿಗಳು ಪಾರಮ್ಯ ಮೆರೆದರು. ದಿನದಾಟದಲ್ಲಿ ಉರುಳಿದ ಎರಡೂ ವಿಕೆಟ್‌ಗಳನ್ನು ದಾಸುನ್ ಶನಕ ಬಗಲಿಗೆ ಹಾಕಿಕೊಂಡರು.

ಶನಕ ಅವರ ವೃತ್ತಿ ಜೀವನದ ಎರಡನೇ ಟೆಸ್ಟ್ ಪಂದ್ಯ ಇದು. ಗುರುವಾರ ಕ್ರೀಸ್‌ನಲ್ಲಿದ್ದ ಅಜಿಂಕ್ಯ ರಹಾನೆ ದಿನದ ಏಳನೇ ಓವರ್‌ನಲ್ಲಿ ಔಟಾದರು. ಮೊದಲ ದಿನ ಖಾತೆ ತೆರೆಯದೇ ಇದ್ದ ಅವರು ಕೇವಲ ನಾಲ್ಕು ರನ್‌ ಗಳಿಸಿ ಮರಳಿದರು. 21 ಎಸೆತ ಎದುರಿಸಿದ್ದ ಅವರು ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದರು. ನಂತರ ಬಂದ ರವಿಚಂದ್ರನ್ ಅಶ್ವಿನ್ ಭರವಸೆ ಮೂಡಿಸಿದರು. ಆದರೆ ಶನಕ ಅವರ ಎಸೆತದಲ್ಲಿ ಕರುಣರತ್ನೆ ಅವರಿಗೆ ಸುಲಭ ಕ್ಯಾಚ್‌ ನೀಡಿದರು.

50 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಈಡಾಗಿದ್ದ ತಂಡಕ್ಕೆ ಏಕಾಂಗಿ ಹೋರಾಟ ನಡೆಸಿದ ಚೇತೇಶ್ವರ್ ಪೂಜಾರ ಚೇತನ ತುಂಬಿದರು. 102 ಎಸೆತಗಳನ್ನು ಎದುರಿಸಿದ ಅವರು 47 ರನ್ ಗಳಿಸಿ ಕ್ರೀಸ್‌ನಲ್ಲಿ ಭದ್ರವಾಗಿ ಉಳಿದರು. ಅವರ ಇನಿಂಗ್ಸ್‌ನಲ್ಲಿ ಅತ್ಯಾಕರ್ಷಕ ಒಂಬತ್ತು ಬೌಂಡರಿಗಳು ಇದ್ದವು.

ಗುರುವಾರ ಎಂಟು ರನ್ ಗಳಿಸಿದ್ದ ಪೂಜಾರ ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದರು. ನಂತರ ಲಯಕ್ಕೆ ಬಂದ ಅವರು ಮೋಹಕ ಹೊಡೆತಗಳ ಮೂಲಕ ರಂಜಿಸಿದರು. ಎದುರಾಳಿ ತಂಡದ ವೇಗದ ಬೌಲರ್‌ಗಳ ಎಸೆತಗಳನ್ನು ಬೌಂಡರಿಗೆ ಅಟ್ಟಿ ಮಿಂಚಿದರು. ಒಂದು ಬೌಂಡರಿಯೊಂದಿಗೆ 22 ಎಸೆತಗಳಲ್ಲಿ ಆರು ರನ್ ಗಳಿಸಿರುವ ವೃದ್ಧಿಮಾನ್ ಸಹಾ ಅವರು ಪೂಜಾರ ಜೊತೆ ಕ್ರೀಸ್‌ನಲ್ಲಿದ್ದಾರೆ.

ಮೊದಲ ದಿನ ಆರು ಮೇಡನ್ ಓವರ್‌ಗಳನ್ನು ಹಾಕಿದ್ದ ಸುರಂಗ ಲಕ್ಮಲ್‌ 46 ಎಸೆತಗಳ ನಂತರ ಮೊದಲ ರನ್ ಬಿಟ್ಟುಕೊಟ್ಟರು. ಒಟ್ಟು 11 ಓವರ್‌ ಹಾಕಿದ ಅವರು ಕೇವಲ ಐದು ರನ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT