ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 4.70 ಲಕ್ಷ ದೋಚಿದ ‘ಅಮೆರಿಕ ನರ್ಸ್’!

ಪಾರ್ಸಲ್ ಕಳುಹಿಸುತ್ತಿರುವುದಾಗಿ ನಂಬಿಸಿ ವಂಚನೆ: ಆರ್‌ಬಿಐ ಅಧಿಕಾರಿಯ ಸೋಗಿನಲ್ಲೂ ಟೆಕಿಗೆ ಕರೆ
Last Updated 17 ನವೆಂಬರ್ 2017, 20:36 IST
ಅಕ್ಷರ ಗಾತ್ರ

ಬೆಂಗಳೂರು: ಅಮೆರಿಕದ ನರ್ಸ್, ಆರ್‌ಬಿಐನ ಮುಖ್ಯ ಪ್ರಧಾನ ವ್ಯವಸ್ಥಾಪಕ ಹಾಗೂ ಕಸ್ಟಮ್ಸ್ ಅಧಿಕಾರಿ... ಹೀಗೆ, ನಾನಾ ಸೋಗುಗಳಲ್ಲಿ ನಗರದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರನ್ನು ಸಂಪರ್ಕಿಸಿದ್ದ ಆನ್‌ಲೈನ್ ವಂಚಕರು, ಒಡವೆಗಳಿರುವ ಪಾರ್ಸಲ್ ತಲುಪಿಸುವ ನೆಪದಲ್ಲಿ ತಮ್ಮ ಬ್ಯಾಂಕ್ ಖಾತೆಗಳಿಗೆ ₹ 4.70 ಲಕ್ಷ ಹಾಕಿಸಿಕೊಂಡು ವಂಚಿಸಿದ್ದಾರೆ.

ಮೋಸ ಹೋಗಿರುವ ನೆಲಮಂಗಲದ ಎಂ.ರಮೇಶ್ ಅವರು ನ.14ರಂದು ಅಶೋಕನಗರ ಠಾಣೆಗೆ ದೂರು ಕೊಟ್ಟಿದ್ದಾರೆ. ಆರೋಪಿಗಳ ಬ್ಯಾಂಕ್ ಖಾತೆಗಳ ವಿವರ ಸಂಗ್ರಹಿಸಿ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಅವರ ಪತ್ತೆಗೆ ಸೈಬರ್ ಅಧಿಕಾರಿಗಳ ನೆರವು ಕೋರಿದ್ದಾರೆ.

ಮೊದಲು ನರ್ಸ್: ರಮೇಶ್ ಅವರು ರಾಜರಾಜೇಶ್ವರಿನಗರದ ಕಂಪೆನಿಯೊಂದರಲ್ಲಿ ಎಂಜಿನಿಯರ್ ಆಗಿದ್ದಾರೆ. ಮೂರು ತಿಂಗಳ ಹಿಂದೆ ಅವರಿಗೆ ಫೇಸ್‌ಬುಕ್‌ನಲ್ಲಿ ‘ರಚನಾ ಕರಂ ವೈದ್ಯ’ ಎಂಬುವರ ಪರಿಚಯವಾಗಿತ್ತು. ಆ ನಂತರ ಪರಸ್ಪರರು ಮೊಬೈಲ್ ಸಂಭಾಷಣೆಯನ್ನೂ ನಡೆಸಿದ್ದರು.

ತಾನು ಅಮೆರಿಕದಲ್ಲಿ ನರ್ಸ್‌ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ ರಚನಾ, ‘ಸದ್ಯದಲ್ಲೇ ಬೆಂಗಳೂರಿಗೆ ಬರುತ್ತಿದ್ದೇನೆ. ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಲು ನನ್ನ ಜತೆ ನೀವೂ ಬರಬೇಕು. ಹಾಗೆಯೇ, ನಾನು ಉಳಿದುಕೊಳ್ಳಲು ಒಂದು ಮನೆಯನ್ನು ನೋಡಿಡಬೇಕು’ ಎಂದಿದ್ದರು. ಇದಕ್ಕೆಲ್ಲ ತನ್ನ ಬಳಿ ಸದ್ಯ ಹಣವಿಲ್ಲ ಎಂದು ರಮೇಶ್ ಪ್ರತಿಕ್ರಿಯಿಸಿದ್ದಾಗ, ‘ನಿಮಗೆ ಡಾಲರ್‌ಗಳು ಹಾಗೂ ಚಿನ್ನಾಭರಣಗಳನ್ನು ಪಾರ್ಸಲ್ ಮೂಲಕ ಕಳುಹಿಸುತ್ತೇನೆ. ಡಾಲರ್‌ಗಳನ್ನು ರೂಪಾಯಿಗೆ ಬದಲಾಯಿಸಿಕೊಳ್ಳಿ’ ಎಂದಿದ್ದರು. ಅದಕ್ಕೆ ರಮೇಶ್ ಒಪ್ಪಿಕೊಂಡಿದ್ದರು.

ನಂತರ ಕಸ್ಟಮ್ಸ್ ಅಧಿಕಾರಿ: ‘ಅ.2ರಂದು ನನಗೆ ಕರೆ ಮಾಡಿದ್ದ ನಿಶಾಕುಮಾರಿ ಎಂಬುವರು, ‘ನಾನು ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿ. ನಿಮ್ಮ ಹೆಸರಿಗೆ ಪಾರ್ಸಲ್ ಬಂದಿದೆ. ನೀವು ₹ 38,000 ಕಸ್ಟಮ್ಸ್‌ ಶುಲ್ಕವನ್ನು ನಿಲ್ದಾಣದ ಅಧಿಕಾರಿ ಸುಮನ್ ದೇವಿ ಅವರ ಎಸ್‌ಬಿಐ ಖಾತೆಗೆ ವರ್ಗಾಯಿಸಿ. ಆ ನಂತರ ಇದನ್ನು ನಿಮ್ಮ ವಿಳಾಸಕ್ಕೆ ತಲುಪಿಸುತ್ತೇವೆ’ ಎಂದು ಹೇಳಿದ್ದರು. ಫೇಸ್‌ಬುಕ್ ಗೆಳತಿಗೆ ಇದರ ಲೆಕ್ಕ ತೋರಿಸಿ  ಹಣ ಪಡೆದರಾಯಿತೆಂದು, ಅ.3ರಂದು ಆ ಖಾತೆಗೆ ಹಣ ಜಮೆ ಮಾಡಿದ್ದೆ’ ಎಂದು ‌ರಮೇಶ್ ದೂರಿನಲ್ಲಿ ತಿಳಿಸಿದ್ದಾರೆ.

‘ಅ.10ರಂದು ಪುನಃ ಕರೆ ಮಾಡಿದ್ದ ನಿಶಾಕುಮಾರಿ, ಸರ್ವಿಸ್ ಕ್ಲಿಯರೆನ್ಸ್ ನೆಪದಲ್ಲಿ ₹ 1,62 ಲಕ್ಷ ಹಾಕಿಸಿಕೊಂಡರು. ಎಲ್ಲ ಮುಗಿಯಿತು ಎನ್ನುವಷ್ಟರಲ್ಲಿ ಅ.17ರಂದು ಮತ್ತೆ ಕರೆ ಬಂತು. ‘ಪಾರ್ಸಲ್‌ನ ತೂಕ ಜಾಸ್ತಿ ಇದೆ. ಇದನ್ನು ನಿಲ್ದಾಣದಿಂದ ಹೊರಗೆ ಕಳುಹಿಸಲು ಟ್ಯಾಕ್ಸ್‌ ಕೋಡ್ ಬೇಕಾಗುತ್ತದೆ. ಅದನ್ನು ಪಡೆಯಲು ಆ ವಿಭಾಗದ ಅಧಿಕಾರಿ ಮಾನ್‌ಸಿಂಗ್ ಅವರ ಖಾತೆಗೆ ₹ 2.70 ಲಕ್ಷ ವರ್ಗಾಯಿಸಿ ಎಂದರು. ಆ ಮಾತನ್ನೂ ನಂಬಿ ಹಣ ಜಮೆ ಮಾಡಿಬಿಟ್ಟೆ’ ಎಂದು ಹೇಳಿದ್ದಾರೆ.

ಕೊನೆಗೆ ಆರ್‌ಬಿಐ ಅಧಿಕಾರಿ: ನ.25ರಂದು ರಮೇಶ್ ಅವರಿಗೆ ಕರೆ ಮಾಡಿದ ವ್ಯಕ್ತಿ, ‘ನಾನು ಆರ್‌ಬಿಐನ ಮುಖ್ಯ ಪ್ರಧಾನ ವ್ಯವಸ್ಥಾಪಕ ಸ್ವರಭ್ ಜೋಷಿ. ನೀವು ಅಮೆರಿಕದಿಂದ ಬಂದಿರುವ ಪಾರ್ಸಲ್ ಪಡೆಯುವ ಸಲುವಾಗಿ ವಿವಿಧ ಖಾತೆಗಳಿಗೆ ಹಾಕಿರುವ ಹಣ ಜಮೆ ಆಗಿಲ್ಲ. ಹೀಗಾಗಿ, ನೀವು ₹ 4.70 ಲಕ್ಷವನ್ನು ಪುನಃ ಆ ಖಾತೆಗಳಿಗೆ ಹಾಕಬೇಕು. ಆ ನಂತರವಷ್ಟೇ ಪಾರ್ಸಲ್ ತಲುಪಿಸುತ್ತೇವೆ’ ಎಂದಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ರಮೇಶ್, ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಆ ವ್ಯಕ್ತಿ ಕರೆ ಸ್ಥಗಿತಗೊಳಿಸಿದ್ದಾರೆ.

**

ಆರ್‌ಬಿಐ ಕಚೇರಿಯಲ್ಲಿ ವಿಚಾರಿಸಿದರು

ರಮೇಶ್ ಅವರು ಆರ್‌ಬಿಐನ ಬೆಂಗಳೂರು ಪ್ರಾದೇಶಿಕ ಕಚೇರಿಗೆ ತೆರಳಿ ಸ್ವರಭ್‌ ಜೋಷಿ ಬಗ್ಗೆ ವಿಚಾರಿಸಿದಾಗ, ಆ ಹೆಸರಿನ ಯಾವ ವ್ಯಕ್ತಿಯೂ ಆರ್‌ಬಿಐನಲ್ಲಿ ಕೆಲಸ ಮಾಡುತ್ತಿಲ್ಲ ಎಂಬುದು ಖಚಿತವಾಗಿದೆ. ಅದೇ ದಿನ ಅಮೆರಿಕ ನರ್ಸ್‌ನ ಫೇಸ್‌ಬುಕ್‌ ಖಾತೆ ಕೂಡ ಬಂದ್ ಆಗಿದೆ. ನಕಲಿ ಕಸ್ಟಮ್ಸ್ ಅಧಿಕಾರಿಯ ಮೊಬೈಲ್ ಕೂಡ ಸ್ವಿಚ್ಡ್‌ ಆಫ್ ಆಗಿದೆ. ಕೂಡಲೇ ರಮೇಶ್ ಅವರು ಅಶೋಕನಗರ ಠಾಣೆಯ ಮೆಟ್ಟಿಲೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT