ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫಲಾನುಭವಿ ಆಯ್ಕೆ ವಿಳಂಬವಾಗದಿರಲಿ’

Last Updated 18 ನವೆಂಬರ್ 2017, 6:27 IST
ಅಕ್ಷರ ಗಾತ್ರ

ಚಾಮರಾಜನಗರ: ವಿವಿಧ ವಸತಿ ಯೋಜನೆಗಳಲ್ಲಿನ ಫಲಾನುಭವಿಗಳ ಆಯ್ಕೆ ವಿಳಂಬ ಮತ್ತು ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆ ಇರುವುದು ಶುಕ್ರವಾರ ನಡೆದ ಜಿಲ್ಲಾ ಪಂಚಾಯತ್‌ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೊಳಗಾದವು.

ಅಂಬೇಡ್ಕರ್‌ ವಸತಿ ಯೋಜನೆ, ಇಂದಿರಾ ಆವಾಸ್‌ ಯೋಜನೆ ಮತ್ತು ಬಸವ ವಸತಿ ಯೋಜನೆಗಳಡಿ ಫಲಾನುಭವಿಗಳ ಆಯ್ಕೆ ವಿಳಂಬವಾಗುತ್ತಿದೆ. ಗ್ರಾಮಸಭೆಗಳನ್ನು ಕರೆದು ತ್ವರಿತ ಮತ್ತು ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಸಬೇಕು. ಡಿಸೆಂಬರ್‌ ಅಂತ್ಯದೊಳಗೆ ಎಲ್ಲ ಕೆಲಸ ಮುಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ ಸೂಚಿಸಿದರು.

ವಿದ್ಯಾರ್ಥಿಗಳು ಬರುತ್ತಿಲ್ಲ: ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ನಾಲ್ಕೈದು ಮಕ್ಕಳು ಮಾತ್ರ ಇರುತ್ತಾರೆ. ಕೆಲವರು ದಾಖಲಾದರೂ ಮನೆಯಿಂದಲೇ ಓಡಾಡುತ್ತಾರೆ. ಪೋಷಕರು ಮಕ್ಕಳನ್ನು ಬಿಟ್ಟು ಇರಲು ಬಯಸುತ್ತಿಲ್ಲ. ಇದರಿಂದ ಹಾಸ್ಟೆಲ್‌ಗಳು ಇದ್ದರೂ ಪ್ರಯೋಜನವಾಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಅಲ್ಲದೆ, ಅಲ್ಲಿ ಸಿಬ್ಬಂದಿ ಕೊರತೆಯೂ ಇದೆ. ಎರಡು ಮೂರು ವಿದ್ಯಾರ್ಥಿನಿಲಯಕ್ಕೆ ಒಬ್ಬ ವಾರ್ಡನ್‌ ಇದ್ದಾರೆ. ಅವರೂ ಸರಿಯಾಗಿ ಭೇಟಿ ನೀಡುವುದಿಲ್ಲ ಎಂದು ಸದಸ್ಯರು ದೂರಿದರು. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂಬ ಆರೋಪದ ಕುರಿತು ಪ್ರಸ್ತಾಪವಾಯಿತು.

ಟೆಂಡರ್ ಪಡೆದ ಸಂಸ್ಥೆಗಳು ವೇತನ ನೀಡುತ್ತಿಲ್ಲ. ಅವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ಹಾಕಿ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ ಅವರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೆ.ಎಚ್‌. ಸತೀಶ್‌ ಅವರಿಗೆ ಸೂಚಿಸಿದರು.

ಇಲಾಖೆಯಿಂದ ಅವರಿಗೆ ಟೆಂಡರ್‌ ನೀಡಲಾಗುತ್ತದೆಯೇ ವಿನಾ, ಅವರ ಮೇಲೆ ಮೊಕದ್ದಮೆ ಹೂಡಲು ನಮಗೆ ಅವಕಾಶವಿಲ್ಲ. ಶಿಕ್ಷಕರೇ ದೂರು ದಾಖಲಿಸಬೇಕು ಎಂದು ಸತೀಶ್‌ ತಿಳಿಸಿದರು.

ಬದನಗುಪ್ಪೆ–ಕೆಲ್ಲಂಬಳ್ಳಿ ಕೈಗಾ ರಿಕಾ ಪ್ರದೇಶದಲ್ಲಿ ಸಣ್ಣಪುಟ್ಟ ಹೂಡಿಕೆ ದಾರರು ಮುಂದೆ ಬಂದಿದ್ದಾರೆ. 1500 ಎಕರೆ ಪ್ರದೇಶದಲ್ಲಿ ಅರ್ಧ ಎಕರೆ, ಮುಕ್ಕಾಲು ಎಕರೆಯಂತೆ 15 ಎಕರೆ ಭೂಮಿಯನ್ನು ಉದ್ಯಮಿಗಳಿಗೆ ನೀಡಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ.ಎನ್. ಮುರುಳೇಶ್‌ ತಿಳಿಸಿದರು.

ಸುವರ್ಣಾವತಿ –ಚಿಕ್ಕಹೊಳೆ ಜಲಾಶಯ ದಿಂದ ಹರವೆ ಗ್ರಾಮದ ಭಾಗದ ಕೆರೆಗಳಿಗೆ ನೀರು ತುಂಬಿಸುತ್ತಿಲ್ಲ. ರೈತರು ದುಡ್ಡು ಕೊಟ್ಟು ನೀರು ಬಿಡಿಸಿಕೊಳ್ಳವಂತಾಗಿದೆ ಎಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆರೆಹಳ್ಳಿ ನವೀನ್‌ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಕಲಿ ವೈದ್ಯರ ಹಾವಳಿ: ರಾಮಾಪುರ ಮತ್ತು ಲೊಕ್ಕನಹಳ್ಳಿಯಲ್ಲಿ ಇಬ್ಬರು ನಕಲಿ ವೈದ್ಯರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಇನ್ನು ಕೆಲವರು ತಾವು ಪಾರಂಪರಿಕ ವೈದ್ಯರೆಂದು ಹೈಕೋರ್ಟ್‌ನಿಂದ ಪ್ರಕರಣಕ್ಕೆ ತಡೆಯಾಜ್ಞೆ ತಂದಿದ್ದಾರೆ. ಪಾರಂಪರಿಕ ವೈದ್ಯರೆಂದು ನೋಂದಣಿ ಮಾಡಿಸಿಕೊಳ್ಳಲು ಸುಮಾರು 160 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಡಿಎಚ್‌ಒ ಮಾಹಿತಿ ನೀಡಿದರು.

ನರೇಗಾದಲ್ಲಿ ಮುಂದೆ: ನರೇಗಾ ಯೋಜನೆಯಲ್ಲಿ ಜಿಲ್ಲೆಯಲ್ಲಿ ಶೇ 66ರಷ್ಟು ಪ್ರಗತಿ ಸಾಧಿಸಲಾಗಿದ್ದು, ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿಯೇ ಮೊದಲ ಸ್ಥಾನದಲ್ಲಿದೆ. ಇದುವರೆಗೂ ₹49 ಕೋಟಿ ಖರ್ಚು ಮಾಡಲಾಗಿದೆ. ಅಂತರ್ಜಲ ಮರುಪೂರಣದಲ್ಲಿ ರಾಜ್ಯದಲ್ಲಿಯೇ ಎರಡನೆಯ ಸ್ಥಾನದಲ್ಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‌ ಕುಮಾರ್‌ ತಿಳಿಸಿದರು. ಸಭೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬಿ.ಕೆ. ಬೊಮ್ಮಯ್ಯ, ಮುಖ್ಯ ಯೋಜನಾಧಿಕಾರಿ ಕೆ. ಮಾದೇಶ್‌ ಇದ್ದರು.

ಬಯೊಮೆಟ್ರಿಕ್‌ಗೆ ಚಿಂತನೆ
ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ. ಫೋನ್‌ ಕರೆಗೂ ಲಭ್ಯವಾಗುವುದಿಲ್ಲ. ಹೀಗಾಗಿ, ಎಲ್ಲ ಕಚೇರಿಗಳಲ್ಲಿ ಬಯೊಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ಸಿಇಒ ಕೆ. ಹರೀಶ್‌ ಕುಮಾರ್‌ ತಿಳಿಸಿದರು.

‘ಅಧಿಕಾರಿಗಳು ಜಿಲ್ಲಾ ಪ್ರವಾಸಕ್ಕೆ ತೆರಳುವ ಮುನ್ನ ನನಗೆ ಮಾಹಿತಿ ನೀಡಬೇಕು. ತಮಗೆ ಬರುವ ಕರೆಗಳನ್ನು ಸ್ವೀಕರಿಸಿ ಸಮರ್ಪಕವಾಗಿ ಸ್ಪಂದಿಸಬೇಕು. ನಾಗರಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಕಚೇರಿ ಸಿಬ್ಬಂದಿಗೂ ನಿರ್ದೇಶನ ನೀಡಬೇಕು’ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT