ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದಾಜು 19 ಸಾವಿರ ಹೆಕ್ಟೇರ್ ಬೆಳೆ ನಾಶ

Last Updated 18 ನವೆಂಬರ್ 2017, 6:49 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ 157 ಗ್ರಾಮಗಳ ವ್ಯಾಪ್ತಿಯಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳು ನಡೆಸಿದ ಜಂಟಿ ಸಮೀಕ್ಷೆಯಲ್ಲಿ ಸುಮಾರು 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಾಶವಾಗಿರುವುದಾಗಿ ಅಂದಾಜಿಸಲಾಗಿದೆ ಎಂದು ಹಿರಿಯ ಸಹಾಯಕ ಕೃಷಿ ನಿರ್ದೇಶಕ ಡಾ.ಅಸ್ಲಂ ತಿಳಿಸಿದರು.

ನಗರದ ಸಾಮರ್ಥ್ಯ ಸೌಧದಲ್ಲಿ ಗುರುವಾರ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಎಸ್.ಚಂದ್ರಪ್ಪ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.

ಮುಂಗಾರು ಹಂಗಾಮಿನಲ್ಲಿ 24 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳು ಬಿತ್ತನೆಯಾಗಿದೆ. ಅದರಲ್ಲಿ 19 ಸಾವಿರ ಹೆಕ್ಟೇರ್ ಬೆಳೆ ವಿಫಲವಾಗಿದೆ. ಈ ಬಗ್ಗೆ ತಹಶೀಲ್ದಾರ್ ನೇತೃತ್ವದಲ್ಲಿ ಸಮಗ್ರ ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ. ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ 11,500 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ, 4,165 ಹೆಕ್ಟೇರ್ ಜೋಳ ಬಿತ್ತನೆಯಾಗಿದೆ. ಮುಂಗಾರು ಬೆಳೆಗಳಿಗೆ 6,900 ರೈತರು ಫಸಲ್ ಬಿಮಾ ಯೋಜನೆಯಡಿ ವಿಮೆ ಪಾವತಿಸಿದ್ದಾರೆ ಎಂದು ಮಾಹಿತಿ ನೀಡಿದರು.

‘ನಗರದ ಸಾರ್ವಜನಿಕ ಆಸ್ಪತ್ರೆಯ ಕೆಲವು ವೈದ್ಯರು ರೋಗಿಗಳನ್ನು ಆಸ್ಪತ್ರೆಗೆ ಸಮೀಪದಲ್ಲಿರುವ ತಮ್ಮ ಖಾಸಗಿ ಕ್ಲಿನಿಕ್‌ಗಳಿಗೆ ಬನ್ನಿ ಎಂದು ಒತ್ತಾಯಿಸುತ್ತಿದ್ದಾರೆ. ಹೀಗಾದರೆ ಬಡ ರೋಗಿಗಳು ಬದುಕಲು ಸಾಧ್ಯವೇ?’ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಇದುವರೆಗೆ 39 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ವಿರೂಪಾಕ್ಷಪ್ಪ ಮಾಹಿತಿ ನೀಡಿದರು.

ತಾಲ್ಲೂಕಿನಲ್ಲಿ 6,846 ಜನ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದು, ಈಗಾಗಲೇ 4,150 ಜನರಿಗೆ ವಿತರಿಸಲಾಗಿದೆ. ತಾಲ್ಲೂಕಿನಲ್ಲಿ ಗ್ರಾಮ ನೈರ್ಮಲ್ಯ ಮತ್ತು ಶೌಚಾಲಯ ನಿರ್ಮಾಣಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ತಾಲ್ಲೂಕನ್ನು ಬಯಲು ಶೌಚಮುಕ್ತ ಮಾಡಲಾಗುವುದು. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾಪಾಡಲು
32 ಕಿ.ಮೀ. ಚರಂಡಿ, 125 ಕಿ.ಮೀ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಇಒ ಡಾ. ಶ್ರೀಧರ್ ಬಾರಿಕೇರ್ ಸಭೆಗೆ ವಿವರಿಸಿದರು.‌

ಸಭೆಗೆ ಗೈರು ಹಾಜರಾಗಿದ್ದ ಅರಣ್ಯ ಮತ್ತು ಸಣ್ಣ ನೀರಾವರಿ ಇಲಾಖೆಗಳ ಅಧಿಕಾರಿಗಳ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಇಲಾಖೆ ಅಧಿಕಾರಿ ಸತತವಾಗಿ ಸಭೆಗೆ ಗೈರು ಹಾಜರಾಗುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮಕ್ಕೆ ಸದಸ್ಯರು ಒತ್ತಾಯಿಸಿದರು.

ಉಪಾಧ್ಯಕ್ಷೆ ಚಂದ್ರಕಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಶಂಕರಮೂರ್ತಿ, ಸದಸ್ಯರಾದ ಓಂಕಾರಪ್ಪ, ಮುಕುಂದ್, ಜಿ.ಕಲ್ಪನಾ, ವನಜಾಕ್ಷಿ, ತಿಪ್ಪಮ್ಮ, ವನಿತಾ, ನಟರಾಜ್, ಹನುಮಂತರಾಯಪ್ಪ, ಪುಷ್ಪಾ, ಜಯರಾಮಯ್ಯ, ಯಶವಂತ್‌ರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT