ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಸೂಪರ್‌ ಮಾರುಕಟ್ಟೆ ಮೇಲ್ದರ್ಜೆಗೆ

Last Updated 18 ನವೆಂಬರ್ 2017, 7:07 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿನ ಸೂಪರ್‌ ಮಾರುಕಟ್ಟೆಯನ್ನು ಮೇಲ್ದರ್ಜೆಗೆ ಏರಿಸಲು, ಶುಕ್ರವಾರ ಇಲ್ಲಿ ನಡೆದ ಹುಬ್ಬಳ್ಳಿ– ಧಾರವಾಡ ಸ್ಮಾರ್ಟ್‌ ಸಿಟಿ ನಾಗರಿಕರ ಸಮಾಲೋಚನೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಸುಭಾಸ ಶಿಂಧೆ ಮಾತನಾಡಿ, ‘ಸೂಪರ್‌ ಮಾರುಕಟ್ಟೆ ಅಭಿವೃದ್ಧಿಗೆ ನಮ್ಮ ಸಹಮತವಿದೆ. ಆದರೆ, ಈ ಮಾರುಕಟ್ಟೆಯಲ್ಲಿ ಬದುಕು ಕಟ್ಟಿಕೊಂಡ ನೂರಾರು ಕುಟುಂಬಗಳು ಇವೆ. ನೂತನವಾಗಿ ನಿರ್ಮಿಸಲಿರುವ ಸೂಪರ್ ಮಾರುಕಟ್ಟೆಯಲ್ಲಿ ಈಗಿರುವ ವ್ಯಾಪಾರಿಗಳಿಗೆ ಮೊದಲು ವ್ಯಾಪಾರ ಸ್ಥಳದ ಖಾತ್ರಿಯಾಗಬೇಕು. ನಂತರವಷ್ಟೇ ಇತರರಿಗೆ ಹಂಚಿಕೆ ಮಾಡಬೇಕು’ ಎಂದರು.

‘ಮಳಿಗೆಗಳನ್ನು ಬಹಿರಂಗ ಹರಾಜು ಮಾಡಿದಲ್ಲಿ ಅವು ಶ್ರೀಮಂತರ ಪಾಲಾಗುವ ಸಾಧ್ಯತೆ ಇದೆ. ಯಾವುದೇ ಕಾರಣಕ್ಕೂ ವ್ಯಾಪಾರಸ್ಥರಿಗೆ ಅನ್ಯಾಯ ಆಗಲು ಬಿಡುವುದಿಲ್ಲ’ ಎಂದು ಹೇಳಿದರು.

ಪಾಲಿಕೆ ಮಳಿಗೆಗಳ ಭೂಬಾಡಿಗೆದಾರರ ಸಂಘದ ಅಧ್ಯಕ್ಷ ಸತೀಶ ತುರಮರಿ ಮಾತನಾಡಿ, ‘ಮಾರುಕಟ್ಟೆ ಅಭಿವೃದ್ಧಿಗೆ ಯಾರೂ ಅಪಸ್ವರ ಎತ್ತುವುದಿಲ್ಲ. ಇಲ್ಲಿ ನಮ್ಮ ಬದುಕಿದೆ. ಬಸ್‌ ನಿಲ್ದಾಣ ದುರಸ್ತಿ ಕಾರ್ಯ ಆರಂಭವಾಗಿ ಎರಡು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಈಗಾಗಲೇ ವ್ಯಾಪಾಸ್ಥರು ನಷ್ಟ ಅನುಭವಿಸುತ್ತಿದ್ದಾರೆ. ಅದರಂತೆಯೇ ಸೂಪರ್ ಮಾರುಕಟ್ಟೆಯ ಸ್ಥಿತಿಯೂ ಆದರೆ, ಬದುಕೇ ನಿರ್ನಾಮವಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಒಂದೊಮ್ಮೆ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಂಡರೂ ನಂತರ ಕಾಯ್ದೆ, ಕಾನೂನು, ಮೀಸಲಾತಿ ಇತ್ಯಾದಿಗಳ ನೆಪದಲ್ಲಿ ಈಗಿರುವ ವ್ಯಾಪಾಸ್ಥರಿಗೆ ತೊಂದರೆಯಾಗಬಾರದು. ಇಂತಹ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಈ ಭಾಗದ ಶಾಸಕ ಹಾಗೂ ಪಾಲಿಕೆ ಸದಸ್ಯರು ಇರಬೇಕು. ಮುಂದಿನ ಸಭೆಯಲ್ಲಿ ಅವರೆಲ್ಲರೂ ಇದ್ದಲ್ಲಿ ನಮ್ಮ ವಾದವನ್ನು ಮಂಡಿಸುತ್ತೇವೆ’ ಎಂದು ಹೇಳಿದರು. ಪಾಲಿಕೆ ಸದಸ್ಯ ಸಂಜಯ ಕಪಟ್ಕರ್ ಮಾತನಾಡಿ, ‘ಮಳಿಗೆಗಳು ತೆರೆದ ಪ್ರದೇಶದಲ್ಲಿದ್ದರೆ ಹೆಚ್ಚು ಉತ್ತಮ, ಮುಚ್ಚಿರುವ ವಿನ್ಯಾಸ ಬೇಡ’ ಎಂದು ಸಲಹೆ ನೀಡಿದರು.

ಜಾವೀದ್ ಟಿನ್‌ವಾಲೆ ಮಾತನಾಡಿ, ‘ಸೂಪರ್ ಮಾರುಕಟ್ಟೆ ನಿರ್ಮಾಣ ಆಗುವವರೆಗೂ ಬೇರೆಡೆ ಸ್ಥಳಾವಕಾಶ ನೀಡುವ ಪ್ರಸ್ತಾವವನ್ನು ಪಾಲಿಕೆ ಕೈಬಿಡಬೇಕು. ಇಲ್ಲದೇ ಹೋದರೆ ಈಗಾಗಲೇ ನಷ್ಟ ಅನುಭವಿಸುತ್ತಿರುವ ಸಣ್ಣ ವ್ಯಾಪಾರಿಗಳು, ವ್ಯಾಪಾರವೇ ಇಲ್ಲದೆ ಉಪವಾಸ ಇರಬೇಕಾಗುತ್ತದೆ. ಹೀಗಾಗಿ ಮೂರು ಹಂತಗಳಲ್ಲಿ ನಿರ್ಮಾಣ ಕಾರ್ಯ ಮಾಡಬೇಕು. ಕಾಮಗಾರಿ ನಡೆಯುವ ಒಂದೊಂದು ಭಾಗದಲ್ಲಿರುವ ವ್ಯಾಪಾರಿಗಳನ್ನು ಸ್ಥಳಾಂತರ ಮಾಡಿ ನಂತರ ಅವರಿಗೆ ಹೊಸ ಕಟ್ಟದಲ್ಲಿ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು’ ಎಂದು ಸಲಹೆ ನೀಡಿದರು.

ತಮಟಗಾರ ಮಾತನಾಡಿ, ‘ಮಾರುಕಟ್ಟೆ ಇರುವ ವಾರ್ಡ್‌ ಸಂಖ್ಯೆ 11 ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಲ್ಲಿಗೆ ಬರಬೇಕಾದ ಅನುದಾನವನ್ನು ಬೇರೆಡೆ ವರ್ಗಾಯಿಸಲಾಗಿದೆ. ಇಂಥ ತಾರತಮ್ಯ ಏಕೆ? ಪಾಲಿಕೆಯು ನಗರದಲ್ಲಿ ನೂರಾರು ಶೌಚಾಲಯ ನಿರ್ಮಿಸುವ ಬದಲು, ನಾಲ್ಕು ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಲಿ, ಅಲ್ಲಿ ನೀರು ಪೂರೈಸಿ, ನೈರ್ಮಲ್ಯ ಕಾಪಾಡಲಿ’ ಎಂದರು.

‘ಈಗಿರುವ ವ್ಯಾಪಾಸ್ಥರಿಗೆ ಪರ್ಯಾಯ ವ್ಯವಸ್ಥೆ, ತಂದೆಯಿಂದ ಮಕ್ಕಳಿಗೆ ಖಾತೆ ಬದಲಾವಣೆ ಇತ್ಯಾದಿ ಸೌಕರ್ಯಗಳನ್ನು ಕಲ್ಪಿಸಿದ ನಂತರವೇ ಸೂಪರ್‌ ಮಾರುಕಟ್ಟೆ ಕಾಮಗಾರಿ ಆರಂಭವಾಗಲಿದೆ. ಇದರಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು’ ಎಂದು ಮೇಯರ್ ಡಿ.ಕೆ.ಚವ್ಹಾಣ ಹೇಳಿದರು.

ವ್ಯಾಪಾಸ್ಥರ ಸಲಹೆ ಪಡೆದು, ಅಗತ್ಯ ಬಿದ್ದರೆ ವಿನ್ಯಾಸದಲ್ಲಿ ಮಾರ್ಪಾಡು ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು. ವ್ಯಾಪಾರಸ್ಥರು ತಮ್ಮ ಅಹವಾಲುಗಳನ್ನು ಪಾಲಿಕೆ ಆಯುಕ್ತ ಮತ್ತು ಮೇಯರ್‌ಗೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT