ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

73.2 ಕೋಟಿ ಭಾರತೀಯರಿಗೆ ಇನ್ನೂ ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲ

‘ವಾಟರ್ ಏಡ್’ ವರದಿ
Last Updated 18 ನವೆಂಬರ್ 2017, 9:53 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ 73.2 ಕೋಟಿಗೂ ಹೆಚ್ಚು ಮಂದಿಗೆ ಇನ್ನೂ ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲ ಎಂದು ‘ವಾಟರ್ ಏಡ್’ ವರದಿ ಹೇಳಿದೆ.

‘ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯ ನಿರ್ಮಾಣ, ಬಯಲು ಶೌಚ ತಗ್ಗಿಸುವ ಪ್ರಯತ್ನಗಳು ನಡೆದಿವೆ. ಆದರೂ ದೇಶದ ಸಾಕಷ್ಟು ಜನರು ಇಂದಿಗೂ ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲದ ಸ್ಥಿತಿಯಲ್ಲಿದ್ದಾರೆ’ ಎಂದು ‘ವಾಟರ್ ಏಡ್’ ಸಂಸ್ಥೆಯು ವಿಶ್ವದ ಶೌಚಾಲಯ ವ್ಯವಸ್ಥೆಯ ಸ್ಥಿತಿಗತಿಯ ಬಗ್ಗೆ ನಡೆಸಿರುವ ಅಧ್ಯಯನ ವರದಿಯಲ್ಲಿ (Out of Order : The State of the World’s Toilets 2017) ತಿಳಿಸಿದೆ.

‘ದೇಶದಲ್ಲಿ 35 ಕೋಟಿಗೂ ಹೆಚ್ಚು ಮಹಿಳೆಯರು ಶೌಚಾಲಯದ ಸಮಸ್ಯೆ ಎದುರಿಸುತ್ತಿದ್ದಾರೆ. ಮಹಿಳೆಯರು ಶೌಚಾಲಯಕ್ಕೆ ಹೋಗಲು ಸಾಕಷ್ಟು ಕಾಲ ಕಾಯಬೇಕಾಗುತ್ತದೆ. ಒಂದು ವೇಳೆ ಶೌಚಾಲಯಕ್ಕೆ ಹೋಗುವ ಮಹಿಳೆಯರೆಲ್ಲರೂ ಸರದಿ ಸಾಲಿನಲ್ಲಿ ನಿಂತರೆ ಆ ಸಾಲು ಭೂಮಿಗೆ ನಾಲ್ಕು ಸುತ್ತು ಬರುತ್ತದೆ!’ ಎಂದು ವರದಿ ಹೇಳಿದೆ.

‘ಸ್ವಚ್ಛ ಭಾರತ ಅಭಿಯಾನದಿಂದಾಗಿ ಬಯಲು ಶೌಚ ಪ್ರಮಾಣ ಗಣನೀಯವಾಗಿ ತಗ್ಗಿದೆ. 2014ರ ಅಕ್ಟೋಬರ್‌ನಿಂದ 2017ರ ನವೆಂಬರ್‌ವರೆಗೆ ದೇಶದಲ್ಲಿ 52 ಕೋಟಿ ಗೃಹಬಳಕೆ ಶೌಚಾಲಯಗಳ ನಿರ್ಮಾಣವಾಗಿದೆ’ ಎಂದು ಸರ್ಕಾರದ ಅಂಕಿಸಂಖ್ಯೆಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

‘ಭಾರತದ ನಂತರ ಶೌಚಾಲಯದ ಸಮಸ್ಯೆ ಎದುರಿಸುತ್ತಿರುವ ಅತಿದೊಡ್ಡ ರಾಷ್ಟ್ರ ಚೀನಾ. ಚೀನಾದಲ್ಲಿ 34.3 ಕೋಟಿ ಜನರು ಸೂಕ್ತ ಶೌಚಾಲಯವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. 2000ರಿಂದ ಚೀನಾ ಕೂಡಾ ಶೌಚಾಲಯ ಸಮಸ್ಯೆ ನೀಗಿಸಲು ಪ್ರಯತ್ನಿಸುತ್ತಲೇ ಇದೆ’ ಎಂದು ವರದಿ ಹೇಳಿದೆ.

ಶೌಚಾಲಯ ಸಮಸ್ಯೆ ಎದುರಿಸುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ, ಚೀನಾದ ನಂತರದ ಸ್ಥಾನದಲ್ಲಿ ಆಫ್ರಿಕಾದ ರಾಷ್ಟ್ರ ನೈಜೀರಿಯಾ ಇದೆ. ಬಾಂಗ್ಲಾದೇಶ, ಪಾಕಿಸ್ತಾನ, ಕೀನ್ಯಾ ಕೂಡಾ ಈ ಪಟ್ಟಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT