ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈರುತ್ಯ ಪದವೀಧರ ಕ್ಷೇತ್ರ: ಲಿಂಗಾಯತರ ಮಧ್ಯೆ ಜಿದ್ದಾಜಿದ್ದಿ!

Last Updated 18 ನವೆಂಬರ್ 2017, 9:26 IST
ಅಕ್ಷರ ಗಾತ್ರ

ಶಿವಮೊಗ್ಗ: ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಸಂಸದ ಆಯನೂರು ಮಂಜುನಾಥ್ ಅವರನ್ನು ಕಣಕ್ಕೆ ಇಳಿಸುವ ಮೂಲಕ ಬಿಜೆಪಿ ಲಿಂಗಾಯತರ ಮಧ್ಯೆ ಸ್ಪರ್ಧೆಗೆ ವೇದಿಕೆ ರೂಪಿಸಿದೆ.

ಅವಿಭಜಿತ ಶಿವಮೊಗ್ಗ ಸೇರಿದಂತೆ 6 ಜಿಲ್ಲೆಗಳನ್ನು ಒಳಗೊಂಡ ಈ ಕ್ಷೇತ್ರಕ್ಕೆ ಎಲ್ಲ ಪಕ್ಷಗಳಿಗಿಂತ ಮೊದಲು ಕಾಂಗ್ರೆಸ್ ಲಿಂಗಾಯತ ಸಮುದಾಯಕ್ಕೆ ಸೇರಿದ ಎಸ್‌.ಪಿ. ದಿನೇಶ್ ಅವರ ಆಯ್ಕೆ ಘೋಷಿಸಿತ್ತು. 2012ರಲ್ಲಿ ನಡೆದ ಚುನಾವಣೆಯಲ್ಲೂ ಡಿ.ಎಚ್‌.ಶಂಕರಮೂರ್ತಿ ವಿರುದ್ಧ ಸ್ಪರ್ಧಿಸಿದ್ದ ದಿನೇಶ್ ಲಿಂಗಾಯತರ ಮತಗಳನ್ನು ಕ್ರೋಡೀಕರಿಸುವ ಮೂಲಕ ಬಿಜೆಪಿ ಅಭ್ಯರ್ಥಿಗೆ ಪ್ರಬಲ ಪೈಪೋಟಿ ಒಡ್ಡಿದ್ದರು.

ಯಡಿಯೂರಪ್ಪ ಕಾರಣಕ್ಕೆ ಮೊದಲಿನಿಂದಲೂ ಬಿಜೆಪಿ ಬೆಂಬಲಿಸಿದ್ದ ಲಿಂಗಾಯತರು, ಕಳೆದ ಬಾರಿ ಜಾತಿಯ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪರ ವಾಲಿದ್ದರು. ಈ ಬಾರಿ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಲಿಂಗಾಯತ ಸಮುದಾಯದ ಮಂಜುನಾಥ್ ಅವರನ್ನು ಕಣಕ್ಕೆ ಇಳಿಸಲಾಗಿದೆ. ಜೆಡಿಎಸ್‌ ಅಭ್ಯರ್ಥಿ ಇನ್ನೂ ಘೋಷಣೆಯಾಗಿಲ್ಲ.

ಜಾತಿವಾರು ಲೆಕ್ಕಾಚಾರ ನಡೆಯುವುದೇ?
ಪದವೀಧರ ಕ್ಷೇತ್ರದಲ್ಲಿ ಜಾತಿವಾರು ಲೆಕ್ಕಚಾರ ಫಲ ನೀಡುತ್ತದೆಯೇ ಎಂಬ ಪ್ರಶ್ನೆಯನ್ನು ಬಿಜೆಪಿ ಮುಖಂಡರೇ ಮುಂದಿಡುತ್ತಾರೆ. ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಆ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಸಿಸುವ 18 ವರ್ಷ ತುಂಬಿದ ಎಲ್ಲ ಜಾತಿ, ಧರ್ಮಗಳ ಮತದಾರರು ಮತಚಲಾಯಿಸುತ್ತಾರೆ. ಅಲ್ಲಿ ಜಾತಿ ಲೆಕ್ಕಾಚಾರಗಳು ಮೇಲುಗೈ ಪಡೆಯುತ್ತವೆ. ಆದರೆ, ಪದವೀಧರರ ಕ್ಷೇತ್ರ ವ್ಯಾಪ್ತಿ ವಿಸ್ತಾರವಾಗಿದೆ.

ಕೊಡಗು, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ತಾಲ್ಲೂಕುಗಳು ನೈರುತ್ಯ ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತವೆ. ಕ್ಷೇತ್ರ ವ್ಯಾಪ್ತಿಯಲ್ಲಿ 30 ತಾಲ್ಲೂಕುಗಳು, ಅಷ್ಟೇ ಸಂಖ್ಯೆಯ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ವ್ಯಾಪ್ತಿಯಲ್ಲಿ ನೆಲೆಸಿರುವ ಪದವಿಧರರಲ್ಲಿ ಈ ಬಾರಿ ಶೇ 10ರಷ್ಟು ನೋಂದಣಿಯಾಗಿಲ್ಲ. ಅಲ್ಲದೇ, ಪ್ರಜ್ಞಾವಂತ ಮತದಾರರೇ ಇರುವ ಕಾರಣ ಜಾತಿ ಲೆಕ್ಕಾಚಾರಗಳು ಫಲ ನೀಡುವುದಿಲ್ಲ.

ಲಿಂಗಾಯತರು ಇರುವುದು ಶಿವಮೊಗ್ಗ, ದಾವಣಗೆರೆ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಮಾತ್ರ. ಜಾತಿ ಲೆಕ್ಕಾಚಾರ ಮೇಲುಗೈ ಪಡೆದಿದ್ದರೆ ಅತ್ಯಂತ ಕಡಿಮೆ ಜನಸಂಖ್ಯೆ ಇರುವ ಆರ್ಯವೈಶ್ಯ ಸಮುದಾಯದ ಶಂಕರಮೂರ್ತಿ ಅವರು ಮೂರು ದಶಕ ಪ್ರತಿನಿಧಿಯಾಗಲು ಸಾಧ್ಯವಿರಲಿಲ್ಲ ಎಂದು ವಾದ ಮಂಡಿಸುತ್ತಾರೆ ರಾಜಕೀಯ ಪಂಡಿತರು.

ಬಿಜೆಪಿಯಲ್ಲೇ ಅಸಮಾಧಾನ: ಬಿಜೆಪಿಯ ಹಿರಿಯರು ಹಾಗೂ ಆರ್‌ಎಸ್‌ಎಸ್ ಪ್ರಮುಖರು ಆರಂಭದಿಂದಲೂ ಆಯನೂರು ಮಂಜುನಾಥ್ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಈಗಾಗಲೇ ಶಾಸಕ, ಲೋಕಸಭೆ, ರಾಜ್ಯಸಭೆ ಸದಸ್ಯರಾಗಿ ಅಧಿಕಾರ ಅನುಭವಿಸಿರುವ ಮಂಜುನಾಥ್ ಬದಲು ಯುವಕರಿಗೆ ಆದ್ಯತೆ ನೀಡಬೇಕು ಎಂದು ಪಕ್ಷದ ಕೋರ್‌ ಕಮಿಟಿಯಲ್ಲೂ ನಿರ್ಧಾರವಾಗಿತ್ತು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಅವರೂ ಇಂತಹ ಸಲಹೆ ನೀಡಿದ್ದರು. ಆದರೆ, ಎಲ್ಲರ ವಿರೋಧದ ನಡುವೆಯೇ ಮಂಜುನಾಥ್ ಅವರ ಆಯ್ಕೆ ಮಾಡಲಾಗಿದೆ. ಇದು ಚುನಾವಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಬಿಜೆಪಿ ಕೆಲವು ಮುಖಂಡರು ಅಭಿಪ್ರಾಯ ಪಡುತ್ತಾರೆ.

ಡಿ.ಎಸ್‌. ಅರುಣ್‌ಗೆ ನಿರಾಸೆ:
ಮೇಲು ನೋಟಕ್ಕೆ ಇದು ಪಕ್ಷಗಳ ನಡುವಿನ ಚುನಾವಣೆ ಎನಿಸಿದರೂ, ತಾಂತ್ರಿಕವಾಗಿ ಇದು ಪಕ್ಷಗಳ ಚಿಹ್ನೆ ಇಲ್ಲದೇ, ಪಕ್ಷಾತೀತವಾಗಿ ನಡೆಯುವ ಚುನಾವಣೆ. 2006ರಿಂದ ನಡೆದ ಎರಡು ಚುನಾವಣೆಗಳ ಸಂಪೂರ್ಣ ಉಸ್ತುವಾರಿ ತಂದೆಯ ಪರವಾಗಿ ಅರುಣ್‌ ವಹಿಸಿಕೊಂಡಿದ್ದರು. 

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿ, ರೋಟರಿ ಪದಾಧಿಕಾರಿಯಾಗಿ ಹಲವು ಸಂಘಸಂಸ್ಥೆಗಳ ಮೂಲಕ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಟಿಕೆಟ್‌ ಸಿಗುವುದು ಖಚಿತ ಎಂದೇ ಭಾವಿಸಿದ್ದ ಅವರ ಗೆಳೆಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಕ್ಷಾತೀತವಾಗಿ ಮತದಾರರ ನೋಂದಣಿ ಮಾಡಿಸಿದ್ದರು. ಈಗ ಅವರೆಲ್ಲ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಅರ್ಧಲಕ್ಷ ದಾಟದ ನೋಂದಣಿ
ನೈರುತ್ಯ ಪದವೀಧರರ ಕ್ಷೇತ್ರ ರಚನೆಯಾದ 1988ರಲ್ಲಿ ಕೇವಲ 7 ಸಾವಿರ ಇದ್ದ ಮತದಾರರ ಸಂಖ್ಯೆ, ನಂತರ 94ರಲ್ಲಿ 18 ಸಾವಿರ, 2000ದಲ್ಲಿ 30 ಸಾವಿರಕ್ಕೆ ಏರಿಕೆಯಾಗಿತ್ತು. 2012ರಲ್ಲಿ 43,084 ಮತದಾರರು ಇದ್ದರು. ಈ ಬಾರಿ ನವೆಂಬರ್ 7ಕ್ಕೆ ಕೊನೆಗೊಂಡ ನೋಂದಣಿ ಪ್ರಕ್ರಿಯೆಯಲ್ಲಿ ಒಟ್ಟು 48, 014 ಪದವೀಧರರು ಹೆಸರು ನೋಂದಾಯಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲೇ ಅತಿಹೆಚ್ಚು ಅಂದರೆ 21,428, ಕೊಡಗಿನಲ್ಲಿ ಅತಿ ಕಡಿಮೆ 853 ನೋಂದಣಿಯಾಗಿವೆ. ನವೆಂಬರ್ 20ರಂದು ಕರಡು ಪ್ರತಿ ಪ್ರಕಟವಾಗಲಿದ್ದು, ಒಂದು ತಿಂಗಳು ಪಟ್ಟಿ ಪರಿಷ್ಕರಣೆ, ಹೆಸರು ಸೇರ್ಪಡೆಗೆ ಅವಕಾಶವಿದೆ.

ಜಿಲ್ಲಾವಾರು ಮತದಾರರು

ಮಂಗಳೂರು 10,358
ಉಡುಪಿ 4934
ಚಿಕ್ಕಮಗಳೂರು 5341
ಕೊಡಗು 853
ಶಿವಮೊಗ್ಗ 21428
ದಾವಣಗೆರೆ 5,100
–––––––––––––––
ಒಟ್ಟು 48,014
–––––––––––––

ಶಂಕರಮೂರ್ತಿ ಆಧಿಪತ್ಯ ಅಂತ್ಯ
30 ವರ್ಷಗಳ  ನಂತರ ಬಿಜೆಪಿ ಹೊಸಮುಖ ಕಣಕ್ಕೆ ಇಳಿಸಿದೆ. ಆ ಮೂಲಕ ಮೂರು ದಶಕಗಳು ಈ ಕ್ಷೇತ್ರ ಪ್ರತಿನಿಧಿಸಿದ್ದ ವಿಧಾನ ಪರಿಷತ್ ಸಭಾಪತಿ ಡಿ.ಎಚ್‌. ಶಂಕರ ಮೂರ್ತಿ ಅವರ ಆಧಿಪತ್ಯ ಅಂತ್ಯವಾಗಿದೆ.

ನೈರುತ್ಯ ಪದವೀಧರ ಕ್ಷೇತ್ರ 1988ರಲ್ಲಿ ರಚನೆಯಾಯಿತು. ಅಂದು ಬಿಜೆಪಿಯಿಂದ ಸ್ಪರ್ಧಿಸಿದ್ದ ಈಗಿನ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ಮೊದಲ ಪ್ರಯತ್ನದಲ್ಲೇ ಯಶ ಕಂಡಿದ್ದರು. ನಂತರ ಪ್ರತಿ 6 ವರ್ಷಗಳಿಗೊಮ್ಮೆ ನಡೆದ ಎಲ್ಲ ಚುನಾವಣೆಗಳಲ್ಲೂ ಗೆಲುವು ಸಾಧಿಸುವ ಮೂಲಕ 30 ವರ್ಷಗಳು ಅಧಿಪತ್ಯ ಸ್ಥಾಪಿಸಿದ್ದರು. 2012ರಲ್ಲಿ 5ನೇ ಬಾರಿ ವಿಧಾನ ಪರಿಷತ್ ಪ್ರವೇಶಿಸಿದ್ದರು. ಈಗ ಸಭಾಪತಿ ಸ್ಥಾನದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT