ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ನರ ಗುರು

Last Updated 18 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಆದ ಭಾರತದ ಎರಡನೇ ಆಟಗಾರ ಪುಲೆಲಾ ಗೋಪಿಚಂದ್. ಭಾರತದ ಮುಖ್ಯ ರಾಷ್ಟ್ರೀಯ ಕೋಚ್ ಆಗಿ ಅವರೀಗ ಹೆಸರು ಮಾಡಿದ್ದಾರೆ. ವಿಶ್ವದರ್ಜೆಯ ಆಟಗಾರರು ಹಾಗೂ ಆಟಗಾರ್ತಿಯರನ್ನು ತಯಾರು ಮಾಡುತ್ತಿದ್ದಾರೆ.

ನಾಗಂಡ್ಲದ ಗೋಪಿಚಂದ್ 11 ವಯಸ್ಸಿನಲ್ಲಿಯೇ ಬ್ಯಾಡ್ಮಿಂಟನ್ ಗೀಳಿಗೆ ಬಿದ್ದರು. ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಆಗಿ ಹೊಮ್ಮಿದಾಗ ಅವರಿಗಿನ್ನೂ 18 ವರ್ಷ ವಯಸ್ಸು. ಮೂರು ವರ್ಷದ ನಂತರ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಗೆದ್ದು ಬೀಗಿದರು. ಸತತವಾಗಿ ಐದು ವರ್ಷ ಅವರು ಆ ಪಟ್ಟವನ್ನು ಬೇರೆ ಯಾರಿಗೂ ಬಿಟ್ಟುಕೊಡಲಿಲ್ಲ. 2001ರಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್ ಆದ ಮೇಲೆ ಗಾಯ, ನೋವಿನ ಸಮಸ್ಯೆಯಿಂದಾಗಿ ಅವರು ತಮ್ಮ ಆಟದ ಬೂಟುಗಳನ್ನು ನೇತುಹಾಕಬೇಕಾಯಿತು.

ಎಂಟು ವರ್ಷಗಳ ನಂತರ ಅವರು ಹೈದರಾಬಾದ್‌ನಲ್ಲಿ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ಸ್ಥಾಪಿಸಿದರು. ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ್ತಿಯರು, ಆಟಗಾರರನ್ನು ಅವರು ಸಾಣೆಗೆ ಒಡ್ಡತೊಡಗಿದರು. ಹತ್ತು ವರ್ಷಕ್ಕೂ ಕಡಿಮೆ ಅವಧಿಯಲ್ಲೇ ಇಬ್ಬರು ಒಲಿಂಪಿಕ್ ಪದಕ ವಿಜೇತರನ್ನು ತಯಾರು ಮಾಡಿದ್ದು ಅವರ ಹೆಗ್ಗಳಿಕೆ. ಸೈನಾ ನೆಹ್ವಾಲ್ ಹಾಗೂ ಪಿ.ವಿ. ಸಿಂಧು ಆ ಸಾಧನೆ ಮಾಡಿದ ಆಟಗಾರ್ತಿಯರು. ಪಿ. ಕಶ್ಯಪ್, ಸಾಯಿ ಪ್ರಣೀತ್ ಹಾಗೂ ಕಿದಂಬಿ ಶ್ರೀಕಾಂತ್ ತರಹದ ಆಟಗಾರರೂ ವಿಶ್ವಮಟ್ಟದಲ್ಲಿ ಗಮನ ಸೆಳೆಯುವಂತೆ ಆಡುತ್ತಿದ್ದಾರೆ. ವಿಶ್ವ ಜೂನಿಯರ್ ಮಟ್ಟದಲ್ಲಿಯೂ ಅವರ ಅಕಾಡೆಮಿಯ ಶಿಷ್ಯವರ್ಗ ಗಮನ ಸೆಳೆಯುತ್ತಿದೆ. ಗೋಪಿಚಂದ್ ಮಗಳು ಗಾಯತ್ರಿ ಕೂಡ ಅವರಲ್ಲಿ ಒಬ್ಬಳು.

ಏಕಾಗ್ರತೆ, ಕಠಿಣ ಶ್ರಮ ಹಾಗೂ ಆತ್ಮವಿಶ್ವಾಸ- ಇವು ಯಶಸ್ಸಿಗಾಗಿ ಗೋಪಿಚಂದ್ ಬೋಧಿಸುತ್ತಾ ಬಂದಿರುವ ಮಂತ್ರಗಳು. ತರಬೇತಿಗೆ ಬರುವ ಆಟಗಾರರು, ಆಟಗಾರ್ತಿಯರು ಬೆಳಗಿನ ಜಾವ 4 ಗಂಟೆಗೆಲ್ಲ ಅಕಾಡೆಮಿಯಲ್ಲಿ ಸೇರುತ್ತಾರೆ. ಗೋಪಿಚಂದ್ ಅಷ್ಟು ಹೊತ್ತಿಗೆ ಮುಂಚೆಯೇ ಅಲ್ಲಿರುತ್ತಾರೆ. ಸಂಜೆ 7 ಗಂಟೆಯವರೆಗೆ ಅಲ್ಲಿ ಬೆವರಿಳಿಸುವ ಎಲ್ಲ ಹುರಿಯಾಳುಗಳನ್ನೂ ಸೂಕ್ಷ್ಮವಾಗಿ ಅವಲೋಕಿಸುತ್ತಾರೆ.

ಕಲಿಯುವವರು ಯಾವುದನ್ನು ನ್ಯೂನತೆ ಎಂದುಕೊಂಡಿರುತ್ತಾರೋ ಅದರಿಂದ ಹೊರಬರುವ ಮಾರ್ಗೋಪಾಯಗಳನ್ನು ಗೋಪಿಚಂದ್ ಸೂಚಿಸು ತ್ತಾರೆ. ಸಿಂಧು ನಿರ್ದಿಷ್ಟ ಹೊಡೆತವೊಂದನ್ನು ಪ್ರಜ್ಞಾ ಪೂರ್ವಕವಾಗಿ ಆಡುತ್ತಿರಲಿಲ್ಲ. ಪ್ರತಿದಿನವೂ ಗಂಟೆಗಟ್ಟಲೆ ಅದೇ ಹೊಡೆತ ಅಭ್ಯಾಸ ಮಾಡಬೇಕು ಎಂದು ಅವರಿಗೆ ಗೋಪಿಚಂದ್ ಪಾಠ ಹೇಳಿದರು. ಸೈನಾ ನೆಹ್ವಾಲ್ ಮನೆಗೆ ಹೋಗಿ, ರೆಫ್ರಿಜರೇಟರ್ ಬಾಗಿಲು ತೆಗೆದು, ತಾವು ಸೂಚಿಸಿದ ಡಯೆಟ್‌ಗೆ ಒಳಪಡದ ಯಾವುದಾದರೂ ತಿನಿಸು ಅದರಲ್ಲಿದೆಯೇ ಎಂದು ನೋಡಿ ಖಚಿತಪಡಿಸಿಕೊಂಡಿದ್ದರು.

ಇಬ್ಬರೂ ಆಟಗಾರ್ತಿಯರು ಒಲಿಂಪಿಕ್ಸ್ ಪದಕ ಗೆದ್ದ ಕ್ಷಣಗಳು, 2017ರ ಸಿಂಗಪೂರ್ ಸೂಪರ್ ಸೀರೀಸ್ ಫೈನಲ್ಸ್‌ನಲ್ಲಿ ಪ್ರಣೀತ್ ಹಾಗೂ ಶ್ರೀಕಾಂತ್ ಮುಖಾಮುಖಿಯಾದದ್ದು- ಗೋಪಿ ಚಂದ್ ವರ್ಷಗಳಿಂದ ಕಂಡ ಕನಸುಗಳ ಪೈಕಿ ನನಸಾದಂಥವು. ಕಠಿಣ ಶ್ರಮ, ದೈಹಿಕ ಕ್ಷಮತೆ ಕಾಪಾಡಿಕೊಳ್ಳುವುದರಿಂದಷ್ಟೇ ಬ್ಯಾಡ್ಮಿಂಟನ್ ನಲ್ಲಿ ವಿಶ್ವದರ್ಜೆಯಲ್ಲಿ ಹೆಸರು ಮಾಡಬಹುದು ಎಂದು ಗೋಪಿಚಂದ್ ಹೇಳುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT