ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳವಳಿಗಳ ತವರಿಗೆ ಮತ್ತೆ ಬಂದಿದೆ ಕನ್ನಡದ ತೇರು!

Last Updated 19 ನವೆಂಬರ್ 2017, 5:03 IST
ಅಕ್ಷರ ಗಾತ್ರ

ಮೈಸೂರು ಎಂದರೆ ಅದು ಚಳವಳಿಗಳ ತವರು. ಇಲ್ಲಿನ ಮಣ್ಣಿನ ಗುಣವೇ ಅದು. ಮಹಾರಾಜರ ಊರಾದರೂ ಪ್ರತಿಭಟನೆಗೆ ಕಡಿಮೆ ಏನಲ್ಲ. ಅತ್ಯಂತ ಜನಪರವಾಗಿ ಕೆಲಸ ಮಾಡಿದ ಮೈಸೂರು ಮಹಾರಾಜರ ಬಗ್ಗೆ ಈಗಲೂ ಇಲ್ಲಿನ ಜನರಿಗೆ ಗೌರವ, ಭಕ್ತಿ ಎಲ್ಲ ಇದೆ. ಆದರೆ, 1947ರ ಆಗಸ್ಟ್ 15ರಂದು ಭಾರತ ಸ್ವತಂತ್ರವಾದಾಗ ಮೈಸೂರು ಮಹಾರಾಜರು ಅಧಿಕಾರವನ್ನು ಬಿಟ್ಟುಕೊಡಲಿಲ್ಲ. ಮೈಸೂರು ಜನ ಸುಮ್ಮನಿರಲಿಲ್ಲ. ತಲೆತಲಾಂತರದಿಂದ ರಾಜರನ್ನು ಆರಾಧಿಸಿಕೊಂಡು ಬಂದ ಅದೇ ಮೈಸೂರಿನ ಜನ ಮಹಾರಾಜರ ವಿರುದ್ಧ ತಿರುಗಿ ಬಿದ್ದರು. ಹೋರಾಟ ಮಿತಿಮೀರಿದಾಗ ಮಹಾರಾಜರು 1947ರ ಅಕ್ಟೋಬರ್ 13ರಂದು ಮೈಸೂರು ರಾಜ್ಯವನ್ನು ಭಾರತ ಗಣತಂತ್ರದೊಳಕ್ಕೆ ಸೇರಿಸಿದರು. ಅದು ಮೈಸೂರಿನ ಗುಣ.

ಭಾಷಾ ಚಳವಳಿಯಿಂದ ಹಿಡಿದು ಸಾಮಾಜಿಕ ಚಳವಳಿಯವರೆಗೆ ಮೈಸೂರು ಪ್ರಸಿದ್ಧ. ಇಲ್ಲಿ ಹಲವಾರು ಚಳವಳಿಗಳು ಹುಟ್ಟಿವೆ. ಆ ಚಳವಳಿಗಳು ಇಡೀ ರಾಜ್ಯಕ್ಕೆ ಪಸರಿಸಿವೆ. ಕನ್ನಡ ಚಳವಳಿಗಳೂ ಇದೇ ತವರು. ಮೈಸೂರು ಮಹಾರಾಜರು ಕನ್ನಡ ಭಾಷಾ ಅಭಿವೃದ್ಧಿಗೆ ಸಾಕಷ್ಟು ನೆರವು ನೀಡಿದ್ದಾರೆ. ಈಗಿನ ಕನ್ನಡ ಸಾಹಿತ್ಯ ಪರಿಷತ್ ಕೂಡ ಮಹಾರಾಜರ ಒತ್ತಾಸೆಯಿಂದಲೇ ಜನ್ಮ ತಾಳಿದ್ದು.

ಬಿಎಂಶ್ರೀ ಅವರು ಇಂಗ್ಲಿಷ್ ಸಾಹಿತ್ಯಕ್ಕೆ ಮನಸೋತಿದ್ದರೂ ಕನ್ನಡ ಚಳವಳಿಗೆ ಬೀಜ ಬಿತ್ತಿದ್ದೂ ಅವರೆ. ಮೈಸೂರಿನ ಅಗ್ರಹಾರ ರಸ್ತೆಯಲ್ಲಿ ಜಾಗಟೆ ಹೊಡೆದುಕೊಂಡು ‘ಕನ್ನಡಕ್ಕೆ ಜಯವಾಗಲಿ’ ಎಂದು ಕೂಗಿಕೊಂಡು ಅವರು ಹೋಗುತ್ತಿದ್ದುದೇ ಕನ್ನಡ ಚಳವಳಿಯ ಪ್ರಾರಂಭ ಎಂದು ಪರಿಗಣಿಸಲಾಗಿದೆ. ಮೈಸೂರಿನಲ್ಲಿ ಬಿಎಂಶ್ರೀ ಅವರು ‘ಕಾಸಿನ ಸಂಘ’ ಎಂದು ಸ್ಥಾಪಿಸಿದ್ದರು. ಈ ಸಂಘದ ವಿಶೇಷತೆ ಎಂದರೆ ಸಂಘದ ಸದಸ್ಯರು ಮಾತನಾಡುವಾಗ ಇಂಗ್ಲಿಷ್ ಶಬ್ದ ಬಳಸುವಂತಿಲ್ಲ. ಒಂದು ಇಂಗ್ಲಿಷ್ ಶಬ್ದ ಬಳಸಿದರೆ ಒಂದು ಕಾಸು ದಂಡ ತೆರಬೇಕು. ಹೀಗೆ ಆಗಿನ ಕಾಲದಲ್ಲಿಯೇ ಬಾಯಿತಪ್ಪಿ ಇಂಗ್ಲಿಷ್ ಶಬ್ದ ಬಳಸಿದ ಜನರಿಂದ ಬಿಎಂಶ್ರೀ ಅವರು ದಂಡ ವಸೂಲಿ ಮಾಡುತ್ತಿದ್ದರಂತೆ. ಆ ಸಂಘ ಈಗಲೂ ಇದ್ದಿದ್ದರೆ ಬಹುಶಃ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚಿಗೆ ಬೇಕಾಗುವಷ್ಟು ಹಣವನ್ನು ದಂಡದಿಂದಲೇ ವಸೂಲಿ ಮಾಡಬಹುದಿತ್ತೇನೋ?

1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆರಂಭವಾದಾಗ ಒಂದು ವರ್ಷದ ಅವಧಿಯಲ್ಲಿ ಅದು ಮಾಡಿದ ಒಟ್ಟು ವೆಚ್ಚ 663 ರೂಪಾಯಿ 9 ಪೈಸೆ 5 ಆಣೆ. 1916ರಲ್ಲಿ ಕಸಾಪ ವೆಚ್ಚ 425 ರೂಪಾಯಿ 14 ಪೈಸೆ 7 ಆಣೆ. ಕಳೆದ ಬಾರಿ ಕನ್ನಡ ಸಮ್ಮೇಳನಕ್ಕಾಗಿಯೇ ₹ 6 ಕೋಟಿ ವೆಚ್ಚ ಮಾಡಲಾಗಿದೆ. ಈ ಬಾರಿ ಅದು ₹ 10 ಕೋಟಿ ತಲುಪುವ ಸಾಧ್ಯತೆ ಇದೆ.

ಕರ್ನಾಟಕ ಏಕೀಕರಣದ ಚಳವಳಿಗೆ ಮೈಸೂರಿನ ಕೊಡುಗೆ ಕಡಿಮೆ ಏನಲ್ಲ. ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಕುವೆಂಪು ಅವರೂ ಕರ್ನಾಟಕ ಏಕೀಕರಣದ ಪರವಾಗಿದ್ದರು. ಅಖಂಡ ಕರ್ನಾಟಕದ ಪ್ರತಿಪಾದಕರಾಗಿದ್ದರು. ಕನ್ನಡಿಗರ ಒಗ್ಗೂಡಿಕೆಯ ಬಗ್ಗೆ ಭಾಷಣ ಮಾಡುತ್ತಿದ್ದರು. ಇದು ಆಗಿನ ಅಧಿಕಾರಸ್ಥರಿಗೆ ಹಿಡಿಸಲಿಲ್ಲ. ಅದಕ್ಕೇ ರಾಜ್ಯ ಸರ್ಕಾರ ಕುವೆಂಪು ಅವರಿಗೆ ನೋಟಿಸ್ ನೀಡಿ ‘ಪ್ರಾಧ್ಯಾಪಕರಾಗಿರುವ ನೀವು ರಾಜಕೀಯ ವಿಷಯ ಕುರಿತು ಹೇಳಿಕೆ ನೀಡಿದ್ದೀರಿ. ಇದಕ್ಕೆ ವಿವರಣೆ ಕೊಡಿ’ ಎಂದು ಕೇಳಿತು. ಈ ನೋಟಿಸ್ ಗೆ ಕುವೆಂಪು ಅವರು ಅಖಂಡ ಕರ್ನಾಟಕ ಎಂಬ ಪದ್ಯವನ್ನೇ ಬರೆದು ಕಳಿಸಿದರು.

ಅಖಂಡ ಕರ್ನಾಟಕ

ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ

ಇಂದು ಬಂದು ನಾಳೆ ಸಂದು

ಹೋಹ ಸಚಿವ ಮಂಡಲ

ರಚಿಸುವೊಂದು ಕೃತಕವಲ್ತೊ

ಸಿರಿಗನ್ನಡ ಸರಸ್ವತಿಯ

ವಜ್ರ ಕರ್ಣಕುಂಡಲ

ಅಖಂಡ ಕರ್ನಾಟಕ

ಅಲ್ತೊ ನಮ್ಮ ನಾಲ್ಕು ದಿನ ರಾಜಕೀಯ ನಾಟಕ

ನೃಪತುಂಗನೇ ಚಕ್ರವರ್ತಿ

ಪಂಪನಲ್ಲಿ ಮುಖ್ಯಮಂತ್ರಿ

ರನ್ನ ಜನ್ನ ನಾಗವರ್ಮ

ರಾಘವಾಂಕ ಹರಿಹರ

ಬಸವೇಶ್ವರ ನಾರಣಪ್ಪ

ಸರ್ವಜ್ಞ ಷಡಕ್ಷರ

ಸರಸ್ವತಿಯೆ ರಚಿಸಿದೊಂದು

ನಿತ್ಯ ಸಚಿವ ಮಂಡಲ

ತನಗೆ ರುಚಿರ ಕುಂಡಲ

***

ಕರ್ನಾಟಕ ಎಂಬುದೇನು

ಹೆಸರೆ ಬರಿಯ ಮಣ್ಣಿಗೆ?

ಮಂತ್ರ ಕಣಾ! ಶಕ್ತಿ ಕಣಾ!

ತಾಯಿ ಕಣಾ! ದೇವಿ ಕಣಾ!

ಬೆಂಕಿ ಕಣಾ! ಸಿಡಿಲು ಕಣಾ!

ಕಾವ ಕೊಲುವ ಒಲವ ಬಲವ

ಪಡೆದ ಚಲದ ಚಂಡಿ ಕಣಾ

ಋಷಿಯ ಕಾಣ್ಬ ಕಣ್ಣಿಗೆ

ಎಂದು ಉತ್ತರಿಸಿದ್ದರು.

ಇದು ರಾಜಕಾರಣಿಗಳನ್ನು ಇನ್ನಷ್ಟು ಕೆರಳಿಸಿತು. ಕೆ.ಸಿ. ರೆಡ್ಡಿ ಸಚಿವ ಸಂಪುಟದಲ್ಲಿಯೂ ಈ ಬಗ್ಗೆ ಚರ್ಚೆ ಆಯಿತು. ಕುವೆಂಪು ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು. ಆಗ ಕೆ.ಸಿ. ರೆಡ್ಡಿ ಅವರು ನಿಟ್ಟೂರು ಶ್ರೀನಿವಾಸ ರಾಯರ ಬಳಿ ಈ ಬಗ್ಗೆ ಚರ್ಚಿಸಿದಾಗ ರಾಯರು ‘ಪುಟ್ಟಪ್ಪ ಕೈ ಎತ್ತಿದರೆ ಇಡೀ ಕರ್ನಾಟಕವೇ ಕೈ ಎತ್ತುತ್ತದೆ. ಅದಕ್ಕಾಗಿ ನೋಟಿಸ್ ವಾಪಸು ಪಡೆಯುವುದೇ ಉತ್ತಮ’ ಎಂದು ಸಲಹೆ ನೀಡಿದರು. ಇದು ಮೈಸೂರು ಕರ್ನಾಟಕ ಏಕೀಕರಣದ ನನಸಿಗೆ ಶ್ರಮಿಸಿದ ಪರಿ. ‘ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. ಕನ್ನಡಕ್ಕಾಗಿ ಕೊರಳೆತ್ತು ಅಲ್ಲಿ ಪಾಂಚಜನ್ಯ ಮೂಡುತ್ತದೆ’ ಎಂದು ಕುವೆಂಪು ಸಾರಿದ ಊರಿನಲ್ಲಿಯೇ ಈಗ ಐದನೇ ಬಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ.

1917ರ ಜೂನ್ 8, 9, 10ರಂದು ಮೊದಲ ಬಾರಿಗೆ ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಆಗ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಎಚ್.ವಿ. ನಂಜುಂಡಯ್ಯ ಅವರು. ಬೆಂಗಳೂರಿನಲ್ಲಿ ನಡೆದ ಮೊದಲ ಮತ್ತು ಎರಡನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ ನಂಜುಂಡಯ್ಯ ಅವರೇ ವಹಿಸಿದ್ದರು. ಹೀಗೆ ಮೂರು ಬಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದವರು ಅವರೊಬ್ಬರೆ.

ಇನ್ನೂ ಕುತೂಹಲದ ಸಂಗತಿ ಎಂದರೆ ನಂಜುಂಡಯ್ಯ ಅವರು ಬೆಂಗಳೂರಿನಲ್ಲಿ ನಡೆದ ಮೊಟ್ಟ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾಗ ಅಧ್ಯಕ್ಷೀಯ ಭಾಷಣ ಮಾಡಿದ್ದು ಇಂಗ್ಲಿಷ್‌ನಲ್ಲಿ. ಅದನ್ನು ಡಿವಿಜಿ ಅವರು ಹೀಗೆ ಬರೆದಿದ್ದಾರೆ.

‘ಎಚ್.ವಿ. ನಂಜುಂಡಯ್ಯ ಅವರು ಅಧ್ಯಕ್ಷರಾಗಿ ಪ್ರಾರಂಭೋಪನ್ಯಾಸ ಮಾಡಿದರು. ಆದರೆ, ಇಂಗ್ಲಿಷ್‌ನಲ್ಲಿ. ವೇದಿಕೆಯ ಎದುರುಗಡೆ ಮೊದಲನೆ ಸಾಲಿನ ನಾಲ್ಕೈದು ಪೀಠಗಳ ಪೈಕಿ ಒಂದರಲ್ಲಿ ಬೆಳ್ಳಾವೆ ವೆಂಕಟನಾರಣಪ್ಪ ಅವರು ಕುಳಿತಿದ್ದರು. ನಾನು ಅವರ ಪಕ್ಕದಲ್ಲಿದ್ದೆ. ನಂಜುಂಡಯ್ಯ ಅವರು ಇಂಗ್ಲಿಷ್‌ನಲ್ಲಿ ತಮ್ಮ ಮೊದಲ ಮಾತುಗಳನ್ನು ನುಡಿಯುತ್ತಿದ್ದಂತೆಯೆ ವೆಂಕಟನಾರಣಪ್ಪ ಅವರು ‘nonsense. ಇದು ಶುದ್ಧ nonsense ಅಷ್ಟೆ ಎಂದರು. ನಂಜುಂಡಯ್ಯ ಅವರಿಗೆ ಇದು ಕೇಳಿಸಿರಬೇಕು. ಅವರ ಎಡಮೀಸೆ ಹಾರಿತು. ಅವರನ್ನು ಬಲ್ಲವರಿಗೆ ಅದು ಅವರ ನಗುವಿನ ಲಾಂಛನವೆಂಬುದು ಗೊತ್ತಿತ್ತು. ನಂಜುಂಡಯ್ಯ ಅವರು ವೆಂಕಟನಾರಣಪ್ಪ ಅವರ ಟೀಕೆಯನ್ನು ಕೇಳಲಿಲ್ಲವೋ ಏನೋ ಎಂಬಂತೆ ಉಪನ್ಯಾಸ ಮುಗಿಸಿ ಸಭೆ ಪುನಾ ಅದೇ ಜಾಗದಲ್ಲಿ ಮಧ್ಯಾಹ್ನ ಎರಡೂವರೆ ಗಂಟೆಗೆ ಸೇರತಕ್ಕದೆಂದು ತೀರ್ಮಾನ ಹೇಳಿ ವೇದಿಕೆಯಿಂದ ಇಳಿದು ಬಂದು ವೆಂಕಟನಾರಣಪ್ಪ ಅವರ ಹತ್ತಿರ ನಿಂತು ‘ಅದಕ್ಕೇನು ಕನ್ನಡದಲ್ಲಿ ಮಾತಿಲ್ಲವೋ? ಎಂದು ಕೇಳಿದರು. ವೆಂಕಟನಾರಣಪ್ಪ ನಕ್ಕರು. ನನ್ನ ಕಡೆ ತಿರುಗಿ ‘ಏನಪ್ಪಾ ನಾನ್ಸೆನ್ಸ್ ಅಂಬೋದಕ್ಕೆ ಕನ್ನಡದಲ್ಲಿ?’ ಎಂದು ಕೇಳಿದರು. ನಾನು ‘ನಾನ್ ಸೆನ್ಸೇ’ ಎಂದೆ. ಆ ಕ್ಷಣದಲ್ಲಿ ನನಗೆ ಬೇರೇನೂ ಹೊಳೆಯಲಿಲ್ಲ. ಆಮೇಲೆ ನಂಜುಂಡಯ್ಯ ಅವರು ಒಂದು ಸಣ್ಣ ವಿವರಣೆಯನ್ನು ಕೊಟ್ಟರು.

‘ನಾವು ಈಗ ಮಾಡುತ್ತಿರುವ ಪ್ರಯತ್ನ ಕನ್ನಡ ತಿಳಿಯದ ಜನರಿಗೂ ತಿಳಿಯಬೇಕಾಗಿದದ್ದು. ನಮ್ಮ ಪರಿಷತ್‌ಗೆ ಹಣ ಕೊಡಬೇಕಾದ ಸರಕಾರಕ್ಕೂ ತಿಳಿಯಬೇಕು. ಸರಕಾರದ
ಮೇಲೆ ಉಸ್ತುವಾರಿ ನಡೆಸುವ ಬ್ರಿಟಿಷ್ ರೆಸಿಡೆಂಟರಿಗೂ ತಿಳಿಯಬೇಕು. ಅವರಿಗೆಲ್ಲ ತಿಳಿದರೆ ನಮಗೇನೂ ನಷ್ಟವಾಗದು. ಕೊಂಚ ಪ್ರಯೋಜನವೂ ಇರಬಹುದು ಅಲ್ಲವೆ?’ ಎಂದು ಕೇಳಿದರು.

ಹೀಗೆ ಮೊದಲ ಕನ್ನಡ ಸಮ್ಮೇಳನದಲ್ಲಿ ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದ ನಂಜುಂಡಯ್ಯ ಅವರೇ ಮೈಸೂರಿನಲ್ಲಿ ನಡೆದ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಮೈಸೂರಿನ ರಂಗಾಚಾರ್ಲು ಪುರಭವನದಲ್ಲಿ ಸಮ್ಮೇಳನ ನಡೆಯಿತು.

ಆಗ ಈ ಸಮ್ಮೇಳನವನ್ನು ಕರ್ನಾಟಕ ವಿದ್ವನ್ಮಂಡಲಿಯ ತೃತೀಯ ಸಮ್ಮೇಳನ ಎಂದು ಕರೆಯಲಾಗಿತ್ತು. ಆಗ ಅಧ್ಯಕ್ಷೀಯ ಭಾಷಣ ಮಾಡಿದ ನಂಜುಂಡಯ್ಯ ‘ಕನ್ನಡ ಭಾಷೆಯನ್ನೂ ಸಾಹಿತ್ಯವನ್ನೂ ಪುಷ್ಟಿಗೊಳಿಸಿ ಅಭಿವೃದ್ಧಿಗೆ ತಂದು ಕನ್ನಡ ನಾಡಿನ ಜನರನ್ನು ಒಟ್ಟುಗೂಡಿಸಿ ಅವರಲ್ಲಿ ಭಾಷಾ ವಿಷಯದಲ್ಲಿ ಪರಸ್ಪರ ಐಕಮತ್ಯವೂ ಸೌಹಾರ್ದವೂ ದಿನದಿಂದ ದಿನಕ್ಕೆ ಹೆಚ್ಚುವಂತೆ ಮಾಡುವುದೇ ಕರ್ನಾಟಕ ಸಾಹಿತ್ಯ ಪರಿಷತ್ತಿನ ಮುಖ್ಯೋದ್ದೇಶವಾಗಿದೆ’ ಎಂದರು.

ಇದಾದ ನಂತರ ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರ ಅಧ್ಯಕ್ಷತೆಯಲ್ಲಿ 1930ರ ಅಕ್ಟೋಬರ್ 5, 6, 7ರಂದು 16ನೇ ಕರ್ನಾಟಕ ಸಾಹಿತ್ಯ ಸಮ್ಮೇಳನ, 1955ರ ಜೂನ್ 10, 11, 12ರಂದು ಕಡಲ ತೀರದ ಭಾರ್ಗವ ಡಾ.ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ 37ನೇ ಕನ್ನಡ ಸಾಹಿತ್ಯ ಸಮ್ಮೇಳನ, 1985ರಲ್ಲಿ ವಿಶ್ವ ಕನ್ನಡ ಸಮ್ಮೇಳನ, 1990ರ ಡಿಸೆಂಬರ್ 28, 29, 30ರಂದು ಅಖಿಲ ಭಾರತ 60ನೇ ಕನ್ನಡ ಸಾಹಿತ್ಯ ಸಮ್ಮೇಳನಗಳು ಮೈಸೂರಿನಲ್ಲಿ ನಡೆದಿವೆ. ಈಗ 27 ವರ್ಷಗಳ ನಂತರ ಮತ್ತೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ ನಡೆಯುತ್ತಿದೆ. ಈ ಹಿಂದೆ ನಡೆದ ಎಲ್ಲ ಸಾಹಿತ್ಯ ಸಮ್ಮೇಳನಗಳಲ್ಲಿಯೂ ಮೈಸೂರಿನ ಚಳವಳಿ ಪ್ರಸ್ತಾಪವಾಗಿದ್ದವು.

ಮೈಸೂರಿನ ಸಾಮಾಜಿಕ ಚಳವಳಿಯ ಇತಿಹಾಸವೇ ರೋಚಕ. 1968–69ರ ಸಾಲಿನಲ್ಲಿ ‘ಸಮಾಜವಾದಿ ಯುವಜನ ಸಭಾ’ ರಾಜ್ಯದಲ್ಲಿಯೇ ಹೊಸ ಶಕೆ ಆರಂಭಕ್ಕೆ ಕಾರಣವಾಯಿತು. ಜಾತೀಯತೆ, ಮೌಢ್ಯ ಮತ್ತು ಅಸಮಾನತೆಯನ್ನು ವಿರೋಧಿಸುವುದು ಈ ಸಭಾದ ಉದ್ದೇಶವಾಗಿತ್ತು. ಸಾಹಿತಿಗಳು, ಕಲಾವಿದರು, ವಕೀಲರು, ವಿದ್ಯಾರ್ಥಿಗಳು ಸಮಾಜವಾದಿ ಸಭಾದ ಸದಸ್ಯರಾಗಿದ್ದರು. ಲೋಹಿಯಾ ವಿಚಾರಧಾರೆ, ಜಯಪ್ರಕಾಶ ನಾರಾಯಣ ಅವರ ವಿಚಾರಗಳು ಮುನ್ನೆಲೆಗೆ ಬಂದವು. ‘ಪಕ್ಷವಿಲ್ಲ, ಪಂಥವಿಲ್ಲ, ಕ್ರಾಂತಿ ನಮ್ಮ ಕಾಯಕ’ ಎಂದು ಸಮಾಜವಾದಿ ಯುವಜನ ಸಭಾ ಸಾರಿತ್ತು.

1973ರಲ್ಲಿ ಜಾತಿ ವಿನಾಶ ಸಮ್ಮೇಳನ ಇಲ್ಲಿ ನಡೆಯಿತು. ರಾಷ್ಟ್ರಕವಿ ಕುವೆಂಪು ಅವರು ಈ ಸಮ್ಮೇಳನ ಉದ್ಘಾಟಿಸಿ ಪುರೋಹಿತಶಾಹಿ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದರು. ಸಮಾರೋಪ ಭಾಷಣ ಮಾಡಿದ ಸಚಿವ ಬಿ. ಬಸವಲಿಂಗಪ್ಪ ಅವರು ಇಡೀ ಕನ್ನಡ ಸಾಹಿತ್ಯವನ್ನು ‘ಬೂಸಾ ಸಾಹಿತ್ಯ’ ಎಂದು ಲೇವಡಿ ಮಾಡಿದರು. ಇದರಿಂದ ರಾಜ್ಯದಲ್ಲಿ ಗಲಭೆಗಳು ನಡೆದು ಅವರು ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಆದರೆ ಬೂಸಾ ಸಾಹಿತ್ಯ ಹೇಳಿಕೆ ಕನ್ನಡ ಸಾಹಿತ್ಯ ಚಳವಳಿಯ ಮೇಲೆ ಹಾಗೂ ಸಾಮಾಜಿಕ ಚಟುವಟಿಕೆಯ ಮೇಲೆ ಭಾರೀ ಪರಿಣಾಮ ಬೀರಿತು. ದಲಿತ ಸ್ವಾಭಿಮಾನವನ್ನೂ ಅದು ಬಡಿದೆಬ್ಬಿಸಿತು. ದಲಿತ ಸಂಘರ್ಷ ಸಮಿತಿ ಬಲಗೊಳ್ಳುವುದಕ್ಕೂ ಅದು ಕಾರಣವಾಯಿತು. ಇಡೀ ಕನ್ನಡ ಸಾಹಿತ್ಯದ ಸಾಮಾಜಿಕ ಪ್ರಜ್ಞೆ ಪುನರಾವಲೋಕನ ಪ್ರಾರಂಭಕ್ಕೂ ಅದು ಕಾರಣವಾಯಿತು. ಅಲ್ಲಿಂದ ಮುಂದಕ್ಕೆ ನಮ್ಮ ಸಾಮಾಜಿಕ ಚಳವಳಿಗಳ ಸ್ವರೂಪಗಳೂ ಬದಲಾದವು.

1974ರ ಏಪ್ರಿಲ್ 20ರಂದು ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ ಅಸ್ತಿತ್ವಕ್ಕೆ ಬಂತು. ಒಂದೇ ವರ್ಗದ ಬೌದ್ಧಿಕ ದಬ್ಬಾಳಿಕೆಯನ್ನು ವಿರೋಧಿಸಿ ಹುಟ್ಟಿಕೊಂಡ ಸಂಘಟನೆ ಇದು. ಈ ಒಕ್ಕೂಟದ ಸಮ್ಮೇಳನವನ್ನೂ ಕುವೆಂಪು ಅವರೇ ಉದ್ಘಾಟಿಸಿದರು. ಅವರು ಅಂದು ಮಾಡಿದ ಭಾಷಣ ‘ಸಂಸ್ಕೃತಿ ಕ್ರಾಂತಿ ಕಹಳೆಗೆ ನಾಂದಿ’ ಎಂಬ ಹೆಸರಿನಲ್ಲಿ ಮುದ್ರಿತವಾಗಿದೆ. ಪ್ರಥಮ ಬಾರಿಗೆ ಬ್ರಾಹ್ಮಣ ಲೇಖಕರನ್ನು ಹೊರಗಿಟ್ಟು ಶೂದ್ರ ವರ್ಗದ ಲೇಖಕರನ್ನೇ ಒಳಗೊಂಡು ನಡೆದ ಮೊದಲ ಸಮ್ಮೇಳನ ಇದು. ಅಲ್ಲಿಂದಲೇ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಬ್ರಾಹ್ಮಣ ಪ್ರಜ್ಞೆ ಮತ್ತು ಶೂದ್ರ ಪ್ರಜ್ಞೆ ಎಂಬ ಎರಡು ಸಂವೇದನೆಗಳೂ ಆರಂಭವಾದವು.

1975ರಲ್ಲಿಯೇ ಜಯಪ್ರಕಾಶ ನಾರಾಯಣ ಅವರು ಮೈಸೂರಿಗೆ ಬಂದು ಸಂಪೂರ್ಣ ಕ್ರಾಂತಿಯ ಕಿಚ್ಚು ಹಚ್ಚಿದರು. 1973 ಮತ್ತು 1975ರ ನಡುವೆ ಮೈಸೂರಿನಲ್ಲಿ ‘ವಿಚಾರವಾದಿ ಒಕ್ಕೂಟ’ವೂ ಅಸ್ತಿತ್ವಕ್ಕೆ ಬಂದಿತ್ತು. ಅದು ಕೂಡ ಸಮಾಜದಲ್ಲಿ ತನ್ನ ಪ್ರಭಾವ ಬೀರತೊಡಗಿತ್ತು. 1975ರಲ್ಲಿ ಎಂ.ಡಿ. ನಂಜುಂಡಸ್ವಾಮಿ ಅವರು ‘ಮಾನವ’ ಎಂಬ ಪತ್ರಿಕೆ ಆರಂಭಿಸಿದರು. ಅದರ ಬಿಡುಗಡೆಗೆ ಒಡಿಶಾ ಸಮಾಜವಾದಿ ನಾಯಕ ಕಿಷನ್ ಪಟ್ನಾಯಕ್ ಬಂದು ಇನ್ನಷ್ಟು ಸುಧಾರಣೆಯ ಕಿಚ್ಚನ್ನು ಹಚ್ಚಿ ಹೋದರು. ಎಪ್ಪತ್ತರ ದಶಕದಲ್ಲಿ ಇಲ್ಲಿಯೇ ಕರ್ನಾಟಕ ರೈತ ಸಂಘ ಕೂಡ ಹುಟ್ಟಿಕೊಂಡಿತು.

ಸಮಾಜವಾದಿ ಚಳವಳಿ, ವಿಚಾರವಾದಿ ಒಕ್ಕೂಟ, ರೈತ ಚಳವಳಿ, ಮಹಿಳಾ ಚಳವಳಿ, ಭಾಷಾ ಚಳವಳಿ, ಮಾರ್ಕ್ಸವಾದಿ ಚಳವಳಿಗಳು ಮೈಸೂರಿನಲ್ಲಿ ಪ್ರಬಲವಾಗಿದ್ದವು. ಪರಿಸರ ಚಳವಳಿ, ಕಾರ್ಮಿಕ ಚಳವಳಿಗೂ ಮೈಸೂರು ವೇದಿಕೆಯಾಗಿತ್ತು.

ಇಂತಹ ಚಳವಳಿಗಳ ಊರಲ್ಲಿ ಈಗ ಮತ್ತೆ ಕನ್ನಡ ಸಾಹಿತ್ಯ ಸಮ್ಮೇಳನ. ಬಂಡಾಯ ಚಳವಳಿಯಲ್ಲಿ ಸಕ್ರಿಯರಾಗಿದ್ದ ಪ್ರೊ.ಚಂದ್ರಶೇಖರ ಪಾಟೀಲ ಅವರು ಈ ಸಮ್ಮೇಳನದ ಸರ್ವಧ್ಯಕ್ಷರು. ‘ಕನ್ನಡ ಕನ್ನಡ ಬರ್ರೀ ನಮ್ಮ ಸಂಗಡ’ ಎಂದು ಕರೆಕೊಟ್ಟವರು ಚಂಪಾ. ಗೋಕಾಕ್ ಚಳವಳಿಯ ನಾಯಕ. ಈಗಲೂ ಹೋರಾಟದ ಕೆಚ್ಚನ್ನು ಬಿಟ್ಟುಕೊಟ್ಟವರಲ್ಲ. ಜಾತಿ ವಿನಾಶ, ಜೆಪಿ ಚಳವಳಿ, ತುರ್ತು ಪರಿಸ್ಥಿಒತಿ ವಿರೋಧಿ ಚಳವಳಿ, ನವ್ಯ, ದಲಿತ, ಬಂಡಾಯ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಈ ಕಾಲದಲ್ಲೂ ಕೂಡ ಡಾ.ಎಂ.ಎಂ.ಕಲಬುರ್ಗಿ ಹತ್ಯೆಯನ್ನು ಖಂಡಿಸಿ ಪಂಪ ಪ್ರಶಸ್ತಿಯನ್ನು ವಾಪಸು ಮಾಡಿದವರು. ಸಮಕಾಲೀನ ವಿಷಯಗಳ ಬಗ್ಗೆ ವಿಚಾರ ಕ್ರಾಂತಿಯ ಹಣತೆಯನ್ನು ಹಚ್ಚುತ್ತಾ ಬಂದ ಚಂಪಾ ನಮ್ಮ ಸಂಗಡ ಏನು ಮಾತಾಡ್ತಾರೆ ಕೇಳೋಣ ಬನ್ನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT