ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಸ್ಪಂದಿಸಿಲ್ಲ : ತಾಯಿಯ ಅಳಲು

Last Updated 19 ನವೆಂಬರ್ 2017, 3:17 IST
ಅಕ್ಷರ ಗಾತ್ರ

ಪುತ್ತೂರು: ವೈದ್ಯರ ಮುಷ್ಕರದ ಸಂದರ್ಭದಲ್ಲಿ ಚಿಕಿತ್ಸೆ ಲಭಿಸದೆ ಶುಕ್ರವಾರ ಮೃತಪಟ್ಟಿರುವ ಪುತ್ತೂರಿನ ವಿವೇಕಾನಂದ ಕಾಲೇಜಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಪೂಜಾ ಆಚಾರ್ಯ ಅವರ ಮನೆಗೆ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿ  ಶನಿವಾರ ಭೇಟಿ ಮಾಡಿದರು.

ಪುತ್ತೂರು ತಾಲ್ಲೂಕಿನ ಕಬಕ ಗ್ರಾಮದ ವಿದ್ಯಾಪುರದಲ್ಲಿರುವ ಮೃತ ಪೂಜಾ ಅವರ ಮನೆಗೆ ತೆರಳಿ ಪೂಜಾ ಅವರ ತಾಯಿ ಗೀತಾ ಆಚಾರ್ಯ ಮತ್ತು ಅವರ ಇಬ್ಬರು ಪುತ್ರಿಯರಿಗೆ ಸಾಂತ್ವನ ಹೇಳಿದರು. ರೈ ಚಾರಿಟಬಲ್ ಟ್ರಸ್ಟ್ ವತಿಯಿಂದ ₹10 ಸಾವಿರ ಸಹಾಯಧನ ನೀಡಿದರು.

’ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿರುವ ಗೀತಾ ಅವರ ಪ್ರಥಮ ಪುತ್ರಿಗೆ ತನ್ನ ಟ್ರಸ್ಟ್‌ನಲ್ಲಿ ಉದ್ಯೋಗ ನೀಡಲು ನಾನು ಬದ್ಧನಿದ್ದೇನೆ’ ಎಂದು ಭರವಸೆ ನೀಡಿದರು.

ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ರಾಜಾರಾಮ ರೈ ಕೋಲ್ಪೆಗುತ್ತು, ಪುತ್ತೂರು ನಗರಸಭೆಯ ಸದಸ್ಯ ರಮೇಶ್ ಮೊಟ್ಟೆತ್ತಡ್ಕ ,ಪ್ರಮುಖರಾದ ಜಯರಾಮ್, ಆನಂದ್,  ವಸಂತ್,  ದಯಾನಂದ್ , ಗಂಗಾಧರ್, ಕೆ.ಎಸ್.ಲೋಕೇಶ್, ಪ್ರಶಾಂತ್ ಕುಬಲಾಜೆ, ರೈ ಚಾರಿಟಬಲ್ ಟ್ರಸ್ಟ್‌ನ ವ್ಯವಸ್ಥಾಪಕ ಆದರ್ಶ ರೈ ಇದ್ದರು.

ಸರ್ಕಾರ ಸ್ಪಂದಿಸಿಲ್ಲ: ತಾಯಿಯ ಅಳಲು
ಮೃತ ಪೂಜಾ ಅವರ ತಾಯಿ ಗೀತಾ ಆಚಾರ್ಯ ಅವರು ಮಾತನಾಡಿ ‘ನಾವು ಬಹಳ ಕಷ್ಟದಲ್ಲಿದ್ದು, ಸಾಲ ಮಾಡಿ, ಸಂಘ ಸಂಸ್ಥೆಗಳ ಸಹಕಾರ ಪಡೆದು ಮೂವರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇವೆ. ಮುಂದೆ ಅವರು ನಮ್ಮ ಸಂಸಾರಕ್ಕೆ ಆಧಾರವಾಗಬಹುದೆಂದು ನಂಬಿದ್ದೆ. ಆದರೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಎರಡನೇ ಪುತ್ರಿ ಪೂಜಾ ಚಿಕಿತ್ಸೆ ನೀಡಲು ವೈದ್ಯರು ತೋರಿದ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾಳೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದರೆ ಆ ಜೀವ ಉಳಿಯುತ್ತಿತ್ತು’ ಎಂದು ದುಃಖ ತೋಡಿಕೊಂಡರು.

‘ಪತಿ 5 ತಿಂಗಳ ಹಿಂದೆಯಷ್ಟೇ ತೀರಿಕೊಂಡಿದ್ದು, ಕೂಲಿ ಮಾಡಿ, ಸಾಲ ಮಾಡಿ ಮಕ್ಕಳ ಪಾಲನೆ, ಶಿಕ್ಷಣ ಹಾಗೂ ಪೂಜಾಳ ಚಿಕಿತ್ಸೆ ಮಾಡಿಸುತ್ತಿದ್ದೆ. ಚಿಕಿತ್ಸೆಗಾಗಿ ಆರ್ಥಿಕ ಸಹಾಯ ನೀಡುವಂತೆ ಸರ್ಕಾರ, ಶಾಸಕಿಗೆ ಮನವಿ ಸಲ್ಲಿಸಿದ್ದೆ. ಆದರೆ ಸ್ಪಂದನೆ ಸಿಕ್ಕಿಲ್ಲ. ಪೂಜಾಳ ಚಿಕಿತ್ಸೆಗಾಗಿ ಮನೆಗೆ ಆಂಬುಲನ್ಸ್ ಬರಲು ಬೇಕಾಗುವಷ್ಟಾದರೂ ರಸ್ತೆ ಮಾಡಿಕೊಡಿ ಎಂದು ವಿನಂತಿಸಿಕೊಂಡಿದ್ದೆ.  ಯಾವುದೇ ಪ್ರಯೋಜನವಾಗಿಲ್ಲ. ಪ್ರಥಮ ಪುತ್ರಿಗೆ ಕಷ್ಟಪಟ್ಟು ಎಂಜಿನಿಯರಿಂಗ್ ಶಿಕ್ಷಣ ಕೊಡಿಸಿದ್ದರೂ ಕೆಲಸ ಸಿಕ್ಕಿಲ್ಲ’ ಎಂದರು.
‘ಸಂಘ ಸಂಸ್ಥೆಗಳು ನೀಡಿದ ಸಹಕಾರದಿಂದ ಮಕ್ಕಳಿಗೆ ಶಿಕ್ಷಣ ಹಾಗೂ ಪೂಜಾಳಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಯಿತು’ ಎಂದ ಅವರು ಇದೀಗ ಪೂಜಾ  ಜೀವ ಕಳಕೊಂಡಳು ಎಂದು  ಕಣ್ಣೀರು ಸುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT