ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಶಾಲೆಯಲ್ಲಿ ಬಿಸಿಯೂಟಕ್ಕೆ ಸಾವಯವ ತರಕಾರಿ

Last Updated 19 ನವೆಂಬರ್ 2017, 5:32 IST
ಅಕ್ಷರ ಗಾತ್ರ

ಗದಗ: ಅಗ್ನಿ ಅನಾಹುತದ ಬಗ್ಗೆ ಮುನ್ನೆಚ್ಚರಿಕೆ ನೀಡುವ ಸೆನ್ಸರ್‌, ಸ್ಮಾರ್ಟ್‌ ಸಿಟಿ ಪರಿಕಲ್ಪನೆ, ಸೌರಶಕ್ತಿ ಚಾಲಿತ ಉಪಕರಣಗಳು, ಅತ್ಯಾಧುನಿಕ ಕೃಷಿ ಪದ್ಧತಿಗಳು, ನೀರಿನ ಮಿತ ಬಳಕೆಯ ತಂತ್ರಗಳು, ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿದ ದೂರದರ್ಶಕ, ಡ್ರೋನ್‌ ಕ್ಯಾಮೆರಾ ಇವು ಶನಿವಾರ ಇಲ್ಲಿ ನಡೆದ ಜಿಲ್ಲಾಮಟ್ಟದ ಪ್ರೌಢಶಾಲೆಯ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಗಮನ ಸೆಳೆದ ಮಾದರಿಗಳು.

ಜಿಲ್ಲೆಯ ವಿವಿಧ ಪ್ರೌಢಶಾಲೆಗಳ 108 ವಿದ್ಯಾರ್ಥಿಗಳು ಮತ್ತು ಇವರಿಗೆ ಮಾರ್ಗದರ್ಶಕರಾಗಿ 36 ಜನರು ಶಿಕ್ಷಕರು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ತಮ್ಮ ಶಾಲೆಯಲ್ಲಿ, ತಮ್ಮ ಸ್ವಂತ ಖರ್ಚಿನಲ್ಲಿ ಅಭಿವೃದ್ಧಿಪಡಿಸಿದ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶನಕ್ಕೆ ಇಟ್ಟಿದ್ದರು. ಮುಂಡರಗಿ ತಾಲ್ಲೂಕಿನ ಯಕ್ಲಾಸಪೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಿದ್ಧಪಡಿಸಿದ ‘ತ್ಯಾಜ್ಯ ನಿರ್ವಹಣೆ, ಜಲ ಸಂರಕ್ಷಣೆ’ ಮಾದರಿ ಎಲ್ಲರ ಮೆಚ್ಚುಗೆ ಗಳಿಸಿತು.

ಈ ಶಾಲೆಯು 2.5 ಎಕರೆ ವಿಸ್ತೀರ್ಣದ ಆವರಣವನ್ನು ಹೊಂದಿದೆ. ಹೀಗಾಗಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿಕೊಂಡು ಇದನ್ನೊಂದು ಸುಂದರ ಕೈತೋಟವಾಗಿ ಅಭಿವೃದ್ಧಿಪಡಿಸಿದ್ದಾರೆ. ಶಾಲೆಯ ಬಿಸಿಯೂಟಕ್ಕೆ ಬೇಕಿರುವ ಅಗತ್ಯ ತರಕಾರಿಗಳನ್ನು ಇದೇ ತೋಟದಲ್ಲಿ ಬೆಳೆಯಲಾಗುತ್ತದೆ. ತರಕಾರಿಗೆ ಬೇಕಿರುವ ನೀರಿನ ಮೂಲಕ್ಕಾಗಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ.

ಇತ್ತೀಚೆಗೆ ಸುರಿದ ಮಳೆಯಿಂದ ಕೃಷಿಹೊಂಡ ಭರ್ತಿಯಾಗಿದೆ. ಟೊಮೊಟೊ, ಆಲೂಗಡ್ಡೆ, ಈರುಳ್ಳಿ, ಬದನೆಕಾಯಿ, ಸೌತೆಕಾಯಿ, ಹಿರೇಕಾಯಿ, ಕುಂಬಳಕಾಯಿ, ಚವಳಿಕಾಯಿ, ಬಿನ್ಸ್, ಮೂಲಂಗಿ, ವಿವಿಧ ಸೊಪ್ಪುಗಳನ್ನು ಬೆಳೆಯಲಾಗುತ್ತದೆ. ನೀರಿನ ಮಿತ ಬಳಕೆಯ ಮೂಲಕ ಹೇಗೆ ತರಕಾರಿ ಬೆಳೆಯಬಹುದು ಎಂಬ ಪ್ರಾಯೋಗಿಕ ಪಾಠವೂ ವಿದ್ಯಾರ್ಥಿಗಳಿಗೆ ಲಭಿಸುತ್ತಿದೆ.

ಗ್ರಾಮದಲ್ಲಿ ದೊರೆಯುವ ಗೋಮೂತ್ರ, ಸಗಣಿ, ಕುರಿ, ಕೋಳಿ ಹಿಕ್ಕೆ ಸಂಗ್ರಹಿಸಿ ಸಾವಯವ ಗೊಬ್ಬರ ತಯಾರಿಸುತ್ತಾರೆ. ಗೊಬ್ಬರವನ್ನು ಇಲ್ಲಿನ ಶಿಕ್ಷಕರ ಮಾರ್ಗದರ್ಶದಲ್ಲಿ ಮಕ್ಕಳೇ ತಯಾರಿಸುತ್ತಾರೆ. ಶಾಲೆಯ ಸುತ್ತಮುತ್ತ 500ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಲಾಗಿದೆ. ಮಕ್ಕಳು ತಮ್ಮ ಶಾಲೆಯ ಅನುಭವವನ್ನೇ ಧಾರೆ ಎರೆದು ಸಾವಯವ ಕೃಷಿ ಪದ್ಧತಿಯ ಮಾದರಿ ಸಿದ್ಧಪಡಿಸಿದ್ದರು. ಇದು ಪ್ರದರ್ಶನದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿತು.

‘ನಮ್ಮ ಶಾಲೆಯಲ್ಲಿ ಯಶಸ್ವಿಯಾದ ವಿಜ್ಞಾನ ಮಾದರಿಯನ್ನೇ ಇಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದೇವೆ. ಹಸಿರು ಉಳಿದರೆ ನಾವು ಉಳಿಯುತ್ತೇವೆ. ಹೀಗಾಗಿ, ಶಾಲೆಯಲ್ಲಿ ಕೈತೋಟ ನಿರ್ಮಿಸಿದ್ದೇವೆ’ ಎಂದು ವಿದ್ಯಾರ್ಥಿ ಆನಂದ ಹಳ್ಳಿಕೇರಿ, ಮಲ್ಲಿಕಾರ್ಜುನ ಹಳೇಮನಿ ಸಂತಸ ವ್ಯಕ್ತಪಡಿಸಿದರು.

* * 

ಶಾಲಾ ಆವರಣದಲ್ಲಿ ಕೈತೋಟ, ಕೃಷಿ ಹೊಂಡ ನಿರ್ಮಿಸಿ ಯಶಸ್ವಿಯಾಗಿದ್ದೇವೆ. ಇದರಿಂದ ಸ್ಪೂರ್ತಿ ಪಡೆದ ವಿದ್ಯಾರ್ಥಿಗಳು ವಿಜ್ಞಾನ ಪ್ರದರ್ಶನದಲ್ಲಿ ಇದನ್ನೇ ಹೋಲುವ ಮಾದರಿ ಸಿದ್ಧಪಡಿಸಿದ್ದಾರೆ
ಎಂ.ಎಚ್.ಸವದತ್ತಿ
ಯಕ್ಲಾಸಪುರ ಶಾಲೆಯ ವಿಜ್ಞಾನ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT