ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ ಕೆರೆಯಲ್ಲಿ ಬಾನಾಡಿಗಳ ಕಲರವ

Last Updated 19 ನವೆಂಬರ್ 2017, 5:39 IST
ಅಕ್ಷರ ಗಾತ್ರ

‌ಕಳೆದ ವರ್ಷದ ಬೇಸಿಗೆಯಲ್ಲಿ ನೀರು ಪೂರ್ಣಬತ್ತಿ, ಬಾಯ್ತೆರೆದು ನಿಂತಿದ್ದ ಶಿರಹಟ್ಟಿ ತಾಲ್ಲೂಕಿನ ಮಾಗಡಿ ಕರೆಗೆ ಈ ಬಾರಿ ತುಂಗಭದ್ರಾ ನದಿ ಮೂಲದಿಂದ ನೀರು ತುಂಬಿಸಿದ್ದು, ಭರ್ತಿಯಾಗಿರುವ ಕೆರೆಗೆ ವಿದೇಶಿ ಬಾನಾಡಿಗಳು ಬಂದಿಳಿಯಲು ಪ್ರಾರಂಭಿಸಿವೆ. ಕಳೆದ ವರ್ಷ ಬರದಿಂದ, ಈ ಕರೆಗೆ ವಲಸೆ ಪಕ್ಷಿಗಳು ಬಂದಿರಲಿಲ್ಲ. ಈ ಬಾರಿ ನವೆಂಬರ್‌ ಆರಂಭದಿಂದಲೇ ಪಕ್ಷಿಗಳು ಒಂದೊಂದಾಗಿ ಬರಲು ಪ್ರಾರಂಭಿಸಿದ್ದು, ಇದೀಗ ಹಕ್ಕಿಗಳ ಕಲರವ ಮತ್ತೆ ಕೇಳಿಸುತ್ತಿದೆ.

ಶ್ರೀಲಂಕಾ, ಸೈಬೀರಿಯಾ, ಆಸ್ಟ್ರಿಯಾ, ಮಲೇಷಿಯಾ, ಜಮ್ಮು–ಕಾಶ್ಮೀರದಿಂದ ಇಲ್ಲಿಗೆ ಹೆಚ್ಚಿನ ವಲಸೆ ಪಕ್ಷಿಗಳು ಬರುತ್ತವೆ. ಜಮ್ಮುವಿನ ಲೇಹ್‌, ಲಡಾಕ್‌ನಿಂದ ಬಂದಿರುವ ಕೊಕ್ಕರೆ ಜಾತಿಗೆ ಸೇರಿದ ಹಲವು ಪಕ್ಷಿಗಳು ಸದ್ಯ ಮೈದುಂಬಿರುವ ಕೆರೆಯಲ್ಲಿ ವಿಹರಿಸುತ್ತಿವೆ.

130 ಎಕರೆ ವಿಸ್ತೀರ್ಣದ ಈ ಕೆರೆಗೆ ಪ್ರತಿದಿನ ತಂಡೋಪತಂಡವಾಗಿ ಬಂದಿಳಿಯುತ್ತಿರುವ ಪಕ್ಷಿಗಳಲ್ಲಿ ಪಟ್ಟೆತಲೆ ಹೆಬ್ಬಾತು, ವೈಟ್‌ ಐಬೀಸ್‌, ಪೇಂಟೆಡ್‌ ಸ್ಟಾರ್ಕ್‌, ಗ್ರೆಹೆರಾನ್ ವೈಟ್‌ ನೆಕೆಡ್‌ ಸ್ಟಾರ್ಕ್‌, ಸ್ಕಾಪ್‌ಡಕ್‌, ಲಿಟಲ್‌ ಕಾರ್ಮೋರೆಟ್‌, ಸ್ಪಾಟ್‌ ಬಿಲ್‌, ಗ್ರೇ ಡಕ್‌ ಸೇರಿದಂತೆ ಹಲವು ಜಾತಿಗೆ ಸೇರಿದ ಬಾನಾಡಿಗಳಿದ್ದು, ಮಾಗಡಿ ಕೆರೆಯು ಪಕ್ಷಿ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ.

ಪ್ರತಿ ವರ್ಷ ಅಕ್ಟೋಬರ್‌ ಅಂತ್ಯಕ್ಕೆ ಆಗಮಿಸುತ್ತಿದ್ದ ಪಕ್ಷಿಗಳು ಈ ಬಾರಿ ಸ್ವಲ್ಪ ತಡವಾಗಿ ಬರಲು ಆರಂಭಿಸಿದೆ. ಇಲ್ಲಿ ಬೀಡು ಬಿಟ್ಟಿರುವ ಪಕ್ಷಿಗಳು ಆಹಾರ ಅರಸಿ ಹರಿಹರ, ರಾಣೆಬೆನ್ನೂರ, ಬೆಳಗಾವಿ, ಹೂವಿನಹಡಗಲಿ ಸೇರಿ ಹಲವೆಡೆ ತೆರಳುತ್ತವೆ. ಕೆಲ ಹಕ್ಕಿಗಳು ಪ್ರತಿದಿನ ಸರಾಸರಿ 300 ಕಿ.ಮೀ ದೂರ ಸಂಚರಿಸಿ ಕೆರೆಗೆ ಮರಳುತ್ತವೆ. ಬಿತ್ತಿರುವ ಭೂಮಿಯಲ್ಲಿ ಅಳಿದುಳಿದ ಕಾಳುಗಳೇ ಪಕ್ಷಿಗಳಿಗೆ ಆಹಾರ. ಈ ಮೊದಲು ಪಕ್ಷಿಗಳಿಗೆ ಬೇಟೆಗಾರರ ಭಯವಿತ್ತು. ಆದರೆ, ಈಗ ಗ್ರಾಮದ ಯುವಕರೇ ಮುತುವರ್ಜಿ ವಹಿಸಿ ಪಕ್ಷಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಮಾಗಡಿ ಕೆರೆ ಸಂಪೂರ್ಣ ಬತ್ತಿದ ಪರಿಣಾಮ ಇಲ್ಲಿಗೆ ಬರುತ್ತಿದ್ದ ಪಕ್ಷಿಗಳು ಹಿರೇಹಂದಿಗೋಳ, ಹೊಸಳ್ಳಿ, ಶೆಟ್ಟಿಕೇರಿ ಕೆರೆಗೆ ವಲಸೆ ಹೋಗಿದ್ದವು. ‘ಈಗಷ್ಟೇ ಪಕ್ಷಿಗಳು ಬರಲು ಪ್ರಾರಂಭಿಸಿವೆ. ಇನ್ನು ಹತ್ತು ಹದಿನೈದು ದಿನಗಳಲ್ಲಿ ಕೆರೆ ತುಂಬ ಬಾನಾಡಿಗಳು ಕಾಣಿಸಿಕೊಳ್ಳಲಿವೆ’ ಎಂದು ಗ್ರಾಮಸ್ಥರು ವಿಶ್ವಾಸ ವ್ಯಕ್ತಪಡಿಸಿದರು.

‘ವಿದೇಶಿ ಪಕ್ಷಿಗಳಿಂದ ಮಾಗಡಿ ಕೆರೆ ಪ್ರಸಿದ್ಧ ಪಕ್ಷಿಧಾಮ ಎಂದು ಹೆಸರಾಗಿದ್ದರೂ ಪಕ್ಷಿಗಳನ್ನು ನೋಡಲು ಬರುವ ಪ್ರವಾಸಿಗರಿಗೆ ಇಲ್ಲಿ ಯಾವುದೇ ಮೂಲಸೌಕರ್ಯ ಕಲ್ಪಿಸಿಲ್ಲ. ಕೆರೆಯ ಸುತ್ತ ಪಕ್ಷಿ ವೀಕ್ಷಣೆಗೆ ಅನುಕೂಲವಾಗುವಂತೆ ಅಟ್ಟಣಿಗೆ ಅಳವಡಿಸಲಾಗಿದೆ. ಇದನ್ನು ಹೊರತುಪಡಿಸಿದರೆ ಬೇರೆ ಯಾವುದೇ ಸೌಲಭ್ಯವಿಲ್ಲ. ಕೆರೆಯ ಸುತ್ತ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಬೇಕು. ಪಕ್ಷಿಗಳ ರಕ್ಷಣೆಗೆ ಕ್ರಮ ವಹಿಸಬೇಕು. ಕರೆಯ ಸುತ್ತ ನಡಿಗೆ ಪಥ ನಿರ್ಮಾಣ ಮಾಡಬೇಕು’ ಎಂದು ಸ್ಥಳೀಯ ನಿವಾಸಿ ಬಿ.ಎಸ್‌. ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT