ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

78,450 ಕುಟುಂಬಗಳಿಗೆ ಅನಿಲ ಭಾಗ್ಯ

Last Updated 19 ನವೆಂಬರ್ 2017, 6:12 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ಒಟ್ಟು 2,46,604 ಅಡುಗೆ ಅನಿಲ ಸಂಪರ್ಕ ಇಲ್ಲದ ಕುಟುಂಬಗಳಿವೆ. ಮೊದಲ ಹಂತದಲ್ಲಿ 78,450 ಕುಟುಂಬಗಳಿಗೆ ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಯಲ್ಲಿ ಉಚಿತವಾಗಿ ಸಂಪರ್ಕ ಕಲ್ಪಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ‘ಅನಿಲ ಭಾಗ್ಯ’ ಯೋಜನೆಯ ಜಿಲ್ಲಾ ಮಟ್ಟದ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿವಾರು, ಮತಕ್ಷೇತ್ರವಾರು ಫಲಾನುಭವಿಗಳನ್ನು ಗುರುತಿಸಿ ಶಾಸಕರಿಗೆ ಸಲ್ಲಿಸಲಾಗಿದೆ. ವಾರದೊಳಗಾಗಿ ಎಲ್ಲ ಶಾಸಕರು ಫಲಾನುಭವಿಗಳನ್ನು ಆಯ್ಕೆಮಾಡಬೇಕು’ ಎಂದು ಅವರು ತಿಳಿಸಿದರು.

‘ಅನಿಲ ಸಂಪರ್ಕ ಹೊಂದಿರದ ಅಂತ್ಯೋದಯ ಅನ್ನ ಯೋಜನೆಯ ಪಡಿತರದಾರರು ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿರುವ ಕಟ್ಟಡ ಕಾರ್ಮಿಕರು ಈ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಪ್ರತಿ ಮತಕ್ಷೇತ್ರದಿಂದ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ, ಅಟಲ್‌ ಜನಸ್ನೇಹಿ ಕೇಂದ್ರ, ಕಲಬುರ್ಗಿ ಒನ್ ಕೇಂದ್ರಗಳಲ್ಲಿ ಆಧಾರ್ ಕಾರ್ಡ್‌, ಪಡಿತರ ಚೀಟಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕು. ಇದಕ್ಕೆ ಪೂರಕವಾದ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿಕೊಳ್ಳಬೇಕು’ ಎಂದು ಅವರು ತಿಳಿಸಿದರು.

ಎಲ್ಲಿ ಎಷ್ಟು?: ‘ಅಫಜಲಪುರದಲ್ಲಿ 11,011, ಆಳಂದ 10,466, ಚಿಂಚೋಳಿ 11,236, ಚಿತ್ತಾಪುರ 9,023, ಜೇವರ್ಗಿಯಲ್ಲಿ 13,775, ಸೇಡಂ 10,757, ಕಲಬುರ್ಗಿ ಗ್ರಾಮೀಣ 9,949 ಹಾಗೂ ಕಲಬುರ್ಗಿ ದಕ್ಷಿಣದ ಮತ ಕ್ಷೇತ್ರದಲ್ಲಿ 2,232 ಫಲಾನುಭವಿಗಳನ್ನು ಪ್ರಥಮ ಹಂತವಾಗಿ ಗುರುತಿಸಲಾಗಿದೆ. ಇವರಿಗೆ ₹4,040 ವೆಚ್ಚದಲ್ಲಿ ಉಚಿತ ಅಡುಗೆ ಅನಿಲ ಸಂಪರ್ಕ, ಗ್ಯಾಸ್ ಬರ್ನರ್, ಸ್ಟೌ ಹಾಗೂ ಎರಡು ಭರ್ತಿ ಮಾಡಿದ ಸಿಲಿಂಡರ್ ನೀಡಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

‘ಅರ್ಹರಿಗೆ ಅಡುಗೆ ಅನಿಲ ತಲುಪಿಸಬೇಕು ಎಂಬುದು ಸರ್ಕಾರದ ಉದ್ದೇಶ. ಇದಕ್ಕಾಗಿ ಆಯ್ಕೆಯನ್ನು ಆಯಾ ಶಾಸಕರಿಗೆ ನೀಡಲಾಗಿದೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬಡವರನ್ನು ಗುರುತಿಸಿ ಅವರಿಗೆ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

ಶಾಸಕರಾದ ಡಾ.ಉಮೇಶ ಜಾಧವ, ದತ್ತಾತ್ರೇಯ ಸಿ.ಪಾಟೀಲ ರೆವೂರ, ಪ್ರಾದೇಶಿಕ ಆಯುಕ್ತ ಹರ್ಷಗುಪ್ತ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ, ಸಮಾಜಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಂದೇ ನವಾಜ್, ಆಹಾರ ಇಲಾಖೆ ಉಪನಿರ್ದೇಶಕ ಅರುಣಕುಮಾರ ಸಂಗಾವಿ, ಸಹಾಯಕ ಕಾರ್ಮಿಕ ಆಯುಕ್ತ ವೆಂಕಟೇಶ ಸಿಂದಿಹಟ್ಟಿ ಇದ್ದರು.

* * 

ಜಿಲ್ಲೆಯಲ್ಲಿ ಅಡುಗೆ ಅನಿಲ ಸಂಪರ್ಕ ಹೊಂದಿರದ ಗ್ರಾಹಕರನ್ನು ಸಮೀಕ್ಷೆಯ ಮೂಲಕ ಗುರುತಿಸಲಾಗಿದೆ. ಹಂತ ಹಂತವಾಗಿ ಈ ಕುಟುಂಬಗಳಿಗೆ ಅಡುಗೆ ಅನಿಲ ಪೂರೈಸಲಾಗುವುದು
ಡಾ.ಶರಣಪ್ರಕಾಶ ಪಾಟೀಲ
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT