ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಲ್ಲಿ ಹೆಚ್ಚಿದ ರಾಜಕೀಯ ಅನಾಸಕ್ತಿ

Last Updated 19 ನವೆಂಬರ್ 2017, 7:59 IST
ಅಕ್ಷರ ಗಾತ್ರ

ಯಾದಗಿರಿ: ‘ಮೊಬೈಲ್‌ ಸಂಸ್ಕೃತಿ ಬಂದ ಮೇಲೆ ಬಹುಪಾಲು ವಿದ್ಯಾರ್ಥಿಗಳಲ್ಲಿ ರಾಜಕೀಯ ಅನಾಸಕ್ತಿ ಹೆಚ್ಚಿದೆ’ ಎಂದು ಕೋಲಿ ಸಮಾಜದ ಜಿಲ್ಲಾ ಅಧ್ಯಕ್ಷ ಮೌಲಾಲಿ ಅನಪೂರ ಆತಂಕ ವ್ಯಕ್ತಪಡಿಸಿದರು. ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಶನಿವಾರ ಜಿಲ್ಲಾಮಟ್ಟದ ಮಕ್ಕಳ ಹಕ್ಕುಗಳ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜಕೀಯ ಜ್ಞಾನ, ವಿದ್ಯಮಾನ ಕುರಿತು ಅರಿವು ಇಲ್ಲದಿದ್ದರೆ ಭವಿಷ್ಯದಲ್ಲಿ ಸಮಾಜ ದೊಡ್ಡ ಅನಾಹುತ ಎದುರಿಸಬೇಕಾಗುತ್ತದೆ. ಈಗಿನ ಮಕ್ಕಳಿಗೆ ರಾಜಕೀಯದ ಬಗ್ಗೆ ಆಸಕ್ತಿ ಕಡಿಮೆಯಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ದೇಶಕ್ಕೆ ಉತ್ತಮ ರಾಜಕೀಯ ಧುರೀಣರ ಅಗತ್ಯ ಇದೆ. ಅಂತಹ ಧುರೀಣರು ಶಾಲಾ, ಕಾಲೇಜು ಮಟ್ಟದಿಂದಲೇ ರೂಪುಗೊಳ್ಳಬೇಕಾಗಿದೆ. ಅದಕ್ಕೆ ರಾಜಕೀಯ ವಿದ್ಯಮಾನದ ಬಗ್ಗೆ ಎಚ್ಚರ ಇದ್ದು, ಸಮಯ ಬಂದಾಗ ಪ್ರತಿಕ್ರಿಯಿಸುವ ಶಕ್ತಿಯನ್ನು ವಿದ್ಯಾರ್ಥಿಗಳು ಪಡೆಯಬೇಕು’ ಎಂದು ಸಲಹೆ ಹೇಳಿದರು.

‘ದೇಶದಲ್ಲಿ ಈಗ ಉತ್ತಮ ಸಂಸತ್‌ ಪಟುಗಳ ಕೊರತೆ ಇದೆ. ಸಂಸತ್ತಿನಲ್ಲಿ ರಾಜಕೀಯ ನೈಪುಣ್ಯತೆ, ಆಳ ಅಧ್ಯಯನ, ಅರಿವು ಇರುವವರ ಸಂಖ್ಯೆ ಕಡಿಮೆ ಇದೆ. ಉತ್ತಮ ರಾಜಕಾರಣಿಯ ಗುಣಗಳು ಎಲ್ಲರಿಗೂ ಮೈಗೂಡಲು ಸಾಧ್ಯವಿಲ್ಲ. ಉತ್ತಮ ರಾಜಕಾರಣಿ, ಸಂಸತ್‌ ಪಟು ಆಗಬೇಕು ಎಂದರೆ ನಿತ್ಯ ದೇಶ, ರಾಜ್ಯ ಹಾಗೂ ಜಿಲ್ಲೆಗಳಲ್ಲಿನ ರಾಜಕೀಯ ವಿದ್ಯಮಾನಗಳ ಬಗ್ಗೆ ತಿಳಿದಿರಬೇಕು. ಅದಕ್ಕಾಗಿ ನಿತ್ಯ ದಿನಪತ್ರಿಕೆಗಳನ್ನು ಓದಬೇಕು. ಪತ್ರಿಕೆ ಓದುವುದರಿಂದ ರಾಜಕೀಯ ಜ್ಞಾನ ಹೆಚ್ಚುತ್ತದೆ. ಅವುಗಳಲ್ಲಿನ ರಾಜಕೀಯ ವಿಶ್ಲೇಷಣೆ, ಅಂಕಣಗಳನ್ನು ಕಾಯಂ ಆಗಿ ಓದುತ್ತಾ ಬಂದರೆ ರಾಜಕೀಯ ವಿದ್ಯಮಾನಗಳ ಬಗ್ಗೆ ಹಿಡಿತ ಸಿಗುತ್ತದೆ’ ಎಂದು ಹೇಳಿದರು.

ಅಂಗವಿಕಲರ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶರಣಪ್ಪ ಪಾಟೀಲ ಮಾತನಾಡಿ, ‘ಮಕ್ಕಳಿಗೆ ಹಕ್ಕುಗಳ ಮತ್ತು ಕರ್ತವ್ಯಗಳ ಬಗ್ಗೆ ಅರಿವು ಇರಬೇಕು. ದೌರ್ಜನ್ಯ ತಡೆಗಾಗಿ ಸಂವಿಧಾನದ ಕಾನೂನುಗಳ ಮಾಹಿತಿ ಹೊಂದಿರಬೇಕು. ಸಮಸ್ಯೆಗಳನ್ನು ದಿಟ್ಟತನದಿಂದ ಎದುರಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ತು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸುವ ಅವಕಾಶ ಕಲ್ಪಿಸಲಾಗುತ್ತದೆ’ ಎಂದರು.

ನಿವೃತ್ತ ಉಪನ್ಯಾಸಕ ಸಿ.ಎಂ. ಪಟೇದಾರ, ಸಮಾಜ ಸೇವಕ ಪರಶುರಾಮ ಶೇಗುರಕರ್, ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಘುವೀರ್‌ಸಿಂಗ್ ಠಾಕೂರ್, ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಮಹಾಲಕ್ಷ್ಮಿ ಸಜ್ಜನ್, ಅನಂತ ಸೇವಾ ಟ್ರಸ್ಟ್ ನಿರ್ದೇಶಕ ಶರಣಪ್ಪ ಕಂದಕೂರ ಇದ್ದರು. ಜಿಲ್ಲಾಮಟ್ಟದ ಮಕ್ಕಳ ಹಕ್ಕುಗಳ ಸಂಸತ್ತು ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ 50 ವಿದ್ಯಾರ್ಥಿಗಳು ಭಾಗವಹಿಸಿದ್ದರು.

* * 

ಪತ್ರಿಕೆಗಳನ್ನು ಓದುವುದರಿಂದ ರಾಜಕೀಯ ಗುಣಗಳನ್ನು ಮೈಗೂಡಿಸಿಕೊಳ್ಳಬಹುದು. ಆದ್ದರಿಂದ, ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಮೌಲಾಲಿ ಅನಪೂರ
ಕೋಲಿ ಸಮಾಜ ಜಿಲ್ಲಾ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT