ಪಠ್ಯವೆಂಬ ಅಪಥ್ಯ ಆಶಯ

ಪಠ್ಯಮುದ್ರಣವೆಂದರೆ ಸುಲಭದ ಮಾತಲ್ಲ. ಕೋಮು, ಜಾತಿ, ಧರ್ಮಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ದೂರವಾಗಿಸಿ ಮುದ್ರಣ ಮಾಡುವುದು ಒಂದು ಸವಾಲು. ವೈಯಕ್ತಿಕ ಧೋರಣೆಗಳು ಪಠ್ಯದಲ್ಲಿ ತೂರಿಕೊಂಡು ಕಲಿಕೆಯನ್ನು ಪೂರ್ವಗ್ರಹ ದೋಷಗಳಿಗೆ ಒಡ್ಡುವುದನ್ನು ತಪ್ಪಿಸಬೇಕು. ಇಲ್ಲೆಲ್ಲ ಕೆಲಸ ಮಾಡಬೇಕಾದ್ದು ಸಂಬಂಧಪಟ್ಟವರ ಆತ್ಮಸಾಕ್ಷಿಯೇ ಹೊರತು ಅವರ ಆರ್ಥಿಕ ಲಾಭ-ನಷ್ಟಗಳ ಲೆಕ್ಕಾಚಾರವಲ್ಲ.

ಪಠ್ಯವೆಂಬ ಅಪಥ್ಯ ಆಶಯ

ಪ್ರತಿವರ್ಷ ಪಠ್ಯಗಳದ್ದೇ ಹಣಾಹಣಿ. ರಾಜ್ಯದ ಎಲ್ಲಾ ಕೋಮು, ಧರ್ಮ, ವರ್ಗದ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ಪಾಠಗಳನ್ನು ಆಯ್ದು ಕೂಡಿಸುವುದು ಸುಲಭದ ಮಾತಲ್ಲ. ಒಂದನೇ ತರಗತಿಯಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೆ ಪಾಠಗಳನ್ನು ಹೊಂದಿಸಿ ‘ಭಲೇ ಭಲೇ’ ಎನ್ನಿಸಿಕೊಂಡ ಯಾವ ರಾಜ್ಯವನ್ನೂ ನಾವು ಕಾಣಲು ಸಾಧ್ಯವಿಲ್ಲ. ಆದರೂ ಪಾಠಕ್ಕೊಂದು ಕೈಮರ ಬೇಕಲ್ಲ! ಪಠ್ಯದ ಯೋಜನೆ ಅನುಷ್ಠಾನಗಳಲ್ಲಿ ಬಹಳ ವ್ಯವಹಾರವೇ ಇದೆ ಎಂಬುದೂ ಸುಳ್ಳಲ್ಲ. ಯಾವ ಲೇಖಕನ ಬರಹ ಪಠ್ಯವಾಗಬೇಕು ಎಂಬುದರಿಂದ ಮೊದಲ್ಗೊಂಡು ಯಾವ ಮುದ್ರಣಾಲಯದಲ್ಲಿ ಅದು ಮುದ್ರಣಗೊಳ್ಳುತ್ತದೆ ಎಂಬಲ್ಲಿಯವರೆಗೆ ವಶೀಲಿಬಾಜಿಯ ಪಾತ್ರವನ್ನು ನಾವು ಅಲ್ಲಗಳೆಯುವಂತಿಲ್ಲ.

ಪಠ್ಯಮುದ್ರಣದ ಮಟ್ಟವನ್ನಾಗಲೀ ಕಾಗದ, ರಕ್ಷಾಪುಟಗಳ ಗುಣಮಟ್ಟವನ್ನಾಗಲೀ ಎಷ್ಟು ಮಂದಿ ಪ್ರಕಾಶಕರು ಕಾಪಾಡಿಕೊಂಡಿದ್ದಾರೆ? ಇಲ್ಲೆಲ್ಲ ಕೆಲಸ ಮಾಡಬೇಕಾದ್ದು ಸಂಬಂಧಪಟ್ಟವರ ಆತ್ಮಸಾಕ್ಷಿಯೇ ಹೊರತು ಅವರ ಆರ್ಥಿಕ ಲಾಭ-ನಷ್ಟಗಳ ಲೆಕ್ಕಾಚಾರವಲ್ಲ. ಆದರೆ ಇಲ್ಲಿನವರ ಮನೋಧೋರಣೆ ಹೇಗಿರುತ್ತದೆ ಎಂಬುದಕ್ಕೆ ಒಂದು ಉದಾಹರಣೆಯಾಗಿ ಈ ಪ್ರಸಂಗವನ್ನು ನೋಡಬಹುದು. ನಾನೊಂದು ಮುದ್ರಣಾಲಯಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಪಠ್ಯಪುಸ್ತಕ ಮುದ್ರಣಗೊಳ್ಳುತ್ತಿತ್ತು. ಆಗತಾನೆ ಕೆಂಪುಬಣ್ಣದಲ್ಲಿ ಯಾವುದೋ ಮುದ್ರಣಕಾರ್ಯ ಮುಗಿದಿತ್ತು. ಅದೇ ಯಂತ್ರಕ್ಕೆ ಪಠ್ಯಪುಸ್ತಕದ ಪ್ಲೇಟ್ ತಗುಲಿಸಿ ಉಳಿದಿದ್ದ ಕೆಂಪುಶಾಯಿಯ ಮೇಲೆಯೇ ಕಪ್ಪು ಶಾಯಿ ಸುರುವಿ ಮುದ್ರಣ ಆರಂಭಿಸಿಯೇ ಬಿಟ್ಟರು. ನಾನು ಅವರನ್ನು, ’ಹೀಗೇಕೆ ಮಾಡಿದಿರಿ? ಕೇವಲ ಅರ್ಧಘಂಟೆಯಲ್ಲಿ ಯಂತ್ರವನ್ನು ತೊಳೆದು ಕಪ್ಪುಶಾಯಿ ಹಾಕಬಹುದಿತ್ತಲ್ಲ? ಈಗ ನೂರಾರು ಪುಸ್ತಕ ಕೆಂಪಾಗಿಯೂ, ಆ ಬಳಿಕ ಕಂದುಬಣ್ಣದಲ್ಲೂ ಆ ಬಳಿಕ ಕಪ್ಪುಬಣ್ಣದಲ್ಲೂ ಮುದ್ರಿತವಾಗುತ್ತದಲ್ಲ!’ ಎಂದು ಕೇಳಿದೆ. ಅದಕ್ಕೆ ಅವರು ನೀಡಿದ ಉತ್ತರ – ’ಟೆಕ್ಸ್ಟ್‌ಬುಕ್ ತಾನೇ, ಪರವಾಗಿಲ್ಲ ಬಿಡಿ ಸಾರ್!’ ಅವರ ಈ ಧೋರಣೆ ಪಠ್ಯಪುಸ್ತಕದ ನಿರ್ಮಾಣದ ಪ್ರತಿ ಹಂತದಲ್ಲೂ ಇದ್ದುಬಿಟ್ಟರೆ, ನಮ್ಮ ದೇಶದ ಭಾವಿ ಪ್ರಜೆಗಳ ಕೈಗೆ ನಾವು ಎಂತಹ ಪಠ್ಯವನ್ನೀಯುತ್ತಿದ್ದೇವೆ ಎಂಬ ಅಂಶ ಗೋಚರಿಸಿ ಖಿನ್ನರಾಗುತ್ತೇವೆ. ಪಠ್ಯಪುಸ್ತಕ ಎಂಬುದು ವಿದ್ಯಾರ್ಥಿಗಳು ನಿತ್ಯವೂ ಬಳಸುವ ’ವಸ್ತು’. ಅದರ ಜೀರ್ಣಾವಸ್ಥೆ ತಲುಪಲು ಕನಿಷ್ಠ ಒಂದೂವರೆ ವರ್ಷ ಆಗುವಷ್ಟು ಉತ್ತಮವಾದ ಕಾಗದ, ರಕ್ಷಾಪುಟ, ಶಾಯಿ ಬಳಸಬೇಕು. ಸರ್ಕಾರ ಇದನ್ನು ಜಾರಿಗೆ ತರಲು ಪ್ರಯತ್ನಿಸುತ್ತದಾದರೂ ಗುಣಮಟ್ಟದ ಪಾಲನೆ ಸ್ವಯಂಪ್ರೇರಿತವಾಗಿ ನಡೆಯಬೇಕು ಎಂಬುದು ಅಪೇಕ್ಷಿತ ಅಂಶ.

ಪಠ್ಯಪುಸ್ತಕದ ನಿರ್ಮಾಣದ ವಿವಿಧ ಹಂತದಲ್ಲಿಯೂ ಗುಣಮಟ್ಟದ ಕಡೆ ಗಮನ ಕೊಡಬೇಕು. ಪಠ್ಯವನ್ನು ಬಳಸುವ ಅಧ್ಯಾಪಕ ಹಾಗೂ ವಿದ್ಯಾರ್ಥಿಗಳ ಪಾತ್ರ ಪಠ್ಯದ ಆಯ್ಕೆಯಲ್ಲಿ ಯಾವ ಪಾತ್ರ ವಹಿಸುತ್ತದೆ ಎಂಬುದನ್ನು ಪರಿಶೀಲಿಸಿದಾಗ ಬಹಳ ದುಃಖವೇ ಆಗುತ್ತದೆ. ಖಾಸಗಿ ಶಾಲೆಗಳು, ಸಿಬಿಎಸ್‌ಸಿ ಶಾಲೆಗಳು ತಮ್ಮ ಪಠ್ಯದ ಗುಣಮಟ್ಟ ಕಾಪಾಡಿಕೊಳ್ಳಬಲ್ಲವಾದರೆ ಸರ್ಕಾರಿ ವಲಯದಲ್ಲಿ ಏಕೆ ಆ ಗುಣಮಟ್ಟ ಕಾಣಬರುವುದಿಲ್ಲವೆಂದರೆ, ಖಾಸಗಿ ವಲಯದಲ್ಲಿ ಕಾಣಬರುವ ತೊಡಗಿಕೊಳ್ಳುವಿಕೆ ಸರ್ಕಾರಿವಲಯದಲ್ಲಿ ಇಲ್ಲ.

ಪ್ರತಿಭಾವಂತರು ಈ ವಲಯದಲ್ಲಿ ಹೆಚ್ಚಾಗಿಯೇ ಇದ್ದರೂ ನಾನಾಕಾರಣಗಳಿಂದಾಗಿ ಅವರು ಈ ಸಮಿತಿಯ ಅಂಗವಾಗಿ ಬರುವುದೇ ಇಲ್ಲ. ಎಲ್ಲ ಪಠ್ಯಗಳು ತರಾತುರಿಯಲ್ಲೇ ತಯಾರಾಗುತ್ತವೆ ಎಂಬುದು ಸಾಮಾನ್ಯ ಸತ್ಯ. ಸರ್ಕಾರಗಳು ಬದಲಾದಾಗೆಲ್ಲ ಅವು ಪಠ್ಯದ ಪರಿಷ್ಕರಣೆಗೆ ಕೈಹಾಕುವ ಕೆಟ್ಟ ಪರಿಪಾಟಿಯೂ ಇದೆ. ಶಿಕ್ಷಣಕ್ಷೇತ್ರವನ್ನಾದರೂ ರಾಜಕೀಯ ಹಸ್ತಕ್ಷೇಪದಿಂದ ದೂರ ಇಡಬೇಕು. ಆತುರದಲ್ಲಿ ತಯಾರಾಗುವ ಪಠ್ಯದಲ್ಲಿ ಅನೇಕ ದೋಷಗಳು ತಲೆದೋರುವುದು ಸಹಜ. ಅದರ ತಿದ್ದೋಲೆ ವಿದ್ಯಾರ್ಥಿಗಳ ಕೈ ತಲುಪುವ ವೇಳೆಗೆ ಮಧ್ಯವಾರ್ಷಿಕ ಪರೀಕ್ಷೆ ಮುಗಿದಿರುತ್ತದೆ. ಪಠ್ಯದ ವಿಷಯದ ಆಯ್ಕೆ, ಅದರ ಜೊತೆಗೆ ಕೊಡಬೇಕಾದ ಶಬ್ದಸಂಗ್ರಹ, ಕೊನೆಯಲ್ಲಿ ಬರಬೇಕಾದ ಅನುಬಂಧಗಳು – ಇವೆಲ್ಲ ಬಹುದಿನಗಳ ಪ್ರಯತ್ನಗಳಿಂದ ಸಮರ್ಪಕವಾಗಿ ಮೂಡಿಬರಲು ಸಾಧ್ಯ.

ಹಾಗೆಂದ ಮಾತ್ರಕ್ಕೆ ಪಠ್ಯನಿರ್ಮಾಣದ ಪೂರ್ಣಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಬಹುದೆ? ಉಹೂಂ! ಅದೂ ಕಷ್ಟವೇ. ಕಳೆದ ವರ್ಷ ಅಧ್ಯಾಪಕರ ಸಂಘವೊಂದು ದಿನಚರಿ ಪುಸ್ತಕವನ್ನು ಹೊರತಂದಿತು. ಪ್ರತಿ ಪುಟದಲ್ಲಿಯೂ ಮುದ್ರಣದೋಷ. ಆಯ್ಕೆ ಸಮಿತಿ, ಅನುಷ್ಠಾನ ಸಮಿತಿ ಬೇರೆ ಬೇರೆ ಇರಬೇಕು. ಮುದ್ರಣದ ಬಗ್ಗೆ ಗೊತ್ತಿರುವವರು ಅದರ ತಯಾರಿಕಾ ಹಂತದಲ್ಲಿ ಕೂಡಿಕೊಳ್ಳಬೇಕು. ಆಗ ಪಠ್ಯಗಳು ಚಂದವಾಗಿ ಮೂಡಿಬರಲು ಸಾಧ್ಯ. 2012ರಲ್ಲಿ ಎನ್‌ಸಿಇಆರ್‌ಟಿ 9ರಿಂದ 12ನೇ ತರಗತಿವರೆಗಿನ ಪಠ್ಯಗಳಲ್ಲಿನ ದೋಷಗಳನ್ನು ಕುರಿತು ವರದಿ ನೀಡಲು ಪ್ರೊ. ಥೋರಟ್ ಅವರ ಅಧ್ಯಕ್ಷತೆಯಲ್ಲಿ ಪ್ರೊ. ನಾರಂಗ್ ಹಾಗೂ ಇತರರ ಸಮಿತಿ ರಚಿಸಿತು. ಈ ವರದಿಯನ್ನು ಅವಲೋಕಿಸಿದರೆ ಪಠ್ಯರಚನೆಯಲ್ಲಿ ತಲೆದೋರುವ ಸಮಸ್ಯೆಗಳ ಅರಿವಾಗುತ್ತದೆ. ಕಾರ್ಟೂನುಗಳ ಬಳಕೆಯಲ್ಲಿ ಎಲ್ಲೆಲ್ಲಿ ಎಡವಿದ್ದಾರೆ ಎಂಬುದನ್ನು ಪಟ್ಟಿ ಮಾಡಿ ತೋರಿಸಿ ಅದಕ್ಕೆ ಸೂಕ್ತ ಪರಿಹಾರ ಸೂಚಿಸುವ ವರದಿ, ಜೊತೆಗೆ ಕೊನೆಯಲ್ಲಿ ವಿಷಯ ಪರಿಷ್ಕರಣೆಯ ಬಗ್ಗೆಯೂ ಸೂಚನೆಗಳನ್ನಿತ್ತಿದೆ.

ರಚನಕಾರರ ಪೂರ್ವಗ್ರಹಗಳು ಪಠ್ಯಗಳಲ್ಲಿ ಬಿಂಬಿತವಾಗದಂತೆ ನೋಡಿಕೊಳ್ಳುವುದೇ ಒಂದು ದೊಡ್ಡ ಸವಾಲು. ರಾಜಸ್ಥಾನದ 9ನೇ ತರಗತಿಯ ಹಿಂದಿ ಪಾಠವೊಂದರಲ್ಲಿ ಕತ್ತೆಯನ್ನು ಗೃಹಿಣಿಗೆ ಹೋಲಿಸಲಾಗಿತ್ತು: ’ಕತ್ತೆಯು ಗೃಹಿಣಿಯಂತೆ. ಅದು ದಿನವಿಡೀ ದುಡಿಯಬೇಕು. ಮತ್ತು ಕೆಲವೊಮ್ಮೆ ತನ್ನ ಪಾಲಿನ ನೀರು, ಆಹಾರವನ್ನು ಬಿಟ್ಟುಕೊಡಬೇಕು. ನಿಜದಲ್ಲಿ ಕತ್ತೆಯೇ ಒಂದು ಪಾಲು ವಾಸಿ. ಏಕೆಂದರೆ ಗೃಹಿಣಿಯು ಕೆಲವೊಮ್ಮೆ ದೂರುವುದು, ತವರಿಗೆ ನಡೆದುಬಿಡುವುದೂ ಉಂಟು. ಆದರೆ ತನ್ನ ಯಜಮಾನನಿಗೆ ಕತ್ತೆ ಎಂದೆಂದಿಗೂ ನಿಷ್ಠವಾಗಿರುತ್ತದೆ.’

ಇದನ್ನು ತಮಾಷೆಯಾಗಿ ತೆಗೆದುಕೊಳ್ಳಬೇಕೆಂದು ಅಲ್ಲಿನ ಶಿಕ್ಷಣ ಮಂಡಳಿಯವರು ಹೇಳಿದರು. ಆದರೆ ಜನರ ತೀವ್ರವಿರೋಧದ ಬಳಿಕ ಈ ಪಾಠವನ್ನು ಕೈಬಿಡಲಾಯಿತು. 2017ರಲ್ಲಿ ಛತ್ತೀಸ್‌ಗಡದ ಸೆಕೆಂಡರಿ ಎಜುಕೇಷನ್ ಬೋರ್ಡ್‌ನ ಹತ್ತನೆ ತರಗತಿ ಪಠ್ಯದಲ್ಲಿ ಹೀಗಿತ್ತು: ’ಸ್ವಾತಂತ್ರ್ಯಪೂರ್ವದಲ್ಲಿ ಕೆಲವೇ ಮಹಿಳೆಯರು ಉದ್ಯೋಗಸ್ಥರಾಗಿದ್ದರು. ಆದರೆ ಇಂದು ಮಹಿಳೆಯರು ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಉದ್ಯೋಗ ಗಳಿಸಿರುವುದರಿಂದ ಪುರುಷರಲ್ಲಿ ನಿರುದ್ಯೋಗ ಹೆಚ್ಚಾಗಿದೆ.’

2008ರಿಂದಲೂ ಈ ವಾಕ್ಯವು ಪಠ್ಯದಲ್ಲಿ ಇದ್ದು, 2016ರಲ್ಲಿ ಇದನ್ನು ತೆಗೆದುಹಾಕಲಾಯಿತು. ನಾಲ್ಕು ವರ್ಷಗಳ ಹಿಂದೆ ಸಿಬಿಎಸ್‌ಸಿಯ 6ನೇ ತರಗತಿಯ ಪಠ್ಯದ ಆರೋಗ್ಯ ಮತ್ತು ಲೈಂಗಿಕ ಶಿಕ್ಷಣ ಕುರಿತ ಪಾಠವೊಂದರಲ್ಲಿ ‘ಮಾಂಸಾಹಾರಿಗಳು ಮೋಸಗಾರರು, ಸುಲಭವಾಗಿ ಸುಳ್ಳು ಹೇಳಬಲ್ಲರು, ಅಪ್ರಾಮಾಣಿಕರು, ಅವಾಚ್ಯಶಬ್ದಗಳನ್ನು ಬಳಸುವರು, ಕಳ್ಳತನಕ್ಕಿಳಿಯುವರು, ಜಗಳಗಂಟರು, ಹಿಂಸಾಪ್ರವೃತ್ತಿ ಉಳ್ಳವರು, ಮತ್ತು ಲೈಂಗಿಕ ಅಪರಾಧಗಳನ್ನು ಎಸಗುವವರು’ ಎಂಬ ವಾಕ್ಯ ರಾರಾಜಿಸುತ್ತಿತ್ತು.

ಈ ಬಗೆಯ ವೈಯಕ್ತಿಕ ಧೋರಣೆಗಳು ಪಠ್ಯದಲ್ಲಿ ತೂರಿಕೊಂಡು ಕಲಿಕೆಯನ್ನು ಪೂರ್ವಗ್ರಹ ದೋಷಗಳಿಗೆ ಒಡ್ಡುವುದನ್ನು ತಪ್ಪಿಸಬೇಕು. ಬಹುತೇಕ ಅನುಭವಿ ಅಧ್ಯಾಪಕ ವೃಂದವೇ ಪಠ್ಯವನ್ನು ಹೊಂದಿಸುತ್ತದಾದರೂ ‘ವಿದ್ಯಾರ್ಥಿಗಳೇನು ಕಲಿಯಬೇಕು’ – ಎಂಬುದನ್ನು ವಿದ್ಯಾರ್ಥಿಗಳೇ ಹೊಂದಿಸಿಕೊಂಡರೆ ಎಷ್ಟು ಚೆಂದ ಎಂದು ಅನೇಕ ಬಾರಿ ಆಲೋಚಿಸಿದ್ದೇನೆ. ಸ್ಥೂಲವಾದ ಪಠ್ಯಕ್ರಮ ಮಾತ್ರ ಸೂಚಿಸಿ ಪಠ್ಯಗಳ ಆಯ್ಕೆಯನ್ನು ವಿದ್ಯಾರ್ಥಿಗಳೇ ಮಾಡಿಕೊಳ್ಳುವಂತಾದರೆ ಮತ್ತೂ ಚೆನ್ನ. ಇದು ಭಾವಿಸಲೇನೋ ಸುಂದರವಾಗಿದೆ. ಆದರೆ ಎಷ್ಟರಮಟ್ಟಿಗೆ ಪ್ರಾಯೋಗಿಕ ಎಂಬುದನ್ನು ಪ್ರಯತ್ನಿಸಿಯೇ ನೋಡಬೇಕು. ಇಂತಹ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ ಎಂಬುದೇ ಸಮಾಧಾನದ ವಿಷಯ. ಬೆಂಗಳೂರು ನಗರವೊಂದರಲ್ಲಿಯೇ ಇಂತಹ ಇಪ್ಪತ್ತಕ್ಕೂ ಹೆಚ್ಚು ಶಾಲೆಗಳಿವೆ. ಅಭೀಕ್, ಶಿಬುಮಿ, ಪ್ರಕ್ರಿಯ ಗ್ರೀನ್ ವಿಸ್ಡಮ್, ಪ್ರಮಿಥಿ, ಒಹಾನಾ, ಬುದ್ಧಿ, ವ್ಯಾಲಿ ಶಾಲೆ, ಅಧ್ವಯಶಾಲೆ ಮೊದಲಾದ ಈ ಶಾಲೆಗಳು ಹೆಚ್ಚಾಗಿ ಪ್ರಾಥಮಿಕ ಶಿಕ್ಷಣವನ್ನೇ ಗುರಿಯಾಗಿರಿಸಿಕೊಂಡಿವೆ. ಪ್ರೌಢ ಹಾಗೂ ಉನ್ನತ ಶಿಕ್ಷಣದಲ್ಲೂ ಇಂತಹ ಪ್ರಯೋಗಗಳು ನಡೆಯಲಿ ಎಂಬುದೇ ಶಿಕ್ಷಣಾಸಕ್ತರ ಬಯಕೆ.
***

ವಿದ್ಯಾರ್ಥಿಗಳ ನಿತ್ಯ ಸಂಗಾತಿ

ಪಠ್ಯಪುಸ್ತಕ ಎಂಬುದು ವಿದ್ಯಾರ್ಥಿಗಳು ನಿತ್ಯವೂ ಬಳಸುವ ವಸ್ತು’. ಅದರ ಜೀರ್ಣಾವಸ್ಥೆ ತಲುಪಲು ಕನಿಷ್ಠ ಒಂದೂವರೆ ವರ್ಷ ಆಗುವಷ್ಟಾದರೂ ಉತ್ತಮವಾದ ಕಾಗದ, ರಕ್ಷಾಪುಟ, ಶಾಯಿ ಬಳಸಬೇಕು. ಸರ್ಕಾರ ಇದನ್ನು ಜಾರಿಗೆ ತರಲು ಪ್ರಯತ್ನಿಸುತ್ತದಾದರೂ ಗುಣಮಟ್ಟದ ಪಾಲನೆ ಸ್ವಯಂಪ್ರೇರಿತವಾಗಿ ನಡೆಯಬೇಕು ಎಂಬುದು ಅಪೇಕ್ಷಿತ ಅಂಶ.

Comments
ಈ ವಿಭಾಗದಿಂದ ಇನ್ನಷ್ಟು
ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ...

ಒತ್ತಡ
ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ...

14 Mar, 2018
‘ಪಿಯುಸಿಯಲ್ಲಿ ಯಾವ ಕಾಂಬಿನೇಷನ್ ಸೂಕ್ತ?’

ನಿಮ್ಮ ಪ್ರಶ್ನೆ ನಮ್ಮ ಉತ್ತರ
‘ಪಿಯುಸಿಯಲ್ಲಿ ಯಾವ ಕಾಂಬಿನೇಷನ್ ಸೂಕ್ತ?’

12 Mar, 2018
ಸಂತುಲಿತ ಶಿಕ್ಷಣದ ದಾರಿಯಲ್ಲಿ...

ಶಿಕ್ಷಣ
ಸಂತುಲಿತ ಶಿಕ್ಷಣದ ದಾರಿಯಲ್ಲಿ...

12 Mar, 2018
ಪ್ರಜಾವಾಣಿ ಕ್ವಿಜ್ 13

ಶಿಕ್ಷಣ
ಪ್ರಜಾವಾಣಿ ಕ್ವಿಜ್ 13

12 Mar, 2018
‘ಪರೀಕ್ಷೆ ಬರೆಯೋದು ನಾನಾ... ನೀವಾ?!’

ಶಿಕ್ಷಣ
‘ಪರೀಕ್ಷೆ ಬರೆಯೋದು ನಾನಾ... ನೀವಾ?!’

5 Mar, 2018