ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪುತೋಟದಲ್ಲಿ ಬಿಳಿ ಗರುಡನ ವಿಹಾರ

Last Updated 19 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಜಲತಾಣ ಅಥವಾ ಜವಳು ಪ್ರದೇಶದ ಎತ್ತರದ ಮರಗಳ ಕೊಂಬೆಗಳ ಮೇಲೆ ಆಶ್ರಯ ಪಡೆಯುವ ಅಪರೂಪದ ಪಕ್ಷಿ ಬ್ರಾಹ್ಮಿನಿ ಕೈಟ್. ನಮ್ಮ ದೇಶದ ವಿವಿಧ ರಾಜ್ಯಗಳು, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ಆಸ್ಟ್ರೇಲಿಯಾಗಳಲ್ಲೂ ಜೀವಿಸುವ ದೊಡ್ಡಜಾತಿಯ ಗಂಭೀರ ಪಕ್ಷಿ ಇದು. ಇದರ ವೈಜ್ಞಾನಿಕ ಹೆಸರು ಹಲಿಯಾಸ್ಟರ್ ಇಂಡಸ್ (Ha* iastur Indus). ಕನ್ನಡದಲ್ಲಿ ಬಿಳಿಗರುಡ ಎನ್ನುವ ಚಂದದ ಹೆಸರು ಇದೆ.

ಮೀನು, ಏಡಿ, ಬಾವಲಿಗಳು ಇದರ ಆಹಾರ. ಲಾಲ್‌ಬಾಗಿನ ಎತ್ತರದ ಮರದ ಕೊಂಬೆಯ ಮೇಲೆ ಕುಳಿತು ಬೇಟೆಗಾಗಿ ಹೊಂಚುಹಾಕುತ್ತಿದ್ದ ಬಿಳಿಗರುಡ ಕಳೆದ ಏಪ್ರಿಲ್‌ನ ಒಂದು ಮುಂಜಾವಿನಲ್ಲಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಯಿತು. ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿಯೂ, ಪ್ರವೃತ್ತಿಯಲ್ಲಿ ಛಾಯಾಗ್ರಾಹಕರೂ ಆಗಿರುವ ಮಹೇಶ್‌ ಹೆಗಡೆ ಈ ಚಿತ್ರ ತೆಗೆದ ಹವ್ಯಾಸಿ.

ಈ ಚಿತ್ರತೆಗೆದ ಕೆನಾನ್ 80 ಡಿ ಕ್ಯಾಮೆರಾಕ್ಕೆ 150– 600 ಎಂ.ಎಂ. ಜೂಂ ಲೆನ್ಸ್ ಜೋಡಣೆಯಾಗಿತ್ತು. 600 ಎಂ.ಎಂ. ಫೋಕಲ್ ಲೆಂಗ್ತ್, ಅಪರ್ಚರ್ f 6.3, ಶಟರ್ ವೇಗ 1/500 ಸೆಕೆಂಡ್,  ಐಎಸ್ಒ 1600 ಇತ್ತು.

ಈ ಚಿತ್ರದ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನವನ್ನು ಹೀಗೆ ಮಾಡಬಹುದು...

* ನಗರವಾಸಿಗಳಿಗೆ ಇದೊಂದು ಅಪರೂಪದ ದೃಶ್ಯ. ಲಾಲ್‌ಬಾಗ್‌ನಲ್ಲಿ ವಿಹರಿಸುವ ಹಲವರು ಬಹು ಎತ್ತರದಲ್ಲಿ ಕುಳಿತ ಬಿಳಿಗರುಡವನ್ನು ಬರಿಗಣ್ಣಲ್ಲಿ ಗುರುತಿಸುವುದೂ ಕಷ್ಟ.

* ಉತ್ತಮ ಗುಣಮಟ್ಟದ ದುರ್ಬೀನು ಅಥವಾ ಕ್ಯಾಮೆರಾದ ದೊಡ್ಡ ಜೂಂ ಲೆನ್ಸ್ ಮೂಲಕ ನೋಡಿದಾಗ ಮಾತ್ರ ಆ ಪಕ್ಷಿಯ ಚಲನವಲನ ಕಂಡೀತು. ಅದನ್ನು ಸಮರ್ಪಕವಾಗಿ ಕ್ಯಾಮೆರಾ ದಲ್ಲಿ ಸೆರೆಹಿಡಿವುವುದೂ ಸವಾಲೇ ಸರಿ.

* ಕ್ಯಾಮೆರಾದ ಮೇಲೆ ಹಿಡಿತ ಸಾಧಿಸಿದ ಛಾಯಾಗ್ರಾಹಕ ಮಾತ್ರ ಪರಿಣಾಮಕಾರಿಯಾದ ಫಲಿತಾಂಶ ಪಡೆಯಬಹುದು. ಇಲ್ಲಿ ಚಿತ್ರ ಸಾಕಷ್ಟು ಚೆನ್ನಾಗಿಯೇ ಮೂಡಿದೆ. ತಾಂತ್ರಿಕವಾಗಿ ಇದು ಛಾಯಾಗ್ರಾಹಕನ ಗೆಲುವು. ಆದರೂ ಕೆಲವೊಂದು ಮಿತಿಗಳಿವೆ.

* ಮುಂಜಾನೆಯ ಬೆಳಕು ಉತ್ತಮವಾಗಿರುವುದರಿಂದ ಐಎಸ್ಒ 1600 ಅಗತ್ಯವಿರಲಿಲ್ಲ. ಪಕ್ಷಿ ದೇಹದ ಕೆಲಭಾಗಗಳು ಬಿಳಿಚಿದಂತಾಗಿವೆ. ನೀಲಾಕಾಶದ ಬಣ್ಣ ಕೂಡಾ ಆಕರ್ಷಕ ಹಿನ್ನೆಲೆಯಾಗಿ ಮೂಡಿಲ್ಲ. ಐಎಸ್ಒ 400 ಸಾಕಾಗುತ್ತಿತ್ತು. ಅದಕ್ಕೆ ಪೂರಕವಾಗಿ ಅಪರ್ಚರ್ ಮತ್ತು ಶಟರ್ ವೇಗ ಹೊಂದಿಸಿಕೊಂಡಿದ್ದರೆ ಚಿತ್ರ ಮತ್ತಷ್ಟು ಸುಂದರವಾಗಿ ಮೂಡಿಬರುತ್ತಿತ್ತು.

* ಕಲಾತ್ಮಕವಾಗಿ ಪಕ್ಷಿಯ ಚಲನಶೀಲ ಭಂಗಿ (ಜೀವಂತಿಕೆ), ಚಿತ್ರದ ಚೌಕಟ್ಟಿನಲ್ಲಿ ಪಕ್ಷಿಯನ್ನು ಇಟ್ಟಿರುವ ಸ್ಥಳ (ಸಬ್ಜೆಕ್ಟ್  ಪ್ಲೇಸ್‌ಮೆಂಟ್), ಅದರ ಮುಂಬದಿಯಲ್ಲಿ ನೋಟಕ್ಕೆ ಬಿಟ್ಟಿರುವ ಜಾಗ (ರಿಲೀಫ್) ಮತ್ತು ಮರದ ಕೊಂಬೆಗಳ ಮಾಟಗಳು (ಪ್ಯಾಟ್ರನ್) ಇದನ್ನೊಂದು ಕಲಾಕೃತಿಯಾಗಿಸಿವೆ.

* ಅಪರೂಪದ ಚಿತ್ರವಾದ ಕಾರಣ ಶಹಭಾಸ್‌ಗಿರಿ ಪಡೆಯುವಲ್ಲಿ ಸಫಲವಾಗಿದೆ. ಇಂತಹ ಪಕ್ಷಿಯ ವಿಶೇಷವಾದ ಕ್ರಿಯೆ (ಆ್ಯಕ್ಷನ್) ಜೊತೆಗಿದ್ದರೆ ಚಿತ್ರಕ್ಕೆ ಭಾವಸ್ಪರ್ಶ ಸಿಗುತ್ತಿತ್ತು. ಬಾಯಲ್ಲಿ ಆಹಾರ ಕಚ್ಚಿ ಹಿಡಿದೋ, ಕಾಲಲ್ಲಿ ಹಿಡಿದು ತಂದ ಬೇಟೆಯನ್ನು ಕೊಕ್ಕಿನಲ್ಲಿ ತಿವಿದು ತಿರುಗಿಸುತ್ತಿರುವ ದೃಶ್ಯವೋ... ಹೀಗೆ ಯಾವುದಾದರೂ ಆಗುತ್ತಿತ್ತು. ಛಾಯಾಗ್ರಾಹಕ ಕೆಲ ಸಮಯ ಕಾದಿದ್ದರೆ ಅಂಥದ್ದೊಂದು ದೃಶ್ಯ ಸಿಗುವ ಸಾಧ್ಯತೆಯೂ ಇತ್ತು. ಆಗ ಅದು ಕೇವಲ ‘ಛಾಯಾಚಿತ್ರ’ವಷ್ಟೇ (ಫೋಟೊ) ಆಗಿರದೇ, ‘ಛಾಯಾಚಿತ್ರಣ’ವೂ (ಪಿಕ್ಚರ್) ಆಗಿ ರಸದೌತಣವನ್ನೇ ನೀಡಬಲ್ಲ ಸಾಮರ್ಥ್ಯ ಪಡೆದುಕೊಳ್ಳುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT