ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದ ಮುಖ್ಯಸ್ಥ ಹುದ್ದೆಯಿಂದ ರಾಬರ್ಟ್‌ ಮುಗಾಬೆ ಪದಚ್ಯುತಿ

ಜಿಂಬಾಬ್ವೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಹೆಚ್ಚಿದ ಒತ್ತಡ
Last Updated 19 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಹರಾರೆ: ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ಅವರನ್ನು ಆಡಳಿತಾರೂಢ ’ಜಿಂಬಾಬ್ವೆ ಆಫ್ರಿಕನ್ ನ್ಯಾಷನಲ್ ಯೂನಿಯ‌ನ್–ಪೆಟ್ರಿಯಾಟಿಕ್ ಫ್ರಂಟ್’ ಪಕ್ಷದ ಮುಖ್ಯಸ್ಥ ಸ್ಥಾನದಿಂದ ಪದಚ್ಯುತಿ ಮಾಡಲಾಗಿದೆ. ಎಮ್ಮರ್ಸನ್ ನನ್‌ಗುವಾ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿದೆ.

ಇದೇ ವೇಳೆ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಕ್ಷದ ನಾಯಕರು ಹಾಗೂ ಸೇನೆಯ ಅಧಿಕಾರಿಗಳು ಮುಗಾಬೆ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ, 37 ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ಮುಗಾಬೆ ಅವರ ಆಡಳಿತಾವಧಿ ಕೊನೆಗೊಳ್ಳುವ ಸಮಯ ಸಮೀಪಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

ಸೇನೆ ಜತೆಗೆ ಆಪ್ತ ಬಾಂಧವ್ಯ ಹೊಂದಿದ್ದ ಎಮ್ಮರ್ಸನ್ ನನ್‌ಗುವಾ ಅವರನ್ನು ಮುಗಾಬೆ ಅವರು ಉಪಾಧ್ಯಕ್ಷ ಹುದ್ದೆಯಿಂದ ವಜಾಗೊಳಿಸಿದ್ದರು.

‘ನನ್‌ಗುವಾ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಲು ನಿರ್ಣಯ ಅಂಗೀಕರಿಸಲಾಗಿದೆ’ ಎಂದು ಪಕ್ಷದ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.

ಎಲ್ಲೆಡೆಯಿಂದ ಭಾರಿ ವಿರೋಧ: ಮುಗಾಬೆ ಅವರ ಪತ್ನಿ ಗ್ರೇಸ್‌ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಲು ಮುಗಾಬೆ ಮುಂದಾದ ಬಳಿಕ ಸೇನೆ ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು. ನಂತರದಲ್ಲಿ ಮುಗಾಬೆ ಅವರಿಗೆ ರಾಜೀನಾಮೆ ನೀಡುವಂತೆ ಒತ್ತಡ ಹೆಚ್ಚಿಸಿದೆ. ಶನಿವಾರ ನಾಗರಿಕರು ಹರಾರೆಯಲ್ಲಿ ಬೃಹತ್‌ ಪ್ರತಿಭಟನೆ ಸಹ ನಡೆಸಿದ್ದರು.

ಮುಗಾಬೆ ಅವರು ಪ್ರಸ್ತುತ ಅಧ್ಯಕ್ಷ ಸ್ಥಾನದಲ್ಲಿದ್ದರೂ ಸಹ ಸಾರ್ವಜನಿಕ ವಲಯ ಹಾಗೂ ತಮ್ಮ ಪಕ್ಷದಿಂದಲೇ ಭಾರಿ ವಿರೋಧ ಎದುರಿಸುತ್ತಿದ್ದಾರೆ.

‘ಮುಗಾಬೆ ಅವರ ದುರ್ಬಲ ಸ್ಥಿತಿಯಿಂದ ಪತ್ನಿ ಹಾಗೂ ಅವರ ಆಪ್ತರು ಲಾಭ ಮಾಡಿಕೊಳ್ಳುತ್ತಿದ್ದು, ಅಧಿಕಾರ ಹಾಗೂ ದೇಶದ ಸಂಪತ್ತು ದೋಚುತ್ತಿದ್ದಾರೆ’ ಎಂದು ಪಕ್ಷದ ಮುಖಂಡರು ದೂರಿದ್ದಾರೆ. ಕಳೆದೊಂದು ವಾರದಿಂದ ಜಿಂಬಾಬ್ವೆಯನ್ನು ಸೇನೆ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.

ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದನ್ನು ವಿಳಂಬ ಮಾಡಲು ಮುಗಾಬೆ ಯತ್ನಿಸುತ್ತಿದ್ದಾರೆ. ಭವಿಷ್ಯದಲ್ಲಿ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ರಕ್ಷಣೆ ದೊರಕುವಂತೆ ಒಪ್ಪಂದವೊಂದನ್ನು ಮಾಡಿಕೊಳ್ಳಲು ಅವರು ಯೋಚಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT