ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪದ್ಮಾವತಿ’ ಬಿಡುಗಡೆ ಸದ್ಯಕ್ಕಿಲ್ಲ

ಇದು ಸ್ವಯಂ ಪ್ರೇರಿತ ನಿರ್ಧಾರ: ಚಿತ್ರ ನಿರ್ಮಾಣ ಸಂಸ್ಥೆ
Last Updated 20 ನವೆಂಬರ್ 2017, 8:25 IST
ಅಕ್ಷರ ಗಾತ್ರ

ಮುಂಬೈ: ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಲನಚಿತ್ರವನ್ನು ವಿರೋಧಿಸಿ ದೇಶದ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವಂತೆಯೇ, ನಿರ್ಮಾಪಕರು ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದಾರೆ.

ಸ್ವಯಂ ಪ್ರೇರಿತವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ವಯಕಾಮ್‌18 ಮೋಷನ್‌ ಪಿಕ್ಚರ್ಸ್‌ ಹೇಳಿದೆ.

ಈ ಮೊದಲು ಚಿತ್ರದ ಬಿಡುಗಡೆ ದಿನಾಂಕವನ್ನು ಡಿಸೆಂಬರ್‌ 1 ಎಂದು ನಿಗದಿಪಡಿಸಲಾಗಿತ್ತು. ಪರಿಷ್ಕೃತ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸುವುದಾಗಿ ಅದು ಹೇಳಿಕೆಯಲ್ಲಿ ತಿಳಿಸಿದೆ.

ಕಾನೂನಿಗೆ ಗೌರವ: ‘ಈ ನೆಲದ ಕಾನೂನು ಮತ್ತು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಂತಹ (ಸಿಬಿಎಫ್‌ಸಿ) ಸಾಂವಿಧಾನಿಕ ಸಂಸ್ಥೆಗಳ ಮೇಲೆ ಸಂಸ್ಥೆಯು ಅಪಾರ ಗೌರವ ಹೊಂದಿದೆ. ಜವಾಬ್ದಾರಿಯುತ ಮತ್ತು ಕಾನೂನು ಪಾಲಿಸುವ ಸಂಸ್ಥೆಯಾಗಿ ಜಾರಿಯಲ್ಲಿರುವ ಪ್ರಕ್ರಿಯೆ ಮತ್ತು ನಿಯಮ
ಪಾಲಿಸಲು ಬದ್ಧ. ಬಿಡುಗಡೆಗೆ ಬೇಕಾದ ಅನುಮತಿ ಪಡೆಯಲಿದ್ದೇವೆ’ ಎಂದು ಸಂಸ್ಥೆ ಹೇಳಿದೆ.

ಮಂಡಳಿ ಪ್ರಮಾಣ ಪತ್ರ ಇಲ್ಲದಿದ್ದರೂ, ಮಾಧ್ಯಮಗಳ ಪ್ರತಿನಿಧಿಗಳಿಗೆ ಚಿತ್ರ ವೀಕ್ಷಿಸಲು ಅವಕಾಶ ನೀಡಿದ್ದಕ್ಕಾಗಿ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಮುಖ್ಯಸ್ಥ ಪ್ರಸೂನ್‌ ಜೋಶಿ ಅವರು ಚಿತ್ರ ನಿರ್ಮಾಪಕರನ್ನು ಶನಿವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

‘ರಜಪೂತರ ಶೌರ್ಯ, ಘನತೆ ಮತ್ತು ಸಂಪ್ರದಾಯಗಳನ್ನು ವೈಭವದೊಂದಿಗೆ ಸೆರೆಹಿಡಿದಿರುವ ಪದ್ಮಾವತಿ ಚಿತ್ರವು ಒಂದು ಅತ್ಯುತ್ತಮ ಸಿನಿಮಾ’ ಎಂದು ವಯಕಾಮ್‌18 ಮೋಷನ್‌ ಪಿಕ್ಚರ್ಸ್‌ ಪುನರುಚ್ಚರಿಸಿದೆ.

ಕೇಂದ್ರಕ್ಕೆ ಪತ್ರ: ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಶನಿವಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿ ಅವರಿಗೆ ಪತ್ರಬರೆದು ಚಿತ್ರ ಬಿಡುಗಡೆ ಮುಂದೂಡುವಂತೆ ಕೇಳಿಕೊಂಡಿದ್ದರು.

ಇತಿಹಾಸಕಾರರು, ಚಿತ್ರ ನಿರ್ಮಾಪಕರು ಮತ್ತು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಸಮುದಾಯಗಳ ಮುಖಂಡರನ್ನೊಳಗೊಂಡ ಸಮಿತಿ ರಚಿಸಿ, ಚಿತ್ರದ ಕಥಾ ಹಂದರದ ಬಗ್ಗೆ ಚರ್ಚೆ ನಡೆಸಬೇಕು. ಆ ಬಳಿಕವಷ್ಟೇ ಚಿತ್ರ ಬಿಡುಗಡೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದರು.

ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಿದರೆ ಮಾತ್ರ ಅವಕಾಶ (ಲಖನೌ ವರದಿ): ಚಿತ್ರದಲ್ಲಿರುವ ಆಕ್ಷೇಪಾರ್ಹ ಭಾಗಗಳನ್ನು ತೆಗೆದುಹಾಕುವವರೆಗೆ ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಭಾನುವಾರ ಹೇಳಿದೆ.

ರಾಣಿ ಪದ್ಮಾವತಿ ಅವರು ಮೊಘಲರಿಗೆ ಶರಣಾಗುವುದರ ಬದಲಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿ ಇತಿಹಾಸದಲ್ಲಿ ತಮ್ಮದೇ ಆದ ಸ್ಥಾನಗಳಿಸಿದ್ದಾರೆ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಹೇಳಿದ್ದಾರೆ.

‘ರಾಣಿಯು ತನ್ನ ಸತಿತ್ವ ಮತ್ತು ಘನತೆ ಕಾಪಾಡುವುದಕ್ಕಾಗಿ ಅಗ್ನಿ ಪ್ರವೇಶ ಮಾಡಿ, ತಮ್ಮನ್ನು ತಾವೇ ಸುಟ್ಟುಕೊಂಡಿದ್ದರು’ ಎಂದು ಅವರು ಹೇಳಿದ್ದಾರೆ.

ಬಂದ್‌ ಮುಂದೂಡಿದ ಕರ್ಣಿ ಸೇನಾ

ಜೈಪುರ: ಪದ್ಮಾವತಿ ಚಿತ್ರ ಬಿಡುಗಡೆಯನ್ನು ಮುಂದೂಡಿರುವ ಘೋಷಣೆಯನ್ನು ಚಿತ್ರ ತಯಾರಿಕಾ ಸಂಸ್ಥೆ ಮಾಡುತ್ತಲೇ, ಡಿಸೆಂಬರ್‌ 1ರಂದು ಕರೆ ನೀಡಿದ್ದ ಭಾರತ್‌ ಬಂದ್‌ ಅನ್ನು ಕರ್ಣಿ ಸೇನಾ ಮುಂದೂಡಿದೆ.

‘ನಮ್ಮ ನಿರೀಕ್ಷೆಯಂತೆ ಅವರು ನಡೆದುಕೊಳ್ಳದೇ ಹೋದರೆ ನಾವು ಅವರನ್ನು ಬೀದಿಯಲ್ಲೇ ಎದುರಿಸುತ್ತೇವೆ. ಬನ್ಸಾಲಿ ಒಬ್ಬ ಮೋಸಗಾರರಾಗಿದ್ದು, ಪದೇ ಪದೇ ತಪ್ಪು ಮಾಡುತ್ತಿರುತ್ತಾರೆ. ಪತ್ರಕರ್ತರ ಬದಲಿಗೆ ಅವರು ನಮಗೆ ಮೊದಲು ಚಿತ್ರ ತೋರಿಸಬೇಕು’ ಎಂದು ಕರ್ಣಿ ಸೇನಾದ ಮುಖ್ಯಸ್ಥ ಲೋಕೇಂದ್ರ ಸಿಂಗ್‌ ಕಾಲವಿ ಹೇಳಿದ್ದಾರೆ.

‘ಪದ್ಮಾವತಿ ಚಿತ್ರಕ್ಕೆ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಹಣಕಾಸಿನ ನೆರವು ನೀಡಿದ್ದಾನೆ. ಆ ಕಾರಣಕ್ಕಾಗಿಯೇ, ಕಾಲವಿಯನ್ನು ಬಾಂಬ್‌ ಹಾಕಿ ಹತ್ಯೆ ಮಾಡಬೇಕು ಎಂದು ಕರಾಚಿಯಿಂದ ಬೆದರಿಕೆ ಕರೆಗಳು ಬರುತ್ತಿವೆ’ ಅವರು ಹೇಳಿದ್ದಾರೆ.

ದೀಪಿಕಾ ಬನ್ಸಾಲಿ ತಲೆ ಕಡಿದವರಿಗೆ ₹10 ಕೋಟಿ

ನವದೆಹಲಿ: ಪದ್ಮಾವತಿ ರಾಣಿ ಪಾತ್ರದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಅವರ ಶಿರಚ್ಛೇದ ಮಾಡಿದವರಿಗೆ ₹10 ಕೋಟಿ ಬಹುಮಾನ ನೀಡುವುದಾಗಿ ಹರಿಯಾಣದ ಆಡಳಿತಾರೂಢ ಬಿಜೆಪಿ ಮುಖಂಡ, ಮುಖ್ಯ ಮಾಧ್ಯಮ ಸಂಚಾಲಕ ಸೂರಜ್‌ ಪಾಲ್‌ ಅಮು ಘೋಷಿಸಿದ್ದಾರೆ.

‘ದೀಪಿಕಾ, ಬನ್ಸಾಲಿ ಅವರ ತಲೆಗೆ ₹5 ಕೋಟಿ ಬಹುಮಾನ ಘೋಷಿಸಿರುವ ಮೀರಠ್‌ ಯುವಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇವರಿಬ್ಬರ ಶಿರಚ್ಛೇದ ಮಾಡಿದವರಿಗೆ ನಾವು ₹10 ಕೋಟಿ ನೀಡುತ್ತೇವೆ ಮತ್ತು ಅವರ ಕುಟುಂಬದ ಅಗತ್ಯಗಳನ್ನು ಪೂರೈಸುತ್ತೇವೆ’ ಎಂದು ಅವರು ಹೇಳಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬನ್ಸಾಲಿ ಅವರನ್ನು ಬೆಂಬಲಿಸಿರುವ, ಚಿತ್ರದಲ್ಲಿ ಅಲ್ಲಾವುದ್ದೀನ್‌ ಖಿಲ್ಜಿ ಪಾತ್ರ ನಿರ್ವಹಿಸಿರುವ ನಟ ರಣವೀರ್‌ ಸಿಂಗ್‌ ಅವರಿಗೂ ಬಿಜೆಪಿ ಮುಖಂಡ ಬೆದರಿಕೆ ಒಡ್ಡಿದ್ದಾರೆ.

‘ಬನ್ಸಾಲಿ ಬೆಂಬಲಿಸಿ ನೀವು ನೀಡಿರುವ ಹೇಳಿಕೆ ವಾಪಸ್‌ ಪಡೆಯದಿದ್ದರೆ, ನಾವು ನಿಮ್ಮ ಕಾಲುಗಳನ್ನು ಕತ್ತರಿಸುತ್ತೇವೆ’  ಎಂದು ಅಮು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT