ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಪರ ಚಿಂತನೆಗಳ ಜೆಡಿಎಸ್‌ ಅಧಿಕಾರಕ್ಕೆ’

Last Updated 20 ನವೆಂಬರ್ 2017, 6:15 IST
ಅಕ್ಷರ ಗಾತ್ರ

ವಿಜಯಪುರ: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ದೂರದೃಷ್ಠಿ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಅವರ ಜನಪರ ಚಿಂತನೆಗಳು ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಅನ್ನು ಅಧಿಕಾರಕ್ಕೆ ತರಲಿವೆ ಎಂದು ಪುರಸಭಾ ಸದಸ್ಯ ಎಸ್.ಭಾಸ್ಕರ್ ಹೇಳಿದರು.

ದೇವನಹಳ್ಳಿಯ ಗುರುಭವನದಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಗೆ, ವಿಜಯಪುರ ಪುರಸಭೆಯಿಂದ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದ ಜ್ವಲಂತ ಸಮಸ್ಯೆಗಳನ್ನು ನಿವಾರಿಸಲು ಪ್ರಾದೇಶಿಕ ಪಕ್ಷ ಬೇಕು. ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ. ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಹಾಗೂ ಒತ್ತುವರಿ ತೆರವು ಸಮಸ್ಯೆ ಪರಿಹರಿಸಲಾಗುವುದು ಎಂದು ಈಗಾಗಲೇ ಘೋಷಣೆ ಮಾಡಿದೆ. ಜನರು ಪಕ್ಷದ ಮೇಲೆ ವಿಶ್ವಾಸವಿಟ್ಟಿದ್ದಾರೆ ಎಂದರು.

ಮುಖಂಡ ಕೋರಮಂಗಲ ವೀರಪ್ಪ ಮಾತನಾಡಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಜಾರಿಗೊಳಿಸಿದ ಗ್ರಾಮ ವಾಸ್ತವ್ಯ ಮುಂತಾದ ಕಾರ್ಯಕ್ರಮಗಳನ್ನು ಬಿಜೆಪಿ ನಕಲು ಮಾಡಿ ಜನರಿಂದ ನಗೆಪಾಟಲಿಗೆ ಗುರಿಯಾಗಿದೆ. ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ನಿಧಿಯಿಂದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ ಎಂದರು.

ರೈತರಿಗೆ ಕೊಳವೆಬಾವಿ, ಗ್ರಾಮೀಣ ಪ್ರದೇಶಗಳಿಗೆ ಕೊಳವೆ ಬಾವಿ, ಕಾಂಕ್ರೀಟ್‌ ರಸ್ತೆ ಮುಂತಾದ ಸವಲತ್ತುಗಳನ್ನು ಕಲ್ಪಿಸಲಾಗಿದೆ. ಕಾರ್ಯಕರ್ತರು ಈ ಎಲ್ಲ ಅಭಿವೃದ್ಧಿ ಕಾರ್ಯಗಳ ವಿವರವನ್ನು ಜನರಿಗೆ ತಿಳಿಸಬೇಕು. ಪ್ರತಿ ಬೂತ್‌ ಮಟ್ಟದಿಂದ ಸಂಘಟನೆ ಬಲ ಪಡಿಸಬೇಕು ಎಂದರು.

ತಾಲ್ಲೂಕು ಎಸ್.ಸಿ.ಘಟಕದ ಪ್ರಧಾನ ಕಾರ್ಯದರ್ಶಿ ವಿಜಯಪುರ ವೇಣು ಮಾತನಾಡಿ, ಕಾರ್ಯಕರ್ತರು ಪ್ರತಿ ಕ್ಷಣವೂ ಪಕ್ಷಕ್ಕಾಗಿ ದುಡಿದು ಜೆಡಿಎಸ್‌ ಅಧಿಕಾರಕ್ಕೆ ತರಬೇಕು. ದೇಶದಲ್ಲಿ ನೋಟು ರದ್ದತಿಯಿಂದ ಬಡಜನರಿಗೆ ಅನ್ಯಾಯವಾಗಿದೆ.  ರಾಜ್ಯ ಹಾಗೂ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡಬೇಕು. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ರಾಜ್ಯದ ಜನತೆಗೆ ನ್ಯಾಯ ಒದಗಿಸುವುದು ಮುಖ್ಯ ಧ್ಯೇಯವಾಗಬೇಕು ಎಂದರು.

ಮುಖಂಡರಾದ ಕಲ್ಯಾಣ್ ಕುಮಾರ್ ಬಾಬು, ದಂಡಿಗಾನಹಳ್ಳಿ ನಾರಾಯಣಸ್ವಾಮಿ, ಮರವೇ ನಾರಾಯಣಸ್ವಾಮಿ, ಬಸವರಾಜು, ನಗರ ಘಟಕದ ಅಧ್ಯಕ್ಷ ಕಿರಣ್, ವಿ.ರಾ.ಶಿವಕುಮಾರ್, ಮಹೇಶ್ ಕುಮಾರ್, ಎಚ್.ಎಂ.ಕೃಷ್ಣಪ್ಪ, ಇದ್ದರು.

ಜೆಡಿಎಸ್‌ಗೆ ಮತ್ತೆ ಅಧಿಕಾರ
ಜೆಡಿಎಸ್ ಮುಖಂಡ ಮಂಡಿಬೆಲೆ ರಾಜಣ್ಣ ಮಾತನಾಡಿ, ಪಕ್ಷವು ಮುಂದೆ ಅಧಿಕಾರಕ್ಕೆ ಬಂದು ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದರ ಜತೆಗೆ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಶಾಶ್ವತ ನೀರಾವರಿ ಯೋಜನೆಯ ಕುರಿತು ಪ್ರಾಮಾಣಿಕವಾಗಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಸರ್ಕಾರವನ್ನು ಜನರು ಕಂಡಿದ್ದಾರೆ. ಮತದಾರರು ಎರಡೂ ಪಕ್ಷಗಳಿಗೆ ಮುಂದಿನ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡುತ್ತಾರೆ. ಬಿಜೆಪಿಯು ಹೆಚ್ಚು ದಿನ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡಲು ಸಾಧ್ಯವಿಲ್ಲ. ಜೆಡಿಎಸ್‌ಗೆ ಮತ್ತೆ ಅಧಿಕಾರ ಖಚಿತ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT