ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ಡಿ ಭಾರಕ್ಕೆ ಮುಳುಗಿದ ನೀರಿನ ಕರದಾತ

Last Updated 20 ನವೆಂಬರ್ 2017, 8:35 IST
ಅಕ್ಷರ ಗಾತ್ರ

ಧಾರವಾಡ: ನಿರಂತರ ನೀರು (24X7) ಪಡೆಯುವ ಹೊಸ್ತಿಲಲ್ಲಿರುವ ಅವಳಿ ನಗರದ ಜನತೆಗೆ ಈಗ ನೀರಿನ ಕರ ಬಾಕಿ ಹಾಗೂ ಅದಕ್ಕಾಗಿರುವ ಬಡ್ಡಿ ಹೊರಲಾರದಷ್ಟು ಭಾರವಾಗಿದೆ. ಇಂಥ ಸಂದರ್ಭದಲ್ಲಿ ನೆನೆಗುದಿಗೆ ಬಿದ್ದಿರುವ ಒಂದಾವರ್ತಿ (ಒನ್ ಟೈಮ್‌ ಸೆಟಲ್‌ಮೆಂಟ್‌–ಒಟಿಎಸ್‌)ಗೆ ಮರು ಚಾಲನೆ ಸಿಗುವುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.

ಹುಬ್ಬಳ್ಳಿ ಧಾರವಾಡ ಕುಡಿಯುವ ನೀರಿನ ವ್ಯವಸ್ಥೆಯನ್ನು 2006ರಲ್ಲಿ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಗೆ ಹಸ್ತಾಂತರಿಸಲಾಯಿತು. ಅಲ್ಲಿಂದ ನೀರು ಪೂರೈಕೆ ಮಾಡುತ್ತಿರುವ ಮಂಡಳಿಗೆ ಈವರೆಗೆ ಅವಳಿ ನಗರದಿಂದ ಒಟ್ಟು ₹52.77ಕೋಟಿ ಅಸಲು ಹಾಗೂ ಅದಕ್ಕೆ ₹ 36.21ಕೋಟಿ ಬಡ್ಡಿ ಬರುವುದು ಬಾಕಿ ಇದೆ. ಹೀಗಾಗಿ ನಿರಂತರ ನೀರು ಸರಬರಾಜು ವ್ಯವಸ್ಥೆ ಅಳವಡಿಸಲು ಅನುಕೂಲವಾಗುವಂತೆ ಬಡ್ಡಿ ಮೊತ್ತವನ್ನು ಕೈಬಿಟ್ಟು ಒಂದಾವರ್ತಿ ವ್ಯವಸ್ಥೆ ಜಾರಿಗೊಳಿಸಿ ಎನ್ನುವುದು ಜನಪ್ರತಿನಿಧಿಗಳ ಒತ್ತಾಯ.

ಈ ಹಿಂದೆ ಸುರೇಶಕುಮಾರ್‌ ಅವರು ನಗರಾಭಿವೃದ್ಧಿ ಸಚಿವರಾಗಿದ್ದ ಸಂದರ್ಭದಲ್ಲಿ ‘ಒಂದಾವರ್ತಿ’ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ, ಪ್ರಚಾರದ ಕೊರತೆಯಿಂದ ಅದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿರಲಿಲ್ಲ. ನಂತರ ವಿನಯ ಕುಮಾರ ಸೊರಕೆ ಅವರು ಸಚಿವರಾಗಿದ್ದಾಗ ಮತ್ತೊಮ್ಮೆ ಪಾಲಿಕೆ ವತಿಯಿಂದ ಬಡ್ಡಿ ಮನ್ನಾ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೆ ಮೌಖಿಕವಾಗಿ ಒಪ್ಪಿದ್ದರೂ ಅದು ಅನುಷ್ಠಾನಕ್ಕೆ ಬಂದಿರಲಿಲ್ಲ. ಇದೀಗ ಮತ್ತೊಮ್ಮೆ ಒಂದಾವರ್ತಿ ಯೋಜನೆ ಅನುಷ್ಠಾನಕ್ಕೆ ಕೂಗು ಕೇಳಿಬರುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ವಿರೋಧಪಕ್ಷದ ನಾಯಕ ಸುಭಾಸ ಶಿಂಧೆ, ‘ಗ್ರಾಹಕರಿಗೆ ನೀರು ಕೊಡದೇ ಭರಿಸಿರುವ ಶುಲ್ಕ ಇದು. 2003, 2004, 2005ರಲ್ಲಿ ಹದಿನೈದು ದಿನಗಳಿಗೆ ಒಮ್ಮೆ ನೀರು ನೀಡುತ್ತಿದ್ದರು. ಆಗ ಮಂಡಳಿಯವರು ನೀರಿನ ಕರ ವಸಲೂ ಮಾಡಲಿಲ್ಲ. ಆದರೆ, ತಮ್ಮ ದಾಖಲೆಯಲ್ಲಿ ಮಾತ್ರ ನಮೂದಿಸಿದ್ದರು. ಈ ಕರ ಬಾಕಿ ಕುರಿತು ಚರ್ಚೆಯಾಗದೆ ಪಾಲಿಕೆಯಿಂದ ಮಂಡಳಿಗೆ ವರ್ಗಾವಣೆ ಆಗಿದೆ. ಹೀಗಾಗಿ ಈಗ ಇದು ಬೆಟ್ಟದಷ್ಟು ಬೆಳೆದು ನಿಂತಿದೆ. ಕೆಲವು ನಿವಾಸಿಗಳ ಕರ ಬಾಕಿ ₹50 ಸಾವಿರದಷ್ಟು ಇದೆ’ ಎಂದರು.

‘ಈಗಾಗಲೇ ಮೈಸೂರು ಪಾಲಿಕೆಯಲ್ಲಿ ನೀರಿನ ಕರದ ಬಡ್ಡಿ ಮನ್ನಾ ಮಾಡಲಾಗಿದೆ. ಅದರಂತೆಯೇ ನಮ್ಮ ಪಾಲಿಕೆಯ ನೀರಿನ ಬಡ್ಡಿಯನ್ನು ಮನ್ನಾ ಮಾಡಿ ಎಂದು ಮನವಿ ಮಾಡಿಕೊಳ್ಳಲಾಗುವುದು. ಕಳೆದ 15 ವರ್ಷದಿಂದ ಬಾಕಿ ಉಳಿಸಿಕೊಂಡಿರುವುದರಲ್ಲಿ ಜನರ ತಪ್ಪಿಲ್ಲ. ಏಕೆಂದರೆ ಆಗ ನಿತ್ಯ ನೀರು ನೀಡುತ್ತಿರಲಿಲ್ಲ. ಅಂಥ ಸಂದರ್ಭದಲ್ಲಿ ನೀರಿನ ಕರ ಕೇಳಲು ಅಧಿಕಾರಿಗಳೂ ಹೋಗಿಲ್ಲ. ಈಗ ಅದು ಬೆಳೆದು ನಿಂತಿದೆ. ಇದು ಪಾಲಿಕೆ ಹಾಗೂ ಮಂಡಳಿಯ ತಪ್ಪೇ ಹೊರತು ಜನರದ್ದಲ್ಲ’ ಎಂದು ಶಿಂಧೆ ಹೇಳಿದರು.

ಯಾಸೀನ್ ಹಾವೇರಿಪೇಟೆ ಪ್ರತಿಕ್ರಿಯಿಸಿ, ‘ಒಂದಾವರ್ತಿ ನೀಡಿದರೆ ಬಡ ಹಾಗೂ ಕೆಳ ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ. ಇಲ್ಲವೇ ನಿರಂತರ ನೀರು ಯೋಜನೆಗೆ ತೊಡಕಾಗಲಿದೆ. ಹಳೆಯ ಬಾಕಿಗೆ ಸಂಬಂಧಿಸಿದಂತೆ ಸರ್ಕಾರ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ’ ಎಂದರು.

‘ಈಗಾಗಲೇ ಪಾಲಿಕೆ ಆದಾಯ ಕಡಿಮೆ ಇದೆ. ಒಂದೊಮ್ಮೆ ಬಡ್ಡಿ ಮನ್ನಾ ಆದಲ್ಲಿ, ಅಸಲು ತುಂಬಲು ಜನರು ಸಿದ್ಧರಿದ್ದಾರೆ. ಅವರನ್ನು ಒಪ್ಪಿಸಲು ಪಾಲಿಕೆ ಸದಸ್ಯರು ಸಿದ್ಧರಿದ್ದೇವೆ. ಆಗ ಪಾಲಿಕೆಗೆ ಒಂದಷ್ಟು ವರಮಾನವಾದರೂ ಬಂದು ಸೇರಲಿದೆ. ಇದನ್ನು ಮನಗಂಡು ಸರ್ಕಾರ ಶೀಘ್ರದಲ್ಲಿ ಇದಕ್ಕೆ ಒಪ್ಪಿಗೆ ಸೂಚಿಸಬೇಕು. ಈ ಕುರಿತಂತೆ ಸೋಮವಾರ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್‌ ಅವರ ಬಳಿ ಪಾಲಿಕೆಯ ಎಲ್ಲಾ ಸದಸ್ಯರ ನಿಯೋಗ ತೆರಳಿ ಪಿಂಚಣಿ ಹಣ ಹಾಗೂ ಒಂದಾವರ್ತಿ ಕುರಿತಂತೆ ಚರ್ಚಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT