ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ಥಿರ, ಸಾವಯವ ಕೃಷಿ ಇಂದಿನ ಅಗತ್ಯ

Last Updated 20 ನವೆಂಬರ್ 2017, 9:11 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸುಸ್ಥಿರ, ಸಾವಯವ ಮತ್ತು ನೈಸರ್ಗಿಕ ಕೃಷಿ ಇಂದಿನ ಅಗತ್ಯವಾಗಿದೆ’ ಎಂದು ಸಾವಯವ ಕೃಷಿ ತಜ್ಞ ಎಲ್.ನಾರಾಯಣರೆಡ್ಡಿ ಹೇಳಿದರು. ಇಲ್ಲಿನ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಕಲಬುರ್ಗಿಯ ವಿಕಾಸ ಅಕಾಡೆಮಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ನೂತನ ಸಾವಯವ ಕೃಷಿ ಪರಿಚಯ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ಸಾವಯವ ಕೃಷಿಯಿಂದ ಭೂಮಿಯ ಫಲವತ್ತತೆ ಮತ್ತು ಇಳುವರಿ ಹೆಚ್ಚಾಗುತ್ತದೆ. 400 ಲೀಟರ್ ಗಂಜಲ, ಸೆಗಣಿ, ಕಸ–ಕಡ್ಡಿ, ಮಣ್ಣು ಬಳಸಿ ಗೊಬ್ಬರ ತಯಾರಿಸಬೇಕು. ಎಕರೆಗೆ ಮೂರು ಟನ್ ಗೊಬ್ಬರ ಹಾಕಿದರೆ ಒಂದೂವರೆಪಟ್ಟು ಹೆಚ್ಚಿನ ಇಳುವರಿ ಪಡೆಯಬಹುದು. ಎಲ್ಲದಕ್ಕೂ ಸರ್ಕಾರ, ಜನಪ್ರತಿನಿಧಿಗಳು, ಬೀಜ ಮತ್ತು ರಸಗೊಬ್ಬರ ಕಂಪೆನಿಗಳನ್ನು ದೂರುವುದರಲ್ಲಿ ಅರ್ಥವಿಲ್ಲ. ರೈತರು ಬದಲಾಗಬೇಕು. ಸ್ವಾವಲಂಬಿ ಭಾರತ ಕಟ್ಟಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಕ್ರಿಯಾಜೆನ್ ಜೈವಿಕ ಸಂಸ್ಥೆಯ ಬಸವರಾಜ ಗಿರಿಯಣ್ಣವರ ಮಾತನಾಡಿ, ‘ಭೂಮಿ ಮತ್ತು ಪರಿಸರದ ಒಡಲಲ್ಲಿ ಇಂದು ವಿಷ ತುಂಬಿಕೊಂಡಿದೆ. ಶುದ್ಧ ಕುಡಿಯುವ ನೀರು ದೊರಕುತ್ತಿಲ್ಲ. ಆದ್ದರಿಂದ ರೈತರು ಸುಸ್ಥಿರ, ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

‘ರೈತರು ಮತ್ತು ಕೃಷಿ ವಿಶ್ವವಿದ್ಯಾಲಯಗಳ ಮಧ್ಯೆ ಬಾಂಧವ್ಯ ಬೆಳೆಯಬೇಕು. ಇಲ್ಲವಾದಲ್ಲಿ ವಿಜ್ಞಾನಿಗಳ ಸಂಶೋಧನೆಗಳು ವ್ಯರ್ಥವಾಗುತ್ತವೆ. ರೈತರು ತಮ್ಮ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳಬೇಕು’ ಎಂದರು.

ವಿಶ್ರಾಂತ ಕುಲಪತಿ ಪ್ರೊ.ಎಸ್.ಎ.ಪಾಟೀಲ ಮಾತನಾಡಿ, ‘ರೈತರು ಹೊಲಗಳಲ್ಲೇ ಮನೆ ಮಾಡಬೇಕು. ದಿನಕ್ಕೆ 14 ಗಂಟೆ ದುಡಿಯಬೇಕು. ಆಗ ಪ್ರತಿ ಎಕರೆಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಆದಾಯ ಪಡೆಯಬಹುದು. ಸಾವಯವ ಕೃಷಿ, ಮಣ್ಣಿನ ಆರೋಗ್ಯ, ರೈತರ ಪರಿಶ್ರಮ, ನೀರು ಮತ್ತು ಮಾರುಕಟ್ಟೆ ವಿಧಾನಗಳು ರೈತರ ಆದಾಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ’ ಎಂದು ಹೇಳಿದರು.

ಬೀದರ್‌ನ ಕೀರ್ತಿ ಹೋಮಿಯೊ ಸಂಶೋಧನಾ ಕೇಂದ್ರದ ಡಾ. ವೀರೇಂದ್ರ ಪಾಟೀಲ, ಮಹಾರಾಷ್ಟ್ರದ ನಾಡೆಪ ಕೃಷಿ ಪದ್ಧತಿಯ ಅವಿನಾಶ ಪಾಂಡೆ ಮಾತನಾಡಿದರು. ಬಬಲಾದ ಮಠದ ಗುರುಪಾದಲಿಂಗ ಶಿವಯೋಗಿ ಕಾರ್ಯಕ್ರಮ ಉದ್ಘಾಟಿಸಿದರು. ವಿಕಾಸ ಅಕಾಡೆಮಿ ವಿಶ್ವಸ್ಥ ಮಾರ್ತಂಡ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತರಬೇತಿ ವಿಭಾಗದ ಮುಖ್ಯಸ್ಥ ಶೇಷಾದ್ರಿ ಕುಲಕರ್ಣಿ ಹಾಗೂ ಕೃಷಿ ಪ್ರಮುಖ ವಿ.ಶಾಂತರೆಡ್ಡಿ ನಿರೂಪಿಸಿದರು.

5 ಸಾವಿರ ಸಾವಯವ ಕೃಷಿಕರ ಸೃಷ್ಟಿ 
‘ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮುಂದಿನ ಎಂಟು ವರ್ಷಗಳಲ್ಲಿ 5ಸಾವಿರ ಸಾವಯವ ಕೃಷಿಕರನ್ನು ಸೃಷ್ಟಿಸಲು ಪಣ ತೊಡಲಾಗಿದೆ’ ಎಂದು ವಿಕಾಸ ಅಕಾಡೆಮಿ ಅಧ್ಯಕ್ಷ, ಸಂಸದ ಬಸವರಾಜ ಪಾಟೀಲ ಸೇಡಂ ಹೇಳಿದರು.

‘100 ಗೋಸಂವರ್ಧನ ಕೇಂದ್ರಗಳನ್ನು ಆರಂಭಿಸಿ, ದೇಸಿ ಹಸುಗಳ ಸಂಖ್ಯೆಯನ್ನು ಒಂದು ಲಕ್ಷಕ್ಕೆ ಹೆಚ್ಚಿಸುವುದು, ಒಂದು ಕೋಟಿ ಗಿಡ ನೆಡುವುದು ಮತ್ತು ಐದು ಲಕ್ಷ ಉದ್ಯೋಗ ಸೃಷ್ಟಿಸುವುದು ನಮ್ಮ ಗುರಿಯಾಗಿದೆ’ ಎಂದು ತಿಳಿಸಿದರು.

* * 

ರೈತರು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕೈಬಿಡಬೇಕು. ಮಕ್ಕಳಿಗೆ ಸತ್ತ ಭೂಮಿಯನ್ನು ಕೊಡುವ ಬದಲು ಸತ್ವಯುತ ಭೂಮಿಯನ್ನು ಕೊಡಬೇಕು.
ಬಸವರಾಜ ಪಾಟೀಲ ಸೇಡಂ
ಅಧ್ಯಕ್ಷ, ವಿಕಾಸ ಅಕಾಡೆಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT