ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕನ ಸೋಗಿನಲ್ಲಿ ಬಂದು ವಸತಿಗೃಹಗಳ ಟಿ.ವಿ ಕದಿಯುತ್ತಿದ್ದ!

ಹದಿನೈದು ದಿನಗಳ ಹಿಂದೆ ನಗರಕ್ಕೆ ಬಂದಿದ್ದ ವ್ಯಕ್ತಿ ಬಂಧನ
Last Updated 20 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ವಸತಿಗೃಹಗಳಲ್ಲಿ ಉಳಿದುಕೊಂಡು ಟಿ.ವಿ.ಗಳನ್ನು ಕದಿಯುತ್ತಿದ್ದ ವಾಸುದೇವ (34) ಎಂಬಾತನನ್ನು ಸಂಜಯನಗರ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಮಡಿಕೇರಿಯ ಚೇರಂಬಾಣೆಯ ಆತನಿಂದ ₹3.50 ಲಕ್ಷ ಮೌಲ್ಯದ 21 ಎಲ್‌.ಇ.ಡಿ ಟಿ.ವಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. 15 ದಿನಗಳ ಹಿಂದೆ ನಗರಕ್ಕೆ ಬಂದಿದ್ದ ಆತ, ಪೀಣ್ಯದಲ್ಲಿ ವಾಸವಿದ್ದು ಈ ಕೃತ್ಯ ಎಸಗುತ್ತಿದ್ದ.

‘ನಕಲಿ ಚುನಾವಣಾ ಗುರುತಿನ ಚೀಟಿಗಳನ್ನು ಸೃಷ್ಟಿಸಿದ್ದ ಆರೋಪಿ, ಅವುಗಳನ್ನು ವಸತಿಗೃಹಗಳ ಸಿಬ್ಬಂದಿಗೆ ನೀಡಿ ಕೊಠಡಿ ಪಡೆಯುತ್ತಿದ್ದ. ಒಂದು ದಿನ ಕೊಠಡಿಯಲ್ಲಿ ಉಳಿದುಕೊಂಡು ಮರುದಿನವೇ ಬ್ಯಾಗ್‌ನಲ್ಲಿ ಟಿ.ವಿ ಇಟ್ಟುಕೊಂಡು ವಸತಿಗೃಹದಿಂದ ಹೊರಟುಹೋಗುತ್ತಿದ್ದ. ಸಿಬ್ಬಂದಿಯು ಕೊಠಡಿ ಸ್ವಚ್ಛಗೊಳಿಸಲು ಹೋದಾಗ ಟಿ.ವಿ ಕಳುವಾಗಿದ್ದು ಗೊತ್ತಾಗುತ್ತಿತ್ತು’ ಎಂದು ಸಂಜಯನಗರ ಪೊಲೀಸರು ತಿಳಿಸಿದರು.

‘ಇತ್ತೀಚೆಗೆ ಗಿರಿನಗರ ಹಾಗೂ ಸಂಜಯನಗರದ ಎರಡು ವಸತಿಗೃಹಗಳ ಟಿ.ವಿಗಳನ್ನು ಆತ ಕದ್ದಿದ್ದ. ಅವುಗಳನ್ನು ನಗರದ ನಿವಾಸಿಯೊಬ್ಬರಿಗೆ ಮಾರಾಟ ಮಾಡಿದ್ದ. ಆ ನಿವಾಸಿಯು ನೀಡಿದ ಮಾಹಿತಿಯಂತೆ ಆರೋಪಿಯನ್ನು ಬಂಧಿಸಿದೆವು’ ಎಂದರು.

ತಮಿಳುನಾಡಿನಲ್ಲಿ 50 ಟಿ.ವಿ ಕದ್ದಿದ್ದ: ತಮಿಳುನಾಡಿನಲ್ಲಿ ಕೆಲ ತಿಂಗಳು ವಾಸವಿದ್ದ ಆರೋಪಿ, ಅಲ್ಲಿಯ ವಸತಿಗೃಹಗಳಲ್ಲಿ 50 ಟಿ.ವಿಗಳನ್ನು ಕದ್ದಿದ್ದ. ವಸತಿ
ಗೃಹದ ಮಾಲೀಕರೊಬ್ಬರು ನೀಡಿದ್ದ ದೂರಿನನ್ವಯ ಅಲ್ಲಿಯ ಪೊಲೀಸರು ಆರೋಪಿಯನ್ನು ಬಂಧಿಸಿ ಟಿ.ವಿಗಳನ್ನು ಜಪ್ತಿ ಮಾಡಿದ್ದರು.

‘ಶಿವಮೊಗ್ಗ ಜಿಲ್ಲೆಯ ದೊಡ್ಡಪೇಟೆ ಠಾಣೆ ಹಾಗೂ ಭದ್ರಾವತಿಯ ಜಯನಗರ ಠಾಣೆ ವ್ಯಾಪ್ತಿಯಲ್ಲೂ ಆರೋಪಿ ಕೃತ್ಯ ಎಸಗಿದ್ದಾನೆ. ಇನ್ನೂ ಹಲವೆಡೆ ಆತನ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ’ ಎಂದರು.

ವಕೀಲರಿಗೆ ಹಣ ಕೊಡಲು ಕೃತ್ಯ: ‘ತಮಿಳುನಾಡಿನಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನನ್ನ ಪರ ವಾದ ಮಂಡಿಸಲು ವಕೀಲರಿಗೆ ಹಣ ಕೊಡಬೇಕಿತ್ತು. ಜತೆಗೆ ಮೈತುಂಬ ಸಾಲ ಮಾಡಿಕೊಂಡಿದ್ದೆ. ವಕೀಲರಿಗೆ ಹಣ ಕೊಟ್ಟು, ಸಾಲ ತೀರಿಸುವುದಕ್ಕಾಗಿ ಟಿ.ವಿಗಳನ್ನು ಕಳವು ಮಾಡುತ್ತಿದ್ದೆ’ ಎಂದು ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ.

‘ಮಂಜುನಾಥ್‌ ಎಂಬುವರ ಚುನಾವಣಾ ಗುರುತಿನ ಚೀಟಿಯನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡಿದ್ದೆ. ಅವರ ಭಾವಚಿತ್ರವನ್ನು ಕಿತ್ತು ನನ್ನ ಭಾವಚಿತ್ರವನ್ನು ಅಂಟಿಸಿ ನಕಲಿ ಚೀಟಿ ತಯಾರಿಸಿದ್ದೆ. ಅದನ್ನೇ ವಸತಿಗೃಹಗಳಿಗೆ ನೀಡುತ್ತಿದ್ದೆ’ ಎಂದು ಆತ ಪೊಲೀಸರಿಗೆ ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT