ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ಮಾದರಿಯಾದ ಕರ್ನಾಟಕ: ಸಿ.ಎಂ

Last Updated 21 ನವೆಂಬರ್ 2017, 6:04 IST
ಅಕ್ಷರ ಗಾತ್ರ

ನಾಗಮಂಗಲ: ‘ಕೃಷಿ ಭಾಗ್ಯ ಯೋಜನೆಯಡಿ 1.7 ಲಕ್ಷ ಕೃಷಿ ಹೊಂಡ ನಿರ್ಮಿಸಲಾಗಿದೆ. ಕೃಷಿ ಮಾರುಕಟ್ಟೆಯಲ್ಲಿ ಆನ್‌ಲೈನ್‌ ವಹಿವಾಟು ಆರಂಭಿಸಲಾಗಿದೆ. ಈ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿದ್ದು ಇತರ ರಾಜ್ಯಗಳು ಅಳವಡಿಸಿಕೊಳ್ಳಲು ಮುಂದೆ ಬಂದಿವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಳ್ಳೂರಿನ ಎ.ಎಲ್‌.ಕೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ಬಹುಗ್ರಾಮ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ರಾಜ್ಯದ ಶೇ 90ರಷ್ಟು ಜನರಿಗೆ ಸರ್ಕಾರದ ಯೋಜನೆಗಳು ತಲುಪಿವೆ. ಎಲ್ಲ ವರ್ಗದ, ಸಮಾಜದ ಜನರಿಗೂ ಯೋಜನೆ ಲಾಭ ತಲುಪಿಸಲಾಗಿದೆ. ಆದರೆ ವಿರೋಧ ಪಕ್ಷಗಳು ಅಹಿಂದ ವರ್ಗಕ್ಕೆ ಮಾತ್ರ ಯೋಜನೆ ರೂಪಿಸಲಾಗಿದೆ ಎಂದು ಆರೋಪಿಸುತ್ತಾರೆ. ಯಡಿಯೂರಪ್ಪ ಅಧಿಕಾರದಲ್ಲಿ ದ್ದಾಗಲೂ  ಏನನ್ನೂ ಮಾಡಲಿಲ್ಲ. ಮುಂದೆಯೂ ಅವರು ಅಧಿಕಾರಕ್ಕೆ ಬರುವುದಿಲ್ಲ. ರಾಜ್ಯ ಸರ್ಕಾರ ಸರ್ವ ಜನಾಂಗಕ್ಕೂ ಸಾಮಾಜಿಕ ನ್ಯಾಯ ಕಲ್ಪಿಸಿದೆ. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ’ ಎಂದು ಹೇಳಿದರು.

‘ನಾನು 40 ವರ್ಷದಿಂದ ರಾಜಕಾರಣದಲ್ಲಿ ಇದ್ದೇನೆ. 5 ಮಂದಿ ಮುಖ್ಯಮಂತ್ರಿ, 3 ಮಂದಿ ಹಣಕಾಸು ಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ಹಣಕಾಸು ಮಂತ್ರಿಯಾಗಿ 12 ಬಜೆಟ್‌ ಮಂಡಿಸಿದ್ದೇನೆ. ಫೆಬ್ರುವರಿಯಲ್ಲಿ 13ನೇ ಬಜೆಟ್‌ ಮಂಡಿಸುತ್ತೇನೆ. ಯಾರ ಕಾಲದಲ್ಲಿ ಏನೇನು ಅಭಿವೃದ್ಧಿ ಕಾರ್ಯಕ್ರಮಗಳು ಆಗಿವೆ ಎಂಬುದು ನನಗೆ ಗೊತ್ತಿದೆ. ಹಿಂದಿನ ಸರ್ಕಾರ ನೀರಾವರಿ ಯೋಜನೆಗಳಿಗೆ ₹ 18 ಸಾವಿರ ಕೋಟಿ ನೀಡಿತ್ತು. ನಮ್ಮ ಸರ್ಕಾರ ಈಗಾಗಲೇ ₹ 45 ಸಾವಿರ ಕೋಟಿ ನೀಡದೆ’ ಎಂದು ಹೇಳಿದರು.

‘ಹಸಿರು ಶಾಲು ಹೊದ್ದುಕೊಂಡವ ರೆಲ್ಲ ರೈತನ ಮಕ್ಕಳು ಎನ್ನುವುದಾದರೆ, ನಾವ್ಯಾರು? ಕಾನೂನು ಪದವಿಗೆ ಸೇರುವವರೆಗೂ ನಾನು ಹೊಲ ಉಳುತ್ತಿದ್ದೆ. ಯಡಿಯೂರಪ್ಪ ಹಸಿರು ಶಾಲು ಹೊದ್ದುಕೊಂಡು ರಾಜಕೀಯ ಮಾಡುತ್ತಾರೆ. ಆದರೆ ರೈತರಿಗೆ ಅವರು ಏನನ್ನೂ ಕೊಟ್ಟಿಲ್ಲ. ನಮ್ಮ ಸರ್ಕಾರ 23.28 ಲಕ್ಷ ಕುಟುಂಬಗಳ ₹ 8,165 ಕೋಟಿ ಸಾಲ ಮನ್ನಾ ಮಾಡಿದೆ. ನಮ್ಮ ಸರ್ಕಾರದಲ್ಲಿ ಬಿತ್ತನೆ ಬೀಜ, ಗೊಬ್ಬರ ಸಿಗಲಿಲ್ಲ ಎಂಬ ಕೊರಗು ಇಲ್ಲ. ಆದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ದ್ದಾಗ ಹಾವೇರಿಯಲ್ಲಿ ಬಿತ್ತನೆ ಬೀಜ ಕೇಳಿದ ರೈತರ ಮೇಲೆ ಗೋಲಿಬಾರ್‌ ಮಾಡಲಾಯಿತು’ ಎಂದು ಆರೋಪಿಸಿದರು.

ನೈತಿಕತೆ ಇದೆ: ‘ನಮ್ಮ ಸರ್ಕಾರ ನಾಲ್ಕೂ ವರೆ ವರ್ಷಗಳಿಂದ ಹಗರಣಮುಕ್ತ ಆಡಳಿತ ನೀಡಿದೆ. ಸಾಧನೆಗಳನ್ನು ಹೇಳಿಕೊಳ್ಳಲು ನಮಗೆ ನೈತಿಕತೆ ಇದೆ. ಆದರೆ ಸರ್ಕಾರವನ್ನು ಟೀಕಿಸುವವರಿಗೆ ನೈತಿಕತೆ ಇಲ್ಲ. ರಾಜ್ಯದಲ್ಲಿ 1.8 ಕೋಟಿ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌ ವಿತರಣೆ ಮಾಡಲಾಗಿದ್ದು 4 ಕೋಟಿ ಜನರು 7 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಹಸಿವು ಮುಕ್ತ, ಗುಡಿಸಲು ಮುಕ್ತ, ಅಪೌಷ್ಟಿಕ ಮುಕ್ತ ರಾಜ್ಯ ನಿರ್ಮಿಸಲಾಗಿದೆ. ಮೊದಲು ಇದ್ದ ಸರ್ಕಾರ ಇದೆಲ್ಲವನ್ನು ಮಾಡಿತ್ತಾ’ ಎಂದು ಪ್ರಶ್ನಿಸಿದರು.

‘ಪರಿಶಿಷ್ಟ ಜಾತಿ ಉಪಯೋಜನೆ/ಗಿರಿಜನ ಉಪಯೋಜನೆಯಡಿ (ಎಸ್‌ಸಿಪಿಟಿಎಸ್‌ಪಿ) ಪರಿಶಿಷ್ಟ ಜಾತಿ, ಪಂಗಡಗಳ ಜನರಿಗೆ ವಿವಿಧ ಸೌಲಭ್ಯ ನೀಡಲಾಗಿದೆ. ದಲಿತರ ಪ್ರಗತಿಗಾಗಿ ಇಂತಹ ಯೋಜನೆ ರೂಪಿಸಿರುವುದು ಕಾಂಗ್ರೆಸ್‌ ಸರ್ಕಾರ ಮಾತ್ರ. ಇದಕ್ಕೆ ಕಾನೂನು ರೂಪ ನೀಡಿದ್ದೇವೆ. ಅಧಿಕಾರ ಇದ್ದವರು ಬಡವರ ಪರವಾಗಿ ಕೆಲಸ ಮಾಡಬೇಕು. ಆಗ ಮಾತ್ರ ಅಧಿಕಾರಕ್ಕೆ ಮಾನ್ಯತೆ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ, ಶಾಸಕರಾದ ಎನ್‌.ಚಲುವರಾಯಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ, ಜಮೀರ್‌ ಅಹಮದ್‌ ಖಾನ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಬಿ.ಎಸ್‌.ಶಿವಣ್ಣ, ಮಾಜಿ ಶಾಸಕರಾದ ಬಿ.ರಾಮಕೃಷ್ಣ, ಕಲ್ಪನಾ ಸಿದ್ದರಾಜು, ಕೆ.ಬಿ.ಚಂದ್ರಶೇಖರ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎನ್‌.ನವೀನ್‌ ಕುಮಾರ್‌ ಹಾಜರಿದ್ದರು.

ಮುಖ್ಯಮಂತ್ರಿಯನ್ನು ಹೊಗಳಿದ ಸ್ವಾಮೀಜಿ 
ಆಶೀರ್ವಚನ ನೀಡಿದ ಆದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸರ್ಕಾರದ ವತಿಯಿಂದಲೇ ಆಚರಿಸುವ ಆದೇಶ ಹೊರಡಿಸಿದ್ದಾರೆ. ಕೆಂಪೇಗೌಡ ಅಧ್ಯಯನ ಪೀಠ, ಪ್ರಾಧಿಕಾರ ರಚಿಸಿದ್ದಾರೆ’ ಎಂದು ಮುಖ್ಯಮಂತ್ರಿಯನ್ನು ಹೊಗಳಿದರು. ‘ಜಿಲ್ಲೆಯ ಮಹಾನ್‌ ಮಾನವತಾವಾದಿಗಳ ಕುರಿತ ಮಾಹಿತಿಯನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸುವ ಕಾರ್ಯವಾಗಬೇಕು’ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT