ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿ ಪರಿಹಾರಕ್ಕೆ ಹಮಾಲಿಗಳ ಒತ್ತಾಯ

Last Updated 22 ನವೆಂಬರ್ 2017, 6:27 IST
ಅಕ್ಷರ ಗಾತ್ರ

ಬೆಳಗಾವಿ: ನಿವೃತ್ತಿ ಪರಿಹಾರ, ಪಿಂಚಣಿ, ಸಮವಸ್ತ್ರ ಹಾಗೂ ಮಕ್ಕಳ ಶಿಕ್ಷಣಕ್ಕೆ ಸಹಾಯಧನ ನೀಡಬೇಕು ಎಂದು ಆಗ್ರಹಿಸಿ ಎಪಿಎಂಸಿ ಹಮಾಲಿ ಕಾರ್ಮಿಕರು ಸುವರ್ಣ ವಿಧಾನಸೌಧದ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಸಿಐಟಿಯು, ರಾಜ್ಯ ಹಮಾಲಿ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟಿಸಿದ ಅವರು, ‘ರಾಜ್ಯದ 155 ಮುಖ್ಯ ಮಾರುಕಟ್ಟೆ ಹಾಗೂ 383 ಉಪಮಾರುಕಟ್ಟೆಗಳಲ್ಲಿ ಲಕ್ಷಕ್ಕಿಂತ ಹೆಚ್ಚಿನವರು ಹಮಾಲಿ ಕಾರ್ಮಿಕ ರಾಗಿ ಕೆಲಸ ಮಾಡುತ್ತಿದ್ದೇವೆ. ಅಸಂಘಟಿತ ರಾದ ನಮ್ಮ ಬಗ್ಗೆ ಸರ್ಕಾರ ಕಾಳಜಿ ತೋರದಿರುವುದು ದುರಂತ’ ಎಂದು ತಿಳಿಸಿದರು.

‘ರಾಜ್ಯ ಕೃಷಿ ಮಾರಾಟ ಮಂಡಳಿ ಯಿಂದ ಜಾರಿಯಾಗಿರುವ ಕಾಯಕನಿಧಿ ಯೋಜನೆಯಡಿ ₹ 1 ಲಕ್ಷವರೆಗೆ ವೈದ್ಯಕೀಯ ವೆಚ್ಚದ ಮರುಪಾವತಿ ಹಾಗೂ ಶವಸಂಸ್ಕಾರ ಪರಿಹಾರವಾಗಿ ₹ 10ಸಾವಿರ ಘೋಷಿಸಲಾಗಿದೆ. ಆದರೆ, ಮಾರ್ಗಸೂಚಿಯಲ್ಲಿರುವ ತಾಂತ್ರಿಕ ತೊಂದರೆಗಳಿಂದಾಗಿ ವೈದ್ಯಕೀಯ ವೆಚ್ಚದ ಮರುಪಾವತಿ ಸೌಲಭ್ಯ ಪಡೆದು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ತಿದ್ದುಪಡಿ ಮಾಡಬೇಕು’ ಎಂದು ಆಗ್ರಹಿಸಿದರು.

‘ಎಲ್ಲ ಹಮಾಲಿ ಕಾರ್ಮಿಕರಿಗೂ ಪರವಾನಗಿ, ಗುರುತಿನ ಚೀಟಿ ನೀಡ ಬೇಕು. ಪ್ರತಿ ಎರಡು ವರ್ಷಕ್ಕೊಮ್ಮೆ ಕೂಲಿ ಪರಿಷ್ಕರಿಸಬೇಕು. ಸಾಮಾಜಿಕ ಭದ್ರತೆ ನೀಡಬೇಕು. ಎಲ್ಲ ಎಪಿಎಂಸಿ ಗಳಲ್ಲಿ ಇಂದಿರಾ ಕ್ಯಾಂಟೀನ್‌ ತೆರೆದು ಕಾರ್ಮಿಕರಿಗೆ ಉಚಿತವಾಗಿ ಊಟ, ಉಪಾಹಾರ ದೊರೆಯುವಂತೆ ಮಾಡ ಬೇಕು. ಮಹಿಳಾ ಕಾರ್ಮಿಕರಿಗೆ ಅಗತ್ಯ ವಾದ ಸೌಲಭ್ಯ ಕಲ್ಪಿಸಬೇಕು. ಉಚಿತ ವಾಗಿ ಮನೆ ಕಟ್ಟಿಸಿಕೊಡಬೇಕು’ ಎಂದು ಒತ್ತಾಯಿಸಿದರು.

‘ಮರಣ ಹೊಂದಿದವರ ಕುಟುಂಬಕ್ಕೆ ನೀಡುವ ಪರಿಹಾರವನ್ನು ತ್ವರಿತವಾಗಿ ಕೊಡಬೇಕು. ವಿದ್ಯಾರ್ಥಿವೇತನ ಸಕಾಲಕ್ಕೆ ದೊರೆಯಬೇಕು. ಬಜೆಟ್‌ನಲ್ಲಿ ಘೋಷಿಸಿರುವ ಸ್ಮಾರ್ಟ್‌ಕಾರ್ಡ್‌, ಅಪಘಾತ ವಿಮೆ ಹಾಗೂ ಭವಿಷ್ಯನಿಧಿ ಯೋಜನೆಯನ್ನು ಈ ಸಾಲಿನಿಂದಲೇ ಜಾರಿಗೊಳಿಸಬೇಕು. ಸರ್ಕಾರ ಭರವಸೆ ನೀಡಿದಂತೆ ಕರ್ನಾಟಕ ಕಾರ್ಮಿಕ ಸಮ್ಮೇಳನ ನಡೆಸಬೇಕು. ನಗರ ಪ್ರದೇಶದ ಕಾರ್ಮಿಕರಿಗೂ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಬೇಕು’ ಎಂದು ಹಕ್ಕೊತ್ತಾಯ ಮಂಡಿಸಿದರು.\ ಅಧ್ಯಕ್ಷ ಕೆ. ಮಹಾಂತೇಶ ಹಾಗೂ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ನೇತೃತ್ವ ವಹಿಸಿದ್ದರು.

ಪ್ರತ್ಯೇಕ ನಿಗಮ ಸ್ಥಾಪಿಸಿ: ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಹಡಪದ ಸಮಾಜ ಸೇವಾ ಹಾಗೂ ಯುವಕ ಸಂಘದ ನೇತೃತ್ವದಲ್ಲಿ ಸಮಾಜದವರು ಮಂಗಳವಾರ ಪ್ರತಿಭಟನೆ ನಡೆಸಿದರು.

ಶರಣ ಹಡಪದ ಅಪ್ಪಣ್ಣ ಹಾಗೂ ಶರಣೆ ನೀಲಮ್ಮ ತಾಯಿ ಅವರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಬೇಕು. ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಸಮಾಜ ಯಾವ ಸ್ಥಿತಿಯಲ್ಲಿದೆ ಎನ್ನುವುದನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸಿ, ಮುಖ್ಯವಾಹಿನಿಗೆ ತರಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಯುವಕ ಸಂಘದ ರಾಜ್ಯಾಧ್ಯಕ್ಷ ನಾಗರಾಜ ಸರ್ಜಾಪುರ ನೇತೃತ್ವ ವಹಿಸಿದ್ದರು.

ಮೀಸಲಾತಿ ಹೆಚ್ಚಿಸಲು ಒತ್ತಾಯ: ಪರಿಶಿಷ್ಟ ಪಂಗಡದವರಿಗೆ ನೀಡುತ್ತಿರುವ ಮೀಸಲಾತಿ ‍ಪ್ರಮಾಣವನ್ನು ಶೇ 3ರ ಬದಲಿಗೆ ಶೇ 7.5ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಕಲಿ ಜಾತಿ ಪ್ರಮಾಣಪತ್ರಗಳ ಹಾವಳಿ ತಡೆಗಟ್ಟಬೇಕು. ಸಮಾಜದವರ ಅಭಿವೃದ್ಧಿಗಾಗಿ ಪ್ರತ್ಯೇಕ ಬುಡಕಟ್ಟು ಸಚಿವಾಲಯ ಸ್ಥಾಪಿಸಬೇಕು. ಯಾವುದಾದರೂ ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಡಬೇಕು. ಬುಡಕಟ್ಟು ಸಂಸ್ಕೃತಿ ಹೊಂದಿಲ್ಲದ ಹಾಗೂ ಬಲಿಷ್ಟ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸ ಬಾರದು. ಪರಿವಾರ, ರಾಜಪರಿವಾರ ಜಾತಿಯನ್ನು ಪ.ಪಂಗಡಕ್ಕೆ ಸೇರಿಸಬೇಕು’ ಎಂದು ಒತ್ತಾಯಿಸಿದರು. ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ದಡ್ಡಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT