ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಹಕ್ಕು ಹೋರಾಟದ ಹರಿಕಾರ್ತಿಗೆ ‘ಡೂಡಲ್‌’ ಗೌರವ

Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮುಂಬೈ: ಸ್ವಾತಂತ್ರ್ಯಪೂರ್ವದ ಭಾರತದಲ್ಲಿ ವೈದ್ಯ ವೃತ್ತಿ ನಡೆಸಿದ ಮೊದಲಿಗ ಮಹಿಳೆಯರಲ್ಲಿ ಒಬ್ಬರು ಮತ್ತು ಮಹಿಳಾ ಹಕ್ಕುಗಳ ಚಳವಳಿಯ ಹರಿಕಾರರೂ ಆದ ರುಕ್ಮಾಬಾಯಿ ಅವರ 153ನೇ ಜನ್ಮದಿನದಂದು ಡೂಡಲ್‌ ಮೂಲಕ ಅವರಿಗೆ ಗೂಗಲ್‌ ಗೌರವ ಸಲ್ಲಿಸಿದೆ.

ಮಹಿಳೆಯರ ಹಕ್ಕುಗಳ ಬಗ್ಗೆ ಭಾರತದಲ್ಲಿ ಜಾಗೃತಿಯೇ ಇಲ್ಲದ ದಿನಗಳಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ರುಕ್ಮಾಬಾಯಿ ಅವರು ನಡೆಸಿದ ಹೋರಾಟ ಇಂದಿಗೂ ಒಂದು ಅಚ್ಚರಿಯಂತೆ ಕಾಣಿಸುತ್ತದೆ. ಮಹಿಳೆಯರ ಹಕ್ಕುಗಳ ಬಗೆಗಿನ ಚರ್ಚೆ ಮತ್ತು ಸಂವಾದದಲ್ಲಿ ‘ಸಮ್ಮತಿ’ ಎಂಬ ಪದದ ಬಳಕೆಯನ್ನು ಆರಂಭಿಸಿರುವುದರ ಕೀರ್ತಿಯೂ ರುಕ್ಮಾಬಾಯಿ ಅವರಿಗೆ ಸಲ್ಲುತ್ತದೆ. ಮಹಿಳಾ ಹಕ್ಕುಗಳ ಚರ್ಚೆಯಲ್ಲಿ ‘ಸಮ್ಮತಿ’ ಪದ ಜಗತ್ತಿನಾದ್ಯಂತ ಇಂದಿಗೂ ಬಳಕೆಯಾಗುತ್ತಿದೆ.

1864ರ ನವೆಂಬರ್‌ 22ರಂದು ರುಕ್ಮಾಬಾಯಿ ಬಾಂಬೆಯಲ್ಲಿ (ಈಗಿನ ಮುಂಬೈ) ಹುಟ್ಟಿದರು. ಬಾಲ್ಯ ವಿವಾಹ ವ್ಯಾಪಕವಾಗಿದ್ದ ಆ ದಿನಗಳಲ್ಲಿ ರುಕ್ಮಾಬಾಯಿ ಅವರ ಮದುವೆ ಅವರ 11ನೇ ವಯಸ್ಸಿನಲ್ಲಿ ದಾದಾಜಿ ಭಿಕಜಿ ಅವರೊಂದಿಗೆ ನಡೆಯಿತು. ದಾದಾಜಿ ಅವರಿಗೆ ಆಗ 19 ವರ್ಷ ತುಂಬಿತ್ತು.

ರುಕ್ಮಾಬಾಯಿ ಅವರ ತಾಯಿಯ ಮದುವೆಯೂ ಬಾಲ್ಯದಲ್ಲಿಯೇ ಆಗಿತ್ತು. 14ಕ್ಕೆ ಮದುವೆಯಾಗಿದ್ದ ಅವರಿಗೆ 15ನೇ ವರ್ಷಕ್ಕೆ ರುಕ್ಮಾಬಾಯಿ ಹುಟ್ಟಿದ್ದರು. 17ಕ್ಕೆ ಅವರು ವಿಧವೆಯಾಗಿದ್ದರು. ಮದುವೆಯ ಬಳಿಕ ರುಕ್ಮಾಬಾಯಿ ಅವರು ಗಂಡನ ಮನೆಗೆ ಹೋಗಲಿಲ್ಲ. ತವರಿನಲ್ಲಿಯೇ ಉಳಿದ ಅವರನ್ನು ಮಲತಂದೆ ಓದುವಂತೆ ಹುರಿದುಂಬಿಸಿದರು. ಆದರೆ ರುಕ್ಮಾಬಾಯಿ ಓದುವುದು ಗಂಡನಿಗೆ ಇಷ್ಟವಿರಲಿಲ್ಲ. ಓದು ಬಿಡಲು ಮನಸಿಲ್ಲದ ರುಕ್ಮಾಬಾಯಿ ಗಂಡನನ್ನೇ ಬಿಡುವ ದಿಟ್ಟ ನಿರ್ಧಾರಕ್ಕೆ ಬಂದರು.

ರುಕ್ಮಾಬಾಯಿ

ಹೆಂಡತಿ ತಮ್ಮ ಜತೆಗೆ ಬಂದು ನೆಲೆಸಬೇಕು ಎಂದು ದಾದಾಜಿ ಅವರು 1884ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ದಾವೆ ಹೂಡಿದರು. ಈ ದಾವೆಯೇ ಮುಂದೆ 1891ರ ಸಮ್ಮತಿಯ ವಯಸ್ಸು ಕಾಯ್ದೆ ರೂಪುಗೊಳ್ಳಲು ಕಾರಣವಾಯಿತು. ‘ಗಂಡನ ಜತೆಗೆ ಹೋಗಬೇಕು ಇಲ್ಲವಾದರೆ ಜೈಲಿಗೆ ಹೋಗಬೇಕಾಗುತ್ತದೆ’ ಎಂದು ಹೈಕೋರ್ಟ್‌ ಹೇಳಿದರೂ ಗಂಡನ ಜತೆಗೆ ಹೋಗಲು ರುಕ್ಮಾಬಾಯಿ ಒಪ್ಪಲಿಲ್ಲ. ಮದುವೆಯ ಸಂದರ್ಭದಲ್ಲಿ ತಮಗೆ ‘ಒಪ್ಪಿಗೆ’ ನೀಡುವ ವಯಸ್ಸು ಆಗಿರಲಿಲ್ಲ. ಹಾಗಾಗಿ ಆ ಮದುವೆಯಲ್ಲಿ ಮುಂದುವರಿಯುವಂತೆ ತಮ್ಮನ್ನು ಬಲವಂತ ಮಾಡುವಂತಿಲ್ಲ ಎಂದು ರುಕ್ಮಾಬಾಯಿ ವಾದಿಸಿದರು. ಇಂತಹ ವಾದವನ್ನು ಅದುವರೆಗೆ ಯಾವ ನ್ಯಾಯಾಲಯವೂ ಕೇಳಿಯೇ ಇರಲಿಲ್ಲ. ಈ ವಾದ 1980ರ ದಶಕದಲ್ಲಿ ಮಾಧ್ಯಮದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಯಿತು.

ಈ ವಾದ ಸರಣಿ ಆಗಿನ ಪ್ರಮುಖ ಸಮಾಜ ಸುಧಾರಕರಾದ ರಮಾಬಾಯಿ ರಾನಡೆ ಮತ್ತು ಬೆಹರಾಮ್‌ಜಿ ಮಲಬಾರಿ ಅವರ ಗಮನಕ್ಕೂ ಬಂತು. ಕೊನೆಗೆ, ಹಣದ ಪರಿಹಾರ ಪಡೆದು ವಿವಾಹವನ್ನು ಕೊನೆಗೊಳಿಸಲು ದಾದಾಜಿ ಒಪ್ಪಿಕೊಂಡರು. ಇಲ್ಲದೇ ಹೋಗಿದ್ದರೆ ರುಕ್ಮಾಬಾಯಿ ಅವರು ಸೆರೆಮನೆಗೆ ಹೋಗಬೇಕಿತ್ತು. ಈ ದಾವೆ ಬಗೆಹರಿದ ಬಳಿಕ ರುಕ್ಮಾಬಾಯಿ ವೈದ್ಯ ವೃತ್ತಿ ಕಲಿಯಲು ನಿರ್ಧರಿಸಿದರು. 35 ವರ್ಷ ಯಶಸ್ವಿ ವೈದ್ಯರಾಗಿ ಕೆಲಸ ಮಾಡಿದರು. 

ಅವರು ವೈದ್ಯ ವೃತ್ತಿಗೆ ಸೀಮಿತರಾಗಲಿಲ್ಲ. ಬಾಲ್ಯ ವಿವಾಹ ಮತ್ತು ಪರ್ದಾ ಪದ್ಧತಿಯ ವಿರುದ್ಧ ನಿರಂತರವಾಗಿ ಬರೆಯುವ ಮೂಲಕ ಸಮಾಜ ಸುಧಾರಕರೂ ಆದರು. 1955ರ ಸೆಪ್ಟೆಂಬರ್‌ 25ರಂದು ತಮ್ಮ 91ನೇ ವಯಸ್ಸಿನಲ್ಲಿ ನಿಧನರಾಗುವ ತನಕ ಸಮಾಜ ಸುಧಾರಣೆಯಲ್ಲಿ ಸಕ್ರಿಯವಾಗಿಯೇ ತೊಡಗಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT