ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮೋಸ್–ಸುಖೋಯ್ ‘ವಿದ್ವಂಸಕ ಜೋಡಿ’ಯ ಪರೀಕ್ಷೆ ಯಶಸ್ವಿ

ವಿಶ್ವದ ವೇಗದ ಕ್ರೂಸ್ ಕ್ಷಿಪಣಿಯ ದಾಳಿ ಸಾಮರ್ಥ್ಯ ಹೆಚ್ಚಿಸಲಿರುವ ಸೂಪರ್‌ಸಾನಿಕ್ ಯುದ್ಧವಿಮಾನ
Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬ್ರಹ್ಮೋಸ್–ಎ ಸೂಪರ್‌ಸಾನಿಕ್ (ಶಬ್ದದ ವೇಗಕ್ಕಿಂತಲೂ ಹೆಚ್ಚಿನ ವೇಗ) ಕ್ರೂಸ್ ಕ್ಷಿಪಣಿಯನ್ನು ಸುಖೋಯ್‌ 30–ಎಂಕೆಐ ಯುದ್ಧವಿಮಾನದಿಂದ ಉಡಾವಣೆ ಮಾಡಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಯುದ್ಧವಿಮಾನದಿಂದ ಉಡಾವಣೆ ಮಾಡಿದ ಕೆಲವೇ ನಿಮಿಷಗಳಲ್ಲಿ ಬ್ರಹ್ಮೋಸ್–ಎ ಬಂಗಾಳ ಕೊಲ್ಲಿಯಲ್ಲಿ ಇದ್ದ ಗುರಿಯನ್ನು ಯಶಸ್ವಿಯಾಗಿ ಧ್ವಂಸ ಮಾಡಿದೆ.

3,700 ಕಿ.ಮೀ. ವೇಗ

ಬ್ರಹ್ಮೋಸ್ ವಿಶ್ವದ ಅತ್ಯಂತ ವೇಗದ ಕ್ರೂಸ್ ಕ್ಷಿಪಣಿ ಎನಿಸಿದೆ. ಇದನ್ನು ಸೂಪರ್‌ಸಾನಿಕ್ ಎಂದು ವರ್ಗೀಕರಿಸಲಾಗಿದೆ. ಇದು ಪ್ರತಿ ಗಂಟೆಗೆ 3,700 ಕಿ.ಮೀ ವೇಗದಲ್ಲಿ ಸಂಚರಿಸುತ್ತದೆ. ಒಂದು ಕಿ.ಮೀ. ಅಂತರವನ್ನು ಕ್ರಮಿಸಲು ಈ ಕೇವಲ ಒಂದು ಸೆಕೆಂಡ್ ತೆಗೆದುಕೊಳ್ಳುತ್ತದೆ. ಹೀಗಾಗಿ ವಿಶ್ವದ ಬಹುತೇಕ ಎಲ್ಲಾ ಕ್ಷಿಪಣಿ ನಿರೋಧಕ ವ್ಯವಸ್ಥೆಗಳೂ ಬ್ರಹ್ಮೋಸ್‌ ಅನ್ನು ಗುರುತಿಸಲು ವಿಫಲವಾಗುತ್ತವೆ. ಅಲ್ಲದೆ ಉಡಾವಣೆ ಮಾಡಿದ ನಂತರದ ಗರಿಷ್ಠ ಐದು ನಿಮಿಷಗಳ ಒಳಗೆ (ಗುರಿ 290 ಕಿ.ಮೀ ಆಚೆ ಇದ್ದರೆ) ಗುರಿಯನ್ನು ಧ್ವಂಸ ಮಾಡುತ್ತದೆ. ಇಷ್ಟು ಕಡಿಮೆ ಅವಧಿಯಲ್ಲಿ ಗುರಿಯು ರಕ್ಷಣಾತ್ಮಕ ತಂತ್ರ/ನಡೆ ಅನುಸರಿಸಲು ಅವಕಾಶ ಸಿಗುವುದಿಲ್ಲ

‘ಡೆಡ್ಲಿ ಕಾಂಬಿನೇಷನ್’

ಬ್ರಹ್ಮೋಸ್‌–ಸುಖೋಯ್ ಜೋಡಿಯನ್ನು ‘ಡೆಡ್ಲಿ ಕಾಂಬಿನೇಷನ್’ ಎಂದು ಕರೆಯಲಾಗಿದೆ. ಸುಖೋಯ್ 30 ಎಂಕೆಐ ಯುದ್ಧವಿಮಾನವೂ ಸೂಪರ್‌ಸಾನಿಕ್ ವರ್ಗಕ್ಕೆ ಸೇರುತ್ತದೆ. ಇದು ಪ್ರತಿಗಂಟೆಗೆ ಗರಿಷ್ಠ 2,100 ಕಿ.ಮೀ. ವೇಗದಲ್ಲಿ ಹಾರುತ್ತದೆ. ಸುಖೋಯ್‌ 2.5 ಟನ್ ತೂಗುವ ಬ್ರಹ್ಮೋಸ್‌ ಅನ್ನು ಅಷ್ಟು ವೇಗದಲ್ಲಿ ಗುರಿಗೆ ತೀರಾ ಹತ್ತಿರದವರೆಗೂ ಹೊತ್ತೊಯ್ಯುತ್ತದೆ. ಭಾರಿ ವೇಗದಲ್ಲಿ ಹಾರುತ್ತಿದ್ದಾಗಲೇ ಕ್ಷಿಪಣಿ ಉಡಾವಣೆ ಆಗುವುದರಿಂದ ಕ್ಷಿಪಣಿಯ ವೇಗವರ್ಧನೆ ಕ್ಷಿಪ್ರವಾಗಿರಲಿದೆ. ಭಾರತ ಮತ್ತು ಚೀನಾ ಗಡಿಗೆ ಸಮೀಪದಲ್ಲಿ (ಹ್ಲವಾರ ಮತ್ತು ಬರೇಲಿ) ಸುಖೋಯ್‌ 30 ಎಂಕೆಐನ ಸ್ಕ್ವಾಡ್ರನ್‌ಗಳಿರುವ ಎರಡು ವಾಯುನೆಲೆಗಳಿವೆ. ಎರಡೂ ದೇಶಗಳ ಪ್ರಮುಖ ನಗರಗಳ ಮೇಲೆ ಕ್ಷಿಪ್ರ ದಾಳಿ ಸಾಧ್ಯವಿರುವುದರಿಂದ ಇದನ್ನು ಡೆಡ್ಲಿ ಕಾಂಬಿನೇಷನ್ ಎಂದು ಕರೆಯಲಾಗಿದೆ. ಭಾರತದ ಬಳಿ ಇರುವ 240 ಸುಖೋಯ್‌ಗಳಲ್ಲಿ 42ನ್ನು ಈ ‘ಡೆಡ್ಲಿ ಕಾಂಬಿನೇಷನ್‌’ಗೆ ಬಳಸಿಕೊಳ್ಳಲಾಗುತ್ತದೆ.

ಬಹುದಾಳಿ ಕ್ಷಿಪಣಿ

ಭಾರತ–ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ಕ್ಷಿಪಣಿಯನ್ನು ಯುದ್ಧನೌಕೆ, ಜಲಂತರ್ಗಾಮಿ, ನೆಲ ಮತ್ತು ಯುದ್ಧವಿಮಾನಗಳಿಂದಲೂ ಗುರಿಯತ್ತ ಉಡಾವಣೆ ಮಾಡಬಹುದು. ಬುಧವಾರದ ಪರೀಕ್ಷೆ ವಾಯುಪಡೆಯ ದಾಳಿ ಸಾಮರ್ಥ್ಯ ಮತ್ತು ವ್ಯಾಪ್ತಿಯನ್ನು ಹಲವು ಪಟ್ಟು ಹೆಚ್ಚಿಸಲಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಅರ್‌ಡಿಒ) ಹೇಳಿದೆ. ಗಡಿ ಸಂಘರ್ಷ ಮತ್ತು ನಿರ್ದಿಷ್ಟ ದಾಳಿಗಳ ಸಂದರ್ಭದಲ್ಲಿ ಬ್ರಹ್ಮೋಸ್–ಸುಖೋಯ್ ಜೋಡಿ ಹೆಚ್ಚು ಉಪಯೋಗಕ್ಕೆ ಬರಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT