ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್‌ಫೈನಲ್‌ಗೆ ಸಿಂಧು

Last Updated 23 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಹಾಂಕಾಂಗ್‌: ಎರಡನೇ ಶ್ರೇಯಾಂಕದ ಭಾರತದ ಆಟಗಾರ್ತಿ ಪಿ.ವಿ ಸಿಂಧು ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗುರುವಾರ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಸಿಂಧು 21–14, 21–17ರಲ್ಲಿ ನೇರ ಗೇಮ್‌ಗಳಿಂದ ಜಪಾನ್‌ನ ಅಯಾ ಓಹರಿ ಅವರನ್ನು ಮಣಿಸಿದರು.

39 ನಿಮಿಷಗಳವರೆಗೆ ನಡೆದ ಪೈಪೋಟಿಯಲ್ಲಿ ಸಿಂಧು ಪ್ರಾಬಲ್ಯ ಮೆರೆದರು. ಸುಲಭದಲ್ಲಿ ಎರಡೂ ಗೇಮ್‌ಗಳನ್ನು ತಮ್ಮದಾಗಿಸಿಕೊಂಡರು. ಎರಡನೇ ಗೇಮ್‌ನಲ್ಲಿ ಜಪಾನ್‌ನ ಆಟಗಾರ್ತಿ ಅಲ್ಪ ಪ್ರತಿರೋಧ ಒಡ್ಡಿದರು. ಆದರೆ ಅಮೋಘ ಸ್ಮ್ಯಾಷ್ ಮತ್ತು ರಿಟರ್ನ್ಸ್‌ಗಳಿಂದ ಸಿಂಧು ಗಮನಸೆಳೆದರು.

ಅಂತಿಮ ಹಂತದಲ್ಲಿ ಚುರುಕಿನಿಂದ ಆಡಿದ ಭಾರತದ ಆಟಗಾರ್ತಿ ಎದುರಾಳಿಗೆ ಕಠಿಣ ಸವಾಲುಗಳನ್ನು ಒಡ್ಡುವ ಮೂಲಕ ಜಯ ಒಲಿಸಿಕೊಂಡರು. ಮುಂದಿನ ಪಂದ್ಯದಲ್ಲಿ ಸಿಂಧು ಐದನೇ ಶ್ರೇಯಾಂಕದ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಆಡಲಿದ್ದಾರೆ.

ಸೈನಾ, ಪ್ರಣಯ್‌ಗೆ ಸೋಲು: ಭಾರತದ ಆಟಗಾರ್ತಿ ಸೈನಾ ನೆಹ್ವಾಲ್ ಎರಡನೇ ಸುತ್ತಿನ ಪಂದ್ಯದಲ್ಲಿ ಸೋತರು. ಎರಡನೇ ಸುತ್ತಿನ ಪಂದ್ಯದಲ್ಲಿ ಅವರು 21–18, 19–21, 10–21ರಲ್ಲಿ ಚೀನಾದ ಚೆನ್ ಯೂಫಿಗೆ ಮಣಿದರು. ಮೊದಲ ಗೇಮ್‌ ಗೆದ್ದುಕೊಂಡ ಸೈನಾ ನಂತರದ ಎರಡು ಗೇಮ್‌ಗಳಲ್ಲಿ ಎದುರಾಳಿಯ ಸವಾಲು ಮೀರುವಲ್ಲಿ ವಿಫಲರಾದರು.

ನಿರ್ಣಾಯಕ ಗೇಮ್‌ನಲ್ಲಿ ಭಾರತದ ಆಟಗಾರ್ತಿ ತಪ್ಪುಗಳಿಂದ ಪಾಯಿಂಟ್ಸ್ ಬಿಟ್ಟುಕೊಟ್ಟರು. ದೀರ್ಘ ರ‍್ಯಾಲಿಗಳ ವೇಳೆ ಅವರು ಚುರುಕಿನಿಂದ ಆಡಲಿಲ್ಲ.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಭರವಸೆ ಎನಿಸಿದ್ದ ಎಚ್‌.ಎಸ್‌ ಪ್ರಣಯ್‌ 21–11, 10–21, 15–21ರಲ್ಲಿ ಜಪಾನ್‌ನ ಕಜುಮಸಾ ಸಾಕೈ ಎದುರು ಸೋತಿದ್ದಾರೆ. 54 ನಿಮಿಷದ ಪೈಪೋಟಿಯಲ್ಲಿ ಭಾರತದ ಆಟಗಾರ ಕೊನೆಯ ಎರಡು ಗೇಮ್‌ಗಳನ್ನು ಸೋತರು.

ಪುರುಷರ ವಿಭಾಗದಲ್ಲಿ ಸ್ಪರ್ಧಿಸಿದ್ದ ಪರುಪಳ್ಳಿ ಕಶ್ಯಪ್ ಹಾಗೂ ಸೌರಭ್ ವರ್ಮಾ ಈಗಾಗಲೇ ಸೋತಿದ್ದಾರೆ. ಆದ್ದರಿಂದ ಈ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT