ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕ ನಿದ್ರೆಗೆ ಜಾರಿದರೆ ಎಚ್ಚರಿಸುವ ಸಾಧನ !

Last Updated 23 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಾಹನ ಚಾಲನೆ ಮಾಡುವಾಗ ಚಾಲಕ ನಿದ್ರೆಗೆ ಜಾರಿದರೆ ಈ ಉಪಕರಣ ‘ವೇಕ್ ಅಪ್‌ ವೇಕ್‌ ಅಪ್‌’ ಎಂದು ಧ್ವನಿ ಹೊರಡಿಸಿ ಎಚ್ಚರಿಸುತ್ತದೆ.

ಇದೇ ಸಾಧನವನ್ನು ಶಾಲಾ ಬಸ್‌ಗಳಿಗೆ ಅಳವಡಿಸಿದರೆ, ಮಕ್ಕಳು ಬಸ್‌ ಹತ್ತಿ ಮನೆ ಬಳಿ ಇಳಿದರೆ ಪೋಷಕರ ಮೊಬೈಲ್‌ಗೆ ಸಂದೇಶ ಬರುತ್ತದೆ. ಮಗು ಮನೆಗೆ ತಲುಪಿದ್ದು ಖಾತರಿ ಆಗುತ್ತದೆ. 

ಇಂತಹದ್ದೊಂದು ವಿಶಿಷ್ಟ ಸಾಧನವನ್ನು ಅಭಿವೃದ್ಧಿಪಡಿಸಿರುವವರು ಪಿಇಎಸ್ ಕಾಲೇಜಿನಲ್ಲಿ ಇದೇ ವರ್ಷ ಎಂಜಿನಿಯರಿಂಗ್ ಮುಗಿಸಿದ ಸಿ.ಅಕ್ಷಯ್ ಕುಮಾರ್, ಸಾಹಿಲ್ ಕಾಮತ್, ಅವಿರಲ್ ಜೋಶಿ ಮತ್ತು ಬಿ. ಪ್ರಕಾಶ್. ಈಗ ಇದರ ವಾಣಿಜ್ಯ ಉತ್ಪಾದನೆಗೆ ಬಂಡವಾಳದ ನಿರೀಕ್ಷೆಯಲ್ಲಿದ್ದಾರೆ.

ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಏರ್ಪಡಿಸಿರುವ  ಹೂಡಿಕೆದಾರರ ಶೃಂಗಸಭೆಯಲ್ಲಿ ಈ ಉಪಕರಣ ಗಮನಸೆಳೆದಿದೆ. ‘ವಿಸಿಯೊ ಎ ಐ’ ಎಂಬ ಸಂಸ್ಥೆ ಸ್ಥಾಪಿಸಿರುವ ಈ ತಂಡ, ತಾವು ಅಭಿವೃದ್ಧಿಪಡಿಸಿರುವ ಉಪಕರಣಕ್ಕೆ ಇನ್ನೂ ಹೆಸರು ಇಟ್ಟಿಲ್ಲ.

ಏನಿದು ಉಪಕರಣ?
ಯಾವುದೇ ವಾಹನದ ಸ್ಟಿಯರಿಂಗ್ ಮುಂಭಾಗ ಈ ಉಪಕರಣ ಅಳವಡಿಸಲಾಗುತ್ತದೆ. ಅದರಲ್ಲಿನ ಕ್ಯಾಮೆರಾ ಚಾಲಕನ ಮುಖವನ್ನು ನಿರಂತರವಾಗಿ ವಿಡಿಯೊ ಚಿತ್ರೀಕರಿಸುತ್ತದೆ. ಚಾಲಕ ನಿದ್ರೆಗೆ ಜಾರಿದರೆ ‘ವೇಕ್ ಅಪ್’ ಎಂದು ಕೂಗಿ ಎಚ್ಚರಿಸುತ್ತದೆ. ಹಲವಾರು ಟ್ಯಾಕ್ಸಿ ಮತ್ತು ಪ್ರವಾಸಿ ವಾಹನಗಳನ್ನು ಹೊಂದಿರುವ ಮಾಲೀಕರು ಡ್ಯಾಷ್‌ಬೋರ್ಡ್‌ ಮುಂದೆ ಕುಳಿತು ತಮ್ಮ ಎಲ್ಲ ವಾಹನಗಳ ಚಾಲಕರ ಮೇಲೆ ನಿಗಾ ವಹಿಸಬಹುದು.

‘ಈ ಉಪಕರಣಕ್ಕೆ ಪೂರಕವಾಗಿ ಆ್ಯಪ್ ಅಭಿವೃದ್ಧಿಪಡಿಸುತ್ತಿದ್ದೇವೆ. ಯಾವುದೇ ರಸ್ತೆಯಲ್ಲಿ ವಾಹನ ಚಾಲನೆ ಮಾಡುವಾಗ ಚಾಲಕ ನಿದ್ರೆಗೆ ಜಾರಿದರೆ ಎಚ್ಚರಿಸುವುದಷ್ಟೇ ಅಲ್ಲದೆ, ಸಮೀಪದಲ್ಲಿ ಹೋಟೆಲ್‌, ಶೌಚಾಲಯ ಎಲ್ಲಿವೆ ಎಂಬ ಮಾರ್ಗ ನಕ್ಷೆಯನ್ನೂ ತೋರಿಸುತ್ತದೆ’ ಎಂದು ಉಪಕರಣ ಅಭಿವೃದ್ಧಿಪಡಿಸಿದ ತಂಡದ ಪೈಕಿ ಒಬ್ಬರಾದ ಸಿ.ಅಕ್ಷಯ್ ಕುಮಾರ್ ಹೇಳಿದರು.

‘ಸದ್ಯ ನಾವು ಕಾರಿಗೆ ಅಳವಡಿಸಿ ಪ್ರಯೋಗ ನಡೆಸಿದ್ದೇವೆ. ಇದನ್ನು ಶಾಲಾ ಬಸ್‌ಗೂ ಅಳವಡಿಸಬಹುದು. ಬಾಗಿಲಿಗೆ ಈ ಕ್ಯಾಮೆರಾ ಅಳವಡಿಸಲಾಗುತ್ತದೆ. ಮಗು ಕ್ಯಾಮೆರಾಗೆ ಮುಖ ತೋರಿಸಿ ಬಸ್ ಹತ್ತಿದರೆ ಅವರ ಪೋಷಕರ ಮೊಬೈಲ್ ಸಂದೇಶ ರವಾನೆಯಾಗುತ್ತದೆ. ಮನೆ ಬಂದ ಬಳಿಕ ಮತ್ತೊಮ್ಮೆ ಕ್ಯಾಮೆರಾಗೆ ಮುಖ ತೋರಿಸಿ ಇಳಿದರೆ ಪೋಷಕರಿಗೆ ಮತ್ತೊಂದು ಸಂದೇಶ ರವಾನೆಯಾಗುತ್ತದ’ ಎಂದರು.

* ನಾಲ್ವರು ಯುವಕರಿಂದ ಉಪಕರಣ ಅಭಿವೃದ್ಧಿ
* ಪ್ರತಿ ಉಪಕರಣಕ್ಕೆ ₹ 15,000 ವೆಚ್ಚ
* ಬಂಡವಾಳದ ನಿರೀಕ್ಷೆಯಲ್ಲಿ ಯುವಕರ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT