ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್‌ ಸ್ಪೇಸ್‌: ದುಷ್ಟರಿಂದ ರಕ್ಷಣೆ ಅಗತ್ಯ

ಜಾಗತಿಕ ಸಮಾವೇಶದಲ್ಲಿ ಪ್ರಧಾನಿ ಮೋದಿ ಕಳವಳ
Last Updated 23 ನವೆಂಬರ್ 2017, 20:26 IST
ಅಕ್ಷರ ಗಾತ್ರ

ನವದೆಹಲಿ: ಭಯೋತ್ಪಾದನೆ ಮತ್ತು ತೀವ್ರಗಾಮಿತ್ವಗಳಂತಹ ಕರಾಳ ಶಕ್ತಿಗಳು ಡಿಜಿಟಲ್‌ ಸ್ಪೇಸ್‌ ಅನ್ನು ತಮ್ಮ ಆಟದ ಮೈದಾನವನ್ನಾಗಿ ಮಾಡಿಕೊಳ್ಳಲು ಬಿಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.

ನವದೆಹಲಿಯಲ್ಲಿ ನಡೆದ ಸೈಬರ್‌ ಸ್ಪೇಸ್‌ ಕುರಿತ ಜಾಗತಿಕ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ‘ಯಾವಾಗಲೂ ಬದಲಾಗುತ್ತಿರುವ ಬೆದರಿಕೆಯ ಚಿತ್ರಣವನ್ನು ಎದುರಿಸಲು ಭದ್ರತಾ ಸಂಸ್ಥೆಗಳ ನಡುವೆ ಮಾಹಿತಿ ಹಂಚಿಕೆ ಮತ್ತು ಸಮನ್ವಯ ಇರುವುದು ಅತ್ಯಂತ ಮುಖ್ಯ’ ಎಂದು ಹೇಳಿದರು.

‘ಮುಕ್ತ ಮತ್ತು ಎಲ್ಲರಿಗೂ ಸುಲಭವಾಗಿ ಲಭ್ಯವಾಗಿರುವ ಇಂಟರ್‌ನೆಟ್‌ನಿಂದಾಗಿ ಆಗಾಗ ಅಪಾಯಗಳು ಎದುರಾಗುತ್ತಿವೆ. ಹ್ಯಾಕ್‌ ಮಾಡುವುದು ಮತ್ತು ವೆಬ್‌ಸೈಟ್‌ಗಳನ್ನು ವಿರೂಪಗೊಳಿಸುವ ಸುದ್ದಿಗಳು ಮೇಲ್ನೋಟಕ್ಕೆ ಮಾತ್ರ ಕಾಣುತ್ತವೆ. ಆದರೆ, ಅದರ ಆಳ ತೀವ್ರವಾಗಿದೆ. ಪ್ರಜಾಸತ್ತಾತ್ಮಕ ಜಗತ್ತಿನಲ್ಲಿ ಸೈಬರ್‌ ದಾಳಿಗಳು ಪ್ರಮುಖ ಬೆದರಿಕೆ’ ಎಂದು ಮೋದಿ ಹೇಳಿದರು.

‘ಸೈಬರ್‌ ಅಪರಾಧಿಗಳ ಹೆಣೆಯುವ ಜಾಲಕ್ಕೆ ಸಮಾಜದ ವಿವಿಧ ವರ್ಗಗಳು ಬೀಳದಂತೆ ನಾವು ನೋಡಿಕೊಳ್ಳಬೇಕು. ಸೈಬರ್‌ ಭದ್ರತೆಗೆ ಸಂಬಂಧಿಸಿದಂತೆ ಎಚ್ಚರವಾಗಿರುವುದು ನಮ್ಮ ಜೀವನದ ಭಾಗವಾಗಿರಬೇಕು’ ಎಂದರು.

ಸರ್ಕಾರದ ಕ್ರಮ: ಭಯೋತ್ಪಾದಕರು ಮತ್ತು ತೀವ್ರಗಾಮಿ ಶಕ್ತಿಗಳು ಸೈಬರ್‌ ಸ್ಪೇಸ್‌ ಅನ್ನು ದುರ್ಬಳಕೆ ಮಾಡುವುದನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್‌ ಪ್ರಸಾದ್‌ ಹೇಳಿದರು.

ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ದ್ವೇಷ ಮತ್ತು ಭಯವನ್ನು ಹರಡಲು ಉಗ್ರರು ಮತ್ತು ತೀವ್ರಗಾಮಿ ಶಕ್ತಿಗಳು ಸಾಮಾಜಿಕ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಇದನ್ನು ತಡೆಯಲು ಜಗತ್ತು ಒಟ್ಟಾಗುವ ಅಗತ್ಯವಿದೆ’ ಎಂದರು.

‘ತಂತ್ರಜ್ಞಾನದ ಮೂಲಕ ಸಬ್ಸಿಡಿ: 65 ಸಾವಿರ ಕೋಟಿ ಉಳಿತಾಯ’
ಸರ್ಕಾರದ ಕಲ್ಯಾಣ ಯೋಜನೆಗಳಿಗೆ ನೀಡಲಾಗುವ ಸಬ್ಸಿಡಿಯನ್ನು ಬ್ಯಾಂಕ್‌ ಖಾತೆಗಳು, ಆಧಾರ್‌ ಆಧರಿತವಾಗಿ ತಂತ್ರಜ್ಞಾನದ ಮೂಲಕ ನೇರ ವರ್ಗಾವಣೆ ಮಾಡಿರುವುದರಿಂದ ಬೊಕ್ಕಸಕ್ಕೆ ₹65 ಸಾವಿರ ಕೋಟಿ ಉಳಿತಾಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ತಂತ್ರಜ್ಞಾನವು ಅಡೆತಡೆಗಳನ್ನು ಮುರಿದು ಸರ್ಕಾರದ ಸೇವೆ, ಆಡಳಿತವನ್ನು ಪರಿಣಾಮಕಾರಿಯಾಗುವಂತೆ ಮಾಡಿದೆ. ಜೊತೆಗೆ ಶಿಕ್ಷಣ ಮತ್ತು ಆರೋಗ್ಯದ ಲಭ್ಯತೆಯನ್ನು ಸುಧಾರಿಸಿದೆ.

ಮುಕ್ತ ಅಂತರ್ಜಾಲಕ್ಕೆ ರನಿಲ್‌ ಬೆಂಬಲ
ಮುಕ್ತ ಅಂತರ್ಜಾಲಕ್ಕೆ (ನೆಟ್‌ ನ್ಯೂಟ್ರಾಲಿಟಿ) ಬೆಂಬಲ ನೀಡಿರುವ ಶ್ರೀಲಂಕಾ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರು, ಎಲ್ಲರಿಗೂ ಸಮಾನ ಅವಕಾಶ ದೊರಕುವುದರಿಂದ ದಮನಕ್ಕೆ ಒಳಗಾದವರಿಗೂ ಧ್ವನಿ ದೊರೆಯುತ್ತದೆ ಎಂದಿದ್ದಾರೆ.

ಅಮೆರಿಕ ಸೇರಿ ಜಗತ್ತಿನ ವಿವಿಧ ಭಾಗಗಳಲ್ಲಿ ಮುಕ್ತ ಅಂತರ್ಜಾಲಕ್ಕೆ ಗಂಭೀರ ಸವಾಲು ಎದುರಾಗಿರುವುದರಿಂದ ಈ ತತ್ವ ಜಾರಿಯಾಗುವುದನ್ನು ಖಚಿತಪಡಿಸಿಕೊಳ್ಳುವ ಅಗತ್ಯ ಇದೆ ಎಂದು ಅವರು ಪ್ರತಿಪಾದಿಸಿದರು.

‘ಅಂತರ್ಜಾಲ ಸೇವಾದಾತರು ಸೇವೆಯ ವೇಗ ಹೆಚ್ಚಿಸುವುದು, ಕಡಿಮೆ ಮಾಡುವುದು ಅಥವಾ ಯಾವುದೇ ತಾಣಗಳನ್ನು ಸ್ಥಗಿತಗೊಳಿವುದನ್ನು ನಿಷೇಧಿಸುವುದೇ ಮುಕ್ತ ಅಂತರ್ಜಾಲದ ಮೂಲ ತತ್ವ. ಈ ತತ್ವದಲ್ಲಿಯೇ ಅಂತರ್ಜಾಲ ಹಿಂದಿನಿಂದಲೂ ಕೆಲಸ ಮಾಡುತ್ತಾ ಬಂದಿದೆ’ ಎಂದು ಅವರು ಹೇಳಿದ್ದಾರೆ.

ಇರಾನ್‌, ಡೆನ್ಮಾರ್ಕ್‌, ಮಾರಿಷಸ್‌ ಜತೆ ಸಹಭಾಗಿತ್ವ
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಕ್ಷೇತ್ರದಲ್ಲಿ ಭಾರತವು ಇರಾನ್‌, ಡೆನ್ಮಾರ್ಕ್‌ ಮಾರಿಷಸ್‌ ಜತೆ ಸಹಭಾಗಿತ್ವ ಹೊಂದಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇರಾನ್‌ ಜತೆಗೆ ಜಂಟಿ ಕಾರ್ಯಪಡೆಗೆ ಸಹಿ ಹಾಕಲಾಗಿದೆ. ಡೆನ್ಮಾರ್ಕ್‌ ಜತೆಗೆ ಇಂತಹ ಒಪ್ಪಂದಕ್ಕೆ ಶೀಘ್ರವೇ ಸಹಿ ಹಾಕಲಾಗುವುದು ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅಜಯ ಕುಮಾರ್‌ ಹೇಳಿದ್ದಾರೆ. ಜಾಗತಿಕ ಸೈಬರ್‌ ಸ್ಪೇಸ್‌ ಸಮಾವೇಶದ ಸಂದರ್ಭದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT