ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪದ್ಮಾವತಿ’ಗೆ ಬ್ರಿಟನ್‌ ಸೆನ್ಸಾರ್‌ ಮಂಡಳಿ ಸಮ್ಮತಿ

ಭಾರತದ ಸೆನ್ಸಾರ್‌ ಮಂಡಳಿ ಅನುಮತಿ ನೀಡುವವರೆಗೆ ಎಲ್ಲೂ ಚಿತ್ರ ಬಿಡುಗಡೆ ಇಲ್ಲ
Last Updated 23 ನವೆಂಬರ್ 2017, 20:15 IST
ಅಕ್ಷರ ಗಾತ್ರ

ಮುಂಬೈ/ಲಂಡನ್‌: ವಯಕಾಮ್‌18 ಮೋಷನ್‌ ಪಿಕ್ಚರ್ಸ್‌ ನಿರ್ಮಿಸಿರುವ, ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರಕ್ಕೆ ಬ್ರಿಟನ್ನಿನ ಚಲನಚಿತ್ರ ವರ್ಗೀಕರಣ ಮಂಡಳಿ (ಬಿಬಿಎಫ್‌ಸಿಯು) ‘12ಎ’ ಪ್ರಮಾಣ ಪತ್ರ ನೀಡಿದೆ.

ಚಿತ್ರದಲ್ಲಿ ಯಾವುದೇ ಬದಲಾವಣೆಗೂ ಅದು ಸೂಚಿಸಿಲ್ಲ. ಆದರೆ, ಭಾರತದ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅನುಮತಿ ನೀಡುವವರೆಗೂ ವಿದೇಶದಲ್ಲಿ ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂದು ಚಿತ್ರ ನಿರ್ಮಾಣ ಸಂಸ್ಥೆ ಹೇಳಿದೆ.

‘12ಎ’ ರೇಟಿಂಗ್‌ ನೀಡುವ ಮೂಲಕ ಬಿಬಿಎಫ್‌ಸಿಯು ಬ್ರಿಟನ್‌ ಜನರ ವೀಕ್ಷಣೆಗೆ ಚಿತ್ರವನ್ನು ಮುಕ್ತಗೊಳಿಸಿದೆ. ಈ ರೇಟಿಂಗ್‌ ಪ್ರಕಾರ, 12 ವರ್ಷದೊಳಗಿನ ಮಕ್ಕಳು ಒಬ್ಬರಾಗಿಯೇ ಚಿತ್ರ ವೀಕ್ಷಿಸುವಂತಿಲ್ಲ. ಅವರೊಂದಿಗೆ ವಯಸ್ಕರಿರುವುದು ಕಡ್ಡಾಯ.

‘ಪದ್ಮಾವತಿಯು ಸ್ವಲ್ಪ ಮಟ್ಟಿನ ಹಿಂಸಾಚಾರ ಇರುವ ಚಿತ್ರ. ಇದರ ಎಲ್ಲ ಆವೃತ್ತಿಗಳೂ ಯಾವುದೇ ಬದಲಾವಣೆಯ ಅಗತ್ಯವಿಲ್ಲದೇ ತೇರ್ಗಡೆ ಹೊಂದಿವೆ’ ಎಂದು ಬಿಬಿಎಫ್‌ಸಿ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.

‘ಬ್ರಿಟನ್ನಿನ ಸೆನ್ಸಾರ್‌ ಮಂಡಳಿ ಚಿತ್ರಕ್ಕೆ ಅನುಮತಿ ನೀಡಿದೆ. ಭಾರತದ ಸೆನ್ಸಾರ್‌ ಮಂಡಳಿಯು ಚಿತ್ರಕ್ಕೆ ಪ್ರಮಾಣ ಪತ್ರ ನೀಡುವುದನ್ನು ಕಾಯುತ್ತಿದ್ದೇವೆ. ಅಲ್ಲಿವರೆಗೆ ಎಲ್ಲೂ ಚಿತ್ರವನ್ನು ಬಿಡುಗಡೆ ಮಾಡುವುದಿಲ್ಲ’ ಎಂದು ವಯಕಾಮ್18 ಮೋಷನ್‌ ಪಿಕ್ಚರ್ಸ್‌ನ ಮೂಲಗಳು ತಿಳಿಸಿವೆ.

‘ಚಿತ್ರವು ಡಿಸೆಂಬರ್‌ 1ರಂದು ಬಿಡುಗಡೆಯಾಗಬೇಕಿದ್ದರಿಂದ ಸುಮಾರು 50 ರಾಷ್ಟ್ರಗಳಲ್ಲಿ ಚಿತ್ರಕ್ಕೆ ಪ್ರಮಾಣಪತ್ರ ನೀಡುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಅವು ಹೇಳಿವೆ.

ನ.28ರಂದು ವಿಚಾರಣೆ: ಈ ಮಧ್ಯೆ, ಹೊರದೇಶಗಳಲ್ಲಿ  ಡಿಸೆಂಬರ್‌ 1ರಂದು ಚಿತ್ರ ಬಿಡುಗಡೆ ಮಾಡುವುದಕ್ಕೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನವೆಂಬರ್‌ 28ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

ಶಾಲಾ ಕಾರ್ಯಕ್ರಮಗಳಲ್ಲಿ ‘ಪದ್ಮಾವತಿ’ ಹಾಡಿಗೆ ನಿರ್ಬಂಧ
ಭೋಪಾಲ್:
ಪದ್ಮಾವತಿ ಚಿತ್ರದ ಬಗ್ಗೆ ದೇಶದಾದ್ಯಂತ ಪರ ವಿರೋಧ ಚರ್ಚೆ ನಡೆಯುತ್ತಿರುವುದರ ನಡುವೆಯೇ, ಶಾಲೆಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಈ ಚಿತ್ರದ ‘ಘೂಮರ್‌’ ಹೆಸರಿನ ಹಾಡನ್ನು ಬಳಸದಂತೆ ಮಧ್ಯಪ್ರದೇಶದ ದೇವಾಸ್‌ ಜಿಲ್ಲೆಯ ಶಿಕ್ಷಣಾಧಿಕಾರಿ ಬುಧವಾರ ಸುತ್ತೋಲೆ ಹೊರಡಿಸಿದ್ದಾರೆ.

ಆದರೆ, ಈ ಸುತ್ತೋಲೆಯನ್ನು ತಕ್ಷಣವೇ ವಾಪಸ್‌ ಪಡೆಯುವಂತೆ ಸೂಚಿಸಿ ಜಿಲ್ಲಾಧಿಕಾರಿ ಗುರುವಾರ ಆದೇಶ ಹೊರಡಿಸಿದ್ದಾರೆ. ಜೊತೆಗೆ, ವಿವರಣೆ ನೀಡುವಂತೆ ಆ ಶಿಕ್ಷಣಾಧಿಕಾರಿಗೆ ಶೋಕಾಸ್‌ ನೋಟಿಸ್‌ ನೀಡಲಾಗುವುದು ಎಂದು ಹೇಳಿದ್ದಾರೆ.

ತಲವಾರ ಹಿಡಿದು ಮೆರವಣಿಗೆ 8 ಜನರ ಬಂಧನ:ಎಎಸ್‌ಐ ಅಮಾನತು
ಕಲಬುರ್ಗಿ:
‘ಪದ್ಮಾವತಿ’ ಚಲನಚಿತ್ರ ಬಿಡುಗಡೆ ವಿರೋಧಿಸಿ ತಲವಾರ ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದ ರಜಪೂತ ಸಮಾಜದ ಎಂಟು ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಕರ್ತವ್ಯಲೋಪ ಆರೋಪದ ಮೇರೆಗೆ ಇಬ್ಬರು ಸಹಾಯಕ ಸಬ್‌ಇನ್‌ಸೆಕ್ಟರ್‌(ಎ.ಎಸ್‌.ಐ)ಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಅನುಮತಿ ಪಡೆಯದೆ ಇವರು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಕೃತಿ ದಹಿಸಿದ್ದಾರೆ. ಕಾನೂನು ಬಾಹಿರವಾಗಿ ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ಪ್ರದರ್ಶಿಸಿ, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿರುವುದರಿಂದ ಅವರ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಚೌಕ್‌, ಬ್ರಹ್ಮಪುರ ಮತ್ತು ಸ್ಟೇಷನ್‌ ಬಜಾರ್‌ ಠಾಣೆಗಳ ಇನ್‌ಸ್ಪೆಕ್ಟರ್‌ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT