ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿನಿವಿಧಾನಸೌಧ ಎದುರು ಶವವಿಟ್ಟು ಪ್ರತಿಭಟನೆ

Last Updated 24 ನವೆಂಬರ್ 2017, 8:55 IST
ಅಕ್ಷರ ಗಾತ್ರ

ಸಿಂದಗಿ: ನಗರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿ ಅಮೃತ ಶಿವಪುತ್ರಪ್ಪ ಮಾದರ (17) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳು ದಲಿತ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಶವವನ್ನು ವಸತಿ ನಿಲಯದಿಂದ ಮಿನಿವಿಧಾನಸೌಧ ವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತಂದು, ಅಲ್ಲಿ ಶವವಿಟ್ಟು ಪ್ರತಿಭಟಿಸಿದರು.

ಪ್ರತಿಭಟನಕಾರರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲೆ, ತಾಲ್ಲೂಕು ಅಧಿಕಾರಿಗಳನ್ನು ವಸತಿನಿಲಯದ ಮೇಲ್ವಿಚಾರಕರನ್ನು ಸ್ಥಳದಲ್ಲಿಯೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ವಾತಾವರಣ ತುಂಬಾ ಉದ್ವಿಗ್ನಮಯವಾಗಿತ್ತು. ಕೆಲ ವಿದ್ಯಾರ್ಥಿಗಳು ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡಿದ್ದು ಕಂಡು ಬಂದಿತು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಸ್ಥಳಕ್ಕೆ ಧಾವಿಸಿದರು. ಆಗ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ವೈ.ಸಿ.ಮಯೂರ ಮಾತನಾಡಿ, ‘ಸಮಾಜಕಲ್ಯಾಣ ಇಲಾಖೆಯ ವಸತಿ ನಿಲಯಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿವೆ. ಇಲ್ಲಿಯ ವಸತಿ ನಿಲಯದಲ್ಲಿ ಎರಡು ತಿಂಗಳಲ್ಲಿ ಇಬ್ಬರು ವಿದ್ಯಾರ್ಥಿಗಳ ಸಾವು ಸಂಭವಿಸಿದೆ. ಸಾವಿನ ಬಗ್ಗೆ ತನಿಖೆಯಾಗಿ ಇಲಾಖೆಯ ಜಿಲ್ಲಾ, ತಾಲ್ಲೂಕು ಅಧಿಕಾರಿಗಳು ಮೇಲ್ವಿಚಾಕರನನ್ನು ಸ್ಥಳದಲ್ಲಿಯೇ ಜಿಲ್ಲಾಧಿಕಾರಿಗಳು ವಜಾಗೊಳಿಸುವ ಆದೇಶ ಹೊರಡಿಸಬೇಕು’ ಎಂದು ಆಗ್ರಹಿಸಿದರು.

‘ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ₹ 15 ಲಕ್ಷ ಪರಿಹಾರ ಮತ್ತು ಮೃತ ಕುಟುಂಬದ ವ್ಯಕ್ತಿಗೆ ಸರ್ಕಾರಿ ನೌಕರಿ ನೀಡಬೇಕು’ ಎಂದೂ ಒತ್ತಾಯಿಸಿದರು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಮಾತನಾಡಿ, ‘ವಿದ್ಯಾರ್ಥಿ ಸಾವಿನ ನೋವು ಅರ್ಥ ಆಗಿದೆ. ಕುಟುಂಬದ ಸಮಸ್ಯೆಯ ಅರಿವೂ ಆಗಿದೆ. ತಮ್ಮ ಬೇಡಿಕೆ ಪರಿಶೀಲಿಸಲಾಗುವುದು. ಮೊದಲು ವಿದ್ಯಾರ್ಥಿ ಶವ ಪರೀಕ್ಷೆ, ಎಫ್ಐಆರ್ ಆಗಲಿ’ ಎಂದರು.

‘ಈಗಲೇ ಮೂವರು ಅಧಿಕಾರಿಗಳ ಮೇಲೆ ಎಫ್.ಐ.ಆರ್ ದಾಖಲಿಸಿ, ಪರಿಹಾರ ನಂತರ ನೀಡಿ. ಅಧಿಕಾರಿಗಳನ್ನು ಅಮಾನತು ಮಾಡಿ’ ಎಂದು ಪ್ರತಿಭಟನಾಕಾರ ರಾಜಶೇಖರ ಚೌರ ಆಗ್ರಹಿಸಿದರು.

‘ಸಾವಿನ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಜಿಲ್ಲಾಧಿಕಾರಿ ಹೇಳಿದಾಗ, ‘ನಿಮ್ಮ ಮಾತಿನಲ್ಲಿ ವಿಶ್ವಾಸವಿಲ್ಲ’ ಎಂದು ಪ್ರತಿಭಟನಾ ನಿರತ ಮಯೂರ ಪ್ರತಿಕ್ರಿಯಿಸಿದರು.
ದಲಿತ ಸಂಘಟನೆಗಳ ಮುಖಂಡರು ಬಿಗಿ ಪಟ್ಟು ಹಿಡಿದ ಕಾರಣ ಜಿಲ್ಲಾಧಿಕಾರಿ ಕಚೇರಿಯೊಳಗೆ ಹೋಗಿ ಕುಳಿತುಕೊಂಡು ಮನವರಿಕೆ ಮಾಡಿದರೂ ಪ್ರಯೋಜನವಾಗಲಿಲ್ಲ.

ಸಂಜೆಗೆ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ಹಣ ನೀಡಲಾಗುವುದು, ಮೃತರ ಕುಟುಂಬಕ್ಕೆ ಸರ್ಕಾರಿ ಸೌಲಭ್ಯ ದೊರಕಿಸಿಕೊಡಲಾಗುವುದು. ವಿದ್ಯಾರ್ಥಿ ಸಾವಿನ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದು, ಶವವನ್ನು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದರು. ದಲಿತ ಸಂಘಟನೆಗಳ ಪ್ರಮುಖರಾದ ಚಂದ್ರಕಾಂತ ಸಿಂಗೆ, ರಾಜು ಗುಬ್ಬೇವಾಡ, ಪ್ರಧಾನಿ ಮೂಲಿಮನಿ, ಅಶೋಕ ಸುಲ್ಪಿ, ಪರಶುರಾಮ ಕಾಂಬಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT